ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ವಿಚಾರವಾಗಿ ಸರ್ಕಾರ ಈಗಾಗಲೇ ಸ್ಪಷ್ಟ ನಿಲುವು ಹೊಂದಿದೆ. ಕಾನೂನು ಪ್ರಕಾರವಾಗಿ ಸರ್ಕಾರ ಗಟ್ಟಿ ನಿಲುವು ಹೊಂದಿದ್ದು ಏನೆಲ್ಲಾ ಮಾಡಬೇಕೊ ಅದನ್ನೆಲ್ಲಾ ಸರ್ಕಾರ ಮಾಡಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಗುಜರಾತ್ ಚುನಾವಣೆ ಬಳಿಕ ಸಂಪುಟ ವಿಸ್ತರಣೆ ಮಾಡುವುದಾಗಿ ತಿಳಿಸಿದರು.
ಶರಾವತಿ ಸಂತ್ರಸ್ತರ ಕುರಿತ ವರದಿಯನ್ನು ಕೇಂದ್ರ ಸರ್ಕಾರದ ಅನುಮತಿಗೆ ಕೂಡಲೇ ಸಲ್ಲಿಸಿ, ಆದಷ್ಟು ಬೇಗನೆ ಅನುಮತಿ ಪಡೆದು ಕ್ರಮಬದ್ಧಗೊಳಿಸಿ, ಶರಾವತಿ ಸಂತ್ರಸ್ತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದಿದ್ದು ಹಿಂದೆ ಅಧಿಸೂಚನೆ ಹೊರಡಿಸಿದ್ದ ಆಸ್ತಿಗಳ ಬಗ್ಗೆ ಸಮೀಕ್ಷೆ ಮಾಡಿ ವರದಿ ಪಡೆಯಬೇಕಿದೆ. ಡಿಸೆಂಬರ್ ಮೂರನೇ ವಾರ ವಿಧಾನಸಭಾ ಅಧಿವೇಶನದೊಳಗೆ ವರದಿ ನೀಡಲು ಸೂಚಿಸಿದ್ದು, ವರದಿಯನ್ನು ಭಾರತ ಸರ್ಕಾರಕ್ಕೆ ಸಲ್ಲಿಸಲಾಗುವುದು. ಕಳೆದ ಬಾರಿಯ ಅಧಿಸೂಚನೆ ಕೇಂದ್ರ ಸರ್ಕಾರದ ಅನುಮತಿ ಇಲ್ಲದೆ ಆಗಿದ್ದರಿಂದ ಅದು ಸ್ಥಗಿತವಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಈ ವಿಚಾರದ ಬಗ್ಗೆ ತಿಳಿಸಲಾಗಿದೆ. ಶೀಘ್ರವಾಗಿ ಕ್ರಮಕೈಗೊಳ್ಲಲಾಗುವುದು ಎಂದರು.
ಶಿವಮೊಗ್ಗದಲ್ಲಿ ಭಯೋತ್ಪಾದಕ ಚಟುವಟಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಎನ್ ಐಎ ತನಿಖೆ ಕುರಿತು ಮಾತನಾಡಿದ ಸಿಎಂ ಉಗ್ರರ ಚಟುವಟಿಕೆ, ಯುಎಪಿಎ ಕಾಯ್ದೆ ಕುರಿತ ಎಲ್ಲಾ ಪ್ರಕರಣವನ್ನು ರಾಜ್ಯ ಸರ್ಕಾರಗಳು ಎನ್ ಐಎ ಗೆ ವಹಿಸಲೇ ಬೇಕು. ಹಾಗಾಗಿ ನಾವು ಕೂಡ ಪ್ರಕರಣವನ್ನು ಎನ್ ಐ ಎ ಗೆ ವಹಿಸಿದ್ದೇವೆ. ಮಂಗಳೂರು ಸ್ಫೋಟ ಪ್ರಕರಣದಲ್ಲಿ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ಆರೋಪಿ ಯಾವುದೇ ಹೆಸರಲ್ಲಿ ಕೃತ್ಯ ನಡೆಸಿದ್ದರೂ 24 ಗಂಟೆಯಲ್ಲಿ ಪ್ರಕರಣ ಬೇಧಿಸಿ ಆತ ಯಾರು ಎಂಬುದನ್ನು ಕಂಡು ಹಿಡಿದಿದ್ದಾರೆ ಎಂದು ಹೇಳಿದರು.
ಡೀಮ್ಡ್ ಅರಣ್ಯ
ಮಲೆನಾಡಿನ ಡೀಮ್ಡ್ ಅರಣ್ಯದ ಬಗ್ಗೆ ನಿರ್ಣಯ ಕೈಗೊಂಡು ಸುಮಾರು 6 ಲಕ್ಷಕ್ಕೂ ಹೆಚ್ಚು ಎಕರೆಗಳನ್ನು ಡೀಮ್ಡ್ ಅರಣ್ಯ ವಾಪ್ತಿಯಿಂದ ತೆಗೆದು ಕಂದಾಯ ಇಲಾಖೆಗೆ ವಹಿಸಿದೆ. ಸರ್ವೆ ಸಂಖ್ಯೆಗಳನ್ನು ನೀಡಲಾಗುವುದು. ಆರೂವರೆ ಲಕ್ಷ ಎಕರೆ ಪ್ರದೇಶದಲ್ಲಿ ಅತಿ ಹೆಚ್ಚು ಶಿವಮೊಗ್ಗ ಹಾಗೂ ಮಲೆನಾಡು ಪ್ರದೇಶಕ್ಕೆ ಬರುತ್ತದೆ. ಕೆಲವನ್ನು ಕಾನೂನು ಇಲಾಖೆಯಲ್ಲಿ ಪರಿಶೀಲನೆ ಮಾಡಿ, ಇನ್ನು ಕೆಲ ವಿಚಾರಗಳನ್ನು ಸಂಪುಟದ ಉಪಸಮಿತಿ ರಚಿಸಿ ವಹಿಸಲಾಗಿದೆ ಎಂದರು.
ಚುಕ್ಕೆ ರೋಗ ನಿಯಂತ್ರಣ: ಶೀಘ್ರ ಕ್ರಮ
ಸರ್ಕಾರದಿಂದ ಅಡಿಕೆಗೆ ಚುಕ್ಕೆ ರೋಗ ನಿಯಂತ್ರಣಕ್ಕೆ 10 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ತಜ್ಞರು ನೀಡುವ ಪರಿಹಾರಗಳನ್ನು ಕಾರ್ಯಗತ ಮಾಡಲಾಗುವುದು ನವೆಂಬರ್ 27 ರಂದು ತೀರ್ಥಹಳ್ಳಿಗೆ ಭೇಟಿ ನೀಡಿ ಅಡಿಕೆ ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು. ವಿಶ್ವವಿದ್ಯಾಲಯದ ವಿಜ್ಞಾನಿಗಳು ಹಾಗೂ ಕೇಂದ್ರದ ತಂಡವೂ ಆಗಮಿಸಿದೆ. ಅತಿ ಶೀಘ್ರದಲ್ಲಿಯೇ ಪರಿಹಾರ ನೀಡುತ್ತಾರೆ.
ಕಾಂಗ್ರೆಸ್ಸಿನದು ಇಬ್ಬಗೆಯ ನೀತಿ
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನಿಡಿ ಪ್ರಜಾಪ್ರಭುತ್ವದ ದೇಶದಲ್ಲಿ ಯಾರೂ ಬೇಕಾದರೂ ಪಾದಯಾತ್ರೆ ಮಾಡಬಹುದು. ಪ್ರಶ್ನೆ ಏನೆಂದರೆ ಅಂದು ಸರಿಯಾದ ಕ್ರಮತೆಗೆದುಕೊಂಡಿದ್ದರೆ ಯಾರಿಗೂ ತೊಂದರೆಯಾಗುತ್ತಿರಲಿಲ್ಲ, ಪಾದಯಾತ್ರೆ ಮಾಡುವ ಪ್ರಸಂಗವೂ ಇರಲಿಲ್ಲ. ಪಾದಯಾತ್ರೆ ಮಾಡುವ ಸಂದರ್ಭ ತಂದುಕೊಂಡರೂ ಅವರೇ, ಪಾದಯಾತ್ರೆ ಮಾಡುತ್ತಿರುವವರೂ ಅವರೇ. ಕಾಂಗ್ರೆಸ್ಸಿನದು ಯಾವಾಗಲೂ ಇಬ್ಬಗೆಯ ನೀತಿ. ಆದರೆ ನಾವು ಪ್ರಮಾಣಿಕವಾಗಿ ಕಾನೂನಾತ್ಮಕವಾಗಿ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಮತದಾರರ ವೈಯಕ್ತಿಕ ಮಾಹಿತಿ ಕಳುವು ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮುಕ್ತ ತನಿಖೆ ಮಾಡಲು ಆದೇಶ ನೀಡಿದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ ಎಂದರು.
ಒಂದೇ ದಿನದೊಳಗೆ ಮಹಿಳಾ ಆಯೋಗದ ದೂರುಗಳ ತನಿಖೆ ಪ್ರಾರಂಭಿಸಲು ಸಿಎಂ ಸೂಚನೆ
https://pragati.taskdun.com/silver-jubilee-programkarnataka-state-commission-for-womencm-basavaraj-bommai/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ