Kannada NewsLatest

*ಕೃಷಿ ಸಖಿಯರ ಮೂಲಕ ಸರ್ಕಾರದ ಯೋಜನೆಗಳು ರೈತರ ಮನೆ ಬಾಗಿಲಿಗೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸಂಜೀವಿನಿ – ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯತ , ಬೆಳಗಾವಿ ಮತ್ತು ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ ಇವರ ಸಂಯುಕ್ತಾಶ್ರಯದಲ್ಲಿ “ಪರಿಸರ ಕೃಷಿ ವಿಧಾನಗಳು” ಬಗ್ಗೆ ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ (ಕೃಷಿ ಸಖಿ)ತರಬೇತಿ ಕಾರ್ಯಕ್ರಮವನ್ನು ದಿನಾಂಕ 05.12.2022 ರಿಂದ 10.12.2022ರ ವರೆಗೆ ಜೆಎನ್‌ಎಂಸಿ, ಆವರಣ, ಬೆಳಗಾವಿ ಯಲ್ಲಿ ಪ್ರಾರಂಭಿಸಲಾಗಿದೆ.

ಕಾರ್ಯಕ್ರಮದ ಪ್ರಾರಂಭದಲ್ಲಿ ಕೆಎಲ್‌ಇ ಕೆವಿಕೆ, ಮತ್ತಿಕೊಪ್ಪದ ಕಾರ್ಯಾಧ್ಯಕ್ಷರಾದ ಬಿ.ಆರ್.‌ಪಾಟೀಲ ಎಲ್ಲ ಗಣ್ಯರನ್ನು ಸ್ವಾಗತಿಸಿ, ಕೃಷಿ ಸಖಿಯರ ತರಬೇತಿ ನಮ್ಮ ಕೃಷಿ ವಿಜ್ಞಾನ ಕೇಂದ್ರಕ್ಕೆ ನೀಡಿರುವುದು ಸಂತೋಷದ ವಿಷಯ ಹಾಗೂ ಇಂತಹ ಅನೇಕ ತರಬೇತಿಗಳನ್ನು ಹಮ್ಮಿಕೊಳ್ಳಲು ಸುಸಜ್ಜಿತ ಕಟ್ಟಡ, ಇನ್ನೀತರೇ ಪ್ರಾತ್ಯಕ್ಷಿಕೆ ತಾಕುಗಳು ಹಾಗೂ ನುರಿತ ತಜ್ಞರಿಂದ ತರಬೇತಿ ನೀಡುವುದರಿಂದ ಸರ್ಕಾರದ ಯೋಜನೆಗಳು ರೈತರಿಗೆ ತಲುಪುವಲ್ಲಿ ಫಲಪ್ರದವಾಗಲಿದೆ ಎಂದರು.

ತರಬೇತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸರ್ಕಾರಿ ಮುಖ್ಯ ಸಚೇತಕ ಮಹಾಂತೇಶ ಮ. ಕವಟಗಿಮಠ, ಮಾತನಾಡಿ ಗ್ರಾಮೀಣ ಭಾಗದಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತ ಮತ್ತು ರೈತ ಮಹಿಳೆಯರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನೇಕ ಯೋಜನೆಗಳನ್ನು ಕೃಷಿ ಸಖಿಯರ ಮೂಲಕ ರೈತರ ಮನೆಬಾಗಿಲಿಗೆ ತಲುಪಲು ಸಹಾಯವಾಗುತ್ತದೆ. ಕೃಷಿ ಸಖಿಯರು ಸರ್ಕಾರ ಮತ್ತು ರೈತರ ನಡುವೆ ಕೊಂಡಿಯಾಗಿ ಕೆಲಸ ನಿರ್ವಹಿಸಿ ಈ ಯೋಜನೆಯನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.

ಅಲ್ಲದೇ, ಒಬ್ಬ ಹೆಣ್ಣು ಮಗಳಿಗೆ ಶಿಕ್ಷಣವನ್ನು ಕೊಟ್ಟಾಗ ಇಡೀ ಕುಟುಂಬವೆ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮುಂದುವರೆಯಲು ಬಹಳಷ್ಟು ಸಹಾಯವಾಗುತ್ತಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಿಸಾನ್‌ಸಮ್ಮಾನ್‌ನಿಧಿ, ರೈತ ವಿದ್ಯಾ ನಿಧಿ, ರೈತ ಶಕ್ತಿ ನಿಧಿ ಹೀಗೆ ಅನೇಕ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಂತಹ ಕೆಲಸ, ಸಧೃಡ ಸಮಾಜ ನಿರ್ಮಿಸಲು ಸಹಾಯವಾಗಲಿದೆ ಎಂದರು. ಪ್ರಧಾನ ಮಂತ್ರಿಯವರ ಕನಸು ರೈತರ ಆರ್ಥಿಕ ಮಟ್ಟ ದ್ವಿಗುಣಗೊಳಿಸಬೇಕೆಂದರೆ ಕೃಷಿಯೇತರ ಚಟುವಟಿಕೆಗಳಾದ ಎರೆಹುಳು ಕೃಷಿ, ಸಾವಯವ ಕೃಷಿ, ಕುಕ್ಕುಟ ಉದ್ಯಮ ಹಾಗೂ ಹೈನುಗಾರಿಕೆ ಹೀಗೆ ಅನೇಕ ಚಟುವಟಿಕೆಗಳನ್ನು ಕೈಗೊಂಡಲ್ಲಿ ಮಾತ್ರ ಸಾದ್ಯವೆಂದರು ಮತ್ತು ಬಲಿಷ್ಠ ಭಾರತದ ನಿರ್ಮಿಸುವಲ್ಲಿ ಕೃಷಿ ಸಖಿಯರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು. ಅದೇ ರೀತಿ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ ಬಹಳಷ್ಟು ರೈತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರೈತರ ಏಳಿಗೆಗಾಗಿ ಶ್ರಮಿಸುತ್ತಿದೆ ಎಂದು ಶ್ಲಾಘಿಸಿ ಜೊತೆಗೆ ಇನ್ನೂ ಹೆಚ್ಚಿನ ಪ್ರಾಯೋಗಿಕ ತರಬೇತಿಗಳನ್ನು ನಡೆಸಲು ಸಿಬ್ಬಂದಿ ವರ್ಗದವರಿಗೆ ಸಲಹೆ ನೀಡಿದರು. ಕೃಷಿಯಲ್ಲಿ ಭಾರತ ವಿಶ್ವಗುರು ಆಗಲು ಭದ್ರ ಭಾರತ ನಿರ್ಮಾಣವಾಗಲು ಮಹಿಳೆಯರ ಪಾತ್ರ ಬಲು ಮುಖ್ಯ ಎಂದರು.

ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಡಾ. ರಾಗ ಪ್ರಿಯಾ ಆರ್, ಭಾ.ಆ.ಸೇ, ಅಭಿಯಾನ ನಿರ್ದೇಶಕರು, ಸಂಜೀವಿನಿ-ಕೆಎಸ್‍ಆರ್‍ಎಲ್‍ಪಿಎಸ್, ಬೆಂಗಳೂರು ಇವರು ಉದ್ಘಾಟನಾ ಪರ ಭಾಷಣದಲ್ಲಿ ಸಂಜೀವಿನಿ ಸಂಸ್ಥೆಯ ಕೃಷಿ ಸಖಿಯರ ಮೂಲಕ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಮೀನುಗಾರಿಕಾ ಇಲಾಖಾ ಕಾರ್ಯಕ್ರಮಗಳನ್ನುಗ್ರಾಮ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಒದಗಿಸುವ ಘನ ಉದ್ದೇಶದಿಂದ ಕೃಷಿ ಜೀವನೋಪಾಯ ಚಟುವಟಿಕೆಗಳಿಗೆ ಸಂಬಂಧಿಸಿದ ವಿವಿಧ ಬಗೆಯ ಸೇವೆಗಳನ್ನು ವಿಸ್ತರಿಸಲು ಅನುವಾಗುವಂತೆ ಪ್ರಸ್ತುತ ಕೃಷಿ ಸಖಿ, ಪಶು ಸಖಿ, ಉದ್ಯೋಗ ಸಖಿಯರನ್ನು ಪ್ರತಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟಗಳಿಗೆ ಒಬ್ಬರಂತೆ ಆಯ್ಕೆ ಮಾಡಿ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.ಕೃಷಿ ಸಖಿಯರಿಗೆ ಸಾವಯವ ಕೃಷಿ, ನೈಸರ್ಗಿಕ ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ ಸಂಬಂಧಪಟ್ಟ ಹಾಗೂ ರೈತರ ಆದಾಯ ದ್ವಿಗುಣಗೊಳಿಸುವಂತಹ ತರಬೇತಿಗಳನ್ನು ಕೃಷಿ ಸಖಿಯರ ಮೂಲಕ ರೈತರಿಗೆ ತಲುಪಿಸಬೇಕಾಗಿದೆ. ಕರ್ನಾಕಟದ ಒಟ್ಟು 6,000 ಗ್ರಾಮ ಪಂಚಾಯತಿಗಳಲ್ಲಿ ಪ್ರತಿ ಗ್ರಾಮ ಪಂಚಾಯತಿ ಅಡಿ ಒಬ್ಬ ಕೃಷಿ ಸಖಿಯರಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದರು. ದೇಶದಲ್ಲಿಯೇ ಕರ್ನಾಕಟ ರಾಜ್ಯವು ಪೌಷ್ಠಿಕ ಕೈತೋಟ ನಿರ್ಮಾಣ ಮಾಡುವಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಹೆಮ್ಮೆಯಿಂದ ಹೇಳಿದರು.

ಅನುಪಮಾ ಕೆ, ಮುಖ್ಯ ಕಾರ್ಯಚರಣಾಧಿಕಾರಿ, ಸಂಜೀವಿನಿ-ಕೆಎಸ್‍ಆರ್‍ಎಲ್‍ಪಿಎಸ್, ಬೆಂಗಳೂರು ಉಪಸ್ಥಿತರಿದ್ದರು. ರವಿ ಎನ್. ಬಂಗಾರೆಪ್ಪನವರ ಯೋಜನಾ ನಿರ್ದೆಶಕರು, ಜಿಲ್ಲಾ ಪಂಚಾಯತ್, ಬೆಳಗಾವಿ ಇವರು ಪ್ರಾಸ್ತಾವಿಕ ನುಡಿಯನ್ನಾಡಿದರು. ಅದೇ ರೀತಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಂಟಿ ಕೃಷಿ ನಿರ್ದೇಶಕರಾದ ಎಸ್.‌ಎಸ್. ಪಾಟೀಲ ಇವರು ಕೃಷಿ ಸಖಿಯರ ಜವಾಬ್ದಾರಿ ಮತ್ತು ಕೃಷಿ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಕೊನೆಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ಶ್ರೀದೇವಿ ಬಿ. ಅಂಗಡಿ ಯವರು ವಂದಿಸಿದರು.

ಹಲವು ಕ್ಷೇತ್ರಗಳಲ್ಲಿ ಅಚ್ಚರಿ ಕಾದಿದೆ ಎಂದ ಕೆಪಿಸಿಸಿ ಅಧ್ಯಕ್ಷ; ಕಾಂಗ್ರೆಸ್ ಚುನಾವಣಾ ಸ್ಟ್ರ್ಯಾಟಜಿ ಬಗ್ಗೆ ಸುಳಿವು ನೀಡಿದ್ರಾ ಡಿ.ಕೆ.ಶಿವಕುಮಾರ್ ?

https://pragati.taskdun.com/d-k-shivakumarpressmeetbangalore/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button