ಬೆಳಗಾವಿಯ ಪ್ರಸ್ತುತ ಅಧಿವೇಶನದಲ್ಲೇ ಶಿರಸಿ ಜಿಲ್ಲೆ ಘೋಷಣೆಯಾಗುತ್ತಾ? – ಏನಂದ್ರು ಕಾಗೇರಿ?

M.K.Hegde

ಎಂ.ಕೆ.ಹೆಗಡೆ, ಬೆಳಗಾವಿ :  ಉತ್ತರ ಕನ್ನಡ ಜಿಲ್ಲೆಯನ್ನು ವಿಭಾಗಿಸಿ ಶಿರಸಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸಬೇಕೆನ್ನುವ ಕೂಗು ನಿನ್ನೆ ಮೊನ್ನೆಯದಲ್ಲ. ಹಲವಾರು ದಶಕಗಳಿಂದ ಇರುವ ಈ ಕೂಗು ಈಗ ಗಂಭೀರತೆ ಪಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳನ್ನೆಲ್ಲ ಸೇರಿಸಿ ಶಿರಸಿ ಜಿಲ್ಲೆಯನ್ನಾಗಿಸಬೇಕೆನ್ನುವ ಕೂಗು, ಕಳೆದ ಕೆಲವು ತಿಂಗಳಿನಿಂದ ತೀವ್ರ ಪ್ರತಿಭಟನೆಯ ರೂಪ ಪಡೆದಿದೆ. ಇದಕ್ಕಾಗಿ ಹೋರಾಟ ಸಮೀತಿಯೂ ರಚನೆಗೊಂಡು ಹಲವು ಹಂತಗಳಲ್ಲಿ ಪ್ರತಿಭಟನೆ ನಡೆಸಿದೆ.

ಶಿರಸಿಯಿಂದ ಜಿಲ್ಲಾ ಕೇಂದ್ರ ಕಾರವಾರಕ್ಕೆ 110 ಕಿಮೀ ದೂರವಿದೆ. ಮಾರ್ಗವೂ ಘಟ್ಟಗಳಿಂದ ಕೂಡಿರುವುದರಿಂದ ಸಣ್ಣ ಕೆಲಸವಿದ್ದರೂ ಅಲ್ಲಿಗೆ ಹೋಗಿ ಬರಲು ಕನಿಷ್ಟ 2 ದಿನ ಬೇಕಾಗುತ್ತದೆ. ಭೌಗೋಳಿಕವಾಗಿ ಅತ್ಯಂತ ದೊಡ್ಡ ಜಿಲ್ಲೆಯಾಗಿರುವುದರಿಂದ ಆಡಳಿತಾತ್ಮಕ ದೃಷ್ಟಿಯಿಂದ ಶಿರಸಿ ಪ್ರತ್ಯೇಕವಾಗಲೇಬೇಕೆನ್ನುವುದು ಜನರ ಒತ್ತಾಸೆ. ಜೊತೆಗೆ ರಾಜಕೀಯವಾಗಿ ಉತ್ತರ ಕನ್ನಡದ ಕೇಂದ್ರಸ್ಥಾನ ಶಿರಸಿ. ಜಿಲ್ಲಾ ಕೇಂದ್ರ ಕಾರವಾರವಾಗಿದ್ದರೂ ರಾಜಕೀಯ ಕೇಂದ್ರ ಶಿರಸಿ. ಎಲ್ಲ ಪಕ್ಷಗಳ ಜಿಲ್ಲಾ ಕಚೇರಿ ಇರುವುದು ಶಿರಸಿಯಲ್ಲೇ.

ಕಾಗೇರಿ- ಹೆಬ್ಬಾರ್ ಮೇಲೆ ಹೆಚ್ಚಿನ ವಿಶ್ವಾಸ

ಶಿರಸಿಯನ್ನು ಪ್ರತಿನಿಧಿಸುವ ಶಾಸಕರೂ ಆಗಿರುವ ಹಾಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮೇಲೆ ಆ ಭಾಗದ ಜನರು ಹೆಚ್ಚಿನ ವಿಶ್ವಾಸವಿಟ್ಟು, ಅವರು ದೊಡ್ಡ ಹುದ್ದೆಯಲ್ಲಿರುವುದರಿಂದ ಅವರು ಮನಸ್ಸು ಮಾಡಿದರೆ ಶಿರಸಿ ಜಿಲ್ಲೆಯನ್ನಾಗಿಸುವುದು ದೊಡ್ಡ ಕೆಲಸವೇನಲ್ಲ ಎನ್ನುವ ಭಾವನೆ ಹೊಂದಿದ್ದಾರೆ. ಜೊತೆಗೆ ಯಲ್ಲಾಪುರದ ಶಿವರಾಮ ಹೆಬ್ಬಾರ ಸಚಿವಸಂಪುಟದಲ್ಲಿರುವುದರಿಂದ ಮತ್ತಷ್ಟು ಬಲವೂ ಬಂದಿದೆ.

ಕಾಗೇರಿ ಮತ್ತು ಹೆಬ್ಬಾರ್ ಸೇರಿ ಪ್ರಯತ್ನಿಸಿ ಈ ಬಾರಿ ಶಿರಸಿಯನ್ನು ಜಿಲ್ಲೆಯನ್ನಾಗಿಸಲಿದ್ದಾರೆ ಎನ್ನುವ ನಿರೀಕ್ಷೆೆಯನ್ನು ಜನರು ಇಟ್ಟುಕೊಂಡಿದ್ದಾರೆ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಳದ ಪ್ರಸ್ತುತ ಅಧಿವೇಶನದಲ್ಲೇ ಶಿರಸಿ ಜಿಲ್ಲೆ ಘೋಷಣೆಯಾಗಲಿದೆ ಎನ್ನುವ ಸುದ್ದಿ ದಟ್ಟವಾಗಿ ಹರಡಿದೆ. ಅಂತಹ ನಿರೀಕ್ಷೆಯನ್ನೂ ಜನರು ಇಟ್ಟುಕೊಂಡಿದ್ದಾರೆ.

ಈ ಕುರಿತು ಪ್ರಗತಿವಾಹಿನಿಯೊಂದಿಗೆ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿರಸಿ ಜಿಲ್ಲೆಯಾಗಬೇಕೆನ್ನುವ ಕುರಿತು ತೀವ್ರ ಚರ್ಚೆ ಇರುವುದು ನಿಜ. ಈ ಬಗ್ಗೆ ಎಲ್ಲರಿಂದ ಸರಕಾರದ ಮೇಲೆ ಒತ್ತಡವೂ ಇದೆ. ಮುಖ್ಯಮಂತ್ರಿಗಳನ್ನು ಭೇಟಿಯಾಗುವುದಕ್ಕಾಗಿ 3 -4 ದಿನದಲ್ಲಿ ಶಿರಸಿ ಜಿಲ್ಲಾ ಹೋರಾಟ ಸಮಿತಿಯ ನಿಯೋಗ ಬೆಳಗಾವಿಗೆ ಬರುವುದಾಗಿ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ಸರಕಾರ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ನೋಡೋಣ ಎಂದರು.

ಕಾಗೇರಿ ಪಟ್ಟು ಹಿಡಿಯಲಿ

ಶಿರಸಿ ಜಿಲ್ಲೆಯಾಗಬೇಕೆನ್ನುವ ಜೊತೆಗೆ ಸುಸಜ್ಜಿತ ಆಸ್ಪತ್ರೆ ಸೇರಿದಂತೆ ವಿವಿಧ ಸೌಲಭ್ಯಗಳೂ ಶಿರಸಿಗೆ ಬರಬೇಕಿದೆ. ಶೈಕ್ಷಣಿಕವಾಗಿ ಕೂಡ ಶಿರಸಿ ಸಾಕಷ್ಟು ಹಿಂದುಳಿದಿದೆ. ರಾಜ್ಯದ ಬೇರೆ ಜಿಲ್ಲೆಗಳು ಶರವೇಗದಲ್ಲಿ ಬೆಳೆಯುತ್ತಿದ್ದರೂ ಉತ್ತರ ಕನ್ನಡ ಜಿಲ್ಲೆ ಬೆಳವಣಿೆಗೆ ಕಾಣುತ್ತಲೇ ಇಲ್ಲ. ದೊಡ್ಡ ಮಟ್ಟದ ಆರೋಗ್ಯ ಕೇಂದ್ರಗಳು, ಶಿಕ್ಷಣ ಸಂಸ್ಥೆಗಳನ್ನು ತರುವ ದಿಸೆಯಲ್ಲಿ ಮತ್ತು ಶಿರಸಿ ಜಿಲ್ಲೆಯನ್ನಾಗಿಸುವಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಬಾರಿ ಸರಕಾರದ ಮೇಲೆ ತಮ್ಮೆಲ್ಲ ಬಲವನ್ನು ಉಪಯೋಗಿಸಿಕೊಂಡು ಒತ್ತಡ ಹೇರಬೇಕೆನ್ನುವುದು ಪ್ರಗತಿವಾಹಿನಿಯ ಹಕ್ಕೊತ್ತಾಯ ಕೂಡ. ಇದಕ್ಕೆ ಸಚಿವ ಶಿವರಾಮ ಹೆಬ್ಬಾರ್ ಸಹ ಅಷ್ಟೇ ಬೆಂಬಲ ನೀಡಬೇಕು.  ಇಬ್ಬರೂ ಸರಕಾರದಲ್ಲಿ ಸಾಕಷ್ಟು ಪ್ರಭಾವ ಹೊಂದಿರುವವರೇ.

ಏನು ಮಾಡುತ್ತಾರೆ ಕಾದು ನೋಡೋಣ.

 

ಶಿರಸಿ ಜಿಲ್ಲೆಯಾಗಬೇಕೆನ್ನುವ ಕುರಿತು ತೀವ್ರ ಚರ್ಚೆ ಇರುವುದು ನಿಜ. ಈ ಬಗ್ಗೆ ಎಲ್ಲರಿಂದ ಸರಕಾರದ ಮೇಲೆ ಒತ್ತಡವೂ ಇದೆ. ಮುಖ್ಯಮಂತ್ರಿಗಳನ್ನು ಭೇಟಿಯಾಗುವುದಕ್ಕಾಗಿ 3 -4 ದಿನದಲ್ಲಿ ಶಿರಸಿ ಜಿಲ್ಲಾ ಹೋರಾಟ ಸಮಿತಿಯ ನಿಯೋಗ ಬೆಳಗಾವಿಗೆ ಬರುವುದಾಗಿ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ಸರಕಾರ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ನೋಡೋಣ

-ವಿಶ್ವೇಶ್ವರ ಹೆಗಡೆ ಕಾಗೇರಿ

ಶಿರಸಿ ಜಿಲ್ಲೆ ರಚನೆ: ವಿಧಾನ ಸಭಾಧ್ಯಕ್ಷ ಕಾಗೇರಿ ಸುಳಿವು

https://pragati.taskdun.com/speaker-kageri-spoke-about-sirsi-district-formation/

*ಉತ್ತರ ಕನ್ನಡ ವಿಭಜನೆ ವಿಚಾರ; ಸಚಿವ ಶಿವರಾಮ್ ಹೆಬ್ಬಾರ್ ಸ್ಪಷ್ಟನೆ*

https://pragati.taskdun.com/uttara-kannadadividesirsiseparate-districtshivaram-hebbar/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button