LatestUncategorized

*ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆಗೆ ಅಲ್ಪಾವಧಿ ಕೋರ್ಸುಗಳ ಪ್ರಾರಂಭಕ್ಕೆ ಚಿಂತನೆ *

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ : ಮುಂದಿನ ಶೈಕ್ಷಣಿಕ ವರ್ಷದಿಂದ ಯೋಗದೊಂದಿಗೆ ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆಗೆ ಅಲ್ಪಾವಧಿ ಕೋರ್ಸುಗಳ ಪ್ರಾರಂಭಕ್ಕೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಓಬವ್ವ ಆತ್ಮರಕ್ಷಣಾ ಕಲೆ ಕರಾಟೆ ಪ್ರದರ್ಶನ ವೀಕ್ಷಿಸಿ ಮಾತನಾಡಿದರು.

ಎಲ್ಲಾ ಶಿಕ್ಷಣ ಸಂಸ್ಥೆಗಳು ಅಲ್ಪಾವಧಿ ಕೋರ್ಸುಗಳನ್ನು ಕಲಿಸುವ ಅವಶ್ಯಕತೆ ಇದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಯೋಗದೊಂದಿಗೆ ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆಗೆ ಅಲ್ಪಾವಧಿ ಕೋರ್ಸುಗಳನ್ನು ಕೂಡ ಪಿಯುಸಿ ಹಂತದಿಂತ ತರಬೇತಿ ನೀಡುವುದು ಸೂಕ್ತ. ಅದರ ಬಗ್ಗೆ ಒಂದು ನಿರ್ಧಾರಕ್ಕೆ ಬರಲಾಗುವುದು ಎಂದರು.

ಆತ್ಮರಕ್ಷಣೆ ಪ್ರತಿ ನಾಗರಿಕನಿಗೆ ಅಗತ್ಯ.ನಾನು ಗೃಹ ಸಚಿವನಿದ್ದ ಸಂದರ್ಭದಲ್ಲಿ ಕೆಲವು ನಿರ್ಧಾರ ಗಳನ್ನು ತೆಗೆದುಕೊಂಡಿದ್ದು, ಆತ್ಮರಕ್ಷಣೆಗಾಗಿ ಕರಾಟೆ ತರಬೇತಿ ಯನ್ನು ಹೆಣ್ಣುಮಕ್ಕಳಿಗೆ ನೀಡಬೇಕೆಂದು ತೀರ್ಮಾನಿಸಲಾಗಿತ್ತು. ವಸತಿ ಶಿಕ್ಷಣ ಸಂಸ್ಥೆ ಇದನ್ನು ಅಳವಡಿಸಿಕೊಂಡು ದೊಡ್ಡ ಪ್ರಮಾಣದಲ್ಲಿ ಕಳೆದ ಒಂದು ವರ್ಷದಲ್ಲಿ ತರಬೇತಿ ನೀಡಿರುವುದು ಶ್ಲಾಘನೀಯ ಎಂದರು.

ಸುರಕ್ಷಿತ ಸಮಾಜ ನಿರ್ಮಾಣಕ್ಕೆ ಆತ್ಮರಕ್ಷಣಾ ಕಲೆ ಅಗತ್ಯ
ಆತ್ಮರಕ್ಷಣಾ ಕಲೆ ಕಲಿತವರು ಇತರ ಹೆಣ್ಣುಮಕ್ಕಳಿಗೆ ಈ ತರಬೇತಿ ನೀಡಬೇಕು. ಗ್ರಾಮೀಣ ಮಹಿಳೆಯರು, ದುಡಿಯುವ ಮಹಿಳೆಯರು, ಶಾಲಾ ಕಾಲೇಜುಗಳ ವಿದ್ಯಾರ್ಥಿನಿಯರು, ಸಹೋದರಿ ಯರಿಗೆ ಈ ವಿದ್ಯೆ ಕಲಿಸಿದರೆ, ದೊಡ್ಡ ಪ್ರಮಾಣದಲ್ಲಿ ಇದನ್ನು ವಿಸ್ತರಿಸಬಹುದು. ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆ ಕಲೆ ತಿಳಿದಿದ್ದರೆ, ಹೆಣ್ಣು ಮಕ್ಕಳಿಗೆ ಹಾಗೂ ಸಮಾಜಕ್ಕೂ ಸುರಕ್ಷತೆ ನೀಡುತ್ತದೆ. ಸುರಕ್ಷಿತ ಸಮಾಜ ನಿರ್ಮಾಣವಾಗಲು.ಇದು ಅಗತ್ಯ. ಸರ್ಕಾರ ಈ ಕಾರ್ಯಕ್ರಮ ವಿಸ್ತರಿಸಿ ಹೆಣ್ಣುಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿದೆ. ನಿರ್ಭಯ ಯೋಜನೆಯನ್ನು 700 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಇದನ್ನು ಎಲ್ಲಾ ನಗರಗಳಲ್ಲಿ ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ.ಈ ನಿಟ್ಟಿನಲ್ಲಿ ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದರು.

 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಹೆಣ್ಣು ಮಕ್ಕಳು ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಾ ಬರುತ್ತಿದ್ದಾರೆ, ಭವ್ಯ ಭಾರತದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಈ ಕರಾಟೆ ಕಲೆಯ ಮಕ್ಕಳನ್ನು ನೋಡುತ್ತಿದ್ದರೆ, ಕಿತ್ತೂರು ಚನ್ನಮ್ಮ, ಬೆಳವಡಿ ಮಲ್ಲಮ್ಮ, ಕೆಳದಿಯ ಚನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿವರಂತೆ ದೇಶಕ್ಕೆ ಒಳ್ಳೆಯ ಸಂದೇಶಗಳ ಮೂಲಕ ಕೊಡುಗೆಗಳನ್ನು ನೀಡುವುದರಲ್ಲಿ ಯಾವ ಸಂಶಯವಿಲ್ಲ ಎಂದರು.
 ಅವರ ಕರಾಟೆ ಕಲೆಯ ಕುರಿತು ಮಕ್ಕಳೊಂದಿಗೆ ಚರ್ಚಿಸಿದ ಲಕ್ಷ್ಮೀ ಹೆಬ್ಬಾಳಕರ್ ಮಕ್ಕಳನ್ನು ಪ್ರೋತ್ಸಾಹಿಸಿದರು.
 ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಚಿವ ಮಾಧುಸ್ವಾಮಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

*ವಿಧಾನ ಪರಿಷತ್ ಉಪಸಭಾಪತಿಯಾಗಿ ಎಂ.ಕೆ.ಪ್ರಾಣೇಶ್ ಆಯ್ಕೆ*

https://pragati.taskdun.com/vidhanaparuishathdeputy-speakerm-k-pranesh-select/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button