ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: 2018ರ ತಮ್ಮ ನೇತೃತ್ವದ ಸಮ್ಮಿಶ್ರ ಸರಕಾರ ಉರುಳಿಸಲು ಯಾರನ್ನೆಲ್ಲ ಬಳಸಲಾಗಿದೆ ಹಾಗೂ ಮುಂಬೈಗೆ ಹೋದವರ ಐಷಾರಾಮಿಗೆ ವ್ಯವಸ್ಥೆ ಮಾಡಿದ್ದು ಯಾರು ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೈಸೂರು ಪೊಲೀಸರು ಎಫ್ ಐ ಆರ್ ದಾಖಲು ಮಾಡಿರುವ ಆರೋಪಿ ಸ್ಯಾಂಟ್ರೋ ರವಿ ಹಾಗೂ ರಾಜ್ಯ ಬಿಜೆಪಿ ಸರಕಾರದ ಕೆಲ ಪ್ರಭಾವಿ ಸಚಿವರ ನಡುವೆ ಇರುವ ಸಂಬಂಧ ಏನು? ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲೆಬೇಕು ಎಂದು ಒತ್ತಾಯಿಸಿದರು.
”ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಾವಾಗಲೂ ದಮ್ಮು, ತಾಕತ್ತು ಬಗ್ಗೆ ಮಾತನಾಡುತ್ತಾರೆ, ಇಲ್ಲಿ ಅವರು ತಮ್ಮ ದಮ್ಮು ತಾಕತ್ತು ತೋರಿಸಲಿ” ಎಂದು ಎಚ್ಡಿಕೆ ಸವಾಲೆಸೆದರು.
ಕರ್ನಾಟಕವನ್ನು ಉಳಿಸುವುದು, ರಕ್ಷಣೆ ಮಾಡುವುದು ಜೆಡಿಎಸ್ ಪಕ್ಷದಿಂದ ಸಾಧ್ಯ ಇಲ್ಲ ಎಂದು ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಈ ರಾಜ್ಯವು ಬಿಜೆಪಿ ನಾಯಕರಿಂದ ಉಳಿಯಲು ಸಾಧ್ಯವಿಲ್ಲ. ಈ ಸರಕಾರದ ಮಂತ್ರಿಗಳ ಹಣೆಬರಹ ಇಲ್ಲಿದೆ ನೋಡಿ ಎಂದು ಸಾಂಟ್ರೋ ರವಿ ಜತೆ ಪೋಸು ಕೊಟ್ಟಿರುವ ಮಂತ್ರಿಗಳ ಚಿತ್ರಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದರು.
“”ಸ್ಯಾಂಟ್ರೋ ರವಿ ಅನೇಕ ಸಚಿವರ ಜತೆ ನಂಟು ಹೊಂದಿದ್ದಾರೆ. ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಆದರೆ, ಶಿಕ್ಷಣ ಸಚಿವ ನಾಗೇಶ್ ಅವರೊಂದಿಗೆ ಹೋಗಿ ಹೇಗೆ ಫೋಟೋ ತೆಗೆಸಿಕೊಂಡರೋ ಗೊತ್ತಿಲ್ಲ,” ಎಂದು ಕುಮಾರಸ್ವಾಮಿ ಹೇಳಿದರು.
“ನನ್ನ ಸರಕಾರವನ್ನು ತೆಗೆದುಹಾಕಲು ಎಲ್ಲ ರೀತಿಯ ವಾಮಮಾರ್ಗಗಳನ್ನು ಅನುಸರಿಸಲಾಯಿತು. ಈಗ ಮಾತನಾಡಲ್ಲ, ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಪಂಚರತ್ನ ರಥಯಾತ್ರೆ ಮುಗಿಸಿಕೊಂಡು ಬಂದ ಮೇಲೆ ವಿವರವಾಗಿ ಮಾತನಾಡುತ್ತೇನೆ,” ಎಂದು ಕುಮಾರಸ್ವಾಮಿ ಅವರು ಹೇಳಿದರು.ಈ ವ್ಯಕ್ತಿ ಮೇಲೆ ಎಷ್ಟಿದೆ ಕೇಸ್ ಗಳು ಇವೆ? ಸ್ಯಾಂಟ್ರೋ ರವಿಗೆ ಐದು ಹೆಸರುಗಳಿವೆ. 1995ರಿಂದಲೂ ಈತನ ಮೇಲೆ ಕೇಸುಗಳಿವೆ. ಮೈಸೂರು, ಬೆಂಗಳೂರಿನಲ್ಲಿ ಎಷ್ಟೋ ಕೇಸ್ ಇವೆ? ಕಳೆದ ತಿಂಗಳವರೆಗೆ ಕುಮಾರಕೃಪಾ ಅತಿಥಿ ಗೃಹದಲ್ಲಿ ಇವನಿಗೆ ಕೊಠಡಿ ಕೊಟ್ಟವರು ಯಾರು? ಕೊಠಡಿ ಕೊಡುವಂತೆ ಯಾರು ಶಿಫಾರಸು ಮಾಡಿದ್ದರು? ಇದೆಲ್ಲವನ್ನು ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ರಾಜ್ಯದ ಜನತೆಗೆ ತಿಳಿಸಬೇಕು ಎಂದು ಕುಮಾರಸ್ವಾಮಿ ಅವರು ಒತ್ತಾಯಿಸಿದರು.
ಕುಮಾರಕೃಪಾದಲ್ಲಿ ಕೂತು ಈತ ಭಾರೀ ವ್ಯವಹಾರ ನಡೆಸಿದ್ದಾನೆ. ಇವನ ಹಿಂದೆ ಅಡಗಿ ಕೂತಿರುವ ಅಸಲಿ ವ್ಯಕ್ತಿ ಯಾರು? ಪೊಲೀಸ್ ಅಧಿಕಾರಿಗೆ ಇವನು ಮೊಬೈಲ್ ಕರೆ ಮಾಡಿ, ನಾಳೆ ಬಂದು ನೋಡು ಅಂತ ಹೇಳುತ್ತಾನೆ. ತನ್ನ ಸರ್ ಎಂದು ಕರೆಯುವಂತೆ ಆ ಪೊಲೀಸ್ ಅಧಿಕಾರಿಗೆ ತಾಕೀತು ಮಾಡುತ್ತಾನೆ. ಇದೆಲ್ಲಾ ದಾಖಲೆ ಇದೆ ಎಂದು ಸ್ಫೋಟಕ ಮಾಹಿತಿಯನ್ನು ಕುಮಾರಸ್ವಾಮಿ ಅವರು ಬಹಿರಂಗಪಡಿಸಿದರು.
“ರೀ ಏನು ತಿಳಿದುಕೊಂಡಿದ್ದೀರಾ? ಸ್ವತಃ ಮುಖ್ಯಮಂತ್ರಿಯೇ ನನ್ನನ್ನು ಸರ್ ಅಂತ ಕರೀತಾರೆ. ನೀನು ಸರ್ ಅಂತಿಲ್ಲ ಅಂತ ಆ ಪೊಲೀಸ್ ಅಧಿಕಾರಿಗೆ ಸಾಂಟ್ರೋ ರವಿ ಅನ್ನುವನ್ನು ಧಮ್ಕಿ ಹಾಕುತ್ತಾನೆ ಎಂದರೆ ಈ ಸರಕಾರದ ಮಾನ ಮರ್ಯಾದೆ ಎಲ್ಲಿಗೆ ಬಂದು ನಿಂತಿದೆ ಎನ್ನುವುದನ್ನು ಜನರು ಊಹೆ ಮಾಡಬಹುದು. ಇದು ಸರ್ಕಾರವಾ? ಇವರ ಕರ್ನಾಟಕವನ್ನ ರಕ್ಷಣೆ ಮಾಡುವವರು” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಒಂದು ತಿಂಗಳಿಂದ ಮಾತ್ರ ಅವನು ಎಲ್ಲಾ ನಿಲ್ಲಿಸಿದ್ದಾನೆ. ದಲಿತ ಕುಟುಂಬದ ಹೆಣ್ಣು ಮಗಳು ಇವನ ಮೇಲೆ ಕಂಪ್ಲೇಂಟ್ ಕೊಟ್ಟಿದ್ದಾರೆ. ಇಂಥವನ ಹೆಗಲ ಮೇಲೆ ಕೇಸರಿ ಟವೆಲ್ ಹಾಕಿ ಪಕ್ಷಕ್ಕೆ ಸೇರಿಸಿಕೊಂಡ ಬಿಜೆಪಿ ನಾಯಕರಿಗೆ ನಾಚಿಕೆ ಆಗಬೇಕು. ನಮ್ಮ ಮೇಲೆ ಟ್ರೋಲ್ ಮಾಡ್ತಾರಲಾ ಬಿಜೆಪಿ ಸೋಷಿಯಲ್ ಮೀಡಿಯಾವರು, ದಮ್ಮು, ತಾಕತ್ತು ಇದ್ದರೆ ಈ ವಿಷಯವನ್ನು ಟ್ರೋಲ್ ಮಾಡಲಿ ಎಂದು ಸವಾಲು ಹಾಕಿದರು. ಅಧಿಕಾರಿಗಳಿಗೆ ಇವನು ಧಮ್ಕಿ ಹಾಕಿದ್ದಾನೆ. ಆ ಅಧಿಕಾರಿಗಳಿಗೆ ಹೇಳ್ತಾನಂತೆ, ಕುಂಬಳಗೋಡಿಗೆ ಯಾರದ್ದೋ ಕೆಲಸ ಆಗೋಯ್ತು ,50 ಲಕ್ಷಕ್ಕೆ. ನೆಲಮಂಗಲ ಎರಡು ತಿಂಗಳಲ್ಲಿ ಖಾಲಿ ಆಗುತ್ತೆ, ವೈಯ್ಟ್ ಮಾಡಿ ಎಂದು ಹೇಳುತ್ತಾನಂತೆ. ನನಗೆ ಇರುವ ಮಾಹಿತಿ ಪ್ರಕಾರ ಕೋಟ್ಯಂತರ ರೂಪಾಯಿ ವ್ಯವಹಾರ ನಡೆದಿದೆ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದರು.
ಅರವಿಂದ ಲಿಂಬಾವಳಿ ಆಪ್ತ ಯಾರು?:
ಪ್ರದೀಪ್ ಎಂಬ ವ್ಯಕ್ತಿ ಶೂಟ್ ಮಾಡಿಕೊಂಡು ಸಾವನ್ನಪ್ಪಿದ ಘಟನೆ ಬಗ್ಗೆ ಪ್ರಸ್ತಾಪ ಮಾಡಿದ ಕುಮಾರಸ್ವಾಮಿ ಅವರು, ಅರವಿಂದ ಲಿಂಬಾವಳಿ ಹಾಗೂ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲ್ಪಟ್ಟಿರುವ ಗೋಪಿ ಸಂಬಂಧ ಏನು? ಎಂದು ಪ್ರಶ್ನಿಸಿದರು.
ನನಗಿರುವ ಮಾಹಿತಿ ಪ್ರಕಾರ ಗೋಪಿ ಮುಖಾಂತರ 50-60 ಕೋಟಿ ರೂ. ಸಂಗ್ರಹ ಆಗಿದೆ. ಮುಖ್ಯವಾಗಿ ಬಿಲ್ಡರ್ ಗಳಿಂದ ಹಣ ಕೀಳಲಾಗಿದೆ. ಈ ಕಾರಣಕ್ಕೆ ಲಿಂಬಾವಳಿ ಸಚಿವ ಸ್ಥಾನ ಕಳೆದುಕೊಂಡರಾ? ಈ ಬಗ್ಗೆ ಜನರಿಗೆ ಗೊತ್ತಾಗಬೇಕು. ಬಿಲ್ದರುಗಳನ್ನು ದರ್ಜೇವಾರು ವಿಭಜಿಸಿ ಹಣ ವಸೂಲಿ ಮಾಡುತ್ತಿದ್ದರಲ್ಲ, ಆ ಹಣವನ್ನು ಸಂಗ್ರಹ ಮಾಡಿದವರು ಯಾರು? ಯಾವ ಅಪಾರ್ಟ್ ಮೆಂಟ್ ನಲ್ಲಿ ಈ ವ್ಯವಹಾರ ನಡೆಯಿತು ಎನ್ನುವುದು ಜನಕ್ಕೆ ಗೊತ್ತಾಗಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಅವರು ಹೇಳಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹಾಗೂ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಇದ್ದರು.
*40% ಕಮಿಷನ್ ಗೆ ಈ ದುಡ್ಡೇ ದಾಖಲೆಯಲ್ಲವೇ?; ಡಿ.ಕೆ.ಶಿವಕುಮಾರ್ ಪ್ರಶ್ನೆ*
https://pragati.taskdun.com/vidhanasoudha10-5-lakh-money-foundd-k-shivakumarreaction/
ಸೇವನೆಗೆ ಉತ್ತಮ ಹಾಲು ಯಾವುದು? ಇಲ್ಲಿದೆ ವಿವರ ಮಾಹಿತಿ
https://pragati.taskdun.com/what-is-the-best-milk-to-drink-here-is-the-detailed-information/
*PSI ನೇಮಕಾತಿ ಅಕ್ರಮ; ಕಿಂಗ್ ಪಿನ್ ದಿವ್ಯಾ ಹಾಗರಗಿ, DYSP ಸೇರಿ 26 ಜನರಿಗೆ ಜಾಮೀನು*
https://pragati.taskdun.com/545-psi-scame26-accusedbailkalaburgi-court/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ