Kannada NewsKarnataka News

ಪ್ರಾ.ಬಿ.ಎಸ್.ಗವಿಮಠರಿಗೆ 76ರ ಸಂಭ್ರಮ

ಬಿ.ಎಸ್.ಗವಿಮಠ ಸರ್ ಹೆಸರು ಈ ಭಾಗದಲಿ ಚಿರಪರಿಚಿತ. ಬಹುತೇಕ ಬೆಳಗಾವಿ ಮತ್ತು
ಧಾರವಾಡ ಜಿಲ್ಲೆಯ ಹಳ್ಳಿಹಳ್ಳಿಗಳಲ್ಲಿ ಅವರ ಕೈಯಲ್ಲಿ ತರಬೇತಿ ಪಡೆದ ಶಿಕ್ಷಕರ ಜಾಲವೇ ಇದೆ. ಗವಿಮಠ ಸರ್ ಎಂದರೆ ಶಿಸ್ತಿಗೆ ಇನ್ನೊಂದು ಹೆಸರು. ಗವಿಮಠ ಸರ್ ಬಗ್ಗೆ ಅವರ ಶಿಷ್ಯಂದಿರಲ್ಲಿ ಭಯ ಭಕ್ತಿ ಎರಡೂ ಇದೆ.
ಅವರ ಪ್ರಿಯಶಿಷ್ಯೆ ಸುನಿತಾ ದೇಸಾಯಿ ’ಖಡಕ್ ಗುರೂಜಿ’ ಎಂದು ಹೆಸರಿಟ್ಟಿದ್ದಾರೆ. ಅವರ ಸಭೆ-ಸಮಾರಂಭಗಳ ಶಿಸ್ತು , ಅಚ್ಚುಕಟ್ಟತನ, ಸಮಯಪ್ರಜೆ ಕಂಡು ಕೆಲವರು ’ಬೆಳಗಾವಿಯ ಗೊ.ರು.ಚನ್ನಬಸಪ್ಪ’ ಎಂದು ಕರೆದಿದ್ದರೆ, ಖ್ಯಾತಕವಿ ಡಾ.ಸರಜೂ ಕಾಟ್ಕರ ಇವರನ್ನು ’ಬೆಳಗಾವಿಯ ಡಾ.ಪಾಟೀಲ ಪುಟ್ಟಪ್ಪ’ ಎಂದು ಬಾಯ್ತುಂಬ ಹೊಗಳುವುದನ್ನು ಕೇಳಿದ್ದೇನೆ. ತಮ್ಮ ಬದುಕಿನ ಬಹುಭಾಗವನ್ನು ಕೆಎಲ್‌ಇ ಸಂಸ್ಥೆಯಲ್ಲಿ ಕಳೆದು ಆ ಸಂಸ್ಥೆಯ ಚರಿತ್ರೆಯನ್ನು ಕಣ್ಣಿಗೆ ಕಟ್ಟು ವಂತೆ ರಚಿಸಿ ಸಂಸ್ಥೆಯ ಋಣ ತೀರಿಸಿದ್ದಾರೆ. ಈ ಸಂಸ್ಥೆಯ ಕಾರ‍್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಕನ್ನಡಕ್ಕೆ ನೀಡಿದ ಮೌಲಿಕ ಸೇವೆಯನ್ನು ಪ್ರಧಾನವಾಗಿ ಗುರುತಿಸಿ “ಕನ್ನಡರತ್ನ”
ಗ್ರಂಥದಲ್ಲಿ ಅದ್ಭುತವಾಗಿ ಅವರ ಕುರಿತು ನಿರೂಪಿಸಿದ್ದಾರೆ. ಅವರ ಬರವಣಿಗೆ ತುಂಬ ಆಕರ್ಷಕವಾಗಿರುತ್ತದೆ, ಕಾವ್ಯಾತ್ಮಕವಾಗಿರುತ್ತದೆ.
ಗವಿಮಠರು ತಮ್ಮ ೨೯ನೇ ವಯಸ್ಸಿನಲ್ಲಿ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ
ಕಾಣಿಸಿಕೊಳ್ಳತೊಡಗಿದರು. ಕವಿ ಎಸ್.ಡಿ.ಇಂಚಲರಿಂದ ಕನ್ನಡ ದೀಕ್ಷೆ ಪಡೆದರು. ಇಂಚಲರು ತೀರಿದ ಮೇಲೆ ಅವರ ಹೆಸರಿನಲ್ಲಿ ಸ್ಮಾರಕ ಸಮಿತಿ ರಚಿಸಿ ಕಳೆದ ೪೮ ವರ್ಷಗಳಿಂದ ಬೆಳಗಾವಿಯಲ್ಲಿ ಕನ್ನಡದ ಕಹಳೆ ಮೊಳಗಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ‍್ಯದರ್ಶಿಯಾಗಿ, ಅಖಿಲ ಭಾರತ ೫೨ನೇ ಕನ್ನಡ ಸಾಹಿತ್ಯ ಸಾಮ್ಮೇಳನದ ಕಾರ‍್ಯದರ್ಶಿಯಾಗಿ, ಅಖಿಲ ಭಾರತ ೭೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂಘಟಕರಾಗಿ, ಗೋಷ್ಠಿಯೊಂದರ ನಿರೂಪಕರಾಗಿ, ಕನ್ನಡ ಸಾಹಿತ್ಯ ಭವನದ ಆಜೀವ ಸದಸ್ಯರಾಗಿ, ಆಡಳಿತ ಮಂಡಳಿ ಸದಸ್ಯರಾಗಿ ಇಂದಿಗೂ ಕ್ರಿಯಾಶೀಲರು.
೫೦ ಪುಸಕ್ತಗಳನ್ನು ರಚಿಸಿರುವ  ಗವಿಮಠರು ಇತಿಹಾಸ ಕಟ್ಟುವಲ್ಲಿ, ಕಾವ್ಯ ರಚಿಸುವಲ್ಲಿ, ’ಜೀವನ
ಚರಿತ್ರೆ’ ಬರೆಯುವಲ್ಲಿ ಸಿದ್ಧಹಸ್ತರೆನಿಸಿದ್ದಾರೆ. ಕವಿ ಎಸ್.ಡಿ.ಇಂಚಲರ ಸಮಗ್ರ ಕಾವ್ಯ ಸಂಪಾದಿಸಿದ್ದಾರೆ.
ನಾಟ್ಯಭೂಷಣ ಏಣಗಿ ಬಾಳಪ್ಪನವರ ಹಾಗೂ ಅವರ ಗುರುಗಳಾಗಿದ್ದ ಚಿಕ್ಕೋಡಿ ಶಿವಲಿಂಗಶಾಸ್ತ್ರಿಗಳ ಜೀವನ ಚರಿತ್ರೆ ಬರೆದ ಮೊದಲಿಗರೆನಿಸಿದ್ದಾರೆ. ಕೆಎಲ್‌ಇ ಸಂಸ್ಥೆಯ ಎಲ್ಲ ಅಂಗಸಂಸ್ಥೆಗಳಲ್ಲಿ ಪ್ರೊ.ಶಿ.ಶಿ.ಬಸವನಾಳ ಜನ್ಮ ಶತಾಬ್ಧಿ ಆಚರಿಸುವಲ್ಲಿ ಮುಂದಾಳತ್ವ ವಹಿಸಿದರು. ಕೆಎಲ್‌ಇ ಸಂಸ್ಥೆಯ ’ವಾರ್ತಾಪತ್ರ’ ಆರಂಭಿಸಿ ಇಂದಿಗೂ ಅದರ ಗೌರವ ಸಂಪಾದಕರಾಗಿ ಕಾರ‍್ಯ ನಿರ್ವಹಿಸುತ್ತಿದ್ದಾರೆ. ಕೆಎಲ್‌ಇ ’ಪ್ರಸಾರಾಂಗ’ ಪ್ರಾರಂಭಿಸಿ ಅದರ ಮೊದಲ ನಿರ‍್ದೇಶಕರಾಗಿ ಮೌಲಿಕ ಸೇವೆ ನೀಡಿದವರು. ಕೆಎಲ್‌ಇ ಶತಮಾನೋತ್ಸವ ಕಾಲಕ್ಕೆ ’ನೂರು ಗ್ರಂಥಗಳನ್ನು’ ಏಕಕಾಲಕ್ಕೆ ಪ್ರಕಟಿಸುವಲ್ಲಿ ಪರಿಶ್ರಮಿಸಿದವರು. ನಾಟ್ಯಭೂಷಣ ಏಣಗಿ ಬಾಳಪ್ಪ ಹಾಗೂ ಸಹಕಾರಿ ರತ್ನ
ದಿ.ಬಿ.ಎಸ್.ಕತ್ತಿಯವರು, ಹುಕ್ಕೇರಿಯ ಎ.ಬಿ. ನಾಯಿಕ ವಕೀಲರ ನೇತೃತ್ವದಲ್ಲಿ ಕರ್ನಾಟಕ ರಂಗಭೂಮಿ ಸಹಕಾರಿ ಸಂಘ ಕಟ್ಟಿದರು. ಸಂಕೇಶ್ವರದಲ್ಲಿ ವರನಟ ಡಾ.ರಾಜಕುಮಾರರನ್ನು ಆಮಂತ್ರಿಸಿ ಸಂಘವನ್ನು ಉದ್ಘಾಟಿಸಿ ೨೨ ವರ್ಷಗಳ ಕಾಲ ಮುನ್ನಡೆಸಿದವರು. ೧೯೯೫-೯೮ರ ಅವಧಿಗೆ ಕರ್ನಾಟಕ ನಾಟಕ ಅಕಾಡಮಿ ಸದಸ್ಯರಾಗಿ, ಅನೇಕ ಬಡ ಕಲಾವಿದರಿಗೆ ಮಾಸಾಶನ ದೊರೆಯುವಲ್ಲಿ ಶ್ರಮಿಸಿದರು. ಪ್ರತಿಭಾ ಹವ್ಯಾಸಿ ಕಲಾವಿದರ ತಂಡ ಕಟ್ಟಿಕೊಂಡು ಜಿಲ್ಲೆಯ ತುಂಬ ನಾಟಕಗಳನ್ನು ಪ್ರದರ್ಶಿಸಿದರು. ಹತು ಹಲವು ಮುಖಗಳಲ್ಲಿ ಅವರ ಹವ್ಯಾಸಗಳು ರೂಪ ತಾಳಿವೆ. ೨೦೦೬ರಲ್ಲಿ ಅವರಿಗೆ ಕರ್ನಾಟಕ ನಾಟಕ ಅಕೆಡೆಮಿ ಪ್ರಶಸ್ತಿ ಬಂತು. ೨೦೦೯ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು
ಗದಗಿನಲ್ಲಿ ಸನ್ಮಾನಿಸಿತು. ೨೦೧೭ರಲ್ಲಿ ಅವರ ಗೆಳೆಯರು ಮತು ಶಿಷ್ಯ ಬಳಗದವರು ಸೇರಿ ಅಭಿನಂದನ ಸಮಾರಂಭ ಏರ್ಪಡಿಸಿ ’ಸಾಹಿತ್ಯಭೂಷಣ’ ಅಭಿನಂದನ ಗ್ರಂಥ ಸಮರ್ಪಿಸಿದರು.
ಹುಕ್ಕೇರಿ ತಾಲೂಕಿನ ಸಂಕೇಶ್ವರದ ಕನ್ನಡ ಬಳಗಕ್ಕೆ ೨ ಲಕ್ಷ ರೂಪಾಯಿಗಳ ದೇಣಿಗೆ ನೀಡಿ ಪೂಜ್ಯ
ನಿಡಸೋಸಿ ಜಗದ್ಗುರುಳ ಅಧ್ಯಕ್ಷತೆಯಲ್ಲಿ ಸಾಹಿತ್ಯ ಪ್ರತಿಷ್ಠಾನ ಪ್ರಾರಂಭಿಸಲು ನಿರ್ಧರಿಸಿದ್ದಾರೆ. ತಮ್ಮ ತಾಯಿಯ ಹೆಸರಿನಲ್ಲಿ ೫೦,೦೦೦ ರೂ.ಗಳ ದೇಣಿಗೆ ನೀಡಿ ಪ್ರತಿವರ್ಷ ಕಾರ‍್ಯಕ್ರಮ ನಡೆಸುತ್ತಿದ್ದಾರೆ.
ಬಿ.ಎಸ್.ಗವಿಮಠ ಸರ್ ಇವರಿಂದ ಇನ್ನಷ್ಟು ಮಹತ್ವದ ಕೃತಿಗಳು ಬರಲಿವೆ. ಕೆಎಲ್‌ಇ ಸಂಸ್ಥೆಯ
ಕುರಿತಂತೆ ಇನ್ನೊಂದು ಕೃತಿ ರಚನೆಯಾಗುತ್ತಿದೆ. ಲಿಂಗಾಯತ ಸಮಾಜ ನೆನಪಿನಲ್ಲಿಡಬೇಕಾದ ಸಂಗತಿಯೆಂದರೆ ಲಿಂ.ಫ.ಗು.ಹಳಕಟ್ಟಿಯವರಿಂದ ವಚನ ಸಾಹಿತ್ಯ ಬೆಳಕಿಗೆ ಬಂತು. ಲಿಂಗೈಕ್ಯ ಹರ್ಡೇಕರ ಮಂಜಪ್ಪ ಇವರಿಂದ ಬಸವ ಜಯಂತಿ ಆಚರಿಸಲು ಪ್ರಾರಂಭವಾಯಿತು.  ಬಿ.ಎಸ್.ಗವಿಮಠರಿಂದ ಕೆಎಲ್‌ಇ ಇತಿಹಾಸ ಮೊದಲ ಬಾರಿಗೆ ಅತ್ಯಂತ ಕರಾರುವಕ್ಕಾದ ಮಾಹಿತಿಯೊಂದಿಗೆ ಪ್ರಕಟವಾಯಿತು. ಕಿತ್ತೂರಿನ ಕಂಬಿ ಬಸವಾರ‍್ಯರಿಂದ ರಾವಬಹದ್ದೂರ ಅರಟಾಳ ರುದ್ರಗೌಡರ ಚರಿತ್ರೆ ಪ್ರಕಟವಾಯಿತು. ಇವರೆಲ್ಲ ಇತಿಹಾಸ ನಿರ‍್ಮಿಸಲಿಲ್ಲ, ಆದರೆ
ಇತಿಹಾಸವನ್ನು ಕಟ್ಟಿಕೊಟ್ಟು ಇತಿಹಾಸವಾದವರು. ಗವಿಮಠರ ಸೇವೆಯನ್ನು ಲಿಂಗಾಯತ ಸಮಾಜ ಕೃತಜ್ಞತೆಯಿಂದ ಸೂಕ್ತ ಸ್ಥಾನಮಾನ ನೀಡಿ ಗೌರವಿಸುವುದು ಇಂದಿನ ಅಗತ್ಯ.

-ಡಾ.ಮಹೇಶ ಗುರನಗೌಡರ
ನಿರ‍್ದೇಶಕರು, ಕೆಎಲ್‌ಇ ಪ್ರಸಾರಾಂ

https://pragati.taskdun.com/latest/vijayakumar-halagihukkeri-matasanmana/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button