Latest

ಮಾದಕಗಳ ಜಾಲದಲ್ಲಿ ಯುವ ಸಮೂಹ !

ಪ್ರಗತಿವಾಹಿನಿ ವಿಶೇಷ: ಮಾದಕ ವ್ಯಸನಿಗಳ ಬದುಕು ಸಂತೋಷದಿಂದ ಕೂಡಿರಲು ಸಾಧ್ಯವೇ ? ಎಂಬುದೊಂದು ಪ್ರಶ್ನೆ, ಅಂಥವರನ್ನೆಲ್ಲ ಕಂಡಾಗ ಕಾಡುತ್ತಿರುತ್ತದೆ. ಕೊಂಚ ಹೊತ್ತಿನ ನಶೆಯ ಸುಖಕ್ಕಾಗಿ ಏನೆಲ್ಲ ತೊಂದರೆಗಳನ್ನು ತಾನು ತನ್ನ ಮನೆಯವರಿಗೆ ತಂದೊಡ್ಡುವುದು ಸರಿಯೇ? ಸುತ್ತ ಮುತ್ತಲ ಜನರಿಗೆ ಕಿರಿ ಕಿರಿ ಉಂಟು ಮಾಡುವುದಷ್ಟೇ ಅಲ್ಲ, ತನ್ನ ದೇಹದ ಅಂಗಾಂಗಗಳನ್ನು ನಾಶ ಪಡಿಸಿಕೊಳ್ಳುವ ಮೂಲಕ ತನಗೂ ಕಿರಿ ಕಿರಿ.

ಧೂಮಪಾನ, ಗುಟಕಾ, ತಂಬಾಕು, ಇತರ ಮಾದಕ ಪದಾರ್ಥಗಳ ಹಾವಳಿ ಇಂದು ವಿಪರೀತ. ಇದರಿಂದಾಗುವ ದುಷ್ಪರಿಣಾಮವೇನು ? ಎಂಬುದನ್ನು ಅದರಡಿಯಲ್ಲಿ ನಮೂದಿಸಲಾಗಿರುತ್ತದೆ. “Smoking is injurious to health ” ಹಾಗಿದ್ದ ಮೇಲೆ ಮಾರಾಟ ಮಾಡಿಸುತ್ತಿರುವ ಸರಕಾರವನ್ನೇ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಬೇಕು. ಆರೋಗ್ಯಕ್ಕೆ ಹಾನಿಕರವಾಗುವ ವಸ್ತುಗಳನ್ನು ನಿಷೇಧಿಸಬೇಕಾದುದೇ, ಮುಂದೆ ನಿಂತು ಮಾರಾಟ ಮಾಡಿಸುವ ಪರಿಪಾಠವೇ ? ಜನರ ಪ್ರಾಣವನ್ನು ಪಣಕ್ಕಿಟ್ಟು ತೆರಿಗೆ ಹಣ ಸಂಗ್ರಹಿಸುವುದು ನ್ಯಾಯವೇ ? ಇದೇ ವೈಚಿತ್ರ್ಯ.’ಕಾನೂನುಗಳಿರುವುದು ಮುರಿಯಲು’ ಎಂಬುದನ್ನು ಇಲ್ಲಿ ಕಾಣಬಹುದು.

 

ಇಂದು’ಕುಡುಕರು’ ಎಂದು ಕರೆಯಬಾರದು. ‘ಮದ್ಯಪಾನ ಪ್ರಿಯರು’ ಎಂದು ಕರೆಯಬೇಕಂತೆ. ಇದು ಫೇಸ್‌ಬುಕ್‌ ಮತ್ತು ಯೂಟ್ಯೂಬ್ ಗಳಲ್ಲಿ ಬರುವ ಚಿತ್ರದ ತುಣುಕುಗಳಲ್ಲಿನ ಬೇಡಿಕೆಯ ಪದ. ಮನೆಹಾಳು ಕೆಲಸಕ್ಕೂ ಗೌರವ ನಿರೀಕ್ಷೆ ! ‘ಕಾಲಾಯ ತಸ್ಮೈ ನಮಃ.’ ಇರಲಿ. ಅವರಿದನ್ನು ಅಭ್ಯಾಸ ಮಾಡಿಕೊಂಡಲ್ಲಿ ಮೊದಲು ಆರೋಗ್ಯವೇ ಬಲಿಯಾಗುತ್ತದೆ. ಅದು ಗೊತ್ತಿದ್ದೂ ಕೂಡಾ. ಒಂದು ಕಾಲದಲ್ಲಿ ಕೆಲವರೇ ಕುಡಿಯುವ ಅಭ್ಯಾಸ ಮಾಡಿಕೊಂಡಿದ್ದರು. ಇಂದು ಸುಸಂಸ್ಕೃತ ಜನರೆಂದು ಕರೆಸಿಕೊಳ್ಳುವ ಜನರು ಅದರಲ್ಲಿ ಒಂದಾಗಿದ್ದಾರೆ. ಅದು ಮೋಜಿಗಾಗಿ, ದುಃಖ ಮರೆಯಲು, ಆಯಾಸ, ದೇಹದ ದಣಿವನ್ನು ಮರೆಮಾಚಲು,ಸಮಯ ಕಳೆಯಲು, ಪ್ರತಿಷ್ಠೆಗಾಗಿ, ಇನ್ನೂ ಅನೇಕಾನೇಕ ಹೊದಿಕೆಗಳನ್ನು ಹೊದ್ದುಕೊಂಡು, ಕಡೆಯಲ್ಲಿ ರಸ್ತೆಯಲ್ಲಿ ಬಿದ್ದುಕೊಂಡು, ಎದ್ದುಕೊಂಡು ಮನೆ ಸೇರುವಷ್ಟರಲ್ಲಿ ಏಳು ಹನ್ನೊಂದಾಗಿರುತ್ತದೆ ಅಲ್ಲವೇ ?

ಭರತ ಭೂಮಿಯ ನಾರಿ ವಿಶ್ವ ಇತಿಹಾಸದಲ್ಲಿಯೇ ಅತ್ಯಂತ ಪವಿತ್ರ ಹೆಣ್ಣು ಎಂಬುದು ನಾವು ಹೇಳಿಕೊಳ್ಳುತ್ತಿದ್ದೇವಲ್ಲ, ಆಕೆಯೂ ಸಹ ಕೈ ಜೋಡಿಸುತ್ತಿರುವುದು ಕೇವಲ ದುಃಖದ ವಿಷಯವಲ್ಲ, ಸಂಸ್ಕೃತಿಯ ವಿನಾಶದ ಮೊದಲನೆಯ ಸೂಚನೆ ! ಹಾಗೆಂದ ಮಾತ್ರಕ್ಕೆ ಇಡೀ ಕುಲವನ್ನು ಸೇರಿಸಿದೆ ಎಂದರ್ಥವಲ್ಲ. ಹನಿ ಹನಿ ಕೂಡಿ ಹಳ್ಳವಾದಂತೆ ಇದೂ ಆಗಿ ಹೋದರೇನು ಗತಿ ? ಯಾವುದನ್ನು ಅಲಕ್ಷ ಮಾಡುತ್ತೇವೆಯೋ ಅದೇ ಹೆಮ್ಮರವಾದಾಗುತ್ತದೆ. ಆಗ ವಿಚಾರಗಳು ಹುಟ್ಟಿಕೊಳ್ಳುತ್ತವೆ. ‘ಆರಂಭದಲ್ಲೇ ಚಿವುಟಿ ಹಾಕಬೇಕಿತ್ತು. ಇಲ್ಲಿಯ ತನಕ ಬರುತ್ತದೆ ಎಂದುಕೊಂಡಿರಲಿಲ್ಲ’ ಎಂಬ ಉದ್ಗಾರ ! ” ಕೆಟ್ಟ ಮೇಲೆ ಬುದ್ದಿ ಬಂತು” ಎಂಬಂತಾಗಿರುತ್ತದೆ.

ಇದು ಇಂದು ನಿನ್ನೆಯ ಕಥೆಯೇನಲ್ಲ. ಪ್ರಾಚೀನ ಕಾಲದಲ್ಲಿಯೂ ಇತ್ತು ಎಂದೂ, ಅದಕ್ಕೆ ದಾಸರಾಗಿ ರಾಜರುಗಳು ಅದಕ್ಷರಾಗಿಯೂ ಇದ್ದರೆಂಬ ಕಥೆಗಳನ್ನು ಕೇಳಿದ್ದೇವೆ. ಅದರ ತಯಾರಿಕೆಯೂ ಇತ್ತೆಂದು ವರ್ಣಿಸಲಾಗುತ್ತದೆ. ಜೊತೆಗೆ ಈ ಸಂಗತಿ ದೇವಾನುದೇವತೆಗಳ ಬುಡಕ್ಕೂ ಹೋಗಿ ಬಿಟ್ಟಿದೆ. ಸುರ ಅಸುರರ ವಿಷಯ ಪ್ರಸ್ತಾಪದಲ್ಲಿ ಸುರರು ‘ಸುರಪಾನ” ಮಾಡುತ್ತಿದ್ದರು ಎಂದು ! ಅದಕ್ಕೆ ಶಾಸ್ತ್ರ ಪುರಾಣ ಪಂಡಿತ ಪಾಮರರು ಉತ್ತರಿಸಬೇಕು. ಅಂಥ ವರ್ಗಕ್ಕೆ ಅದರರಿವು, ತಿಳುವಳಿಕೆ ಹೆಚ್ಚಾಗಿಲ್ಲದ ಕಾರಣ ಪ್ರಸ್ತಾಪವೇ ಬೇಡ. ಅಪ್ರಸ್ತುತ ವಿಷಯಗಳೇ ಅವು.

ಪ್ರಸ್ತುತ ಸಂದರ್ಭದಲ್ಲಿ ‘ನಮ್ಮ ಆರೋಗ್ಯ ನಮ್ಮ ಕೈಯಲ್ಲಿ’ ಅದೊಂದೇ ಬೇಕಾಗಿರುವುದು. ಉಳಿದೆಲ್ಲವೂ ಒಣ ಉಸಾಬರಿ. ಮನೆಯೊಂದು ಸುಂದರ ಹೂದೋಟ. ಅಲ್ಲಿ ತನ್ನೊಂದಿಗೆ ಜವಾಬ್ದಾರಿ ಹೊತ್ತ ಬದುಕಿನ ಬಂಡಿಯ ಪತ್ನಿಯೆಂಬ ಗಾಲಿಯಿದೆ. ಮಕ್ಕಳೆಂಬ ಆನಂದದ ಚಿಲುಮೆಗಳಿವೆ. ತಾಯಿ ತಂದೆ ಎಂಬ ಹೆಮ್ಮರಗಳಿವೆ. ನೆಮ್ಮದಿಯ ಸೆಲೆಯಾಗಿ ಪ್ರಕೃತಿಯಿದೆ. ಇದನ್ನು ಅನುಭವಿಸುವ ಬದಲು, ಅಮಲೇರಿಸಿಕೊಂಡು ಇಡೀ ಬದುಕನ್ನು ಯಾತನಾಮಯಗೊಳಿಸುವುದು ಎಷ್ಟರ ಮಟ್ಟಿಗೆ ಸರಿ ? ಅವರೇ ಯೋಚಿಸಬೇಕು.

ಹಿಂದೆ ಸರಕಾರ ಜಾಹಿರಾತು ಫಲಕಗಳನ್ನು ಮುಖ್ಯ ಬೀದಿಗಳಲ್ಲಿ ಕಾಣಿಸುವಂತೆ ಅಳವಡಿಸುತ್ತಿದ್ದವು. ಗಾಂಧೀಜಿಯವರ ಚಿತ್ರ. ಪಕ್ಕದಲ್ಲಿ ‘ಕುಡಿತ ಬೇಡ’ ಎಂಬ ದೊಡ್ಡ ಅಕ್ಷರಗಳು. ನೆನಪಿಸಿಕೊಳ್ಳಿ. ಮತ್ತು ಸರಕಾರಗಳ ದಡ್ಡತನವನ್ನು ಸಹ. ಮದ್ಯ ತಯಾರಿಕಾ ಘಟಕಗಳಿಗೆ, ತಯಾರಿಸಲು ಅನುಮತಿ ಕೊಟ್ಟವರು ಯಾರು ? ಅದರಿಂದಲೇ ಅತೀ ಹೆಚ್ಚು ಆದಾಯದ ಲೆಕ್ಕ ಕೊಡುವವರಾರು ? ಕುಡಿಯಲು ಪರೋಕ್ಷ ಮತ್ತು ಅಪರೋಕ್ಷ ಉತ್ತೇಜನ ಕೊಡುವವರಾರು ? ಚುನಾವಣೆಯಲ್ಲಿ ಇದನ್ನು ಹಂಚುವವರಾರು ? ಇದು ನಮ್ಮ ಆಡಳಿತ ವ್ಯವಸ್ಥೆ ! ಮಗುವನ್ನು ಚಿವುಟುವುದೂ ರಮಿಸುವುದೂ ಒಂದೇ ಕೈ !! ಅಂತಹ ಪರಿಸ್ಥಿತಿ.

ಜೀವನದಲ್ಲಿ ಕೊಂಡುಕೊಳ್ಳಲಾಗದ್ದು ಎಂದರೆ ಆರೋಗ್ಯ. ಕುಡಿತದಿಂದ ದೇಹದ ಅಂಗಾಂಗಗಳು ಒಂದೊಂದೇ ಊನವಾಗುತ್ತಾ, ಹಾಳಾಗುತ್ತಾ ಹೋಗುತ್ತದೆ. ಮೊದಲು ಯಕೃತ್ತು ( ಲಿವರ್) ಮೂತ್ರ ಪಿಂಡ (ಕಿಡ್ನಿ ) ದೌರ್ಬಲ್ಯಗಳು, ತೊಂದರೆ ಹೀಗೆ ಒಂದೊಂದೇ ಶುರುವಾಗಿ ಮಸಣದ ಹಾದಿ ಹಿಡಿಯಬೇಕಾಗುತ್ತದೆ. ಹೀಗೆಂದು ಹೇಳಿದಾಗ ಅಪಭ್ರಂಶ ಉತ್ತರಗಳು ಎದುರಾಗುತ್ತವೆ. “ನಾವೇನು ಭೂಮಿ ಮೇಲೆ ಶಾಶ್ವತವಾಗಿ ಇರುತ್ತೇವೆಯೇ ?” “ಎಷ್ಟೋ ಜನ ಎಷ್ಟೋ ವರ್ಷಗಳಿಂದ ಕುಡಿಯುತ್ತಲೇ ಇದ್ದಾರೆ. ಅವರಿಗೇನೂ ಆಗಿಲ್ಲವಲ್ಲ…..” ಎಂಬಿತ್ಯಾದಿ ಉತ್ತರಗಳನ್ನು ಕೇಳಿದ್ದೇವೆ. ಎಲ್ಲ ಸರಿ. ಅವರನ್ನೇ ನಂಬಿಕೊಂಡವರ ಸ್ಥಿತಿ ಅಯೋಮಯ. ಮುಂದಿನ ಹಾದಿ ಸುಲಭವೆಂದೂ ಸಾಧ್ಯವಿಲ್ಲ. ಅಂತಹ ಮನೆ ವಾತಾವರಣ ಸುಖಿಯಾಗಿರಲು, ನೆಮ್ಮದಿಯಾಗಿರಲು ಸಾಧ್ಯವಿಲ್ಲ. ಮಕ್ಕಳಂತೂ ಅಂತಹ ವಾತಾವರಣದಲ್ಲಿ ಹೇಗೆ ವ್ಯಕ್ತಿತ್ವ ರೂಪಿಸಿಕೊಳ್ಳಬಲ್ಲರು ? ಕಷ್ಟ ಸಾಧ್ಯ. ಮನೆಯವರಿಂದಲೇ ತಿದ್ದುವ ಕೆಲಸವಾಗಬೇಕು. ಇದರಲ್ಲಿ ಯಾರ ಉಪದೇಶವೂ ಕಾರ್ಯ ಪ್ರಯೋಜನವಾಗದು.

ಧೂಮಪಾನದಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಮನುಷ್ಯನನ್ನು ನರಳಿಸುತ್ತದೆ. ಅದರಿಂದ ಬರುವ ಹೊಗೆಯಂತೂ ತೀರಾ ಹಿಂಸೆ ಕೊಟ್ಟು ಬಿಡುತ್ತದೆ. ಸಿಗರೇಟ್, ಬೀಡಿ ಸೇದುವವನಿಗಿಂತ, ಅವನು ಬಿಡುವ ಹೊಗೆಯನ್ನು ಉಸಿರಲ್ಲಿ ತೆಗೆದುಕೊಂಡವನಿಗೆ ಅಪಾಯವೆಂದು ಕೇಳಿದ್ದೇವೆ(ಅದಕ್ಕೆ Active Smoker ಮತ್ತು Passive Smoker ಎಂದು ಕೇಳಿದ್ದೇವೆ).

ಇತ್ತೀಚಿನ ದಿನಗಳಲ್ಲಿ ಗುಟಕಾ ಹಾವಳಿ ಯುವ ಸಮುದಾಯವನ್ನು ಬಾಧಿಸುತ್ತಿದೆ. ಇದರಿಂದ ಅಡ್ಡ ಪರಿಣಾಮಗಳ ಬಗ್ಗೆ ಕಿಂಚಿತ್ತೂ ಯೋಚನೆಯಿಲ್ಲ. ಬಾಯಿ ದುರ್ಗಂಧ. ಬಸ್, ರೈಲು, ಸಾರ್ವಜನಿಕ ಸ್ಥಳಗಳಲ್ಲಿ ಯಮ ಯಾತನೆ ! ಕಟ್ಟಡಗಳ ಮೂಲೆ ಮೂಲೆಗಳಂತೂ ಕೊಚ್ಚೆಯಂತಾಗಿರುತ್ತವೆ. ಗಂಟಲು, ಅನ್ನನಾಳ ಸಂಬಂಧಿತ ಇತ್ತಾದಿ ಕ್ಯಾನ್ಸರ್ ಗಳನ್ನು ಬರಮಾಡಿಕೊಳ್ಳುವವರಿಗೇನು ಹೇಳುವುದು ? ಇವೆಲ್ಲವುಗಳು ಹೇಗೆ ಅಭ್ಯಾಸವಾಗಿ ಬಿಡುತ್ತವೆ ? ಸಂಗ ದೋಷ, ಹಿರಿಯರ ಅನುಕರಣೆ, ಸಾಮಾಜಿಕ ಪರಿಸರದ ಪ್ರಚೋದನೆ ಎಂದು ಹಲವು ಉದಾಹರಣೆ ಕೊಟ್ಟರೂ, ನಿಜದಲ್ಲಿ ವ್ಯಕ್ತಿಯೋರ್ವನ ಮನೋ ದೌರ್ಬಲ್ಯವದು. ಆಕರ್ಷಣೆಗೆ ಬಲಿಯಾಗುವ ಸಡಿಲ ಮನಸ್ಸು. ಅದನ್ನು ಹಿಡಿತದಲ್ಲಿಟ್ಟುಕೊಳ್ಳದ ಹೊರತು, ಯಾರೇನೂ ಮಾಡಲಾಗದು.

ಇದರ ಬಗ್ಗೆ ನಾಲ್ಕು ಸಾಲು ಬರೆದು, ಅಭಿಪ್ರಾಯ ಹಂಚಿಕೊಳ್ಳುವುದೊಂದನ್ನು ಬಿಟ್ಟರೆ ಏನೂ ಉಪಯೋಗಗಳಿಲ್ಲ. ಇದರ ಚರ್ಚೆ ನಮ್ಮ ಸಮಯದ ವ್ಯರ್ಥ. ಗೊತ್ತಿದೆ. ಆದರೆ ಹೊಲದಲ್ಲಿ ಕಳೆ ಬೆಳೆಯುತ್ತಿರುವಾಗ ಕೃಷಿಕ ಸುಮ್ಮನಿದ್ದರೆ ಏನಾಗುತ್ತದೆ ? ಹಾಗೆಯೇ ಇದು. ಪ್ರಜ್ಞಾವಂತರು, ನಾಗರಿಕರು ಕೈ ಕಟ್ಟಿ ಕುಳಿತರೆ ಮುಂದಿನ ಪೀಳಿಗೆ ಏನಾಗುತ್ತದೆ ? ಭಯಾನಕವೆನಿಸದೇ ? ಮಕ್ಕಳಿಗೆ, ಯುವ ಸಮುದಾಯಕ್ಕೆ ಪರಿಣಾಮಕಾರಿಯಾಗಿ, ಮನ ಮುಟ್ಟುವಂತೆ ಹೇಳಬೇಕಾದುದು ಹಿರಿಯರ ಕರ್ತವ್ಯ.

– ಲೇಖನ : ರವಿ ಕರಣಂ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button