ಇದೇನು ಪೊಲೀಸ್ ರಾಜ್ಯಾನಾ? ನಡುರಸ್ತೆಯಲ್ಲೇ ತಡೆಯುತ್ತಿರುವುದು ಸರಿಯಲ್ಲ; ಕರವೇ ನಾರಾಯನಗೌಡ ಆಕ್ರೋಶ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಹಾರಾಷ್ಟ್ರ ನಡೆಸುತ್ತಿರುವ ಪುಂಡಾಟಿಕೆಯನ್ನು ವಿರೋಧಿಸಿ ಬೆಳಗಾವಿಯ ಚನ್ನಮ್ಮ ವೃತ್ತಕ್ಕೆ ಮಾಲಾರ್ಪಣೆ ಮಾಡಿ ಸಾವಿರಾರು ಕನ್ನಡದ ಧ್ವಜ ಹಾರಿಸಲು ಮಂಗಳವಾರ ಆಗಮಿಸಿದ್ದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹಾಗೂ ಸಾವಿರಾರು ಕಾರ್ಯಕರ್ತರನ್ನು ಪೊಲೀಸರು ಹಿರೇಬಾಗೇವಾಡಿ ಟೋಲ್ ಗೆಟ್ ಬಳಿ ವಶಕ್ಕೆ ಪಡೆದರು.
ಗಡಿ ವಿಚಾರದಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಮಹಾರಾಷ್ಟ್ರಕ್ಕೆ ಪಾಠ ಕಲಿಸಲು ನಗರದ ಚನ್ನಮ್ಮ ವೃತ್ತದಲ್ಲಿ ಸಾವಿರಾರು ಕನ್ನಡದ ಧ್ವಜವನ್ನು ಹಾರಾಡಿಸಬೇಕೇನ್ನುವ ಉದ್ದೇಶದಿಂದ ಬೆಳಗಾವಿಗೆ ಆಗಮಿಸುತ್ತಿದ್ದ ಕರವೇ ಕಾರ್ಯಕರ್ತರನ್ನು ಹಿರೇಬಾಗೇವಾಡಿಯಲ್ಲಿ ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಕರವೇ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ನಾನು ಬೆಳಗಾವಿಗೆ ಬರುವಾಗ ಬಿಡುವುದಿಲ್ಲ ಎಂದರೆ ಇದು ಪೊಲೀಸ್ ರಾಜ್ಯನಾ ? ನಾವೇನಾದರೂ ಬೇರೆ ರೀತಿಯ ತೀರ್ಮಾನ ತೆಗೆದುಕೊಳ್ಳುತ್ತೇವೆ ಎನ್ನುವ ಭಯಾ ಇದೆಯಾ ಎಂದು ಪ್ರಶ್ನಿಸಿದರು.
ಬೆಳಗಾವಿ ಪೊಲೀಸರು ಕನ್ನಡಿಗರ ಮೇಲೆ ದೌರ್ಜನ್ಯ ಮಾಡುವುದು ಸರಿಯಲ್ಲ. ಕರವೇ ಕಾರ್ಯಕರ್ತರನ್ನು ಬೆಳಗಾವಿ ಪ್ರವೇಶ ಮಾಡದಂತೆ ತಡೆ ಹಿಡಿದಿರುವ ಕುರಿತು ಗೃಹ ಸಚಿವ ಆರಗ್ ಜ್ಞಾನೇಂದ್ರ ಅವರೊಂದಿಗೆ ಚರ್ಚೆ ನಡೆಸುವೆ. ನಾವು ಮಹಾರಾಷ್ಟ್ರಕ್ಕೆ ಹೊಗುತ್ತಿಲ್ಲ ಸ್ವಾಮಿ. ನಾನು ಕರ್ನಾಟಕದ ಬೆಳಗಾವಿಗೆ ಹೊಗುತ್ತಿರುವುದು. ನಮ್ಮನ್ನು ನಡುರಸ್ತೆಯಲ್ಲಿಯೇ ತಡೆಯುವ ಪೊಲೀಸರ ನಡೆ ಸರಿಯಾದುದ್ದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೋಗಟೆ ಕಾಲೇಜಿನಲ್ಲಿ ನಡೆದ ಗಲಾಟೆಯಲ್ಲಿ ಪೊಲೀಸರು ಕನ್ನಡ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಕನ್ನಡದ ಬಾವುಟದ ಬಗ್ಗೆ ಅವಹೇಳನ ಮಾಡಿರುವ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಪೊಲೀಸರು ಕನ್ನಡದ ಬಾವುಟದ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿರುವುದು ತಪ್ಪು. ಈ ಕುರಿತು ನಾನು ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಅಲೋಕಕುಮಾರ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಇದನ್ನು ತನಿಖೆ ನಡೆಸುತ್ತಿದ್ದಾರೆ ಅಂತೆ ತನಿಖೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.
ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿ, ಮಹಾರಾಷ್ಟ್ರದ ಉಪಟಳಕ್ಕೆ ಪಾಠ ಕಲಿಸಲು ಸಾವಿರಾರು ಸಂಖ್ಯೆಯಲ್ಲಿ ಕರವೇ ಕಾರ್ಯಕರ್ತರು ಬೆಳಗಾವಿಗೆ ಆಗಮಿಸುವ ಸಂದರ್ಭದಲ್ಲಿ ಪೊಲೀಸರು ಹಿರೇಬಾಗೇವಾಡಿಯಲ್ಲಿ ಬಂಧಿಸಿರುವ ಕ್ರಮ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಪೊಲೀಸರನ್ನು ಮುಂದೆ ಬಿಟ್ಟು ಕನ್ನಡ ಹೋರಾಟಗಾರರನ್ನು ಹತ್ತಿಕ್ಕುವ ಹುನ್ನಾರ ನಡೆಸಿದ್ದಾರೆ. ಮಹಾರಾಷ್ಟ್ರದ ಮುಖಂಡರಿಗೆ ಬೆಳಗಾವಿಯಲ್ಲಿ ಮಹಾಮೇಳಾವ್, ಎಂಇಎಸ್ ಗೆ ಸಾರ್ವಜನಿಕ ಸಭೆ ಮಾಡಲು ಅವಕಾಶ ಕೊಡುತ್ತದೆ ಸರಕಾರ. ಆದರೆ ಕರ್ನಾಟಕದಲ್ಲಿದ್ದು ನಾಡು, ನುಡಿಯ ಬಗ್ಗೆ ಹೋರಾಟ ಮಾಡುವ ಕರವೇ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸದೆ ಇರುವುದು ದುರಂತದ ಸಂಗತಿ ಎಂದರು.
ಗಣೇಶ ರೋಕಡೆ, ರುದ್ರಗೌಡ ಪಾಟೀಲ, ಮಹೇಶ ಹಟ್ಟಿಹೊಳಿ, ರಮೇಶ ತಳವಾರ ಸೇರಿದಂತೆ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ರಣಾಂಗಣವಾದ ಹಿರೇಬಾಗೆವಾಡಿ ರಸ್ತೆ; ಮಹಾರಾಷ್ಟ್ರ ವಾಹನಗಳ ಮೇಲೆ ಕರವೇ ಕಲ್ಲುತೂರಾಟ
https://pragati.taskdun.com/belagavihirebagewadikarave-protest/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ