ಕಾಡು ನಿರ್ಮಾಣದ ಕನಸಿರಲಿ !

ಲೇಖನ : ರವಿ ಕರಣಂ

ಬಯಲು ಸೀಮೆಯೆಲ್ಲ ಹಚ್ಚ ಹಸುರಿನ ಗಿಡಮರಗಳಿಂದ ತುಂಬಿಕೊಂಡರೆ ಹೇಗಿರುತ್ತದೆ? ಮಾನವ ನಿರ್ಮಿತ ಅರಣ್ಯ ಇರಲು ಸಾಧ್ಯವಿಲ್ಲವೇ ? ಯಾವಾಗಲೂ ಇಂತಹದ್ದೊಂದು ಸಾಹಸದ ಕೆಸವನ್ನು ಸರಕಾರಗಳು ಮಾಡಬೇಕು. ಪರಿಸರ ನಮ್ಮ ಜೀವನದ ಅವಿಭಾಜ್ಯ ಅಂಗ. ಅದನ್ನು ಬಿಟ್ಟು ಪ್ರತ್ಯೇಕವಾಗಿರಲು ಸಾಧ್ಯವೇ ? ಅದರ ಮಡಿಲಲ್ಲಿ ನಮ್ಮ ಬದುಕಿನ ಪಯಣ ಸಾಗುತ್ತದೆ. ನಮ್ಮ ಸುತ್ತ ಮುತ್ತಲು ಹಸಿರು ಗಿಡಮರಗಳಿರಬೇಕು. ಅದು ಕೇವಲ ಪ್ರಾಕೃತಿಕ ಸೌಂದರ್ಯಕ್ಕೆಂದು ಭಾವಿಸಬಾರದು. ಅದರಿಂದ ಅನೇಕ ಬಗೆಯ ಲಾಭಗಳಿವೆ.

ಬರದ ನಾಡು, ಬೆಂಗಾಡು ಬಯಲಸೀಮೆ, ಮಳೆಯಿರದ ಒಣ ನೆಲ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳಬೇಕು. ಅಲ್ಲಲ್ಲಿ ಪಾಳು ಬಿದ್ದಿರುವ ಸರ್ಕಾರಿ ಭೂಮಿಯನ್ನು ಅತ್ಯದ್ಭುತವಾಗಿ ಬಳಸಿಕೊಳ್ಳುವ ಕಲೆ ಗೊತ್ತಿರಬೇಕು. ಯಾವುದೇ ಕಾರಣಗಳನ್ನು ಕೊಡದೇ ಅರಣ್ಯಗಳನ್ನು ನಿರ್ಮಿಸಬೇಕು. ಯಾವುದೇ ಸರಕಾರ ಬರಲಿ, ಮಾನವನ ಶ್ರೇಯೋಭಿವೃದ್ದಿಗೆ ಶ್ರಮಿಸುವುದೇ ಅದರ ಮುಖ್ಯ ಉದ್ದೇಶ. ಹಾಗಾಗಿ ನಮ್ಮ ವಾತಾವರಣವನ್ನು ಶುಚಿ, ಶುಭ್ರ, ಸುಂದರವಾಗಿ ಇಟ್ಟುಕೊಳ್ಳಲು ಪ್ರಯತ್ನಿಸಬೇಕು. ಇದು ಅಸಾಧ್ಯವಾದುದೇನಲ್ಲ. ಸರ್ಕಾರಗಳಿಗೆ ಅಂತಹದೊಂದು ದೂರದೃಷ್ಟಿ ಇರುವ ಮುಂದಾಳುವಿನ ಅಗತ್ಯತೆಯಿದೆ.

ಅಲ್ಲಲ್ಲಿ ಫಲವತ್ತಾದ ಮಣ್ಣು ಇಲ್ಲದಿರಬಹುದು. ಆದರೆ ಒಂದು ಗಿಡಕ್ಕೆ ಬೇಕಾಗುವ ಮಣ್ಣನ್ನು ಪೂರೈಸಲು ಬೇಕಾಗುವ ಮಣ್ಣನ್ನು ಒದಗಿಸಲು ಸಾಧ್ಯವಿದೆ. ಒಂದು ಕಲ್ಲಿನ ಬೆಟ್ಟವನ್ನು ಒಡೆದು ಎಲ್ಲೆಲ್ಲೋ ಸಾಗಿಸುವಾಗ, ಮಣ್ಣನ್ನು ಗಿಡ ಮರಗಳಿಗಾಗಿ ಸಾಗಿಸಲು ಸಾಧ್ಯವಾಗದೇ ? ಇದರಿಂದ ಸ್ವಲ್ಪವಾದರೂ ಹಸಿರು ಕಾಣುವಂತೆ ಮಾಡಬಹುದು. ಈ ಮೂಲಕ ಬೆಂಗಾಡನ್ನು ನಂದನವನವನ್ನಾಗಿಸಬಹುದು. ಆಯಾ ವಾತಾವರಣಕ್ಕೆ ಹೊಂದಿಕೊಂಡು ಬೆಳೆಯುವ ಗಿಡಗಳನ್ನು ನೆಡುವ ಅವಶ್ಯಕತೆ ಇದೆ.

ಬಯಲು ಸೀಮೆಯಲ್ಲಿ ಬೇವು, ಹುಣಸೇ, ಮಾವು, ತಾಳೆ, ಅತ್ತಿ ಮರಗಳಿತ್ಯಾದಿ ಬೆಳೆಯುತ್ತವೆ. ಮತ್ತು 35° ರಿಂದ 40° ಉಷ್ಣ ತಾಳಿಕೊಳ್ಳುವ ಸಸ್ಯಗಳನ್ನು ನೆಟ್ಟು ಜತನದಿಂದ ಪ್ರದೇಶವನ್ನು ಕಣ್ಗಾವಲಿನಲ್ಲಿ ಇಡಬೇಕು. ಇಂತಹ ಸಾಹಸಕ್ಕೆ ಮುಂದಾಗಬೇಕು. ಹಳೆಯ ಪ್ರಯತ್ನಗಳ ವಿಫಲತೆಯನ್ನು ಮುಂದಿಟ್ಟು ಯೋಜನೆಯನ್ನು ಕೈಬಿಡುವುದು ಸರಿಯಲ್ಲ. ಇತ್ತೀಚೆಗೆ ವಾತಾವರಣದಲ್ಲಿ ಬದಲಾವಣೆ ಕಂಡು ಬರುತ್ತಿದೆ. ಕಳೆದ ವರ್ಷಗಳಿಂದ ಕಲ್ಯಾಣ ಕರ್ಣಾಟಕ ಮತ್ತು ಕಿತ್ತೂರು ಕರ್ಣಾಟಕ ಪ್ರದೇಶಗಳಲ್ಲಿ ಮಳೆ ಬೀಳುತ್ತಿದೆ. ಮಲೆನಾಡಿನ ಭಾಗದಲ್ಲೇ ಮಳೆ ಪ್ರಮಾಣ ಕಡಿಮೆಯಾಗಿ, ವಾತಾವರಣದಲ್ಲಿ ಉಷ್ಣತೆಯ ಪ್ರಮಾಣ ಹೆಚ್ಚಾಗಿದೆ ಎಂಬುದು ವರದಿಯಾಗಿದೆ. ಹಾಗೆಯೇ ಕಣ್ಣಾರೆ ಕಂಡಿದ್ದೂ ಇದೆ. ಇಂತಹ ಸಂದರ್ಭದಲ್ಲಿ ಪರಿಸರ ತಜ್ಞರು, ಸಸ್ಯ ವಿಜ್ಞಾನಿಗಳು, ಅರಣ್ಯ ಇಲಾಖೆಯವರು ಆಸಕ್ತಿ ತೋರಬೇಕು. ಈ ಚುರುಕುತನ ಆರಂಭ ಶೂರತ್ವವಾಗದೇ ನಿತ್ಯ ಕಾರ್ಯವಾಗಬೇಕು.

ಮಣ್ಣಿನ ಸದ್ಬಳಕೆಯಾಗದಿದ್ದಲ್ಲಿ ಅದರ ಸತ್ವ ಕಳೆದು ಹೋಗುತ್ತದೆ. ಮತ್ತು ಬಂಜರು ಭೂಮಿ ಎಂಬ ಹಣೆಪಟ್ಟಿ ಪಡೆಯುತ್ತದೆ. ಅದನ್ನೇ ಸತತ ಪ್ರಯತ್ನಗಳಿಂದ ಫಲವತ್ತಾಗಿಸಲು, ಇಂದಿನ ವಿಜ್ಞಾನ ಲೋಕ ಅಭಿವೃದ್ಧಿ ಮಾಡಲು ಮುಂದಾಗಿದೆಯೇ ? ಇಂಥದೊಂದು ಯೋಚನೆ ಪ್ರತಿಯೊಬ್ಬರಿಗೂ ಬರಬೇಕು. ನಮಗೆ ಸಂಬಂಧಿಸಿದ್ದಲ್ಲ ಎಂಬ ಮನೋಭಾವ ಇರಲೇಬಾರದು.

ಯಥೇಚ್ಛವಾಗಿ ಗಿಡಮರಗಳು ಇದ್ದಾಗ, ವಾತಾವರಣದಲ್ಲಿ ತಾಪಮಾನ ಹದ್ದುಬಸ್ತಿನಲ್ಲಿರುತ್ತದೆ. ಇಲ್ಲವಾದರೆ ಇಂದು ಉಷ್ಣಾಂಶದಲ್ಲಿ ಏರಿಕೆಯಾಗಿ ಹಲವು ತರಹದ ಏರಿಳಿತಗಳಾಗಿವೆ. ಕಾಲಮಾನಗಳು ಮನಸೋ ಇಚ್ಚೆ ಸಂಭವಿಸುತ್ತಿವೆ. ಸತತ ಮಳೆ, ಸತತ ಒಣ ಹವೆ, ಒಂದೇ ತೆರೆನಾದ ಬಿಸಿಲು ಹೀಗೆ ಒಂದೊಂದು ಭಾಗದಲ್ಲಿ ಒಂದೊಂದು ಪರಿಣಾಮಗಳು.

ಗಿಡಮರಗಳು ಕೊಡುವ ಆಮ್ಲಜನಕಕ್ಕೆ ಯಾವ ಬೆಲೆ ಕಟ್ಟಲು ಸಾಧ್ಯವಿದೆ ? ನೈಸರ್ಗಿಕವಾಗಿ ದೊರೆಯುತ್ತದೆ ಅಲ್ಲವೇ ? ನಾವು ಕೇವಲ ಹತ್ತು ವರ್ಷ ಅವನ್ನು ಸಂರಕ್ಷಿಸಿ ಬೆಳೆಸಿದರೆ, ಅವು ತಲೆತಲೆಮಾರುಗಳವರೆಗಿನ ಜೀವಗಳನ್ನು ಸಂರಕ್ಷಿಸುತ್ತವೆ. ಅಷ್ಟೇ ಅಲ್ಲ ವಾತಾವರಣವನ್ನು ಯೋಗ್ಯ ರೀತಿಯಲ್ಲಿ ಕಾಯುತ್ತವೆ. ಅವುಗಳ ಬೇರುಗಳು ಆಳಕ್ಕಿಳಿದು ಮಣ್ಣನ್ನು ಗಟ್ಟಿಯಾಗಿ ಹಿಡಿದಿಡುತ್ತವೆ. ಮಣ್ಣಿನ ಸವಕಳಿ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕಾಲಕಾಲಕ್ಕೆ ಮಳೆ ಬೆಳೆಗೆ ಆಧಾರ ಸ್ಥಂಭವಾಗುತ್ತವೆ. ಇದೆಲ್ಲ ಓದಿ, ತಿಳಿದುಕೊಂಡಿದ್ದರೂ ತೀವ್ರ ತರದ ಗಮನವಿಲ್ಲ. ಸರ್ಕಾರದ ಇಲಾಖೆಗಳಲ್ಲಿ ಅರಣ್ಯ ಇಲಾಖೆ. ಅತ್ಯಂತ ಮಹತ್ವದ್ದು. ಅದಕ್ಕೆ ಸೂಕ್ತ ಕಾರ್ಯ ಸೂಚಿಗಳನ್ನು ರೂಪಿಸಿ ಕೊಡಬೇಕು. ನಾಮಕಾವಸ್ಥೆಯಾಗಿರಬಾರದು.

ಭೂಮಿಯ ಮೇಲಿನ ತಾಪಮಾದ ಏರಿಕೆಯ ಪರಿಣಾಮ ಈಗ ಆತಂಕದ ವಿಷಯ. ಇದಕ್ಕಾಗಿ ವಿಶ್ವ ಸಂಸ್ಥೆ ಒಳಗೊಂಡಂತೆ ಹಲವು ರಾಷ್ಟ್ರಗಳು ಚಿಂತೆಗೀಡಾಗಿವೆ. ಇದರ ವ್ಯತಿರಿಕ್ತ ಪರಿಣಾಮ ಮುಂದಿನ ಪೀಳಿಗೆಯನ್ನು ಹೈರಾಣವಾಗಿಸುತ್ತವೆ. ಹಾಗಾಗಿ ಇದರ ಬಗ್ಗೆ ಉಪನ್ಯಾಸಗಳು, ಪ್ರಾತ್ಯಕ್ಷಿಕೆಗಳು, ನಾಟಕಗಳು ಎಲ್ಲವೂ ನಡೆಯುತ್ತಿದ್ದು, ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿವೆ. ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ ನ ಪ್ರಮಾಣ ಹಿಂದೆಂದಿಗಿಂತಲೂ ಅತ್ಯಧಿಕವಾಗಿದೆ. ಆಧುನಿಕ ಸೌಲಭ್ಯಗಳ ನೆಪದಲ್ಲಿ, ಕೈಗಾರಿಕೆಗಳು, ನಾನಾ ಕಾಮಗಾರಿಗಳು, ವಾಹನಗಳು, ಉಷ್ಣ ವಿದ್ಯುತ್ ಸ್ಥಾವರಗಳು ಹೀಗೆ ಪಟ್ಟಿ ಮಾಡುತ್ತಾ ಹೋದರೆ ಪರಿಸರದ ಮೇಲಿನ ಒತ್ತಡದ ಅಂಶಗಳು ಕಾಣ ಬರುತ್ತವೆ.

ಪ್ರಾಕೃತಿಕ ವಿಕೋಪಗಳುಂಟಾಗದಂತೆ ಈಗಿನಿಂದಲೇ ಸರ್ಕಾರಗಳು ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕು. ಅದರೊಟ್ಟಿಗೆ ಜನ ಸಮೂಹ ಒಂದುಗೂಡಿ ಶ್ರಮಿಸಬೇಕು. ಇದು ನಮಗಾಗಿ ಮತ್ತು ನಮ್ಮವರಿಗಾಗಿ. ಹಿಂದೆ ನಡೆದ ಅಪ್ಪಿಕೊ ಚಳುವಳಿಯಂತೆ ಮತ್ತೊಂದು ಬಗೆಯ ಚಳುವಳಿಗೆ ಸಿದ್ಧರಾಗಬೇಕು. ಕಾಡಿನ ವಿನಾಶ ಒಟ್ಟು ಜೀವ ಸಂಕುಲದ ವಿನಾಶ ಎಂಬುದನ್ನು ಅರಿತು, ಕಾಡು ಬೆಳೆಸಲು, ಇದ್ದ ಕಾಡನ್ನು ರಕ್ಷಿಸಲು ಹೊಸ ಪ್ರಯತ್ನಕ್ಕೆ ಮುಂದಾಗೋಣ.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button