
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಅವರು ಬೆಂಗಳೂರು ಹಾಗೂ ಮೈಸೂರು ಎಕ್ಸ್ ಪ್ರೆಸ್ ವೇ ಹೆದ್ದಾರಿ ಕಾಮಗಾರಿಯ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾದ ಡಿ.ಕೆ. ಸುರೇಶ್ ಅವರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ 209, ರಾಷ್ಟ್ರೀಯ ಹೆದ್ದಾರಿ 275, ರಾಷ್ಟ್ರೀಯ ಹೆದ್ದಾರಿ 44 ಹಾದುಹೋಗುವ ಪ್ರಮುಖ ಸ್ಥಳಗಳಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆಗಳನ್ನು ಅಭಿವೃದ್ಧಿಪಡಿಸುವಂತೆ ಮನವಿ ಪತ್ರ ನೀಡಿದರು.
ಬೆಂಗಳೂರು ಮೈಸೂರು ರಾಷ್ಟೀಯ ಹೆದ್ದಾರಿ 275 ರಲ್ಲಿನ ಎರಡೂ ಬದಿಯ ಅವೈಜ್ಞಾನಿಕ ಸರ್ವಿಸ್ ರಸ್ತೆಗಳನ್ನು ಸರಿಪಡಿಸಬೇಕು, ಅಂಡರ್ ಪಾಸ್ ರಸ್ತೆಗಳಲ್ಲಿ ಮಳೆ ನೀರು ನಿಲ್ಲದಂತೆ ದುರಸ್ತಿ ಮಾಡಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು.
ಈ ಹೆದ್ದಾರಿ ಪಕ್ಕದ ಹಳೇ ರಸ್ತೆಗಳನ್ನು ಒಂದು ಬಾರಿ ಅಭಿವೃದ್ಧಿ ಯೋಜನೆಯಡಿ ಅಭಿವೃದ್ಧಿ ಪಡಿಸಿ ರಾಜ್ಯ ಸರಕಾರಕ್ಕೆ ವಹಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಹಾಗೂ ದಿಂಡಗಲ್ ನಡುವಣ ರಾಷ್ಟ್ರೀಯ ಹೆದ್ದಾರಿ 209 ರ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗೆ ಮಂಜೂರಾತಿ ನೀಡುವಂತೆ ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 209 ಹಾದು ಹೋಗುವ ಕನಕಪುರ ಬೈಪಾಸ್, ಕನಕಪುರ ಬೈಪಾಸ್ ನ ಎಪಿಎಂಸಿ ಯಾರ್ಡ್ ನಿಂದ ಸಮೀಪದ ಮುಖ್ಯರಸ್ತೆವರೆಗೆ, ಕನಕಪುರ ಬೈಪಾಸ್ ನಿಂದ ಹೊರನಡೆಯುವ ಕಡೆ ಬಲಭಾಗದಲ್ಲಿ ಸರ್ವೀಸ್ ರಸ್ತೆ, ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಹಾಗೂ ಹಾರೋಹಳ್ಳಿ ಬೈಪಾಸ್ ಗಳಲ್ಲಿ ವಾಹನ ಸಂಚಾರಕ್ಕೆ ಅಂಡರ್ ಪಾಸ್ ನಿರ್ಮಾಣ ಮಾಡಬೇಕು. ಏಕಕಾಲ ಅಭಿವೃದ್ಧಿ ಯೋಜನೆಯಡಿಯಲ್ಲಿ ಕನಕಪುರ ಪಟ್ಟಣ ಅಭಿವೃದ್ಧಿ, ಅರ್ಕಾವತಿ ನದಿಗೆ ಬಲ ಭಾಗದಲ್ಲಿ ಪರ್ಯಾಯ ಸೇತುವೆ ನಿರ್ಮಾಣ ಮಾಡಬೇಕು.
ಶನಿಮಹತ್ಮಾ ದೇವಾಲಯ, ರವಿಶಂಕರ್ ಗುರೂಜಿ ಆಶ್ರಮ, ಕಗ್ಗಲಿಪುರ ಸರ್ಕಾರಿ ಶಾಲಾ ವಲಯ, ಹಾರೋಹಳ್ಳಿ ಕೈಗಾರಿಕಾ ಪ್ರದೇಶ, ಜೈನ್ ವಿಶ್ವವಿದ್ಯಾಲಯ, ಸಾತನೂರು ಜಂಕ್ಷನ್, ಜಕ್ಕೇಗೌಡನದೊಡ್ಡಿ ವ್ಯಾಪ್ತಿಯಲ್ಲಿ ಪಾದಚಾರಿಗಳ ಸುರಕ್ಷಿತ ಸಂಚಾರಕ್ಕೆ ಮೇಲ್ಸೇತುವೆಗಳ ನಿರ್ಮಾಣ ಮಾಡಬೇಕು ಎಂದು ಸುರೇಶ್ ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಇನ್ನು ಮತ್ತೊಂದು ಮನವಿಯಲ್ಲಿ ರಾಷ್ಟ್ರೀಯ ಹೆದ್ದಾರಿ 275ರ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಬಿಡದಿಯಿಂದ ಅತ್ತಿಬಲೆವರೆಗು, ರಾಷ್ಟ್ರೀಯ ಹೆದ್ದಾರಿ 44 ರ ಹಾರೋಹಳ್ಳಿ, ಜಿಗಣಿ, ಆನೇಕಲ್ ಮಾರ್ಗವಾಗಿ ಸಾಗುವ ಬೆಂಗಳೂರು ಚೆನ್ನೈ ಹೆದ್ದಾರಿಯಲ್ಲಿ ಜಂಕ್ಷನ್ ಗಳ ಅಭಿವೃದ್ಧಿ ಮಾಡಬೇಕು ಎಂದು ಕೇಂದ್ರ ಸಚಿವರಿಗೆ ಸುರೇಶ್ ಅವರು ಮನವಿ ಮಾಡಿದ್ದಾರೆ.
ಈ ಜಂಕ್ಷನ್ ಗಳು ಕೈಗಾರಿಕಾ ಪ್ರದೇಶವಾಗಿದ್ದು, ಬಿಡದಿ ಬಳಿ 400, ಹಾರೋಹಳ್ಳಿಯಲ್ಲಿ 1280, ಜಿಗಣಿ 339, ಬೊಮ್ಮಸಂದ್ರ 979, ಅತ್ತಿಬೆಲೆ 148 ಕೈಗಾರಿಕಾ ಯುನಿಟ್ ಗಳಿದ್ದು, ಇಲ್ಲಿ ಸಂಚಾರ ದಟ್ಟಣೆ ನಿಯಂತ್ರಣ ಮಾಡಿ ಸುಗಮ ಸಂಚಾರಕ್ಕಾಗಿ ಈ ಜಂಕ್ಷನ್ ಗಳ ಅಭಿವೃದ್ಧಿ ಮಾಡಬೇಕು ಎಂದು ತಮ್ಮ ಪತ್ರದಲ್ಲಿ ಸಂಸದರು ವಿವರಿಸಿದ್ದಾರೆ.
ಬೆಂಗಳೂರು-ಮೈಸೂರು ರಸ್ತೆಯ ಗೊಂಬೆಗಳ ನಾಡು ಚನ್ನಪಟ್ಟಣದಲ್ಲಿ ವಿಶ್ವವಿಖ್ಯಾತ ಕರಕುಶಲ ಕಲೆ ಅಳಿವಿನಂಚಿನಲ್ಲಿದ್ದು ಇಲ್ಲಿ ಕರಕುಶಲ ಕಲಾಗ್ರಾಮ ನಿರ್ಮಾಣ ಮಾಡಬೇಕು ಎಂದು ಸುರೇಶ್ ಅವರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
*ವಿಧಾನಸೌಧ ಶಾಪಿಂಗ್ ಮಾಲ್‌ನಂತಾಗಿದೆ; ಸಚಿವರೆಲ್ಲ ಅಂಗಡಿ ತೆರೆದು ಕುಳಿತಿದ್ದಾರೆ*
https://pragati.taskdun.com/vidhanasoudha10-5-lakhcongresstweetd-k-shivakumar/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ