Kannada NewsKarnataka NewsLatest
ಸಿಎಂ ಜೊತೆ ಚರ್ಚಿಸಿದ ಬೆಳಗಾವಿ ನಿಯೋಗ; ಟೆಕ್ ಪಾರ್ಕ್ ಸೇರಿ ಸಿಕ್ಕಿತು 3 ಪ್ರಮುಖ ಭರವಸೆ
ಬೆಳಗಾವಿಯಲ್ಲಿ ಬೃಹತ್ ಆಟೋಮೊಬೈಲ್ ಉದ್ಯಮ ಸ್ಥಾಪನೆಗೆ ಉತ್ತೇಜನ: ಮುಖ್ಯಮಂತ್ರಿ ಬೊಮ್ಮಾಯಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಬೆಳಗಾವಿಯಲ್ಲಿ ಬೃಹತ್ ಆಟೋಮೊಬೈಲ್ ಉದ್ಯಮ ಸ್ಥಾಪನೆಗೆ ಉತ್ತೇಜನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಅವರು ಇಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹಾಗೂ ಬೆಳಗಾವಿ ಶಾಸಕ ಅಭಯ್ ಪಾಟೀಲ ನೇತೃತ್ವದ ಬೆಳಗಾವಿಯ ವಾಣಿಜ್ಯೋದ್ಯಮಿಗಳ ನಿಯೋಗದೊಂದಿಗೆ ಬೆಳಗಾವಿಯ ಅಭಿವೃದ್ಧಿ ಕುರಿತ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
ಬೆಳಗಾವಿ ರಾಜ್ಯದ ಆರ್ಥಿಕ ಬೆಳವಣಿಗೆಗೆ ಹಾಗೂ ಕೈಗಾರಿಕಾ ಅಭಿವೃದ್ಧಿಯ ದೃಷ್ಟಿಯಿಂದ ಮಹತ್ವದ ಜಿಲ್ಲೆಯಾಗಿದೆ. ಈ ಹಿನ್ನೆಲೆಯಲ್ಲಿ ಬೃಹತ್ ಉದ್ಯಮ ಸ್ಥಾಪನೆಯಿಂದ ಕೈಗಾರಿಕಾ ಅಭಿವೃದ್ಧಿ ಇನ್ನಷ್ಟು ವೇಗವಾಗಿ ಆಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಬೆಳಗಾವಿಯಲ್ಲಿ ಫೌಂಡ್ರಿ ಮತ್ತು ಹೈಡ್ರಾಲಿಕ್ಸ್ ಉದ್ಯಮಗಳಿಗೆ ಉತ್ತೇಜನ ನೀಡಲು ಫೌಂಡ್ರಿ ಪಾರ್ಕ್ ಸ್ಥಾಪಿಸುವಂತೆ ನಿಯೋಗವು ಮಾಡಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಭೂಮಿ ಗುರುತಿಸಿ, ಸ್ವಾಧೀನ ಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಇದಲ್ಲದೆ ಎಂಎಸ್ಎಂಇ ಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ವಿಧಿಸುವ ಶುಲ್ಕ ರಾಜ್ಯದಲ್ಲಿ ಕಡಿಮೆ ಮಾಡುವ ಬಗ್ಗೆ ಪರಿಶೀಲಿಸುವಂತೆ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಇದರೊಂದಿಗೆ ಬೆಳಗಾವಿ ಜಿಲ್ಲೆಯಲ್ಲಿ 100 ಹಾಸಿಗೆ ಸಾಮರ್ಥ್ಯದ ಇಎಸ್ಐಸಿ ಆಸ್ಪತ್ರೆ ಸ್ಥಾಪಿಸುವ ಕುರಿತಂತೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು.
ಮುಂಬೈ ಚೆನ್ನೈ ಕಾರಿಡಾರ್ನಲ್ಲಿ ಬೆಳಗಾವಿ ಜಿಲ್ಲೆಯಲ್ಲಿಯೂ ಕೈಗಾರಿಕಾ ಟೌನ್ ಷಿಪ್ ರಚಿಸಲಾಗುವುದು. ಇದರ ಸದುಪಯೋಗವನ್ನು ಉದ್ಯಮಿಗಳು ಮಾಡಿಕೊಳ್ಳಬೇಕೆಂದು ಮುಖ್ಯಮಂತ್ರಿಗಳು ಸಲಹೆ ನೀಡಿದರು.
ಈ ಭಾಗದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಪೂರಕವಾಗಿ ಬೆಳಗಾವಿ-ಕಿತ್ತೂರು-ಧಾರವಾಡ ರೈಲುಮಾರ್ಗ ಯೋಜನೆಯನ್ನು ಮೊದಲ 5 ಆದ್ಯತೆಯ ಯೋಜನೆಗಳಲ್ಲಿ ಪರಿಗಣಿಸುವಂತೆ ಕೇಂದ್ರ ರೈಲ್ವೆ ಸಚಿವರನ್ನು ಕೋರಲಾಗಿದೆ. ಸರ್ಕಾರ ಈ ಯೋಜನೆಯನ್ನು ಆದ್ಯತೆಯ ಮೇರೆಗೆ ಅನುಷ್ಠಾನಗೊಳಿಸಲಿದೆ ಎಂದರು.
ಬೆಳಗಾವಿ ಜಿಲ್ಲೆಯಲ್ಲಿ ಇಂಟೆಗ್ರೇಟೆಡ್ ಟೆಕ್ಸ್ಟೈಲ್ ಉದ್ಯಮ ಸ್ಥಾಪಿಸಲು ಮುಂದೆ ಬರುವಂತೆ ಸಲಹೆ ನೀಡಿದ ಮುಖ್ಯಮಂತ್ರಿಗಳು, ಬೆಳಗಾವಿಯ ಕೈಗಾರಿಕೋದ್ಯಮಗಳ ಬೆಳವಣಿಗೆ ಕುರಿತಂತೆ ಬೆಳಗಾವಿಗೆ ಭೇಟಿ ನೀಡಿದಾಗ ಉದ್ಯಮಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಚರ್ಚಿಸುವುದಾಗಿ ತಿಳಿಸಿದರು.
ಶಾಸಕ ಅಭಯ ಪಾಟೀಲ ನೇತೃತ್ವದ ನಿಯೋಗದ ಚರ್ಚೆಯ ವೇಳೆ ನಗರಾಭಿವೃದ್ಧಿ ಸಚಿವ ಬಿ ಎ. ಬಸವರಾಜ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣ ರೆಡ್ಡಿ ಮತ್ತು ಸರ್ಕಾರದ ಇತರ ಹಿರಿಯ ಅಧಿಕಾರಿಗಳು, ಭರತ್ ದೇಶಪಾಂಡೆ, ಸಚಿನ್ ಸಬ್ನಿಸ್, ರೋಹನ್ ಜುವಳಿ, ಆನಂದ ದೇಸಾಯಿ, ಆದಿತ್ಯ ಪಾರೀಕ್, ರೋಹಿತ್ ದೇಶಪಾಂಡೆ, ಸತೀಶ್ ಕುಲಕರ್ಣಿ, ಮಾಧವ ಚೌಗುಲೆ ಮೊದಲಾದವರು ಉಪಸ್ಥಿತರಿದ್ದರು.
ಇನ್ಮುಂದೆ ಡಿಜಿಟಲ್ ಮಾಧ್ಯಮ ಪತ್ರಕರ್ತರಿಗೂ ಮಾನ್ಯತೆ
https://pragati.taskdun.com/digital-mediajournalistrecognitionanurag-thakur/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ