Latest
ಪಾವಗಡ ಸೋಲಾರ್ ಪಾರ್ಕ್ ಯೋಜನೆ ಮೆಚ್ಚಿ ಕೇಂದ್ರ ಸರ್ಕಾರ ಪ್ರಶಸ್ತಿ ಕೊಟ್ಟಿದೆ; ರಾಜ್ಯ ಸರ್ಕಾರ ಯಾವ ತನಿಖೆ ನಡೆಸಿದರೂ ಸ್ವಾಗತ: ಡಿ.ಕೆ.ಶಿವಕುಮಾರ್
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪಾವಗಡ ಸೋಲಾರ್ ಪಾರ್ಕ್ ಯೋಜನೆಯಲ್ಲಿನ ರೈತಪರ ನೀತಿಯನ್ನು ಕೇಂದ್ರ ಸರ್ಕಾರ ಮೆಚ್ಚಿ ಪ್ರಶಸ್ತಿ ನೀಡಿದೆ. ಇದನ್ನು ಕರ್ನಾಟಕ ಮಾಡೆಲ್ ಎಂದೂ ಬಣ್ಣಿಸಿ, ಇತರ ರಾಜ್ಯಗಳಿಗೂ ಇದನ್ನು ಅನುಸರಿಸುವಂತೆ ಹೇಳಿತ್ತು. ಈಗ ರಾಜ್ಯ ಸರ್ಕಾರ ಈ ಯೋಜನೆ ಬಗ್ಗೆ ಯಾವುದೇ ತನಿಖೆ ನಡೆಸಿದರೂ ನಾನು ಸ್ವಾಗತಿಸುತ್ತೇನೆ ‘ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಸೋಲಾರ್ ಪಾರ್ಕ್ ಯೋಜನೆಯಲ್ಲಿ ಅಕ್ರಮ ನಡೆದಿದೆ, ಇದರ ತನಿಖೆ ಮಾಡುತ್ತೇವೆ ಎನ್ನುವ ರಾಜ್ಯ ಸರ್ಕಾರವು ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಈ ಯೋಜನೆ ಪ್ರಸ್ತಾಪಿಸಿರುವ ಬಗ್ಗೆ ಮಾಧ್ಯಮಗಳು ಶನಿವಾರ ಕೇಳಿದ ಪ್ರಶ್ನೆಗೆ ಶಿವಕುಮಾರ್ ಅವರು ಕೊಟ್ಟ ಉತ್ತರ ಹೀಗಿತ್ತು;
‘ಚರಿತ್ರೆಯನ್ನು ಯಾರೂ ಬದಲಿಸಲು ಸಾಧ್ಯವಿಲ್ಲ. ನಾನು ಯಾವ ಯೋಜನೆ ಮಾಡಿದ್ದೇನೆ, ಎಷ್ಟು ಪಾರದರ್ಶಕವಾಗಿ ಮಾಡಿದ್ದೇನೆ ಎಂದು ಕೇಂದ್ರ ಸರ್ಕಾರಕ್ಕೆ ತಿಳಿದಿದೆ.
ಸೋಲಾರ್ ಪಾರ್ಕ್ ಯೋಜನೆಯಲ್ಲಿ ಬಳಕೆಯಾದ ಜಮೀನು ರೈತರ ಬಳಿಯೇ ಉಳಿದುಕೊಂಡು, ರೈತರೇ 20 ಮೆಗವ್ಯಾಟ್ ವಿದ್ಯುತ್ ಉತ್ಪಾದಿಸುವಂತಾಗಿದೆ.
ಈ ಯೋಜನೆ ಬಗ್ಗೆ ಈಗಿನ ಸಚಿವರು ಹಾಗೂ ಮಂತ್ರಿಗಳಿಗೆ ಎಷ್ಟು ಗೊತ್ತಿದೆಯೋ, ಇಲ್ಲವೋ ತಿಳಿದಿಲ್ಲ. ಅವರು ದಾಖಲೆಗಳನ್ನು ತೆಗೆದು ನೋಡಲಿ. ರಾಷ್ಟ್ರೀಯ ಮಟ್ಟದ ಇಂಧನ ಸಭೆಯಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್, ಇತರ ಸಚಿವರು ಹಾಗೂ ಪ್ರಧಾನಿಗಳು ನನಗೆ ಪ್ರಶಸ್ತಿ ನೀಡಿದ್ದಾರೆ. ಈ ಯೋಜನೆಯಲ್ಲಿ ರೈತರ ಪರ ತೆಗೆದುಕೊಳ್ಳಲಾದ ನೀತಿಯನ್ನು ಕರ್ನಾಟಕದ ಮಾಡೆಲ್ ಎಂದು ಕರೆದು ಎಲ್ಲಾ ರಾಜ್ಯಗಳು ಇದನ್ನು ಪಾಲಿಸುವಂತೆ ಪತ್ರ ಬರೆಯಲಾಗಿತ್ತು. ಈ ದಾಖಲೆ ನನ್ನ ಬಳಿಯೇ ಇದೆ.
ಈ ಯೋಜನೆಗೆ 6 ತಿಂಗಳ ಮುಂಚಿತವಾಗಿ ಜಾಹೀರಾತು ನೀಡಿ ಟೆಂಡರ್ ಕರೆಯಲಾಗಿತ್ತು. ಇದೆಲ್ಲವನ್ನೂ ರಾಜ್ಯದ ಅಧಿಕಾರಿಗಳು ಮಾಡಿದ್ದರು. ಈಗಿನ ಇಲಾಖೆ ಕಾರ್ಯದರ್ಶಿಗಳು, ಸರ್ಕಾರ ಯಾರನ್ನೂ ಕೆಆರ್ ಸಿ ಮುಖ್ಯಸ್ಥರನ್ನಾಗಿ ಮಾಡಿದೆಯೋ ಅವರೂ ಈ ಯೋಜನೆ ಭಾಗವಾಗಿದ್ದರು. ಅವರನ್ನೇ ಈ ಯೋಜನೆ ಬಗ್ಗೆ ಕೇಳಲಿ, ತನಿಖೆ ಮಾಡಲಿ. ಈ ಯೋಜನೆಯಲ್ಲಿ ನಾನು ಸಣ್ಣ ತಪ್ಪು ಮಾಡಿದ್ದರೂ ಎಂತಹುದೇ ಶಿಕ್ಷೆಗೆ ನಾನು ಬದ್ಧ.
ನಾನು ಇಂಧನ ಇಲಾಖೆ ಜವಾಬ್ದಾರಿ ವಹಿಸಿಕೊಂಡಾಗ ಉತ್ಪಾದನೆ ಎಷ್ಟಿತ್ತು? ಜವಾಬ್ದಾರಿ ಬಿಡುವಾಗ ಉತ್ಪಾದನೆ ಎಷ್ಟಕ್ಕೆ ಏರಿಕೆಯಾಗಿತ್ತು ಎಂದು ಈಗ ಮಾತನಾಡುವುದಿಲ್ಲ. ಎಲ್ಲ ದಾಖಲೆಗಳು ನನ್ನ ಬಳಿಯೇ ಇವೆ. ಯಾವುದೇ ರೀತಿಯ ತನಿಖೆಗೂ ಸಿದ್ಧ. ನಾನು ಅದನ್ನು ಸ್ವಾಗತಿಸುತ್ತೇನೆ.
ನಾನು ಇಂಧನ ಇಲಾಖೆಯಲ್ಲಿ ಮಾಡಿರುವ ಕೆಲಸದ ಸತ್ಯಾಂಶ ಮುಚ್ಚಿಹಾಕಿದರೆ ಅದರ ಪರಿಣಾಮ ಅವರಿಗೆ ತಗುಲುತ್ತದೆ. ಸತ್ಯಾಂಶವನ್ನು ಅವರು ಮುಚ್ಚಿಹಾಕಬಾರದು.
ಈಗ ಇಡೀ ರಾಜ್ಯದಲ್ಲಿ ಯಾವ್ಯಾವ ಹಗರಣ ನಡೆದಿವೆ, ಬಿಟ್ ಕಾಯಿನ್ ಪ್ರಕರಣದಿಂದ ಹಿಡಿದು ಏನೆಲ್ಲ ಪ್ರಕರಣಗಳನ್ನು ಅವರು ಹೇಗೆಲ್ಲಾ ಮುಚ್ಚಿಹಾಕಿದ್ದಾರೆ ಎಂದು ಗೊತ್ತಿದೆ. ಅವರು ಏನು ಮಾಡುತ್ತಾರೋ ಮಾಡಲಿ, ಸಮಯ ಬಂದಾಗ ನಾನು ಮಾತನಾಡುತ್ತೇನೆ.
ಇಡಿ ಸಮನ್ಸ್ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ‘ ಇಡಿ ಅವರಿಗೆ ನಾನು ಎಲ್ಲಾ ಉತ್ತರ ನೀಡಿದ್ದೆ. ಆದರೆ ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖಾಧಿಕಾರಿ ಬದಲಾಗಿದ್ದಾರೆ ಎಂದು 7ನೇ ತಾರೀಖು ವಿಚಾರಣೆಗೆ ಹಾಜರಾಗುವಂತೆ ನನಗೆ ಹಾಗೂ ನನ್ನ ಸಹೋದರನಿಗೆ ನೊಟೀಸ್ ನೀಡಿದ್ದಾರೆ. ಅವರು ಕೆಲವು ದಾಖಲೆ ಕೇಳಿದ್ದು ಅವುಗಳನ್ನು ಸಲ್ಲಿಸಿದ್ದೇನೆ. ಇನ್ನು ಕೆಲವು ದಾಖಲೆ ಕಳುಹಿಸಬೇಕು. ಮುಂದಿನ ದಿನಗಳಲ್ಲಿ ಕಳಿಸುತ್ತೇನೆ. ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಸಿಬಿಐ ಹಾಗೂ ಇಡಿ ಪ್ರಕರಣ ದಾಖಲಿಸಿದ್ದು, ಈ ರೀತಿ ದಾಖಲಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಗೆ ಅರ್ಜಿ ಹಾಕಿದ್ದೇನೆ. ಕಾನೂನು ಮೇಲೆ ಗೌರವ ಇದೆ. ಅವರು ಏನು ಹೇಳುತ್ತಾರೋ ನೋಡೋಣ. ಪದೇ ಪದೇ ನಮಗೆ ಯಾಕೆ ನೊಟೀಸ್ ನೀಡಿ ಹಿಂಸೆ ನೀಡುತ್ತಿದ್ದಾರೋ ಗೊತ್ತಿಲ್ಲ ‘ ಎಂದರು.
ತುಮಕೂರು ಆಸ್ಪತ್ರೆ ಅಧಿಕಾರಿಗಳಿಂದಾಗಿ ಗರ್ಭಿಣಿ ಹಾಗೂ ಅವಳಿ ಮಕ್ಕಳ ಸಾವು ಘಟನೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ ಇದು ಸರ್ಕಾರದ ವೈಫಲ್ಯ. ಈ ಸರ್ಕಾರಕ್ಕೆ ಕಣ್ಣು, ಕಿವಿ ಹಾಗೂ ಹೃದಯವಿಲ್ಲ ಎಂದು ನಾನು ಈ ಹಿಂದೆಯೇ ಹೇಳಿದ್ದೇನೆ. ಅದಕ್ಕೆ ಇದೇ ಸಾಕ್ಷಿ. ಸರ್ಕಾರಕ್ಕೆ ಜನರ ನೋವು, ಭಾವನೆ ಗೊತ್ತಿಲ್ಲ. ಜನರ ಕಷ್ಟಕ್ಕೆ ಸ್ಪಂದಿಸುವುದು ತಿಳಿದಿಲ್ಲ. ಸರ್ಕಾರ ಈಗ ಅಧಿಕಾರಿಗಳ ಅಮಾನತು ಮಾಡುವುದಾದರೆ, ಆಕ್ಸಿಜನ್ ದುರಂತ ಸಂದರ್ಭದಲ್ಲಿ 36 ಜನ ಸತ್ತಾಗ ಯಾಕೆ ಅಮಾನತು ಮಾಡಲಿಲ್ಲ. ಆಗ ಯಾವುದೇ ಅಧಿಕಾರಿ ವಿರುದ್ಧ ಕ್ರಮವೂ ಇಲ್ಲ, ಸಚಿವರ ರಾಜೀನಾಮೆ ಇಲ್ಲ. ನಾನು ಸಂತ್ರಸ್ತ ಕುಟುಂಬಗಳಿಗೆ ಹೋಗಿ ತಲಾ 1 ಲಕ್ಷ ಚೆಕ್ ನೀಡಿ ಸಾಂತ್ವನ ಹೇಳಿದೆ. ಕೋವಿಡ್ ನಿಂದ ಸತ್ತವರಿಗೂ ಸರ್ಕಾರ ಈವರೆಗೂ ಪರಿಹಾರ ಹಣ ನೀಡಿಲ್ಲ. ರಾಜ್ಯದ ಎಲ್ಲಾ ಭಾಗಗಳಿಂದ ಈ ವಿಚಾರವಾಗಿ ಮಾಹಿತಿ ಸಂಗ್ರಹಿಸಿ ನಂತರ ಈ ಬಗ್ಗೆ ಮಾತನಾಡುತ್ತೇನೆ. ಇದು ಕೇವಲ ಆರೋಗ್ಯ ಇಲಾಖೆ ಮಾತ್ರವಲ್ಲ, ಇಡೀ ಸರ್ಕಾರದ ವೈಫಲ್ಯ ‘ ಎಂದರು.
ಭಾರತ ಜೋಡೋ ಯಾತ್ರೆ ಸಂದರ್ಭದಲ್ಲಿ ಕೆಜಿಎಫ್ 2 ಚಿತ್ರದ ಹಾಡಿನ ಬಳಕೆ ವಿಚಾರವಾಗಿ ರಾಹುಲ್ ಗಾಂಧಿ, ಜೈರಾಮ್ ರಮೇಶ್ ಹಾಗೂ ಇತರ ನಾಯಕರ ವಿರುದ್ಧ ದೂರು ದಾಖಲಾಗಿರುವ ಬಗ್ಗೆ ಕೇಳಿದಾಗ, ‘ ದೇಶದೆಲ್ಲೆಡೆ ಜನ ಸಿನಿಮಾ ಹಾಡುಗಳನ್ನು ತಮ್ಮ ವಿಡಿಯೋಗಳಿಗೆ ಬಳಸುತ್ತಾರೆ. ಅದರಲ್ಲಿ ಯಾವ ಅಪರಾಧ ಇದೆಯೋ ಎಂದು ತಿಳಿಯುತ್ತಿಲ್ಲ. ಇಂತಹ ಪ್ರಕರಣಗಳ ಅನೇಕ ಉದಾಹರಣೆ ಪಟ್ಟಿ ನೀಡಬಹುದು. ಇದನ್ನು ನಾವು ಕಾನೂನಿನ ಮೂಲಕ ಎದುರಿಸುತ್ತೇವೆ ‘ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ