Latest

‘ಟಿಪ್ಪುವಿನ ನಿಜಕನಸುಗಳು’ ಕೃತಿಯ ಮಾರಾಟಕ್ಕೆ ತಾತ್ಕಾಲಿಕ ತಡೆಯಾಜ್ಞೆ  

ಪ್ರಗತಿವಾಹಿನಿ ಸುದ್ದಿ, ಮೈಸೂರು: ಮೈಸೂರುನ ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕರಿಯಪ್ಪ ಅವರು ಬರೆದಿರುವ ‘ಟಿಪ್ಪು ನಿಜ ಕನಸುಗಳು’ ಎಂಬ ಪುಸ್ತಕವನ್ನು ಡಿಸೆಂಬರ್ 3ರವರೆಗೆ ಮಾರಾಟ ಮಾಡದಂತೆ ಲೇಖಕ, ಪ್ರಕಾಶಕ ಅಯೋಧ್ಯೆ ಪ್ರಕಾಶನ ಮತ್ತು ರಾಷ್ಟ್ರೋತ್ಥಾನ ಮುದ್ರಾಣಾಲಯಕ್ಕೆ ಮಂಗಳವಾರ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

‘ಮೂವರು ಪ್ರತಿವಾದಿಗಳ ಮೂಲಕ ಅಥವಾ ಅವರಅಡಿಯಲ್ಲಿ ಕ್ಲೈಮ್ ಮಾಡುವ ವ್ಯಕ್ತಿಗಳು ಮತ್ತು ಏಜೆಂಟ್ಗಳು ಆನ್ಲೈನ್ ವೇದಿಕೆ ಸೇರಿದಂತೆ ಕನ್ನಡ ಭಾಷೆಯಲ್ಲಿ ಬರೆದಿರುವ ಟಿಪ್ಪು ನಿಜ ಕನಸುಗಳು ಹೆಸರಿನ ಪುಸ್ತಕದ ವಿತರಣೆ ಮತ್ತು ಮಾರಾಟ ಮಾಡದಂತೆ ತಾತ್ಕಾಲಿಕ ತಡೆಯಾಜ್ಞೆಯ ಮೂಲಕ ನಿರ್ಬಂಧಿಸಲಾಗಿದೆ’ ಎಂದು ಅದು ತನ್ನ ಆದೇಶದಲ್ಲಿ ಹೇಳಿದೆ.

ಆದರೆ, ‘ಈ ತಡೆಯಾಜ್ಞೆಯ ಆದೇಶವು ಪ್ರತಿವಾದಿಗಳು ಪುಸ್ತಕಗಳನ್ನು ತಮ್ಮದೇ ಜವಾಬ್ದಾರಿಯಲ್ಲಿ ಮುದ್ರಿಸಲು ಮತ್ತು ಈಗಾಗಲೇ ಮುದ್ರಿಸಿದ ಪುಸ್ತಕಗಳನ್ನು ಸಂಗ್ರಹಿಸಲು ಅಡ್ಡಿಯಾಗುವುದಿಲ್ಲ’ ಎಂದು ನ್ಯಾಯಾಲಯ ಹೇಳಿದೆ.ಇತಿಹಾಸದಿಂದ ಯಾವುದೇ ಬೆಂಬಲ ಅಥವಾ ಸಮರ್ಥನೆ ಇಲ್ಲದೆ ಪುಸ್ತಕದಲ್ಲಿ ಟಿಪ್ಪುವಿನ ಬಗ್ಗೆ ತಪ್ಪು ಮಾಹಿತಿ ಇದೆ ಎಂದು ಆರೋಪಿಸಿ ಜಿಲ್ಲಾ ವಕ್ಫ್ ಬೋರ್ಡ್ ಸಮಿತಿಯ ಮಾಜಿ ಅಧ್ಯಕ್ಷ ಬಿ.ಎಸ್.ರಫೀವುಲ್ಲಾ ಅವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಪುಸ್ತಕದಲ್ಲಿ ಬಳಸಿರುವ ‘ತುರುಕರು’ ಎಂಬ ಪದವು ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿದೆ ಎಂದು ಹೇಳಿದ್ದರು.

ಪುಸ್ತಕದ ಪ್ರಕಟಣೆಯು ಅಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕದಡುತ್ತದೆ, ಸಾರ್ವಜನಿಕ ಶಾಂತಿಗೆ ಭಂಗ ತರುತ್ತದೆ ಎಂದು ಅವರು ಪ್ರತಿಪಾದಿಸಿದ್ದರು. ಅವರ ವಾದವನ್ನು ಅಂಗೀಕರಿಸಿರುವ ನ್ಯಾಯಾಲಯ, ‘ನಾಟಕದಲ್ಲಿನ ವಿಚಾರಗಳು ಸುಳ್ಳಾಗಿದ್ದು, ಅದರಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ಸುಳ್ಳು ಮಾಹಿತಿಯಿದ್ದರೆ ಮತ್ತು ಅಂತದ್ದೇ ವಿಚಾರಗಳಿರುವ ಪುಸ್ತಕವನ್ನು ವಿತರಿಸಿದರೆ, ಅರ್ಜಿದಾರರಿಗೆ ತುಂಬಲಾರದ ನಷ್ಟವನ್ನು ಉಂಟುಮಾಡುತ್ತದೆ.ಕೋಮು ಶಾಂತಿ ಕದಡುವ ಸಾಧ್ಯತೆಗಳಿವೆ ಮತ್ತು ಸಾಮರಸ್ಯ ಮತ್ತು ಸಾರ್ವಜನಿಕ ಶಾಂತಿಗೆ ಅಪಾಯವಿದೆ’ ಎಂದಿದೆ.

ಪ್ರತಿವಾದಿಗಳು ನ್ಯಾಯಾಲಯಕ್ಕೆ ಹಾಜರಾಗುವವರೆಗೆ ಪುಸ್ತಕವನ್ನು ವಿತರಣೆ ಮಾಡಿದರೆ, ಅರ್ಜಿಯ ಉದ್ದೇಶವು ಸೋಲುತ್ತದೆ. ವಿವಾದಾತ್ಮಕ ಪುಸ್ತಕಗಳು ಬಿಸಿ ದೋಸೆಯಂತೆ ಮಾರಾಟವಾಗುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದ್ದರಿಂದ, ಈ ಹಂತದಲ್ಲಿ ಅನುಕೂಲತೆಯ ಸಮತೋಲನವು ತಡೆಯಾಜ್ಞೆ ನೀಡುವುದು ದೂರುದಾರರ ಪರವಾಗಿರುತ್ತದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ನ್ಯಾಯಾಲಯವು ಮೂವರು ಪ್ರತಿವಾದಿಗಳಿಗೆ ತುರ್ತು ನೋಟಿಸ್ ಜಾರಿ ಮಾಡಿ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 3ಕ್ಕೆ ಮುಂದೂಡಿದೆ. ಈ ಹಿಂದೆ ಮುಸ್ಲಿಂ ಸಂಘಟನೆಗಳು ಪುಸ್ತಕದ ವಿರುದ್ಧ ಪ್ರತಿಭಟನೆ ನಡೆಸಿದ್ದವು

ರಾಜ್ಯದ ಕಾರ್ಮಿಕರ ನೆರವಿಗೆ ಹಲವು ಬೇಡಿಕೆ ಸಲ್ಲಿಕೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button