ಲೇಖನ : ರವಿ ಕರಣಂ.
ಒಂದು ದೇಶಕ್ಕೆ ಆಹಾರ ಧಾನ್ಯಗಳು ದೊರೆಯಬೇಕೆಂದರೆ, ಅದಕ್ಕೆ ರೈತರು ಬಹಳ ಶ್ರಮವಹಿಸುತ್ತಾರೆ. ಅವರು ಕೈ ಕಟ್ಟಿ ಕುಳಿತರೆ ದೇಶದ ಜನರ ಸ್ಥಿತಿ ಏನಾಗಬಹುದೆಂದು ಊಹಿಸಿದರೆ, ಮೈ ನಡುಕ ಬರುತ್ತದೆ. ಕಾರಣ ಹಸಿವಿನ ಬಾಧೆಯನ್ನು ಅನುಭವಿಸಿದವರಿಗೆ ಅದರ ಮಹತ್ವ ಗೊತ್ತಿರುತ್ತದೆ. ಅಂತಹ ಪರಿಸ್ಥಿತಿ ನಮ್ಮ ದೇಶವೊಂದೇ ಅಲ್ಲ, ಜಗತ್ತಿನ ಯಾವ ಭಾಗದಲ್ಲಿಯೂ ಬರಬಾರದೆಂದು ಕೇಳಿ ಕೊಳ್ಳೋಣ.
ಯಾವ ಕಾಲಮಾನಗಳನ್ನು ಗಮನಿಸದೆ ಹಗಲು-ಇರುಳು ದುಡಿಯುವ ಜೀವಗಳಿಗೆ ಸಮಾಜ, ಸರಕಾರ, ಸಂಘ-ಸಂಸ್ಥೆಗಳು ನೆರವಾಗಬೇಕಾದುದು ಅತ್ಯವಶ್ಯಕ. ಕಾರಣ ಹಿಂದಿನಿಂದಲೂ ಹಲವು ಆತ್ಮಹತ್ಯೆ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ. ಇನ್ನು ಮುಂದೆ ಅಂತಹ ದುರ್ಘಟನೆಗಳು ಸಂಭವಿಸದಂತೆ, ರಾಷ್ಟ್ರದ ಜನತೆ ಎಚ್ಚೆತ್ತುಕೊಳ್ಳಬೇಕು. ರೈತರು ಅನ್ನದಾತರು ಎಂದು ಹೊಗಳಿದರೆ, ರೈತರ ಬವಣೆಗಳು ನೀಗುವುದಿಲ್ಲ. ಬದಲಾಗಿ ಕೈ ಜೋಡಿಸುವ ಕೆಲಸವಾಗಬೇಕು. ರೈತಾಪಿ ವರ್ಗದಲ್ಲಿಯೂ ಹಲವು ಸ್ಥರಗಳಿವೆ. ದೊಡ್ಡ, ಮಧ್ಯಮ ಹಾಗೂ ಸಣ್ಣ ಹಿಡುವಳಿದಾರರಿದ್ದಾರೆ. ಕೆಲವರು ಅನುಕೂಲಸ್ಥರಾದರೆ, ಇನ್ನು ಕೆಲವರು ಆರಕ್ಕೂ ಇಲ್ಲ, ಮೂರಕ್ಕೂ ಇಲ್ಲ. ಚಿಕ್ಕ ಹಿಡುವಳಿದಾರರ ಸ್ಥಿತಿಯಂತೂ ಅತ್ಯಂತ ಕಠಿಣ. ಅಂತಹವರಿಗಾಗಿಯೇ ವಿಶೇಷ ಕಾಳಜಿ ತೆಗೆದುಕೊಳ್ಳಬೇಕು.
ಹತ್ತಾರು ಎಕರೆ ಜಮೀನು ಹೊಂದಿದ್ದೂ ಅಲ್ಲಿ ನೀರಾವರಿಯ ವ್ಯವಸ್ಥೆ ಹೊಂದಿದ, ಅನುಕೂಲಸ್ಥರ ಒಂದು ವರ್ಗವನ್ನು ಬದಿಗಿಡೋಣ. ಅವರ ಸಮಸ್ಯೆಗಳ ಬಗ್ಗೆ ನಂತರ ಮಾತಾಡೋಣ. ಆದರೆ ಮಧ್ಯಮ ವರ್ಗದ ಹಾಗೂ ಸಣ್ಣ ಹಿಡುವಳಿದಾರರ ಪರಿಸ್ಥಿತಿ ಅಯೋಮಯ ! ಹೆಚ್ಚು ಕಡಿಮೆ ಒಂದೇ ತೆರನಾದ ಬದುಕು. ನೀರಾವರಿ ಇದ್ದರಂತೂ ಸರಿಯೇ. ಮಳೆಯ ಮೇಲೆ ಅವಲಂಬಿತರಾಗಿರುವ ಎಷ್ಟೋ ರೈತರು ಪರದಾಡುತ್ತಲೇ ಇರುತ್ತಾರೆ. ಸಣ್ಣ ಸಣ್ಣ ಬ್ಯಾರೇಜ್ಗಳಿಂದ, ಚಿಕ್ಕ ಆಣೆಕಟ್ಟುಗಳಿಂದ ಕಾಲುವೆಗಳ ಮೂಲಕ, ಕೆರೆಗಳ ಮೂಲಕ ನೀರನ್ನು ಪಡೆದು ವ್ಯವಸಾಯ ಮಾಡುವ ಜನರಿಗೆ ಹಣಕಾಸಿನ ಅಡಚಣೆಗಳನೇಕ. ಸಾಲ ಸೂಲ ಮಾಡಿ, ಬೀಜ,ರಸಗೊಬ್ಬರ, ಆಳು ಕಾಳುಗಳ ವೆಚ್ಚವನ್ನು ಭರಿಸಿದ ರೈತರಿಗೆ ಬೆಳೆ ನಾಶವಾದರಂತೂ ತೀರದ ಸಂಕಷ್ಟ. ಅವರೊಂದಿಗೆ ಸರ್ಕಾರ ನಿಲ್ಲಲೇ ಬೇಕು. ತಕ್ಷಣದ ಪರಿಹಾರ ಕಾರ್ಯ ಜರುಗಬೇಕು. ಇಲ್ಲವಾದರೆ ಅವರ ಸರಣಿ ಆತ್ಮಹತ್ಯೆಗಳು ಸಮಾಜದ ಅಧಪತನದ ಸೂಚ್ಯವಾಗಿ ಬಿಡುತ್ತದೆ.
ಕಷ್ಟದಲ್ಲಿರುವ ರೈತರಿಗೆ ಮಾಡಬಹುದಾದ ಸಹಾಯ, ಸಹಕಾರ ಹೇಗಾಗಬೇಕೆಂಬ ಚಿಂತನೆಯು ನಡೆಯಬೇಕು. ಅವರು ಸಾಲ ಮಾಡಿಕೊಳ್ಳದಂತೆ, ನೈಸರ್ಗಿಕ ವಿಕೋಪಗಳಿಂದಾಗಿ ಬೆಳೆ ಹಾನಿಯಾದ ಸಂದರ್ಭದಲ್ಲಿಯೂ, ಪರಿಸ್ಥಿತಿಯನ್ನು ತೂಗಿಸುವ ಮನೋಸ್ಥೈರ್ಯದ ವಾರಾವರಣದ ಸೃಷ್ಟಿ ಮಾಡುವುದೊಳಿತು. ಅವರು ವ್ಯಯಿಸಿದ ಹಣ ನೀರಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗಬಾರದು. ಅದಕ್ಕಾಗಿ ಕೆಲವು ಮಾರ್ಗೋಪಾಯಗಳನ್ನು ಕಂಡು ಕೊಳ್ಳಬೇಕಿದೆ. ಇದರ ಜೊತೆಗೆ ಕೆಲವು ಸಂಘ ಸಂಸ್ಥೆಗಳು ಮಾಡುವ ಸಮಾಜ ಸೇವೆಯನ್ನು ಸದುಪಯೋಗ ಮಾಡಿಕೊಳ್ಳಬೇಕು.
ಸಮಾಜದಲ್ಲಿನ ಉದಾರಿಗಳು ಮಕ್ಕಳ ಅನಾಥಾಲಯ, ವೃದ್ದಾಶ್ರಮಗಳು ಹಾಗೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಹಾಯಹಸ್ತ ಚಾಚುತ್ತಾರೆ. ಹಾಗೆಯೇ ಒಂಚೂರು ರೈತರ ಜೊತೆ ನಿಂತುಕೊಳ್ಳಲು ಈ ಮೂಲಕವೇ ಕೋರೋಣ. ಈಗಾಗಲೇ ಕೆಲವಾರು ಸಂಘ ಸಂಸ್ಥೆಗಳು ಕೆರೆ ಹೂಳು ತೆಗೆಸುವುದು, ಸಹಾಯ ಮಾಡುವುದೆಲ್ಲ ಆಗಿದೆ. ಅದು ಕೇವಲ ಆಯ್ದ ಪ್ರದೇಶಗಳಲ್ಲಿ ಮಾತ್ರ. ಎಲ್ಲೆಡೆ ಆಗಲು ಸರ್ಕಾರ ಮುಂದಾಗಬೇಕು.
ನಮ್ಮ ನಮ್ಮಲ್ಲಿ ವಿಚಾರ ಮಾಡಿಕೊಳ್ಳೋಣ. ಸರಿಯೋ ತಪ್ಪೋ ಹಾಗಾದೀತು ಹೀಗಾದೀತು ಎಂದು ಕೊಂಕು ತೆಗೆಯುವ ಮುನ್ನ,ಒಂದಿಷ್ಟು ವಿಚಾರಗಳಾದರೂ ಹೊರ ಬರಲೆಂಬುದು ಇದರ ಸದುದ್ದೇಶ. ನೀವು ಹೊಸ ಚಿಂತನೆಗಳನ್ನು ಹೊರಹಾಕಿ. ಆ ಮೂಲಕ ರೈತರ ಸಂಕಷ್ಟ ಪರಿಹಾರವಾದರೆ ಸಾಕು. ಹೀಗೆ ನೋಡಿ;
1) ಸಣ್ಣ ಪ್ರಮಾಣದ ಭೂಮಿ ಹೊಂದಿದ ರೈತರ ಭೂಮಿಯನ್ನು ಹಸನು ಮಾಡಿ ಕೊಡುವ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ಉತ್ತುವ, ಬಿತ್ತುವ ಆಧುನಿಕ ಸೌಲಭ್ಯಗಳನ್ನು ಹೊಂದಿದ ಕನಿಷ್ಟ ಐದರಿಂದ ಹತ್ತು ಟ್ರ್ಯಾಕ್ಟರ್ ಗಳನ್ನು ಒದಗಿಸಬೇಕು. ಅವುಗಳನ್ನು ಸರತಿ ಆಧಾರದ ಮೇಲೆ ಕಾರ್ಯ ಜರುಗಿಸಬೇಕು. ಇದೇನು ಅಸಾಧ್ಯವಾದುದೇನಲ್ಲ.
2) ಕಂದಾಯ ತೆರಿಗೆ ಸಂಗ್ರಹವಾಗಿದ್ದನ್ನು ಇಲ್ಲಿ ಯೋಗ್ಯ ರೀತಿಯಲ್ಲಿ ಬಳಸಬಹುದು. ಟಿಲ್ಲರ್ ಗಳ ಮೂಲಕ, ಗ್ರಾಮ ಪಂಚಾಯಿತಿ ಅಧಿಕಾರಿಗಳ ಮೂಲಕ, ಸರ್ವೇ ಮಾಡಿಸಿ, ರೆಂಟೆ ಕುಂಟೆ ಹೊಡೆಸುವ ಕೆಲಸವಾಗಬೇಕು.
3) ಅತ್ಯುತ್ತಮ ಬೀಜಗಳನ್ನು ಸರ್ಕಾರ ತಾನೇ ಮುಂದಾಗಿ ಸರಬರಾಜು ಮಾಡಬೇಕು. ಕಳಪೆ ಬೀಜಗಳ ಪೂರೈಕೆ ಮಾಡಿದಲ್ಲಿ ಅಂತಹ ಕಂಪನಿಗಳ ಪರವಾನಿಗೆ ರದ್ದು, ಇಲ್ಲವೇ ನಷ್ಟ ಪರಿಹಾರ, ದಂಡ ವಸೂಲಿಯಂತಹ ಕಠಿಣ ಕ್ರಮಗಳನ್ನು ಜಾರಿ ಮಾಡಿದಲ್ಲಿ ರೈತರಿಗಾಗುವ ಮೋಸವನ್ನು ತೊಲಗಿಸಬೇಕು.
4) ಕಾಲ ಕಾಲಕ್ಕೆ ನೀರಿನ ಪೂರೈಕೆಯು, ಬಾವಿ, ಕೆರೆ, ನದಿ ಮೂಲ ಇಲ್ಲವೇ ಕೊಳವೆ ಬಾವಿಗಳ ಮೂಲಕ ಹೊಂದುವಂತೆ ಮಾಡಿ ಕೊಡಬೇಕು.
ನೀರಿನ ಸಂಪರ್ಕವಿರದ ಕಡೆ ಕಿರು ಕಾಲುವೆಗಳು, ಎತ್ತರದ ಪ್ರದೇಶದಲ್ಲಿ, ನೀರು ತಲುಪುವಂತೆ ಪೈಪ್ಗಳ ಅಳವಡಿಕೆ ಇತ್ಯಾದಿಗಳ ಸೌಲಭ್ಯಗಳನ್ನು ಮಾಡಬಹುದು.
5) ಬೋರ್ ವೆಲ್ ಗಳಿಲ್ಲದ ಕನಿಷ್ಠ ಪ್ರಮಾಣದ ಭೂಮಿಗಳಿಗಾಗಿ, ಸರ್ಕಾರದ ಜಾಗೆಗಳಲ್ಲಿ ಬೋರ್ವೆಲ್ ಗಳನ್ನು ಕೊರೆದು, ಸರತಿ ಪ್ರಕಾರ ರೈತರ ಭೂಮಿಗಳಿಗೆ, ನೀರಿನ ಸೌಲಭ್ಯವನ್ನು ಒದಗಿಸುವ ವ್ಯವಸ್ಥೆಯಾಗಬೇಕು.
6) ಬೆಳೆ ಬಂದ ಮೇಲೆ ನೀರು ಸರಬರಾಜು, ಬೀಜ, ಗೊಬ್ಬರ ಹಾಗೂ ರೆಂಟೆ ಕುಂಟೆ ಹೊಡೆಸಿದ ಎಲ್ಲವನ್ನೂ ಒಂದು ಎಕರೆಗೆ ಇಂತಿಷ್ಟು ಎಂದು ನಿಗದಿಗೊಳಿಸಿ, ತೆರಿಗೆ ಸಂಗ್ರಹ ಮಾಡಿಕೊಳ್ಳಲು ಅಡ್ಡಿಯಿಲ್ಲ.
7) ಒಂದು ವೇಳೆ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ, ಬೆಳೆ ನಾಶವಾದರೆ ಅದು ರಾಷ್ಟ್ರದ ವಿಪತ್ತು ಎಂದು, ಅದುವರೆಗಿನ ವೆಚ್ಚವನ್ನು ಮನ್ನಾ ಮಾಡುವ ಅಥವಾ ಅನುಕೂಲವಾಗುವ ತೀರ್ಮಾನವನ್ನು ಸ್ಥಳೀಯ ಸರ್ಕಾರದ ವರದಿಯ ಆಧಾರದ ಮೇಲೆ ತೆಗೆದುಕೊಳ್ಳಬೇಕು.
8) ಕಾಲ ಕಾಲಕ್ಕೆ ರೈತರು ಬೆಳೆಯುತ್ತಿರುವ ಪೈರುಗಳ ತಪಾಸಣೆ, ಗುಣಮಟ್ಟ, ನೀರು ಪೂರೈಕೆ, ಗೊಬ್ಬರ, ಕೀಟನಾಶಕ, ಕಳೆ ಕೀಳಿಸುವ ಕಾರ್ಯಗಳ ಮೇಲೆ ಮೇಲ್ವಿಚಾರಣೆ ಇರಬೇಕು.
9) ಕೆಲವು ಸಂದರ್ಭಗಳಲ್ಲಿ ರೈತರು ನಮ್ಮ ಭೂಮಿ ನಮಗೆ ಬೇಕಾದಂತೆ ಮಾಡಿಕೊಳ್ಳುತ್ತೇವೆ ಎನ್ನುವುದಾದರೆ, ಅವರು ಸ್ವಂತ ಭರಿಸುವುದು, ನಷ್ಟಕ್ಕೂ ಹೊಣೆಗಾರರೂ ಎಂದು ಘೋಷಿಸುವುದು. ತೆರಿಗೆಯನ್ನು ಸರ್ಕಾರ ಸೂಕ್ತ ರೀತಿಯಲ್ಲಿ ನಿಗದಿಗೊಳಿಸುವುದು.
ಹೀಗೆ ವಿಚಾರ ಮಾಡುತ್ತಾ ಹೋದಂತೆಲ್ಲ ಎಲ್ಲೋ ಒಂದು ಕಡೆ ಸೂಕ್ತವೆನಿಸಬಹುದಾದ ಕಾರ್ಯಗಳನ್ನು ಸರ್ಕಾರ ಕೈಗೆತ್ತಿಕೊಳ್ಳಬಹುದು. ಈಗ ಮಾಡುತ್ತಿಲ್ಲ ಎಂದಲ್ಲ. ಆದರೆ ಸಾಕಾಗುತ್ತಿಲ್ಲ ಅಷ್ಟೇ. ಸರ್ಕಾರದ ಸಹಾಯಹಸ್ತ ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ! ಒಂದು ಸಮಸ್ಯೆ ಬಗೆ ಹರಿಸುವಷ್ಟರಲ್ಲಿ ಮತ್ತೊಂದು ಹುಟ್ಟಿಕೊಂಡು ಬಿಡುತ್ತದೆ. ಇದು ಬೃಹತ್ ಜನ ಸಂಖ್ಯೆಯ ರಾಷ್ಟ್ರ. ಎಲ್ಲವನ್ನೂ ಗಣನೆಗೆ ತೆಗೆದುಕೊಳ್ಳಲು ಕಷ್ಟ. ಆದರೂ ಪ್ರಯತ್ನ ನಿರಂತರವಾಗಬೇಕು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ