Latest

ನಾಳೆ ದೆಹಲಿ ಪ್ರವಾಸ; ಸಿಎಂ ಬೊಮ್ಮಾಯಿ ಮಾಹಿತಿ

ಪ್ರಗತಿವಾಹಿನಿ ಸುದ್ದಿ; ಮೈಸೂರು: ನವೆಂಬರ್ 29 ರಂದು ನವದೆಹಲಿಗೆ ತೆರಳಲಿದ್ದು, ಹಿರಿಯ ವಕೀಲರಾದ ಮುಕುಲ್ ರೋಹಟಗಿಯವರನ್ನು ಭೇಟಿಯಾಗಲಿದ್ದು, ಗಡಿವಿಚಾರದ ಬಗ್ಗೆ ಚರ್ಚೆ ಹಾಗೂ ಕೇಂದ್ರ ಕೈಗಾರಿಕಾ ಸಚಿವರು, ಜಲಸಂಪನ್ಮೂಲ ಸಚಿವರನ್ನೂ ಸಹ ಭೇಟಿಯಾಗುವ ಉದ್ದೇಶವಿದ್ದು, ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿದು ಮಾಧ್ಯಮದವರೊಂದಿಗೆ ಮಾತನಾಡಿದರು. ಮಹಾರಾಷ್ಟ್ರದೊಂದಿಗಿನ ಗಡಿವಿವಾವಕ್ಕೆ ಸಂಬಂಧಪಟ್ಟಂತೆ ಇದೇ 30 ರಂದು ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆ ಇದೆ. ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷರನ್ನಾಗಿ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಮೂರ್ತಿಗಳಾದ ಶಿವರಾಜಪಾಟೀಲ್ ಅವರನ್ನು ನೇಮಿಸಲಾಗಿದ್ದು, ಸಭೆ ಕೂಡ ನಡೆಸಲಾಗಿದೆ. ನವೆಂಬರ್ 30 ರಂದು ಗಡಿ ವಿಚಾರದ ಬಗ್ಗೆ ಕಾನೂನು ಸಮರಕ್ಕೆ ರಾಜ್ಯ ಸಿದ್ಧವಿದ್ದು, ರಾಜ್ಯದ ನಿಲುವು, ಕಾನೂನುಗಳ ಬಗ್ಗೆ ವಾದ ಮಂಡಿಸಲಾಗುವುದು. ಮಹಾರಾಷ್ಟ್ರದ ಗಡಿಭಾಗದ ಗ್ರಾಮದ ಜನರು, ಕರ್ನಾಟಕಕ್ಕೆ ಸೇರುವುದಾಗಿ ಮನವಿ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ವಿಷಯ ಸಧ್ಯಕ್ಕೆ ನ್ಯಾಯಾಲಯದಲ್ಲಿರುವುದರಿಮದ ಈ ವಿಷಯದ ಕುರಿತು ಬಹಿರಂಗವಾಗಿ ಚರ್ಚಿಸುವುದು ಸೂಕ್ತವಲ್ಲ ಎಂದರು.

ಮಂಡ್ಯ ಹಾಗೂ ಮೈಸೂರಿನಲ್ಲಿ ಭತ್ತ ಖರೀದಿ ಕೇಂದ್ರ :
ಭತ್ತ ಖರೀದಿ ಕೇಂದ್ರವನ್ನು ಮಂಗಳೂರಿನಲ್ಲಿ ಮಾತ್ರ ತೆರೆಯಲಾಗಿದೆಯೇ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಮಂಗಳೂರಿನಲ್ಲಿ ಕುಚ್ಚಲಕ್ಕಿಯನ್ನು ಜನರು ಬಳಸುವುದರಿಂದ , ಈ ಭಾಗದಲ್ಲಿ ಕುಚ್ಚಲಕ್ಕಿಯ ಖರೀದಿ ಮಾಡಲಾಗುತ್ತಿದೆ.ಭತ್ತವನ್ನು ರಾಜ್ಯದೆಲ್ಲೆಡೆಯಿಂದ ಖರೀದಿಸಲಾಗುವುದು. ಉತ್ತರ ಕರ್ನಾಟಕದಲ್ಲಿ ಗಂಗಾವತಿ, ಸಿಂದನೂರು, ಮಂಡ್ಯ ಹಾಗೂ ಮೈಸೂರುಗಳಲ್ಲಿಯೂ ಖರೀದಿಸಲಾಗುವುದು ಎಂದರು.

ಸಂವಿಧಾನದ ಚೌಕಟ್ಟಿನೊಳಗೆ ಕ್ರಮ :
ಹಿಂದುಳಿದ ವರ್ಗದ ಮೀಸಲಾತಿಗೆ ಸಂಬಂಧಿಸಿದಂತೆ, ಎಲ್ಲ ಸಮುದಾಯಗಳ ಆಕಾಂಕ್ಷೆಗಳು ಹೆಚ್ಚಾಗಿದೆ. ಆದರೆ ಸಂವಿಧಾನದ ಚೌಕಟ್ಟಿನೊಳಗೆ ಎಲ್ಲ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹಿಂದುಳಿದ ವರ್ಗ ಆಯೋಗವಿದೆ. ಸಮುದಾಯಗಳ ಮೀಸಲಾತಿ ಹೆಚ್ಚಳ ಮನವಿಯನ್ನು ಮೊದಲು ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ತನಿಖೆಯ ನಂತರ ವಿಷಯಗಳು ಸ್ಪಷ್ಟವಾಗಲಿವೆ :
ಬೆಂಗಳೂರಿನಲ್ಲಿ ವೆಬ್ ಸೈಟೊಂದರ ಮೂಲಕ ನಕಲಿ ಆಧಾರ್ ಕಾರ್ಡ್, ವೋಟರ್ ಐಡಿಯನ್ನು ಪಡೆಯಬಹುದು, ಮಂಗಳೂರಿನ ಬಾಂಬ್ ಪ್ರಕರಣದ ಪ್ರಮುಖ ಆರೋಪಿ ಶಾರೀಖ್ ಕೂಡ ಇಂತಹದೇ ನಕಲಿ ದಾಖಲೆಗಳನ್ನು ಪಡೆದಿರುವುದುಬೆಳಕಿಗೆ ಬಂದಿದೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಇಂತಹ ಬಹಳಷ್ಟು ವೆಬ್ಸೈಟ್ಗಳಿವೆ. ಮತ ಪರಿಷ್ಕರಣೆ ಹಾಗೂ ಮತದಾರರಿಗೆ ಸಂಬಂಧಿಸಿದಂತೆ ತನಿಖೆ ಈಗಾಗಲೇ ನಡೆಯುತ್ತಿದ್ದು, ತನಿಖೆಯ ನಂತರ ಈ ಎಲ್ಲ ವಿಷಯಗಳೂ ಸ್ಪಷ್ಟವಾಗಲಿವೆ ಎಂದರು.

ವಿಪಕ್ಷಗಳ ಸಹಕಾರ :
ಗಡಿ ವಿಚಾರಗಳ ಬಗ್ಗೆ ವಿಪಕ್ಷಗಳ ಸಹಕಾರವಿದೆಯೇ ಎಂಬುದಕ್ಕೆ ಉತ್ತರ ನೀಡಿ, ರಾಜ್ಯ ಗಡಿ, ನೆಲ, ಜಲಗಳ ವಿಚಾರದಲ್ಲಿ ವಿಪಕ್ಷಗಳು ಸಹಕಾರ ನೀಡುತ್ತಿವೆ. ಆದರೆ ರಾಜಕಾರಣದಲ್ಲಿ ಅವರವರ ರಾಜಕಾರಣವನ್ನು ಎಲ್ಲ ಪಕ್ಷಗಳೂ ಮಾಡುತ್ತವೆ ಎಂದರು.

ಮೈಸೂರಿನ ಪಾರಂಪರಿಕ ಕಟ್ಟಡಗಳ ದುರಸ್ತಿ ಬಗ್ಗೆ ಚರ್ಚಿಸಿ ತೀರ್ಮಾನ :
ಮೈಸೂರಿನಲ್ಲಿ ವಿಮಾನ ನಿಲ್ದಾಣದ ಅಭಿವೃದ್ಧಿ ಅನುದಾನ ನೀಡಲಾಗಿದೆ. ಆದರೆ ಮೈಸೂರಿನಲ್ಲಿನ ಪಾರಂಪರಿಕ ಕಟ್ಟಡಗಳು ಒಂದೊಂದಾಗಿ ಕುಸಿಯುತ್ತಿರುವ ಬಗ್ಗೆ ಉತ್ತರಿಸಿ, ಈ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಪಡೆದು, ಕಟ್ಟಡಗಳ ದುರಸ್ತಿಗಾಗಿ ಹಣಕಾಸಿನ ವ್ಯವಸ್ಥೆಗಳ ಬಗ್ಗೆ ಅವಲೋಕಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಏಕರೂಪ ನಾಗರಿಕ ಸಂಹಿತೆ :
ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದಾಗಿ ಭಾಜಪ ಪಕ್ಷ 30 ವರ್ಷಗಳಿಂದಲೂ ಹೇಳುತ್ತಿದೆ. ಕೆಲವು ರಾಜ್ಯಗಳಲ್ಲಿ ಈ ಸಂಹಿತೆಯನ್ನು ಜಾರಿಗೆ ತರಲು ಸಮಿತಿಗಳನ್ನು ರಚಿಸಿದ್ದಾರೆ. ವಿವಿಧ ರಾಜ್ಯಗಳಲ್ಲಿ ಈ ಬಗೆಗಿನ ಬೆಳವಣಿಗೆ, ಸಂವಿಧಾನದಲ್ಲಿನ ಅವಕಾಶಗಳ ಸಂಪೂರ್ಣ ಮಾಹಿತಿಯನ್ನು ಪಡೆದು, ನಂತರ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದರು.

ಆರ್.ಬಿ.ಐ ದೇಶದ ಆರ್ಥಿಕತೆಯ ರಕ್ಷಕ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ

https://pragati.taskdun.com/rbiconstitution-daycm-basavaraj-bommai/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button