Latest

 ಭವ್ಯ ಭಾರತದ ಇತಿಹಾಸ ಅರಿಯುವಲ್ಲಿ ಎಡವಿದ ಜನತೆ

ಪ್ರಗತಿವಾಹಿನಿ ವಿಶೇಷ:

ಇದು ಯಾರದೇ ವೈಯುಕ್ತಿಕ ಹಿತಾಸಕ್ತಿ, ದೇಶದ ಅಭಿವೃದ್ಧಿಗೆ ಕಂಟಕವಾಗುವಂತೆ ಇರಬಾರದು ಎಂಬುದನ್ನು ತಿಳಿಸುವ ಪ್ರಯತ್ನವಷ್ಟೇ. ಭವ್ಯ ಭಾರತದ ಇತಿಹಾಸದ ಅರಿವಿರದೇ ತಮ್ಮ ದೃಷ್ಟಿಕೋನದಲ್ಲಿ ಕಂಡ ವಿಚಾರ / ವಿಷಯವನ್ನು ಮುಕ್ತವಾಗಿ ವ್ಯಕ್ತಪಡಿಸುವಾಗ, ಮುಂದಿನ ಪರಿಣಾಮಗಳ ಬಗ್ಗೆ ಅರಿವಿರಬೇಕು.

ಅಸಂಖ್ಯಾತ ವ್ಯಕ್ತಿಗಳು ನಂಬಿಕೊಂಡು ಬಂದ ನಂಬಿಕೆಗಳಾಗಲಿ, ಪದ್ಧತಿ, ಆಚಾರ ವಿಚಾರ, ಸಂಪ್ರದಾಯ ಆಚರಣೆ, ಸಂಸ್ಕೃತಿಗಳನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ವಾಕ್ ಸ್ವಾತಂತ್ರ್ಯವಿದೆಯೆಂದು ಒಂದು ವ್ಯವಸ್ಥೆಯ ಶಾಂತಿಯನ್ನು ಕದಡುವ ಕಾರ್ಯವನ್ನು ಯಾರೂ ಮಾಡಬಾರದು.

ಅದರಲ್ಲೂ ಸಾಹಿತಿಗಳು, ಕವಿಗಳು, ರಾಜಕಾರಣಿಗಳು, ರಾಜಕೀಯ ಪಕ್ಷಗಳು ಧಾರ್ಮಿಕ ಮುಖಂಡರು, ಸಮಾಜ ಸುಧಾರಕರು ಮತ್ತಿತರ ಜವಾಬ್ದಾರಿ ಹೊತ್ತ ಸಂಘ ಸಂಸ್ಥೆಗಳು ಎಚ್ಚರಿಕೆಯ ಹೆಜ್ಜೆಯಿಡಬೇಕು. ಕೂಪ ಮಂಡೂಕ ಭಾವನೆಯಿಂದ ಹೊರಬಂದು, ಸುಂದರ ಜಗತ್ತನ್ನು ಆಸ್ವಾದಿಸಬೇಕು ಮತ್ತು ಅದಕ್ಕೆ ಅವಕಾಶ ಮಾಡಿಕೊಡಬೇಕು.

ಅಪಿ ಸ್ವರ್ಣಮಯೀ ಲಂಕಾ
ನ ಮೇ ಲಕ್ಷ್ಮಣ ರೋಚತೇ ।
ಜನನೀ ಜನ್ಮಭೂಮಿಶ್ಚ
ಸ್ವರ್ಗಾದಪಿ ಗರೀಯಸೀ ॥

ಇದು ಪ್ರಭು ಶ್ರೀರಾಮಚಂದ್ರ ಲಕ್ಷ್ಮಣನಿಗೆ ಹೇಳುವ ಈ ಪ್ರಸಿದ್ಧ ಮಾತು. ಅಂದರೆ ಲಂಕೆಯನ್ನು ಸ್ವರ್ಣದಿಂದ ಕಟ್ಟಲ್ಪಟ್ಟಿದೆ ಅದನ್ನು ಕಂಡು ರೋಮಾಂಚನಗೊಳ್ಳುವುದು ಬೇಕಾಗಿಲ್ಲ. ತಾಯಿ ಮತ್ತು ತಾಯಿ ನೆಲ ಸ್ವರ್ಗಕ್ಕಿಂತಲೂ ಮಿಗಿಲಾದುದು ಎಂದು ಅರ್ಥ.

ಇದನ್ನು ಈ ನೆಲದಲ್ಲಿ ಜನಿಸಿದ ಪ್ರತಿಯೊಬ್ಬನೂ ಕೂಡ ಮನವರಿಕೆ ಮಾಡಿಕೊಳ್ಳಬೇಕು. ತಾಯಿಯ ಮೇಲೆ ಎಷ್ಟು ಪ್ರೀತಿ ಇದೆಯೋ ಅಷ್ಟೇ ಪ್ರೀತಿಯನ್ನು ಈ ನೆಲಕ್ಕೂ ಕೂಡ ಕೊಡಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ. ನೆಲ ಜಲ, ಭಾಷೆ, ಸಂಸ್ಕೃತಿ, ಆಚಾರ ವಿಚಾರ, ಸಂಪ್ರದಾಯ, ಧಾರ್ಮಿಕ ಆಚರಣೆಗಳು,ಸಾಮಾಜಿಕ, ನೈಸರ್ಗಿಕ ಪರಿಸರ ಎಲ್ಲವನ್ನೂ ಕೂಡ ಪ್ರೀತಿಸಬೇಕಾದುದು ಅವಶ್ಯವೇ. ನಮ್ಮ ಆವಾಸ ಸ್ಥಾನವಾಗಿರುವ ಈ ಭವ್ಯ ಭಾರತದ ಹಿರಿಮೆಯನ್ನು ಎತ್ತಿ ಹಿಡಿಯುವ ಕೆಲಸ ಪ್ರತಿಯೊಬ್ಬ ಭಾರತೀಯನದ್ದು ಎಂಬುದನ್ನು ಮನಗಾಣಬೇಕು.

ನಾವು ಯಾವುದೇ ಪ್ರದೇಶ, ಭಾಷೆ, ಸಂಸ್ಕೃತಿ, ಧರ್ಮಕ್ಕೆ ಸೇರಿರಲಿ, ನಮಗೆ ಮುಖ್ಯವಾಗಿ ಕಣ್ಣಿಗೆ ಕಾಣಬೇಕಾದುದು ಭಾರತ. ಈ ದೇಶದ ಇತಿಹಾಸ. ಮೊದಲು ಇದನ್ನು ಅರ್ಥಮಾಡಿಕೊಳ್ಳಬೇಕು. ಆದಿಮಾನವ ಆಧುನಿಕ ಜಗತ್ತಿಗೆ ಕಾಲಿಡಲು ಎಷ್ಟೆಲ್ಲ ಹಂತಗಳನ್ನು ದಾಟಿ ಬರಲು ಪ್ರಯತ್ನ ಪಟ್ಟಿದ್ದಾನೆಯೋ, ಆ ಪ್ರಯತ್ನದ ಹಿಂದೆ ಈ ಭವ್ಯ ಭಾರತದ ನೆರಳು ಮತ್ತು ಹೆಜ್ಜೆ ಗುರುತುಗಳಿರುವುದನ್ನು ಗಮನಿಸಬೇಕು.

ಸಿಂಧೂ ಸರಸ್ವತಿಯ ಬಯಲಿನಲ್ಲಿ ಮೈತಳೆದ, ವಿಭಿನ್ನ ಸಂಸ್ಕೃತಿಯ, ಉತ್ಕೃಷ್ಟ ದರ್ಜೆಯ ಜೀವನ ಕ್ರಮಕ್ಕೆ ಅಡಿಪಾಯ ಹಾಕಿದ ಈ ದೇಶಕ್ಕೆ ಸರಿಸಾಟಿಯಾಗಿ ನಿಲ್ಲಬಲ್ಲ ಮತ್ತೊಂದು ದೇಶವಿಲ್ಲ ಎಂದೇ ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಹಾಗೆಂದು ಇದು ಉತ್ಪ್ರೇಕ್ಷೆ ಏನಲ್ಲ. ವೈಜ್ಞಾನಿಕವಾಗಿ, ಕೂಲಂಕುಷವಾಗಿ, ಪರಾಮರ್ಶಿಸಿ ನೋಡಿದಲ್ಲಿ, ನಿಮಗೆ ಹಲವು ಸತ್ಯಗಳು ಗೋಚರಿಸುತ್ತವೆ.

ಇಂದಿಗೂ ಪ್ರಚಲಿತದಲ್ಲಿರುವ ರಾಮಾಯಣ, ಮಹಾಭಾರತ ,ವೇದಗಳು, ಪುರಾಣಗಳು, ಉಪನಿಷತ್ತುಗಳು, ಅರಣ್ಯಕಗಳು, ಪುಣ್ಯ ಕಥೆಗಳು ಸಾರಿದ್ದೆಲ್ಲವೂ ಸುಸಂಸ್ಕೃತ ಬದುಕಿಗೆ ಬೇಕಾದವುಗಳನ್ನು. ಇಂದು ಅವುಗಳನ್ನು ತಪ್ಪು ಗ್ರಹಿಕೆಗಳಡಿಯಲ್ಲಿ ಮನಸುಗಳನ್ನು ಒಡೆಯುತ್ತಿರುವುದು ಸಾಮಾಜಿಕ ಸಾಮರಸ್ಯದ ಉಲ್ಲಂಘನೆಯಾಗುತ್ತದೆ. ಹಾಗೆಂದೆನಿಸದೇ ?

ಇದೇ ನೆಲದಲ್ಲಿ ಸರಿ ಸುಮಾರು 5000 ಸಾವಿರ ವರ್ಷಗಳಿಗಿಂತಲೂ ಹಿಂದೆ ನಾಗರಿಕತೆಯು ಒಡ ಮೂಡಿತು ಎಂದು ಇತಿಹಾಸಕಾರರು ಬರೆಯುತ್ತಾರೆ. ಸಿಂಧೂ ನದಿಯ ತಟದಲ್ಲಿ ಜನ ಸಮೂಹವೊಂದು ನೆಲೆಸಿತು. ನಂತರ ಹೊಸ ಅನ್ವೇಷಣೆಯ ಹಾದಿಯಲ್ಲಿ ಸಾಗಿತು. ಅವರ ಜೀವನ ಕ್ರಮ ಶಿಸ್ತು ಬದ್ದವಾಗಿತ್ತು…..ಹೀಗೆ ಅವರ ವಿವರಣೆ ದೊರೆಯುತ್ತಾ ಹೋಗುತ್ತದೆ.

ಸಿಂಧೂ – ಹಿಂದೂ ಪದವಾದ ಬಗೆ:

ಸಪ್ತ ನದಿಗಳ ನಾಡಿನಲ್ಲಿ ಅದ್ವಿತೀಯ ಜೀವನ ಕ್ರಮವರಳಿತು. ಅಖಂಡ ಭಾರತ ಅಂದರೆ ಇಂದಿನ ಪಾಕಿಸ್ತಾನ , ನೇಪಾಳ,ಬಾಂಗ್ಲಾದೇಶ, ಭೂತಾನ, ಅಫ್ಘಾನಿಸ್ತಾನವನ್ನೂ ಒಳಗೊಂಡ ಜಂಬೂ ದ್ವೀಪದಲ್ಲಿ, ಸಂಸ್ಕೃತಿಯೊಂದು ಸಿಂಧೂ ನದಿಯ ದಡದಲ್ಲಿ ಹುಟ್ಟಿಕೊಂಡಿತು. ಅಲೆದಾಟದಲ್ಲಿ ತೊಡಗಿದ್ದ ಜನ ಸಮೂಹ, ಆಹಾರಕ್ಕಾಗಿ, ಪರಿಸರದಿಂದ ರಕ್ಷಣೆ ಪಡೆದುಕೊಳ್ಳಲು ಕೌಟುಂಬಿಕ ಜೀವನ ಪದ್ದತಿಗಿಳಿಯಿತು.

ಇಂದು ಹೇಳಲಾಗುತ್ತಿರುವ ಮಧ್ಯ ಪ್ರಾಚ್ಯ ದಿಂದ ಒಂದು ವರ್ಗ ವಲಸೆ ಬಂತು. ಸಿಂಧೂ ನದಿ ತೀರದ ಜನರೊಂದಿಗೆ ಬೆರೆತರು. ಅವರು ಪರ್ಷಿಯನ್ ಭಾಷೆಯ ಜನರಿದ್ದ ಕಾರಣ, ‘ಸಿಂಧೂ’ ಎನ್ನುವ ಪದವನ್ನು ‘ಹಿಂದೂ’ ಎಂದು ಬಳಸಿದರು. ಕಾರಣ ಅವರಲ್ಲಿ ‘ಸ’ ವರ್ಣದ ಉಚ್ಚಾರವಿರಲಿಲ್ಲ. ಹಾಗಾಗಿ ‘ಸಿಂಧೂ’ ಪದವನ್ನು ‘ಹಿಂದೂ’ ಎಂದು ಉಚ್ಚರಿಸಿದರು. ಅಂದರೆ ಮೂಲ ನಿವಾಸಿಗಳಾದ ಸಿಂಧೂ ಜನ ಸಮೂಹವೇ ಹಿಂದೂಗಳು. ಸನಾತನಿಗಳು. ಹಾಗಾಗಿ ಇತಿಹಾಸ ಸೃಷ್ಟಿಯಲ್ಲಿ ನಿರತರಾದ ಬ್ರಿಟಿಷರು ಈ ನೆಲವನ್ನು ಇಂಡಿಯಾ ಎಂದೇ ಕರೆದರು. ( ‘ಹಿಂದೂ’ ಪದದ ವ್ಯುತ್ಪತ್ತಿ ಬಗೆಗೆ ಹಿಂದೂ- ವಿಕಿಪೀಡಿಯಾ. Short Screen ಒಂದು ತುಣುಕನ್ನು ನೋಡಿ.ಸುಮಾರು 33 ಕ್ಕಿಂತಲೂ ಹೆಚ್ಚಿನ ಗ್ರಂಥಗಳ ವಿವರಣೆಯಿದೆ )

ಸಾಹಿತ್ಯ – ಜೀವನದ ಅನಾವರಣ:

ರಾಮಾಯಣ ಮತ್ತು ಮಹಾಭಾರತ ಕಾಲಗಳು ಕಾಲ್ಪನಿಕವಲ್ಲ. ಅವು ನಡೆದ ಘಟನೆಗಳೇ ಎಂದು ಕೋಟಿ ಕೋಟಿ ಭಾರತೀಯರು ನಂಬುತ್ತಾರೆ. ಅದಕ್ಕೆ ಪುರಾವೆಗಳೆಂಬಂತೆ ಭಾರತ ಮತ್ತು ಶ್ರೀಲಂಕಾಕ್ಕೆ ಸೇತುವೆಯೊಂದನ್ನು ಕಟ್ಟಿ, ರಾವಣನೊಂದಿಗೆ ಹೋರಾಡಿ ಸೀತೆಯನ್ನು ಕರೆ ತಂದನೆಂದು ಮಹರ್ಷಿ ವಾಲ್ಮೀಕಿ ರಾಮಾಯಣದಲ್ಲಿ ಬರೆದಿದ್ದಾರೆ. ಇಂದು ನಿಮಗೆ ಸಮುದ್ರದಲ್ಲಿ ರಾಮಸೇತು ಎಂದು ಕರೆಯಲಾದ ಸೇತುವೆಯೊಂದು ಗೋಚರಿಸುತ್ತದೆ. ಅಯೋಧ್ಯೆ, ಕಿಷ್ಕಿಂಧೆ, ಶಬರಿ ಗುಹಾ, ಅಂಜನಾದ್ರಿ ಪರ್ವತ ಹೀಗೆ ಸಾಲು ಸಾಲು ಘಟನೆಗಳ ಸ್ಥಳಗಳು ಕಣ್ಣ ಮುಂದಿದ್ದು, ತಲತಲಾಂತರಗಳಿಂದ ಬಾಯಿಂದ ಬಾಯಿಗೆ ಹರಿದು ಬಂದ ವಿಷಯಗಳು ಪುಷ್ಟೀಕರಿಸಿವೆ.

ವ್ಯಾಸರು ಬರೆದ ಮಹಾಭಾರತವಂತೂ ತೀರ ಸಾಮಿಪ್ಯಕ್ಕೆ ತರುವ ವಿಷಯಗಳಿವೆ. ಪಾಂಡವರ ನೆಲೆ ಇಂದ್ರಪ್ರಸ್ಥ, ಕೃಷ್ಣನ ಜನ್ಮ ತಾಣ, ಯುದ್ಧ ಭೂಮಿ ಕುರುಕ್ಷೇತ್ರ, ಗಾಂಧಾರ ದೇಶ, ಮಣಿಪುರ ಇತ್ಯಾದಿಗಳೆಲ್ಲವೂ ಇಂದಿಗೂ ಘಟನಾವಳಿಗಳನ್ನು ಬಿತ್ತರಿಸಲು ಸಾಕ್ಷೀಭೂತವಾಗಿವೆ. ಆದರೆ ಅತೀ ವರ್ಣನೆಯ ದೈವೀ ಸ್ವರೂಪದ, ಮಾಯ ಮಂತ್ರಗಳ ವಿಷಯ ನಿರೂಪಣೆಯಿಂದಾಗಿ, ಕಪೋಲ ಕಲ್ಪಿತವೆನಿಸಿ ಬಿಡುತ್ತವೆ. ಆದರೆ ಅವರುಗಳು ನೆಲೆಸಿದ್ದುದು ಸತ್ಯವೇ ಎಂಬುದಕ್ಕೆ ಕುರುಹುಗಳನೇಕ ಸಿಕ್ಕಿವೆ ಎಂದು ಹೇಳಲಾಗುತ್ತದೆ. ಸಮುದ್ರದಲ್ಲಿ ಮುಳುಗಿ ಹೋಗಿದ್ದ ಕೃಷ್ಣನ ದ್ವಾರಕಾನಗರಿ ಇಂದು ಸಾಗರದ ತಳದಲ್ಲಿ ಕಂಡಿದೆ. ಭಾರತೀಯ ಪುರಾತತ್ವ ಇಲಾಖೆಯ ಭೂಗರ್ಭ ಅನ್ವೇಷಣೆಯಲ್ಲಿ ದೊರೆತಿದ್ದಾಗಿದೆ.

ಅಲ್ಲಿ ಆ ಕಾಲ ಘಟ್ಟದಲ್ಲಿ ಬಳಸಲ್ಪಟ್ಟ ದೈನಂದಿನ ಜೀವನದ ವಸ್ತುಗಳು ಲಭ್ಯವಾಗಿವೆ. ಸರಿ ಸುಮಾರು ಎಂಟರಿಂದ ಒಂಭತ್ತು ವರ್ಷಗಳ ಹಳೆಯದಷ್ಟು ಎಂಬ ಅಭಿಪ್ರಾಯವಿದೆ. ಹಾಗೆ ನೋಡಿದರೆ ಜಗತ್ತಿನಲ್ಲಿಯೇ ಅತ್ಯಂತ ಹಳೆಯ ನಾಗರಿಕತೆ ಈಜಿಪ್ಟ್ ನಾಗರಿಕತೆ ಎಂಬುದೇ ಸುಳ್ಳಾಗುತ್ತದೆ. ಇದರ ಬಗೆಗೆ ಇನ್ನೂ ಹೆಚ್ಚೆಚ್ಚು ಸಂಶೋಧನೆಗಳು ಜಾರಿಯಲ್ಲಿವೆ. ಸಂತೋಷದ ಸಂಗತಿ.

ಇದನ್ನು ಉಲ್ಲೇಖ ಮಾಡಿದ್ದೇಕೆಂದರೆ, ಬಹುಶಃ ಇಂತಹ ಅದ್ಭುತ ಸಂಗತಿಗಳ ಖಜಾನೆ ಇರುವುದು ಭಾರತದಲ್ಲಿ ಎಂಬುದನ್ನು ತಿಳಿಸಲು. ಈ ನೆಲದಲ್ಲಿ ಅಡಗಿರುವ ಸತ್ಯಗಳರಿವು ನಮ್ಮ ಯುವ ಪೀಳಿಗೆಗೆ ತಿಳಿಸುವ ಪ್ರಯತ್ನವನ್ನು ವ್ಯವಸ್ಥಿತವಾಗಿ, ಪರಿಣಾಮಕಾರಿಯಾಗಿ ಮಾಡಬೇಕಾದುದು ತೀರಾ ಅವಶ್ಯಕ. ಆ ಮೂಲಕ ಸಾಮರಸ್ಯ ಜೀವನ, ಸಹಿಷ್ಣುತೆಯನ್ನು ಬಲಗೊಳಿಸಲು ಸಾಧ್ಯವಾಗುತ್ತದೆ. ಇಂದು ಶಾಲೆಗಳಲ್ಲಿ ಬೋಧಿಸುವ “ವೈವಿಧ್ಯತೆಯಲ್ಲಿ ಏಕತೆ” ಎಂಬ ಪರಿಕಲ್ಪನೆ ಪ್ರಯೋಗಕ್ಕೊಳಪಡಬೇಕು. ಹಾಗಾಗೀ ಭಾವಶುದ್ದ ಮನದ ವಿಚಾರಗಳು ಹೊರ ಬರಬೇಕು.

ಲೇಖನ ಮತ್ತು ಚಿತ್ರಗಳು: ರವಿ ಕರಣಂ.
 (ಇದು ಒಂದೇ ಲೇಖನವಾಗಿದ್ದು, ಒಂದು short screen. ಅದೇ ಪರಿಚ್ಛೇದದ ಕೆಳಗೆ reference ಆಗಿ ಬರಬೇಕು. ಕಾರಣ ವಿವರಣೆಯಲ್ಲಿ ಸಾಕ್ಷಿಗಾಗಿ ಬಳಸಿದ್ದೇನೆ. ಸ್ವಂತ ಅಭಿಪ್ರಾಯವಲ್ಲ ಎಂದು ತೋರಿಸಿದೆ.)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button