Kannada NewsKarnataka NewsLatest

ಹೊಸ ಇತಿಹಾಸ ಸೃಷ್ಟಿಸಿದ ವಿನಯ ಕುಲಕರ್ಣಿ ಜನ್ಮದಿನ; ನಾಡಿನ ಗಣ್ಯರು, ಮಠಾಧೀಶರು ಭಾಗಿ, ವಿನಯ ಕುಲಕರ್ಣಿ ಒನ್ ಆ್ಯಂಡ್ ಓನ್ಲಿ ನಾಯಕ ಎಂದ ಜಯಬಸವ ಮೃತ್ಯುಂಜಯ ಸ್ವಾಮೀಜಿ

ಪ್ರಗತಿವಾಹಿನಿ ಸುದ್ದಿ, ಕಿತ್ತೂರು :  ಯಾವ ಕಾರಣಕ್ಕೂ ಭ್ರಷ್ಟ, ಕೋಮುವಾದಿ ಬಿಜೆಪಿಗೆ ಮತ್ತೆ ಅಧಿಕಾರ ಕೊಡಬೇಡಿ. ಪ್ರಜಾಪ್ರಭುತ್ವ ಉಳಿಯುವುದಿಲ್ಲ, ರಾಜ್ಯ ಉಳಿಯುವುದಿಲ್ಲ, ದೇಶ ಉಳಿಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಅವರು ಕಿತ್ತೂರಿನಲ್ಲಿ ಸೋಮವಾರ ಸಂಜೆ ನಡೆದ ಮಾಜಿ ಸಚಿವ ವಿನಯ ಕುಲಕರ್ಣಿ ಅವರ 54ನೇ ಜನ್ಮ ದಿನಾಚರಣೆ ಜನ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.

ಕಾಂಗ್ರೆಸ್ ನಲ್ಲಿ ಪ್ರಜಾಪ್ರಭುತ್ವ ಇದೆ ಎನ್ನುವುದು ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗುವ ಮೂಲಕ ಮತ್ತೆ ಸಾಭೀತಾಗಿದೆ. ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತನ್ನಿ ಎಂದು ವಿನಂತಿಸಿದರು.

ಬಿಜೆಪಿಯವರಿಗೆ ಜನರಲ್ಲಿ ನಂಬಿಕೆ ಇಲ್ಲ, ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಜನರ ಆಶಿರ್ವಾದ ಪಡೆದು ಎಂದೂ ಅವರು ಅಧಿಕಾರಕ್ಕೆ ಬಂದಿಲ್ಲ. ಹಿಂಬಾಗಿಲಿನಿಂದ ಬಂದು ಅಧಿಕಾರ ನಡೆಸುತ್ತಿದ್ದಾರೆ. ಕೋಟ್ಯಂತರ ರೂ. ಕೊಟ್ಟು ಶಾಸಕರನ್ನು ಕೊಂಡು ಕೊಂಡರಲ್ಲ, ಅದು ಯಾರ ದುಡ್ಡು? ಜನರ ಹಣವನ್ನು ಲೂಟಿ ಮಾಡಿ ಶಾಸಕರನ್ನು ಕೊಂಡು ಕೊಂಡು ಲೂಟಿಯನ್ನು ಮುಂದುವರಿಸಿದ್ದಾರೆ. ಕೇವಲ ಷಢ್ಯಂತ್ರದಿಂದ ರಾಜಕಾರಣ ಮಾಡುತ್ತಿದ್ದಾರೆ. 40 % ಸರಕಾರ ಎಂದು ಇತಿಹಾಸದಲ್ಲಿ ಯಾವತ್ತೂ ಕರೆದಿರಲಿಲ್ಲ. ಮೊದಲ ಬಾರಿಗೆ ಬಿಜೆಪಿ ಆ ಹೆಸರು ಪಡೆದಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿಗೆ ಧಮ್ಮು, ತಾಕತ್ತು ಇದ್ದರೆ 40 % ಸೇರಿದಂತೆ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಮಾಡಿದ ಹಗರಣಗಳನ್ನು ಸಿಬಿಐಗೆ ಒಪ್ಪಿಸಲಿ. ತಮ್ಮ ಸರಕಾರದ ಹಗರಣಗಳಿಗೆಲ್ಲ ಎಲ್ಲದಕ್ಕೂ ಬಿ ರಿಪೋರ್ಟ್ ಹಾಕಿಸಿಕೊಂಡಿದ್ದಾರೆ. ಯಾವ ಕಾರಣಕ್ಕೂ ಭ್ರಷ್ಟ, ಕೋಮುವಾದಿ ಬಿಜೆಪಿಗೆ ಮತ್ತೆ ಅಧಿಕಾರ ಕೊಡಬೇಡಿ. ಪ್ರಜಾಪ್ರಭುತ್ವ ಉಳಿಯುವುದಿಲ್ಲ, ರಾಜ್ಯ ಉಳಿಯುವುದಿಲ್ಲ, ದೇಶ ಉಳಿಯುವುದಿಲ್ಲ ಎಂದು ವಿನಂತಿಸಿದರು.

ಬಸವರಾಜ ಬೊಮ್ಮಾಯಿ ಎಷ್ಟು ಸುಳ್ಳು ಹೇಳ್ತೀಯಪ್ಪ? ಜನರು ನಿಮಗೆ ತಕ್ಕ ಪಾಠವನ್ನು ಕಲಿಸುತ್ತಾರೆ. ಎಲ್ಲ ನ್ಯಾಯಾಲಯಕ್ಕಿಂತ ಜನತಾ ನ್ಯಾಯಾಲಯ ಮೇಲು. 2023ಕ್ಕೆ ಬರ್ತೀವಿ. 40% ಸರಕಾರ ಬೇಕಾ ತೀರ್ಮಾನ ಮಾಡಿ. ತೀರ್ಪು ಕೊಡ್ತೀರಿ ಅಲ್ವಾ?  ನಿಮ್ಮ ತೀರ್ಪೇ ಅಂತಿಮ. ಜನರ ತೀರ್ಪಿನ ಮೇಲೆ ನಂಬಿಕೆ ಇಟ್ಟಿದ್ದು ಕಾಂಗ್ರೆಸ್ ಎಂದು ಸಿದ್ದರಾಮಯ್ಯ ಹೇಳಿದರು.

ಭವಿಷ್ಯವಿರುವ ರಾಜಕಾರಣಿ ಎಂದು ನಾನು ವಿನಯ ಕುಲಕರ್ಣಿಗೆ ಮಂತ್ರಿಸ್ಥಾನ ಕೊಟ್ಟಿದ್ದೆ. ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದರು. ಪ್ರಾಮಾಣಿಕವಾಗಿ ರಾಜಕಾರಣ ಮಾಡಿದರೂ ಬಿಜೆಪಿಯವರ ರಾಜಕೀಯ ಷಢ್ಯಂತ್ರದಿಂದ ಕಷ್ಟ ಅನುಭವಿಸಬೇಕಾಯಿತು ಎಂದರು.

 

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾತನಾಡಿ,  ಬಿಜೆಪಿಯವರು ತಿಳಿದುಕೊಳ್ಳಬೇಕು. ಸೂರ್ಯ ಕೂಡ ಮುಳುಗುತ್ತಾನೆ. ಹಲವಾರು ಚಕ್ರವರ್ತಿಗಳು ಕೂಡ ಅಳಿಸಿ ಹೋಗಿದ್ದಾರೆ. ನಿಮ್ಮ ಕರ್ಮಗಳು ನಿಮ್ಮನ್ನೂ ಒಂದು ದಿನ ಮುಳುಗಿಸುತ್ತವೆ. ಬಿಜೆಪಿ ಅಧಿಕಾರಕ್ಕೆ ಬಂದು ಕೇವಲ ದ್ವೇಷ, ಅಸೂಯೆಗಳೇ ತುಂಬಿಕೊಂಡಿವೆ. ಇನ್ನಿಲ್ಲದ ಹಿಂಸೆ ಕೊಡುತ್ತಿದ್ದಾರೆ. ನೀವೂ ನಮ್ಮ ನಾಯಕರನ್ನು, ನಮ್ಮನ್ನೆಲ್ಲ ಜೈಲಿಗೆ ಕಳಿಸಬಹುದು.  ಆದರೆ ಈ ಜನರ ಹೃದಯವನ್ನು ಜೈಲಿಗೆ ಹಾಕಲು ನಿಮ್ಮಿಂದ ಸಾಧ್ಯವಿಲ್ಲ. ಕಾನೂನನ್ನು ದುರುಪಯೋಗ ಮಾಡುತ್ತಿದ್ದಾರೆ. ನಿಮ್ಮ ಜೇಬುಗಳು ಪಿಕ್ ಪಾಕೇಟ್ ಆಗುತ್ತಿದೆ. ಇನ್ನು 5 -6 ತಿಂಗಳಿದೆ. ಸಂಕಲ್ಪ ಮಾಡಿ. ನಮಗೆಲ್ಲ ಶಕ್ತಿಯನ್ನು ಕೊಡಿ ಎಂದು ವಿನಂತಿಸಿದರು.

ವಿನಯ ಕುಲಕರ್ಣಿ ಒಬ್ಬ ನೊಂದಂತಹ ಯುವಕ, ಒಬ್ಬ ಬೆಂದಂತಹ ಯುವಕ. ಬಿಜೆಪಿಯವರು ಅಮಾಯಕನಿಗೆ ಏಟು ಹೊಡೆದು ಹೊಡೆದು ಮೂರ್ತಿ ಮಾಡುತ್ತಿದ್ದಾರೆ. ಇನ್ನೇನನ್ನೂ ಮಾಡಲು ನಿಮ್ಮಿಂದ ಆಗುವುದಿಲ್ಲ ಎಂದು ಅವರು ಹೇಳಿದರು.

 

ಪಂಚಮಸಾಲಿ ಮಠದ ಬಸವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಅಧಿಕಾರ ಇಲ್ಲದ ಸಂದರ್ಭದಲ್ಲಿ ಒಬ್ಬ ನಾಯಕನ ಜನ್ಮ ದಿನಕ್ಕೆ ಇಷ್ಟೊಂದು ಜನರು ಸೇರಿರುವುದು ಎಲ್ಲೂ ಇಲ್ಲ. ವಿನಯ ಕುಲಕರ್ಣಿ ಒನ್ ಆ್ಯಂಡ್ ಓನ್ಲಿ ನಾಯಕ. ಅವರು ಇಡೀ 7 ಕೋಟಿ ಕನ್ನಡಿಗರ ಪ್ರೀತಿಗೆ ಪಾತ್ರರಾದವರು ಎಂದು ಹೇಳಿದರು.

ಒಳ್ಳೆಯ ಕೆಲಸ ಮಾಡುವವರಿಗೆ ನೋವು, ಅಪಮಾನ ಸಹಜ. ಆದರೆ ಮತ್ತೊಮ್ಮೆ ಎದ್ದು ಬರುವುದು ಮುಖ್ಯ. ಅವರ ಕಷ್ಟ ಕಾಲದಲ್ಲಿ ಜನರು ಅವರೊಂದಿಗಿದ್ದು ಸ್ಪಂದಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಹೊಸ ಮಿಂಚಿನ ಸಂಚಲನ ಮೂಡಿಸಿದ್ದಾರೆ. ಚನ್ನಮ್ಮನ ಆಶಿರ್ವಾದ ಅವರಿಗಿದೆ. ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಉತ್ತಮವಾಗಿ ಕಾರ್ಯಕ್ರಮ ಸಂಘಟಿಸಿದ್ದಾರೆ ಎಂದು ಅವರು ಹೇಳಿದರು.

ನಿಜಗುಣಾನಂದ ಸ್ವಾಮೀಗಳು,  ವಿನಯ ಕುಲಕರ್ಣಿ ಮಾತು ಕಠೋರ, ಹೃದಯ ಹೂವಿನಂತಹುದು, ಸ್ವಚ್ಛವಾದುದು. ಅವರನ್ನು ಹಲವಾರು ವರ್ಷಗಳಿಂದ ನೋಡುತ್ತ ಬಂದಿದ್ದೇನೆ. ಈ ನಾಡಿನಲ್ಲಿ ಬಹುತ್ವದ ನಾಯಕರು ಯಾರಾದರೂ ಇದ್ದರೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ, ಎಂ.ಬಿ.ಪಾಟೀಲ, ವಿನಯ ಕುಲಕರ್ಣಿ. ಸ್ವತಂತ್ರ ತಲೆಯಿಂದ ನೀವೆಲ್ಲ ಮತದಾನ ಮಾಡಿ, ಯಾರಿಗೂ ಮಾರಾಟ ಮಾಡಿಕೊಳ್ಳಬೇಡಿ ಎಂದರು.

ಅಧಿಕಾರ ಇದ್ದಾಗ ಕಾಣಿಕೆ ಕೇಳಲು ಅವರ ಮನೆ ಬಾಗಿಲಿಗೆ ಹೋಗುತ್ತೇವೆ. ಹುಟ್ಟು ಹಬ್ಬಕ್ಕೆ ನಾವು ಏಕೆ ಬರಬಾರದು ಎಂದು ಅವರು ಪ್ರಶ್ನಿಸಿದರು. ವಿನಯ ಕುಲಕರ್ಣಿ ಹುಲಿ ಅಂದರೆ ಹುಲಿಯೇ. ಅವರ ಮನೆತನ ದೊಡ್ಡ ಮನೆತನ. ದಾನದ ಮನೆತನ, ವಿನಯ ಕುಲಕರ್ಣಿ ಜೊತೆಗೆ ಇಡೀ ಸಮಾಜ ಇರುತ್ತದೆ ಎಂದು ಪ್ರಶಂಸಿಸಿದರು.

ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಗದಗ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ, ವಿಜಯಪುರ ದರ್ಗಾದ ಸಯ್ಯದ್ ಶಾ ಮುರ್ತುಜಾ ಸೇರಿದಂತೆ ಹಲವಾರು ಮಠಾಧೀಶರು ಪಾಲ್ಗೊಂಡಿದ್ದರು.

ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ವಿನಯ ಕುಲಕರ್ಣಿ ಅವರಿಗೆ ಬಂದಂತಹ ಕಷ್ಟ ಯಾವ ವೈರಿಗೂ ಬರಬಾರದು. ಒಳ್ಳೆಯ ಕೆಲಸ ಮಾಡುವವರಿಗೆ ಕಷ್ಟ ಬಂದೇ ಬರುತ್ತದೆ. ಇದಕ್ಕೆ ಬಸವಣ್ಣ, ಚನ್ನಮ್ಮ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಸೇರಿದಂತೆ ಹಲವಾರು ಉದಾಹರಣೆ ಸಿಗುತ್ತದೆ. ಆದರೆ ನೀವು ಹಿಂಜರಿಯಬೇಕಿಲ್ಲ. ನಾವೆಲ್ಲ ನಿಮ್ಮ ಜೊತೆಗಿದ್ದೇವೆ ಎಂದು ಭರವಸೆ ನೀಡಿದರು.

ವಿನಯ ಕುಲಕರ್ಣಿ ಮಾತನಾಡಿ, ವಿದ್ಯಾರ್ಥಿಯಾಗಿದ್ದಾಗಿನಿಂದಲೇ ನಾನು ನಾಯಕನಾಗಿ ಬೆಳೆದೆ. ಸಣ್ಣ ವಯಸ್ಸಿನಲ್ಲೇ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದೆ. ನಾನು ಕೇಳದಿದ್ದರೂ ಸಿದ್ದರಾಮಯ್ಯ ನನ್ನನ್ನು ಮಂತ್ರಿ ಮಾಡಿದ್ದರು. ಈಗ ನನ್ನನ್ನು ಜಿಲ್ಲೆಯಿಂದ ಹೊರಗಿಟ್ಟಿರಬಹುದು. ಆದರೆ ನಿಮ್ಮ ಹೃದಯದಿಂದ ಹೊರಗೆ ಹೋಗಿಲ್ಲ. ನನ್ನ ಹೃದಯದಿಂದ ನೀವೂ ಹೊರಗೆ ಹೋಗಲು ಸಾಧ್ಯವಿಲ್ಲ ಎಂದರು.

ಸೋಲು, ಗೆಲುವಿನಂತೆ ಷಢ್ಯಂತ್ರಗಳು ಸಹ ರಾಜಕಾರಣದಲ್ಲಿ ಸಹಜ. ನಾನು ಸದಾ ನಿಮ್ಮ ಜೊತೆ ಇರುತ್ತೇನೆ. ಮತ್ತೆ ಬಂದೇ ಬರುತ್ತೇನೆ ಎಂದು ಅವರು ಹೇಳಿದರು.

ಮಾಜಿ ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಎ.ಬಿ.ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಡಿ.ಬಿ.ಇನಾಮದಾರ, ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ್, ಅಂಜಲಿ ನಿಂಬಾಳಕರ್, ಕುಸುಮಾ ಶಿವಳ್ಳಿ, ವಿಜಯಾನಂದ ಕಾಶಪ್ಪನವರ್, ಬಾಬಾಸಾಹೇಬ ಪಾಟೀಲ, ರೋಹಿಣಿ ಪಾಟೀಲ, ವೀರಣ್ಣ ಮತ್ತಿಕಟ್ಟಿ, ಸನದಿ, ಎನ್.ಎಚ್.ಕೋನರಡ್ಡಿ, ದರೆಪ್ಪ ಠಕ್ಕಣ್ಣವರ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

ಚನ್ನರಾಜ ಹಟ್ಟಿಹೊಳಿ ಸ್ವಾಗತಿಸಿದರು. ಶಾಸಕ ಪ್ರಸಾದ ಅಬ್ಬಯ್ಯ ಪ್ರಾಸ್ತಾವಿಕ ಮಾತನಾಡಿದರು.

ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ನೇತೃತ್ವದಲ್ಲಿ ಸಂಘಟಿಸಲ್ಪಟ್ಟಿದ್ದ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಪಾಲ್ಗೊಂಡಿದ್ದರು. ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಯಿತು.

ಬಿಜೆಪಿಯವರು ಯಾರಿಗೆಲ್ಲ ಕಿರುಕುಳ ನೀಡುತ್ತಾರೆ ಗೊತ್ತಾ?- ಡಿ.ಕೆ.ಶಿವಕುಮಾರ ಹೇಳಿಕೆ ನೋಡಿ

https://pragati.taskdun.com/latest/at-belgaum-airport-d-k-sivakumars-media-response/

https://pragati.taskdun.com/belagavi-news/vinaya-kulkarni-birthday-non-partisan-program-channaraja-hattiholi/

https://pragati.taskdun.com/karnataka-news/lakshmi-hebbalakar-visits-the-family-members-of-vinay-kulkarni/

https://pragati.taskdun.com/latest/vinaya-kulkarnis-birthday-celebrated-in-presence-of-kharge-siddaramaiah-dk-shivkumar-darshan-today/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button