Latest

*ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ಚರಿತ್ರೆ ಹಾಗೂ ಚಾರಿತ್ರ್ಯದ ಬೆಳೆವಣಿಗೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಸಣ್ಣವಯಸ್ಸಿನಲ್ಲಿ ಚರಿತ್ರೆ ಮತ್ತು ಶಿಸ್ತು ರೂಪಿಸುವ ಸುಸಮಯವಾಗಿದ್ದು, ಚರಿತ್ರೆಯ ಜೊತೆಗೆ ಚಾರಿತ್ರ್ಯ ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಬೆಳೆಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಕೀರ್ಣದಲ್ಲಿ ಭಾರತ್ ಸೌಟ್ಸ್ ಮತ್ತು ಗೈಡ್ಸ್ ವತಿಯಿಂದ ಆಯೋಜಿಸಲಾಗಿರುವ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಚಿಕ್ಕವಯಸ್ಸಿನಲ್ಲಿ ಮಕ್ಕಳಲ್ಲಿ ಮೌಲ್ಯ, ಆದರ್ಶಗಳನ್ನು ತುಂಬಿ, ಹಿರಿಯರಿಗೆ ಗೌರವಾದರಗಳನ್ನು ತೋರುವ, ಕಿರಿಯರಿಗೆ ಪ್ರೀತಿಯನ್ನು ತೋರುವ ಗುಣಧರ್ಮವನ್ನು ಇಲ್ಲಿ ತಿಳಿಹೇಳಲಾಗುತ್ತದೆ. ದೇಶದಲ್ಲಿ ಚರಿತ್ರೆ ಇದೆ. ಆದರೆ ಚಾರಿತ್ರ್ಯ ಬೇಕಾಗಿದೆ ಎಂದರು.

ರಾಷ್ಟ್ರನಿರ್ಮಾಣದ ಸಂಕಲ್ಪ :
ಸಾಂಸ್ಕೃತಿಕವಾದ ಹಾಗೂ ಕಣ್ಣಿಗೆ ಹಬ್ಬವನ್ನುಂಟು ಮಾಡುವ ಕಾರ್ಯಕ್ರಮ ಜಂಬೂರಿ. ರಾಷ್ಟ್ರ ಶಕ್ತಿಯುತವಾಗಿ, ಸುಸಂಸ್ಕೃತವಾಗಿ, ಜಾಗತಿಕವಾಗಿ ಗಟ್ಟಿಗೊಂಡಿದೆ ಎಂಬುದು ಇಂದಿನ ಕಾರ್ಯಕ್ರಮದಲ್ಲಿ ತಿಳಿಯುತ್ತದೆ. ಪ್ರಧಾನಿ ಮೋದಿಯವರ ರಾಷ್ಟ್ರನಿರ್ಮಾಣದ ಕರೆಯನ್ನು ಸಾಕಾರಗೊಳಿಸುವ ಸಂಕಲ್ಪವನ್ನು ಇಲ್ಲಿ ಮಾಡಲಾಗಿದೆ. ಭಾರತ ದೇಶ ಶ್ರೇಷ್ಟ ಪರಂಪರೆ, ಇತಿಹಾಸ ಹಾಗೂ ಸಂಸ್ಕೃತಿಯಿಂದ ಕೂಡಿದೆ. ಭಾರತೀಯತೆ ಎಂದರೆ ಮಾನವೀಯತೆ, ಇಂತಹ ಸಂಸ್ಕೃತಿಯನ್ನು ಉಳಿಸಿಕೊಳ್ಳುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ನ 100 ವರ್ಷದ ಸಾಧನೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಚರಿತ್ರೆಯನ್ನು ನಿರ್ಮಿಸುವ ಸಂಸ್ಥೆ. ದೇಶದಲ್ಲಿ ಆಚಾರರಿದ್ದಾರೆ. ಬೇಕಾಗಿರುವುದು ಆಚರಣೆ. ಸ್ವಾಮಿ ವಿವೇಕಾನಂದರು, ಶಂಕರಾಚಾರ್ಯರು, ದಾಸವರೇಣ್ಯರು ಇರುವ ದೇಶದಲ್ಲಿ ದೊಡ್ಡ ತತ್ವಭಂಡಾರವಿದೆ ಎಂದರು.

ಸಚ್ಚಾರಿತ್ರ್ಯ ಹಾಗೂ ಮೌಲ್ಯಗಳನ್ನು ಅಳವಡಿಸುವ ಆಳ್ವಾಸ್ ಸಂಸ್ಥೆ :

ಪಾಶ್ಚಿಮಾತ್ಯದ ದಾಳಿಯಿಂದ ಸಾಂಸ್ಕೃತಿಕ ಗೊಂದಲ ಯುವಪೀಳಿಗೆಗೆ ಉಂಟಾಗಿದೆ. ನಮ್ಮಲ್ಲೇನಿದೆ ಎಂಬುದು ನಾಗರಿಕತೆ , ನಾವೇನಾಗಿದ್ದೇವೆ ಎಂಬುದು ಸಂಸ್ಕೃತಿ. ಪರೋಪಕಾರಿ ಧರ್ಮ, ದಯೆ, ಸತ್ಯಮಾರ್ಗಗಳನ್ನು ಮುಂದುವರೆಯುತ್ತಿದ್ದೇವೆ ಎಂಬುದು ತಿಳಿದುಕೊಳ್ಳಬೇಕು. ಸದ್ಚಾರಿತ್ರ್ಯ ಹಾಗೂ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ನಮ್ಮ ಸಂಸ್ಕೃತಿಗೆ ಆಳವಾದ ಬೇರುಗಳನ್ನು ಸ್ಥಾಪಿಸುವ ಕೆಲಸವನ್ನು ಆಳ್ವಾಸ ಸಂಸ್ಥೆ ಮಾಡುತ್ತಿದೆ. ಈ ದೇಶದಲ್ಲಿ ವಿವಿಧ ಜಾತಿ ಭಾಷೆಗಳಿದ್ದರೂ , ನಮ್ಮನ್ನೆಲ್ಲ ಒಂದುಗೂಡಿಸಿರುವುದು ಭಕ್ತಿಯ ಚಳವಳಿ. ಭಕ್ತಿಯ ಚಳವಳಿ ಭಾರತದಲ್ಲಿ ಮಾತ್ರ ಕಾಣಬಹುದಾಗಿದೆ. ರಾಮಾಯಣ, ಶಂಕರಾಚಾರ್ಯ ರಿಂದ ಬಸವ, ಗಾಂಧೀಜೀ,ಅಂಬೇಡ್ಕರ್ ರ ವರೆಗೆ ಅನೇಕ ಭಕ್ತಿ ಚಳವಳಿಗಳು ನಡೆದಿವೆ ಎಂದರು.

ಧರ್ಮದ ಹೆಸರಿನಲ್ಲಿ ಹಿಂಸೆ ಖೇದಕರ :
ವಿಶ್ವದಲ್ಲಿ ಧರ್ಮದ ಹೆಸರಿನಲ್ಲಿ ಹಿಂಸೆಗಳು ನಡೆಯುತ್ತಿರುವುದು ಖೇದಕರ ಸಂಗತಿ. ಶಾಂತಿ ಪರಿಪಾಲನೆ, ಇನ್ನೊಬ್ಬರನ್ನು ಗೌರವದಿಂದ ಕಾಣುವುದನ್ನು ತಿಳಿಸುವುದೇ ಧರ್ಮ. ಆದರೆ ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ನಡೆಯುತ್ತಿದ್ದು , ಇದು ಅಂತ್ಯದ ಆರಂಭ ಎಂಬುದು ನನ್ನ ಅನಿಸಿಕೆ. ಇದನ್ನು ತಡೆಗಟ್ಟುವ ಶಕ್ತಿ ಭಾರತಕ್ಕೆ ಮಾತ್ರ ಇದೆ. ಮನ:ಪರಿವರ್ತನೆಯಿಂದ ಮಾತ್ರ ಇದು ಸಾಧ್ಯ. ಮನ:ಪರಿವರ್ತನೆ ಸಾಂಸ್ಕೃತಿಕ ಚಳುವಳಿಗೆ ಕಾರಣವಾಗಿದ್ದು, ಇದನ್ನು ಆಳ್ವಾಸ್ ಸಂಸ್ಥೆ ಸಾಧ್ಯವಾಗಿಸುತ್ತಿದೆ. 21ನೇಯ ಶತಮಾನ, ಜ್ಞಾನದ ಶತಮಾನ. ಆಳ್ವಾಸ್ ಸಂಸ್ಥೆ ಸರಸ್ವತಿಯ ಮಂದಿರ. ಪರಮಹಂಸ ಸರಸ್ವತಿ ದೇವರ ವಾಹನ. ಈ ಪಕ್ಷಿ ಎತ್ತರಕ್ಕೆ ಹಾರುವ ಎತ್ತರಕ್ಕೆ ಇಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಕೀರ್ತಿ ಗಳಿಸಬೇಕು ಎಂದರು.

ಸಮಾರಂಭದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ,ಇಂಧನ ಸಚಿವ ಸುನಿಲ್ ಕುಮಾರ್, ಶಾಸಕರಾದ ಸಿ.ಟಿ.ರವಿ, ಶ್ರೀಪತಿ ಭಟ್, ಅಖಿಲ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಜೆನರಲ್ ಸೆಕ್ರೆಟರಿ ಅನಿಲ್ ಜೈನ್ , ಕರ್ನಾಟಕ ಸ್ಕೌಟ್ಸ್ ಮತ್ತು ಗೈಡ್ಸ್ ನ ಮುಖ್ಯಸ್ಥ ಪಿ.ಜಿ.ಆರ್. ಸಿಂಧ್ಯಾ, ಆಳ್ವಾಸ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಮೋಹನ್ ಆಳ್ವಾ, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

*ರಾಜ್ಯದಲ್ಲಿ 8 ಲಕ್ಷ ಕೋಟಿ ಗೂ ಹೆಚ್ಚು ಹೂಡಿಕೆಯ ನಿರೀಕ್ಷೆ: ಇದರ ಲಾಭ ಪಡೆಯಲು ಯುವಕರಿಗೆ ಮುಖ್ಯಮಂತ್ರಿ ಕರೆ*

https://pragati.taskdun.com/sushasana-divas-employment-letter-for-10-thousand-youthcm-basavaraj-bommai/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button