Karnataka News

*ಕಾರವಾರ ಬಾಲಕನಿಗೆ ವಿಚಿತ್ರ ಕಾಯಿಲೆ*

ಪ್ರಗತಿ ವಾಹಿನಿ ಸುದ್ದಿ, ಕಾರವಾರ:

ನಗರದ ನಂದನಗದ್ದಾದ ಸುಮಾರು 4 ವರ್ಷದ ಬಾಲಕನೊಬ್ಬ ವಿಚಿತ್ರ ಕಾಯಿಲೆಗೆ ತುತ್ತಾಗಿದ್ದು ಬಡ ಕುಟುಂಬ ಕಂಗಾಲಾಗಿದೆ.

ಪ್ರೇಮಾನಂದ ಕಾಂಬ್ಳೆ ಹಾಗೂ ಪ್ರಜ್ಞಾ ಕಾಂಬ್ಳೆ ದಂಪತಿ ಕಾರವಾರದ ನಂದನಗದ್ದಾದ ನಾಗನಾಥ ದೇವಸ್ಥಾನದ ಹತ್ತಿರದ ಪುಟ್ಟ ಗುಡಿಸಿಲಿನಂಥ ಮನೆಯೊಂದರಲ್ಲಿ ವಾಸಿಸುತ್ತಿದ್ದು, ಅವರ 4 ವರ್ಷದ ಮಗ ಮುದ್ದು ಮುದ್ದಾಗಿ ಆಡಿಕೊಂಡು ಬೆಳೆಯುತ್ತಿತ್ತು.

 

ಆದರೆ ಏಳು ತಿಂಗಳ ಹಿಂದೆ ಕಿವಿಯ ಹಿಂಬದಿಯಲ್ಲಿ ಆದ ಒಂದು ಚಿಕ್ಕ ಗುಳ್ಳೆ ಬರಬರುತ್ತಾ ದೊಡ್ಡದಾಗಿ ಇದೀಗ ಇಡೀ ಮುಖವನ್ನೇ ಆವರಿಸಿಕೊಂಡಿದ್ದು, ಕುಟುಂಬವನ್ನು ದುಃಖದಲ್ಲಿ ಮುಳುಗಿಸಿದೆ.

ಗುಳ್ಳೆ ಕೊಂಚ ದೊಡ್ಡದಾಗುತ್ತಿದ್ದಂತೆ ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ಮಗುವನ್ನ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಗಿತ್ತು. ಆದರೂ ಕಡಿಮೆಯಾಗದಾಗ ಕುಟುಂಬ ವಿವಿಧೆಡೆ ನಾಟಿ ಔಷಧ ಮಾಡಿದ್ದು ಫಲಕಾರಿಯಾಗದೆ ಗುಳ್ಳೆ ಉಲ್ಬಣಗೊಳ್ಳಲಾರಂಭಿಸಿದೆ.

 

ಆರ್ಥಿಕವಾಗಿ ದುರ್ಬಲರಿರುವ ಕುಟುಂಬ, ಹೇಗೋ ಒಂದಷ್ಟು ಹಣವನ್ನ ಹೊಂದಿಸಿಕೊಂಡು ಮಂಗಳೂರಿನ ಫಾದರ್ ಮುಲ್ಲರ್‍ಗೆ ಆಸ್ಪತ್ರೆಗೆ ದಾಖಲಿಸಿ ಮಗುವಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಆದರೂ ಗುಣಮುಖವಾಗದೆ ನಂತರದ ದಿನಗಳಲ್ಲಿ ಗುಳ್ಳೆ ಮತ್ತಷ್ಟು ಬೆಳವಣಿಗೆಯಾಗಿದೆ.

 

ಹೀಗಿದ್ದರೂ ಮಾಹಿತಿ ಕೊರತೆಯ ಕಾರಣ ಹಾಗೂ ಆರ್ಥಿಕ ಸಮಸ್ಯೆಯಿಂದಾಗಿ ಕುಟುಂಬ ದೊಡ್ಡ ಆಸ್ಪತ್ರೆಗಳೆಲ್ಲಿಗೂ ಹೋಗದೆ ಮನೆಯಲ್ಲೇ ಮಗುವನ್ನ ಆರೈಕೆ ಮಾಡಿದ್ದಾರೆ. ಕೆಲ ದಿನಗಳಲ್ಲೇ ಗುಳ್ಳೆ ಮತ್ತಷ್ಟು ದೊಡ್ಡದಾಗಿ ಇಡೀ ಮುಖವನ್ನೇ ಆವರಿಸಿಕೊಂಡಿದ್ದು, ಸದ್ಯ ಮುಖವೇ ಕಾಣದಂತಾಗಿದೆ.

ಶುಕ್ರವಾರ ಈ ಬಗ್ಗೆ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಅವರಿಗೆ ಸ್ಥಳೀಯರಾದ ಯುವರಾಜ ಎನ್ನುವವರು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ತಕ್ಷಣವೇ ಮಾಧವ ನಾಯಕ ಅವರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಅವರ ಮನೆಗೆ ತೆರಳಿ ತಮ್ಮ ಕಾರಿನಲ್ಲಿ ಮಗುವನ್ನು ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದಾರೆ.

 

ಕ್ರಿಮ್ಸ್ ನಿರ್ದೇಶಕ ಡಾ.ಗಜಾನನ ನಾಯಕ, ಆರ್‍ಎಂಒ ಡಾ.ವೆಂಕಟೇಶ ಸೇರಿದಂತೆ ಅನೇಕ ವೈದ್ಯರುಗಳು ತುರ್ತು ಚಿಕಿತ್ಸಾ ಘಟಕಕ್ಕೆ ಭೇಟಿ ನೀಡಿ ಮಗುವಿನ ಸ್ಥಿತಿ ಕಂಡು ಮರುಗಿದರು. ಡಾ.ಗಜಾನನ ನಾಯಕ ಅವರು ಹುಬ್ಬಳ್ಳಿಯ ಕಿಮ್ಸ್ ವೈದ್ಯರೊಂದಿಗೆ ಮಾತನಾಡಿ ಪರಿಸ್ಥಿತಿ ತಿಳಿಸಿದ್ದು, ಉಚಿತವಾಗಿ ಜಿಲ್ಲಾ ಆಸ್ಪತ್ರೆಯಿಂದ ಅಂಬ್ಯುಲೆನ್ಸ್ ಮಾಡಿಕೊಟ್ಟು ಹುಬ್ಬಳ್ಳಿಗೆ ಕಳುಹಿಸಿಕೊಡಲಾಗಿದೆ. ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕದಲ್ಲಿ ತುರ್ತಾಗಿ ರೆಫರಲ್ ಕೂಡ ಮಾಡಿಕೊಡಲಾಗಿದೆ. ಬಾಲಕನಿಗೆ ಚಿಕಿತ್ಸೆ ಯಶಸ್ವಿಯಾಗಿ ಶೀಘ್ರ ಗುಣಮುಖವಾಗಲಿ ಎಂದು ಜನ ಹಾರೈಸಿದ್ದಾರೆ.

 

ಸಿಎಂ ಬೊಮ್ಮಾಯಿ ಭಾಷಣ ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟ; ಕಿಡಿಗೇಡಿಗಳ ವಿರುದ್ಧ ದೂರು ದಾಖಲು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button