ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮೈಸೂರು ನಗರದಲ್ಲಿ 131 ಪಾರಂಪರಿಕ ಕಟ್ಟಡಗಳನ್ನು ಗುರುತಿಸಲಾಗಿದ್ದು, ಈ ಪಾರಂಪರಿಕ ಕಟ್ಟಡಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸಿ ವರದಿ ನೀಡಲು ಪುರತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ತಜ್ಞರ ಸಮಿತಿ ನೇಮಿಸಲಾಗಿದೆ. ಸಮಿತಿ ಭೌತಿಕ ಪರಿಶೀಲನೆ ವರದಿ ಬಂದ ನಂತರ ದುರಸ್ತಿ ಮತ್ತು ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಹಾಗೂ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ಹೇಳಿದರು.
ಮಂಗಳವಾರ ವಿಧಾನ ಪರಿಷತ್ ಕಲಾಪದಲ್ಲಿ ಸದಸ್ಯ ಸಿ.ಎನ್.ಮಂಜೇಗೌಡ ರವರು 330ನೇ ನಿಯಮದಡಿ ಪ್ರಸ್ತಾಪಿಸಿದ ಸಾರ್ವಜನಿಕ ಮಹತ್ವದ ವಿಷಯಕ್ಕೆ ಸಚಿವರು ಉತ್ತರಿಸಿದರು.
1961ರ ಕರ್ನಾಟಕ ನಗರ ಮತ್ತು ಗ್ರಾಮೀಣ ಪ್ರದೇಶ ಯೋಜನಾ ಕಾಯ್ದೆ ಹಾಗೂ ವಲಯವಾರು ನಿಮಯಗಳ ತಿದ್ದುಪಡಿ ಅನುಸಾರ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪರಂಪರೆ ಸಂರಕ್ಷಣಾ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಅಧಿಕಾರಿಗಳು, ತಜ್ಞರು, ವಾಸ್ತುಶಿಲ್ಪಿಗಳು ಮತ್ತು ಸ್ವಯಂಸೇವಾ ಪ್ರತಿನಿಧಿಗಳು ಸೇರಿ ಒಟ್ಟು 27 ಸದಸ್ಯರಿರುತ್ತಾರೆ. ಆ ಜಿಲ್ಲೆಯ ಸ್ಥಳೀಯ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಸಮಿತಿಯ ಸದಸ್ಯರಾಗಿರುತ್ತಾರೆ. ಪಾರಂಪರಿಕ ಕಟ್ಟಡ ಹಾಗೂ ಸ್ಥಳಗಳ ರಕ್ಷಣೆಗಾಗಿ ವಲಯವಾರು ಒಟ್ಟು 15 ನಿಯಮಗಳನ್ನು ರೂಪಿಸಲಾಗಿರುತ್ತದೆ. ಸದರಿ ನಿಯಮಾವಳಿಗಳಲ್ಲಿ ಜಿಲ್ಲಾ ಸಮಿತಿಗೆ ಐತಿಹಾಸಿಕ, ಪುರಾತತ್ತ್ವ, ಕಲಾತ್ಮಕ ರಚನೆಯುಳ್ಳಂತ ಯಾವುದೇ ರಚನೆ, ನಿರ್ಮಿತಿ ಹೊಂದಿರುವ ಸ್ಥಳಗಳು ಅಥವಾ ಕಟ್ಟಡಗಳನ್ನು ಪಾರಂಪರಿಕ ಪ್ರದೇಶ ಅಥವಾ ಕಟ್ಟಡಗಳಂದು ಪಟ್ಟಿ ಮಾಡಲು, ಸಂರಕ್ಷಿಸಲು ಅಭಿವೃದ್ಧಿಗೊಳಿಸಲು ಸೂಕ್ತ ನಿಯಮ ರೂಪಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಪಾರಂಪರಿಕ ಕಟ್ಟಡಗಳ ರಕ್ಷಣೆಗಾಗಿ ಪ್ರತ್ಯೇಕ ಕಾಯ್ದೆಯ ಅವಶ್ಯಕತೆ ಇರುವುದಿಲ್ಲ. ಮೈಸೂರು ನಗರದಲ್ಲಿ ಘೋಷಿಸಿರುವ 131 ಪಾರಂಪರಿಕ ಕಟ್ಟಲೆಗಳ ಸ್ಥಿತಿಗತಿಗಳ ಬಗ್ಗೆ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ತಜ್ಞರ ಸಮಿತಿಯಿಂದ ಭೌತಿಕ ಪರಿಶೀಲನೆ ನಡೆಸಲಾಗುತ್ತಿದ್ದು, ಸದರಿ ವರದಿ ಬಂದ ನಂತರ ದುರಸ್ತಿ ಮತ್ತು ಸಂರಕ್ಷಣಾ ಕಾಮಗಾರಿಗಳಿಗೆ ಸೂಕ್ತ ಅನುದಾನ ಒದಗಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ವಿಧಾನ ಪರಿಷತ್ ಶಾಸಕ ಸಿ.ಎನ್.ಮಂಜೇಗೌಡ ಮೈಸೂರು ನಗರದಲ್ಲಿ ಯದುವಂಶದ ಒಡೆಯರ್ ರಾಜಮನೆತನದ ಆಳ್ವಿಕೆಯ ನಿರ್ಮಿಸಿದ ನೂರಾರು ಐತಿಹಾಸಿಕ ಪಾರಂಪರಿಕ ಸ್ಮಾರಕಗಳಿವೆ. ಮೈಸೂರಿನಲ್ಲಿ ಒಟ್ಟಾರೆ 234 ಪಾರಂಪರಿಕ ಕಟ್ಟಡಗಳಿವೆ. ಈ ಪೈಕಿ 131 ಕಟ್ಟಡಗಳನ್ನು ಸರ್ಕಾರ ಮಾನ್ಯ ಮಾಡಿದೆ. ಇದರಲ್ಲಿ 25 ಕಟ್ಟಡಗಳಿಗೆ ತುರ್ತಾಗಿ ದುರಸ್ತಿಯ ಅವಶ್ಯಕತೆ ಇದೆ ಎಂದು ಪಾರಂಪರಿಕ ತಜ್ಞರು ವರದಿ ನೀಡಿದ್ದಾರೆ. ಈ ಪಾರಂಪರಿಕ ಕಟ್ಟಡಗಳನ್ನು ಯಾರು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ಸರಿಯಾದ ನೀತಿ – ನಿಯಮಾವಳಿಗಳೇ ಇಲ್ಲ. ಇವೆಲ್ಲದಕ್ಕಿಂತ ಪ್ರಮುಖವಾಗಿ ಮುಂಬಯಿ, ಅಹಮದಾಬಾದ್, ಹೈದರಾಬಾದ್‌ನಂಥ ನಗರಗಳಲ್ಲಿರುವ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸುವ ಸಲುವಾಗಿಯೇ ಅಲ್ಲಿನ ಸರ್ಕಾರಗಳು ಒಂದು ಕಾಯಿದೆಯನ್ನೇ ರೂಪಿಸಿವೆ. ಕರ್ನಾಟಕಕ್ಕೂ ಇಂಥದ್ದೊಂದು ಕಾಯ್ದೆ, ನೀತಿ-ನಿಯಮ ಅಗತ್ಯವಿದೆ. ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಿ ನಿಯಮ ಜಾರಿಗೆ ತರಬೇಕು ಎಂದರು.
ಪಾರಂಪರಿಕ ಕಟ್ಟಡಗಳು ಸರಿಯಾದ ನಿರ್ವಹಣೆಗೆ ಸರ್ಕಾರ ಬಜೆಟ್‌ನಲ್ಲಿ ವಾರ್ಷಿಕವಾಗಿ ರೂ. 1000 ಕೋಟಿಗಳನ್ನು ಕಾಯ್ದಿರಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು. ಇದಕ್ಕೆ ವಿಧಾನ ಪರಿಷತ್ ಶಾಸಕ ಮರಿತಿಬ್ಬೇಗೌಡ ಸಹಮತಿ ಸೂಚಿಸಿದರು.
*ವ್ಯತ್ಯಾಸ ಕಂಡುಬಂದಲ್ಲಿ ಕಾರ್ಖಾನೆಗಳ ಮೇಲೆ ಕ್ರಮ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ*
https://pragati.taskdun.com/vidhana-parishathshankara-patil-munenakoppasuger-factory/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ