Latest

ಉತ್ತುಂಗದಲ್ಲಿ ಮೆರೆದು ಮರೆಯಾದ, ಮರೆಯಲಾಗದ ಸಾಮ್ರಾಜ್ಯ

ಪ್ರಗತಿವಾಹಿನಿ ವಿಶೇಷ:

ಕರ್ನಾಟಕದ ಇತಿಹಾಸದ ಪುಟಗಳಲ್ಲಿ ಎಂದಿಗೂ ಮರೆಯದ ಸಾಮ್ರಾಜ್ಯವೊಂದಿದೆ. ಅದೇ ವಿಜಯನಗರ ಸಾಮ್ರಾಜ್ಯ. ಬರೀ ಹೆಬ್ಬಂಡೆಗಳೇ ತುಂಬಿದ ಬೆಟ್ಟಗಳ ನೆಲದಲ್ಲಿ, ಬೀಡು ಬಿಟ್ಟು, ಸುಸಂಸ್ಕೃತ ಸಮಾಜಕ್ಕೆ ದಾರಿ ಮಾಡಿಕೊಟ್ಟ ಹರಿಹರ ಬುಕ್ಕರಾಯರು ಎಂದೂ ಸ್ಮೃತಿ ಪಟಲದಲ್ಲಿ ಉಳಿಯುವ ವ್ಯಕ್ತಿಗಳು. ಶಂಕರಾಚಾರ್ಯರ ಪರಂಪರೆಯಲ್ಲಿ ಬಂದ ಗುರು ಯತಿ ಶ್ರೇಷ್ಠ ವಿದ್ಯಾರಣ್ಯರ ಅಣತಿಯಂತೆ, ಧರ್ಮ ರಕ್ಷಣೆಯ ಪಣ ತೊಟ್ಟ ಸಹೋದರರು ಅವಿರತ ಶ್ರಮದಿಂದ, ತುಂಗಭದ್ರೆಯರ ತಟದಲ್ಲಿ ಸಾಮ್ರಾಜ್ಯ ಸ್ಥಾಪಿಸಿದರು. ಅಂದು
ಮೈ ಕೊಡವಿ ಎದ್ದ ವಿಜಯನಗರ ಸಾಮ್ರಾಜ್ಯದ ಸುವರ್ಣ ಯುಗದ ಸಾರ್ಥಕ ಕಥೆಯನ್ನು ಕೇಳದವರೇ ಇಲ್ಲ !

ಜಗತ್ತಿನ ಮೂಲೆ ಮೂಲೆಗಳಿಂದ ಬೆರಗುಗಣ್ಣಿನಿಂದ ನೋಡ ಬರುವವರ ಸಂಖ್ಯೆ ಅಧಿಕ. ಇದು ಕೇವಲ ಐತಿಹಾಸಿಕ ಸ್ಥಳವೆಂದು ಭಾವಿಸದೇ, ಕಾಡುಗಲ್ಲಲ್ಲಿ ಕಲೆ ರೂಪುಗೊಂಡಿರುವ “ಶಿಲ್ಪ ಕಲೆಗಳ ಕಣಜ”ವೆಂದು ಭಾವಿಸಬೇಕು. ಅಷ್ಟರಮಟ್ಟಿಗೆ ಕಲಾ ಸವಾಲುಗಳ ಗೆದ್ದ ನೆಲವದು.

ಸಾಮ್ರಾಜ್ಯ ಸ್ಥಾಪನೆ:

1336 ರಲ್ಲಿ ವಿಜಯನಗರ ಸಾಮ್ರಾಜ್ಯ ಹರಿಹರ ಬುಕ್ಕರಾಯರಿಂದ ಸ್ಥಾಪನೆ ಯಾಯಿತು. ಇವರೊಂದಿಗೆ ಸಂಬಂಧಿಗಳಾದ ಮುದ್ದಪ್ಪ, ಮಾರಪ್ಪ, ಕಂಪಣ ರು ಸಹಾಯಕರಾಗಿ ನಿಂತಿದ್ದರು. ಇವರ ಮೂಲದ ಬಗೆಗೆ ಖಚಿತ ಮಾಹಿತಿಗಳು ಹೆಚ್ಚು ಲಭ್ಯವಾಗದಿದ್ದರೂ, ದೊರೆತಿರುವ ಮಾಹಿತಿಗಳ ಪ್ರಕಾರ, ಇವರು ಭಾರತದ ದಕ್ಷಿಣ ಭಾಗದಲ್ಲಿ ಹೊಯ್ಸಳರಿಂದ ನೇಮಿಸಲ್ಪಟ್ಟ ದಂಡನಾಯಕ/ಕಮಾಂಡರ್ ಆಗಿದ್ದರೆಂದು, ಅಪ್ಪಟ ಕನ್ನಡಿಗರೆಂದು ನಂಬಿರುವುದೇ ಹೆಚ್ಚು. ಆದರೆ ಮತ್ತೊಂದು ಮೂಲ ಇವರನ್ನು ತೆಲುಗು ನಾಡಿನಿಂದ ಬಂದವರು ಎಂದೂ ಪ್ರಚಲಿತದಲ್ಲಿದೆ. ಅವರು ಕಾಕತೀಯ ದೊರೆಗಳ ನಿಕಟ ಸಂಪರ್ಕ ಹೊಂದಿದ್ದಾಗಿಯೂ, ಹೊಯ್ಸಳ ಸಾಮ್ರಾಜ್ಯದ ಅಂತ್ಯದ ಕಾಲದಲ್ಲಿ ಸ್ವತಂತ್ರ ಘೋಷಿಸಿಕೊಂಡರು ಎಂಬುದೂ ಇದೆ. ಅದೇನೆಯಿದ್ದರೂ ಆ ಕಾಲಕ್ಕೆ ದಕ್ಷಿಣ ಭಾರತದಲ್ಲಿ ಬಲಿಷ್ಠ ಸಾಮ್ರಾಜ್ಯವನ್ನು ಕಟ್ಟಿ, ಹಿಂದೂ ಧರ್ಮ ರಕ್ಷಣೆಗೆ ಮುಂದಾಗಿದ್ದ ಸಹೋದರರು ಅಜರಾಮರರೆನಿಸಿದ್ದಾರೆ.

ದೆಹಲಿಯ ಸುಲ್ತಾನರು ದಕ್ಷಿಣ ಭಾರತದ ಮೇಲೆ ಹಿಡಿತ ಸಾಧಿಸಲು ಮೇಲಿಂದ ಮೇಲೆ ಆಕ್ರಮಣವೆಸಗುತಿದ್ದುದು, ಅಲ್ಲಾವುದ್ದೀನ್ ಖಿಲ್ಜಿಯ ಉಪಟಳ ನಿಯಂತ್ರಿಸಲು, ಸಶಕ್ತ ರಾಜಮನೆತನದ ಅವಶ್ಯಕತೆಯೂ ಇತ್ತು. ಅದೇ ಈ ಸಹೋದರರಿಗೆ ವರದಾನವಾಯಿತು. ಇದಾಗಿ ಒಂದು ದಶಕದ ಅಂತರದಲ್ಲಿ ವಿಜಯಪುರದಲ್ಲಿ, ಬಹುಮನಿ ಸಾಮ್ರಾಜ್ಯ1346ರಲ್ಲಿ ಸ್ಥಾಪನೆಯಾಯಿತು.

ಇವೆರೆಡೂ ರಾಜ ಮನೆತನಗಳು ಸತತವಾಗಿ ಯುದ್ಧಗಳಲ್ಲೇ ತೊಡಗಿ, ಕಡೆಗೆ 1556 ರ ರಕ್ಕಸ ತಂಗಡಿಯಲ್ಲಿ ನಡೆದ ಯುದ್ಧವೇ ವಿಜಯನಗರ ಸಾಮ್ರಾಜ್ಯದ ಅವನತಿಗೆ ಕಾರಣವಾಯಿತು. ಅಸಮರ್ಥ ದೊರೆ, ಒಗ್ಗಟ್ಟಿನ ಕೊರತೆ, ಸೈನ್ಯದಲ್ಲಿದ್ದ ಮುಸ್ಲಿಂ ಪಡೆ ವಿಜಯಪುರದ ಸುಲ್ತಾನರಿಗೆ ಅನುಕೂಲ ಮಾಡಿಕೊಟ್ಟಿತು. ಕಡೆಯ ಪ್ರಬಲ ಅರಸ ಅಳಿಯ ರಾಮರಾಯನ ಆಡಳಿತದ ಪರಿಣಾಮವನ್ನು ಬಹುಮನಿ ಅರಸರಿಗೆ ಸಹಿಸದಂತಾಯಿತು. ರಾಮರಾಯನ ಯಶಸ್ಸಿನ ನಾಗಾಲೋಟಕ್ಕೆ ಕಡಿವಾಣ ಹಾಕಲೆಂದೇ ಒಡೆದು ಕವಲಾಗಿ ಹೋಗಿದ್ದ ಬಿಜಾಪುರದ ಮನೆತನಗಳೆಲ್ಲ ಒಂದಾಗಿ, ಹತ್ತಿಕ್ಕುವಲ್ಲಿ ಯಶಸ್ವಿಯಾದರು.

ತುಂಗಭದ್ರೆಯ ತಟದಲ್ಲಿದ್ದ ಪಂಪಾ ವಿರೂಪಾಕ್ಷನನ್ನು ಕುಲದೈವವನ್ನಾಗಿ ಮಾಡಿಕೊಂಡು, ಆನೆಗೊಂದಿ ಮತ್ತು ಹಂಪೆಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು, ಒಟ್ಟು ನಾಲ್ಕು ಮನೆತನಗಳು ಆಳಿದವು. ಅವೆಂದರೆ ಸಂಗಮ, ಸಾಳ್ವ, ತುಳುವ ಹಾಗೂ ಅರವೀಡು.

ಹರಿಹರನು ತಳಪಾಯ ಹಾಕಿಕೊಟ್ಟರೆ, ಸಹೋದರ ಬುಕ್ಕರಾಯ ಧಾರ್ಮಿಕ ಸಹಿಷ್ಣುತೆಗೆ ಅಡಿಪಾಯ ಹಾಕಿಕೊಟ್ಟನು. ಪ್ರೌಢದೇವರಾಯನು ಸಾಮ್ರಾಜ್ಯ ವಿಸ್ತರಿಸಿ, ಸುತ್ತ ಮುತ್ತಲ ರಾಜ್ಯಗಳ ಅರಸರಲ್ಲಿ ಭೀತಿ ಉಂಟಾಗುವಂತೆ ಮಾಡಿದನು. ಶ್ರೀ ಕೃಷ್ಣ ದೇವರಾಯನ ಕಾಲದಲ್ಲಂತೂ ಉಚ್ಛ್ರಾಯ ಸ್ಥಿತಿ ತಲುಪಿ, ಸುವರ್ಣ ಯುಗವೆನಿಸಿಕೊಂಡಿತು. ದೊರೆತ ನಾಣ್ಯಗಳು, ಮಾಹಿತಿಗಳು ಸಾಕ್ಷಿಕರಿಸಿವೆ.

ಹಾಳು ಹಂಪೆ ಎನಿಸಿಕೊಂಡಿದ್ದರೂ ಅವರುಗಳ ಆಡಳಿತದಲ್ಲಾದ ಅಭಿವೃದ್ಧಿ ಕಾರ್ಯಗಳ ಕುರುಹುಗಳು ಇಂದಿಗೂ ಜೀವಂತವಾಗಿವೆ. ನೃತ್ಯ ಕಲೆ, ಚಿತ್ರ ಕಲೆ, ವಾಸ್ತುಶಿಲ್ಪ’ಸಾಹಿತ್ಯ,ಸಂಗೀತ ಒಂದೆರೆಡಲ್ಲದೇ ಅನೇಕ ರಂಗಗಳಿಗೆ ರಂಗೇರಿಸಿದ್ದಕ್ಕೆ ಇತಿಹಾಸದಲ್ಲಿ ಸಾಕ್ಷ್ಯಾಧಾರಗಳು ಸಿಕ್ಕುತ್ತವೆ.

ಸಾಹಿತ್ಯ ಪ್ರೇಮ :

ಸ್ವಯಂ ಕವಿ, ಬರೆಹಗಾರರೂ ಆಗಿದ್ದ ರಾಜರುಗಳು, ಅವರ ಪತ್ನಿಯರ ಕೃತಿಗಳು ಉಪಲಬ್ದವಾಗಿವೆ. ಬುಕ್ಕರಾಯನ ಎರೆಡನೆಯ ಮಗ ಕಂಪಣ್ಣನ ಪತ್ನಿ ಗಂಗಾದೇವಿಯು ‘ಮಧುರ ವಿಜಯಂ’ ಕೃತಿಯನ್ನು ಸಂಸ್ಕೃತದಲ್ಲಿ ರಚಿಸಿದ್ದಾಳೆ. ಶ್ರೀ ಕೃಷ್ಣ ದೇವರಾಯನು ಅಮುಕ್ತ ಮಾಲ್ಯದ, ಜಾಂಬವತಿ ಕಲ್ಯಾಣ ಉತ್ತಮ ಉದಾಹರಣೆ.ಅವರ ಆಸ್ಥಾನದಲ್ಲಿ ಅಷ್ಟ ದಿಗ್ಗಜ ಕವಿಗಳಿದ್ದರೆಂಬುದು ಮುಖ್ಯ ಸಂಗತಿ.

ಹಂಪೆ ಕಲೆಗಳಾಗರ :

ವಾಸ್ತುಶಿಲ್ಪದಲ್ಲಿ ವಿಜಯ ವಿಠ್ಠಲ ದೇಗುಲ ಅನರ್ಘ್ಯ ರತ್ನ. ಕಾರಣ ಸಂಗೀತವನ್ನು ಕಲ್ಲಲ್ಲಿ ಕೇಳಬಹುದೆಂದರೆ ಅದು ಇಲ್ಲಿ ಮಾತ್ರ. ಕಾಡ್ಗಲ್ಲನ್ನು ಕೊಳವೆಗಳಾಗಿ ಕೊರೆದು, ಸಪ್ತ ಸ್ವರಗಳನ್ನು ಕೇಳಿಸುವುದೆಂದರೆ, ಜಗತ್ತಿನ ಅದ್ಬುತಗಳಲ್ಲೇ ಅದ್ಭುತ ! ಇಲ್ಲೇ ಇರುವ ಕಲ್ಲಿನ ರಥ, ಒರಿಸ್ಸಾದ ಸೂರ್ಯ ಮಂದಿರದ ಕಲ್ಲಿನ ರಥದ ಏಕಶಿಲಾ ಪ್ರತಿ ಕೃತಿ. ಕೃಷ್ಣ ದೇಗುಲ, ಹಜಾರ ರಾಮ, ಕಡಲೆ ಕಾಳು, ಸಾಸಿವೆ ಕಾಳು ಗಣೇಶ, ಕಮಲ ಮಹಲ್, ಗಜ ಶಾಲೆ, ಒಂಟೆ ಸಾಲು, ರಾಣಿಯರ ಸ್ನಾನ ಗೃಹ, ಮಹಾ ನವಮಿ ದಿಬ್ಬ, ಕರಿ ಕಲ್ಯಾಣಿ, ಉಗ್ರ ನರಸಿಂಹ, ಬಡವಿ ಲಿಂಗ, ವೀರಭದ್ರ , ಮಲ್ಲಿಕಾರ್ಜುನ ,ರಾಮ ಲಕ್ಷ್ಮಣ, ಹೇಮಾಕೂಟಾಚಲದಲ್ಲಿರುವ ಜೈನ ಮಂದಿರಗಳು, ವಿಷ್ಣು , ಶಿವ ದೇಗುಲಗಳು, ಅಸಂಖ್ಯಾತ ಮಂಟಪಗಳು, ಮಸೀದಿಗಳು ಒಂದೇ ಎರೆಡೆ ? ಲೆಕ್ಕಕ್ಕೆ ಸಿಗದಷ್ಟು ! ಇಂದಿಗೂ ವಿರೂಪಾಕ್ಷ ಮಂದಿರದ ಮುಂಭಾಗದ ಮಂಟಪದಲ್ಲಿ ವರ್ಣ ಚಿತ್ರ ಕಲೆ ಜೀವಂತವಾಗಿದೆ.

ಜ್ಞಾನದ ಕಣಜ:

ಅವರಲ್ಲಿ ರಾಮಾಯಣ, ಮಹಾಭಾರತ, ಪುರಾಣ ಕಥೆಗಳು ನೆಲೆಯೂರಿದ್ದವು ಎನ್ನುವುದಕ್ಕೆ ಹಜಾರ ರಾಮ, ಕೃಷ್ಣ ದೇಗುಲಗಳ ಮೇಲಿನ ಪಟ್ಟಿಕೆಗಳು ಸಾಕು.ಜನ ಜೀವನದ ಸಾಮಾಜಿಕ ಚಿತ್ರಣ, ವಿದೇಶಿಗರು ಭೇಟಿ ನೀಡಿದ್ದ ಪ್ರಸಂಗಗಳೂ ಲಭ್ಯ.

ದಸರಾ ಮಹೋತ್ಸವ :

ಇಂದು ನಾವು ನೋಡುವ ಮೈಸೂರಿನ ದಸರಾ ಮೆರವಣಿಗೆ ವಿಜಯನಗರದರಸರುಗಳ ಬಳುವಳಿ. ಅತ್ಯಂತ ವೈಭವದಿಂದ ಆಚರಿಸಲಾಗುತ್ತಿತ್ತು ಎಂದು ಇತಿಹಾಸ ಹೇಳುತ್ತದೆ.

ದಕ್ಷ ಆಡಳಿತ:

ಆಡಳಿತದಲ್ಲಿ ರಾಜನ ತೀರ್ಮಾನವೇ ಅಂತಿಮವಾಗಿದ್ದು, ಗ್ರಾಮೀಣ, ನಾಡು, ಪ್ರಾಂತಾಧಿಕಾರಗಳು, ಮಂತ್ರಿಗಳು, ಸೇನಾಧಿಪತಿಗಳು, ದಂಡನಾಯಕರು ರಾಜನಿಗೆ ಸಹಕರಿಸುವ ಪದ್ದತಿಯಿತ್ತು. ಅಂತಹವರಲ್ಲಿ ತಿಮ್ಮರಸು ಮಂತ್ರಿಯೂ, ಕೃಷ್ಣ ದೇವರಾಯನ ಸಾಕು ತಂದೆಯೂ ಆಗಿದ್ದವನು ಉಲ್ಲೇಖಾರ್ಹ.
ಬಾವಿ,ಕರೆ, ಕಾಲುವೆಗಳು ನಿರಾವರಿ ಸೌಲಭ್ಯವನ್ನು ಒದಗಿಸಿದ್ದು, ಕೃಷಿಯೇ ಪ್ರಧಾನ ವೃತ್ತಿಯಾಗಿತ್ತು. ವ್ಯಾಪಾರ ವ್ಯವಹಾರಗಳು ಸ್ಥಳೀಯವಾಗಿ ಒಂದೇ ವಿದೇಶಗಳೊಡನೆ ಕರಾವಳಿ ತೀರದ ಮೂಲಕ ನಡೆಯುತಿತ್ತು.

ಅಂತರಾಷ್ಟ್ರೀಯ ಸ್ಮಾರಕಗಳ ಪಟ್ಟಿಯಲ್ಲಿ ಹಂಪೆ :

ಇತ್ತೀಚಿನ ಎರಡು ದಶಕಗಳಲ್ಲಿ ಹಂಪೆ
ಅಂತರಾಷ್ಟ್ರೀಯ ಐತಿಹಾಸಿಕ ಸಾಂಸ್ಕೃತಿಕ ಸ್ಮಾರಕಗಳ ಪಟ್ಟಿಯಲ್ಲಿ ಸೇರಿಕೊಂಡಿದೆ. ಈಗ ಆಯಾ ಸ್ಥಳಗಳನ್ನು ಗುರುತಿಸಿ, ಜೀರ್ಣೋದ್ಧಾರ, ಮರು ಸ್ಥಾಪನೆಯ ಕಾರ್ಯಗಳು ಪ್ರಗತಿಯಲ್ಲಿವೆ. ಇದನ್ನು ಸ್ಥಳೀಯರಾದ ನಾವೂ ಜತನದಿಂದ ಕಾಯ್ದುಕೊಂಡು ಹೋಗಬೇಕಾದ ಕರ್ತವ್ಯವಾಗಿದೆ.

ವಿಜಯನಗರ :

ಹೊಸದಾಗಿ ಜಿಲ್ಲೆಯಾಗಿ ರಚನೆಯಾಗಿದೆ. ಹೊಸಪೇಟೆ ಕೇಂದ್ರ ಸ್ಥಾನ. ಕೇವಲ 11 ಕಿ ಮೀ ಅಂತರದಲ್ಲಿ ಹಂಪೆಯಿದೆ. ತುಂಗಭದ್ರಾ ನದಿಯ ದಕ್ಷಿಣ ತಟದಲ್ಲಿ ವಿರೂಪಾಕ್ಷ ಮಂದಿರವಿದೆ. ಉತ್ತರದಲ್ಲಿ ಅಂಜನಾದ್ರಿ ಪರ್ವತವಿದೆ. ಪೂರ್ವದಲ್ಲಿ ಮಾಲ್ಯವಂತ ಪರ್ವತವಿದೆ. ಸುಂದರ ತಾಣ ಹಂಪೆಯನ್ನು ಕಣ್ತುಂಬಿಕೊಳ್ಳಲೇ ಬೇಕು. ನವೆಂಬರ್ ನಿಂದ ಫೆಬ್ರುವರಿ ಸೂಕ್ತ ಸಮಯ. ಬೇಸಿಗೆಯಲ್ಲಿ ಬಿಸಿಲು ಮತ್ತು ದಣಿವು ಜಾಸ್ತಿ.

ಸಂಗಮ ವಂಶ
ಹರಿಹರ ಸ್ಥಾಪಕ ಮತ್ತು ಮೊಟ್ಟ ಮೊದಲ ಅರಸ. – 1336 – 1356
1 ನೇ ಬುಕ್ಕ – 1356 – 1377
2ನೇ ಹರಿಹರ – 1377 – 1404
1 ನೇ ವಿರುಪಾಕ್ಷಾ – 1404 – 1405
2ನೇ ಬುಕ್ಕ – 1405 – 1406
1 ನೇ ದೇವರಾಯ – 1406 – 1422
ರಾಮಚಂದ್ರ – 1422 – 1422
ವೀರ ವಿಜಯ – 1422 – 1424
2 ನೇ ದೇವರಾಯ ( ಫ್ರೌಢ ದೇವರಾಯ ) – 1424 – 1446
ಮಲ್ಲಿಕಾರ್ಜುನ – 1466 – 1465
2 ನೇ ವಿರೂಪಾಕ್ಷ – 1465 1485
ಫ್ರೌಢದೇವರಾಯ – 1485

ಸಾಳ್ವ ವಂಶ

ಸಾಳುವ ನರಸಿಂಹ – 1485 – 1491
ತಿಮ್ಮ ಭೂಪ – 1491
2 ನೇ ನರಸಿಂಹ – 1491 – 1503

ತುಳುವ ವಂಶ

ವೀರ ನರಸಿಂಹ – 1503 – 1505
2 ನೇ ನರಸಿಂಹ – 1050 – 1509
ಕೃಷ್ಮದೇವರಾಯ – 1509 – 1529
ಅಚ್ಚುತ ರಾಯ – 1529 – 1542
1 ನೇ ವೆಂಕಟರಾಯ – 1542
ಸದಾಶಿವರಾಯ – 1542 – 1570

ಅರವೀಡು ವಂಶ

ತಿರುಮಲ ರಾಯ –
1 ನೇ ವೆಂಕಟರಾಯ
ಶ್ರೀರಂಗರಾಯ
2 ನೇ ವೆಂಕಟಾದ್ರಿ
2 ನೇ ಶ್ರೀರಂಗ
ರಾಮದೇವ
3 ನೇ ವೆಂಕಟರಾಯ
3 ನೇ ರಂಗರಾಯ ( ಸಾಮ್ರಾಜ್ಯ ರಹಿತ )

– ಲೇಖನ : ರವಿ ಕರಣಂ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button