ಗಡಿ ಕಿಚ್ಚು: ಬೆಳಗಾವಿ ಸುತ್ತ ಸರ್ಪಗಾವಲು; ಗಡಿಯಲ್ಲಿ ಸಾವಿರಾರು ಸಂಖ್ಯೆಯ ಪೊಲೀಸರ ನಿಯೋಜನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿ ಕಿಚ್ಚು ಭುಗಿಲೇಳುವ ಲಕ್ಷಣಗಳ ಬೆನ್ನಿಗೇ ಬೆಳಗಾವಿ ಸುತ್ತ ಪೊಲೀಸ್ ಸರ್ಪಗಾವಲು ಶುರುವಾಗಿದೆ.
ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಗಡಿಯ ಎಲ್ಲ
ಭಾಗಗಳಲ್ಲಿ ಸಹಸ್ರಾರು ಸಂಖ್ಯೆಯ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು ಹೊರಗಿನಿಂದ ನುಸುಳಿ ಅಶಾಂತಿ ಸೃಷ್ಟಿಸುವವರ ಮೇಲೆ ತೀಕ್ಷ್ಣ ಕಣ್ಗಾವಲು ಇರಿಸಲಾಗಿದೆ.
ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಂಗಳವಾರ ಮಹಾರಾಷ್ಟ್ರದ ಇಬ್ಬರು ಗಡಿ ಸಚಿವರು ಎಂಇಎಸ್ ಆಹ್ವಾನದ ಮೇರೆಗೆ ಮಂಗಳವಾರವೇ ಬೆಳಗಾವಿಗೆ ಆಗಮಿಸುವವರಿದ್ದರು. ಇದಕ್ಕೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದಲ್ಲದೆ ಕನ್ನಡ ಪರ ಸಂಘಟನೆಗಳು ಭಾರೀ ಪ್ರತಿರೋಧ ಒಡ್ಡುವ ಎಚ್ಚರಿಕೆ ನೀಡಿದ್ದವು. ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬರದಂತೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹಾರಾಷ್ಟ್ರಕ್ಕೆ ಸಂದೇಶ ನೀಡಿದ್ದಲ್ಲದೆ ಬೆಳಗಾವಿ ಜಿಲ್ಲಾಧಿಕಾರಿ ಕೂಡ ಶಾಂತಿ ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಇಬ್ಬರೂ ಸಚಿವರು ಬೆಳಗಾವಿ ಭೇಟಿ ಪ್ರತಿಬಂಧಿಸಿ ಆದೇಶ ಹೊರಡಿಸಿದ್ದರು.
ಇದರ ಬೆನ್ನಿಗೇ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣದ ಕಾರ್ಯಕರ್ತರು ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳ ಸದಸ್ಯರು ರಾಜ್ಯದ ನಾನಾ ಕಡೆಗಳಿಂದ ಬೆಳಗಾವಿಯತ್ತ ಸೋಮವಾರದಿಂದಲೇ ಆಗಮಿಸುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತು ಏರ್ಪಡಿಸಿದ್ದು ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಚಟುವಟಿಕೆ ನಡೆಸುವ ಯಾರೂ ಬೆಳಗಾವಿ ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ.
ನಿಪ್ಪಾಣಿ ಗಡಿ, ಸದಲಗಾದ ಮಾಂಗೂರ- ಹುಪರಿ ಚೆಕ್ ಪೋಸ್ಟ್, ಬೋರಗಾಂವ ICO ಚೆಕ್ ಪೋಸ್ಟ್, ಕಾಗವಾಡದ ಗಣೇಶವಾಡಿ ಚೆಕ್ ಪೋಸ್ಟ್, ರಾಯಬಾಗ ತಾಲೂಕಿನ ಗಾಯಕನವಾಡಿ ಚೆಕ್ ಪೋಸ್ಟ್ ಮುಂತಾದೆಡೆ ಪೊಲೀಸ್ ಪಹರೆ ಹಾಕಲಾಗಿದೆ. ನಿಪ್ಪಾಣಿ- ಕೊಗನಳ್ಳಿ ಚೆಕ್ ಪೋಸ್ಟ್ ನಲ್ಲಿ ಮಹಾರಾಷ್ಟ್ರದಿಂದ ಬರುವ ಪ್ರತಿಯೊಂದು ವಾಹನವನ್ನು ತಪಾಸಣೆ ಮಾಡಿ ಒಳಬಿಡಲಾಗುತ್ತಿದೆ.
‘ಮಹಾ’ ಪಲಾಯನ: ಕರ್ನಾಟಕ ಸರಕಾರವೂ ಸೇರಿದಂತೆ ಕನ್ನಡಿಗರ ಭಾರೀ ಪ್ರತಿರೋಧದ ಸುಳಿವು ದೊರೆಯುತ್ತಿದ್ದಂತೆ ಈವರೆಗೆ ಬೆಳಗಾವಿಗೆ ಬಂದೇ ತೀರುವೆವೆಂಬ ಪಟ್ಟು ಹಿಡಿದಿದ್ದ ಮಹಾರಾಷ್ಟ್ರಬೆಳಗಾವಿಗೆ ಆಗಮಿಸಲಿದ್ದ ತನ್ನ ಇಬ್ಬರೂ ಗಡಿ ಸಚಿವರ ಪ್ರವಾಸ ಹಠಾತ್ ರದ್ದುಗೊಳಿಸುವ ಮೂಲಕ ನಯವಾದ ಪಲಾಯನವಾದದ ಮೊರೆ ಹೋಗಿದೆ.
ಡಾ.ಬಿ.ಆರ್. ಅಂಬೇಡ್ಕರ ಅವರ ಪರಿನಿರ್ವಾಣದ ದಿನ ಅಶಾಂತಿ ಆಗದಿರಲೆಂಬ ಕಾರಣಕ್ಕೆ ಸಚಿವದ್ವಯರ ಭೇಟಿ ರದ್ದುಗೊಳಿಸಿರುವುದಾಗಿ ಕಾರಣ ನೀಡಿ ಸೋಮವಾರವೇ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ಹೇಳಿಕೆ ನೀಡಿದ್ದಾರೆ.
ಕನ್ನಡಿಗರ ಹೋರಾಟಕ್ಕೆ ಬೆದರಿದ ಮಹಾ ಸಚಿವರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ