*ಗಡಿನಾಡಿನ ಅಭಿವೃದ್ಧಿಗೆ 100 ಕೋಟಿ ರೂ.
*ಶಾಸ್ತ್ರೀಯ ಭಾಷೆ ಸಂಶೋಧನೆಗೆ ಸರ್ಕಾರದ ಪ್ರೋತ್ಸಾಹ*
*3 ಕೋಟಿ ವೆಚ್ಚದಲ್ಲಿ ಹಾವೇರಿಯಲ್ಲಿ ಕಸಾಪ ಭವನ*
*-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಕನಕ-ಶರೀಫ-ಸರ್ವಜ್ಞ ಪ್ರಧಾನ ವೇದಿಕೆ, ಹಾವೇರಿ: ಗಡಿನಾಡಿನ ಶಿಕ್ಷಣ,ಆರೋಗ್ಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ 100 ಕೋಟಿ ರೂ.ಒದಗಿಸಲಿದೆ.
ಕನ್ನಡದ ಶಾಸ್ತ್ರೀಯ ಭಾಷೆ ಸ್ಥಾನಮಾನದ ಸಂಶೋಧನಾ ಕಾರ್ಯಗಳಿಗೆ ಸಾಹಿತಿಗಳ ಸಮಿತಿ ರಚಿಸಲಾಗುವುದು.
ಸಮಿತಿ ಸೂಚಿಸುವ ಸಂಶೋಧನಾ ಕಾರ್ಯಗಳಿಗೆ ಬೇಕಾದ ಹಣವನ್ನು ಸರ್ಕಾರ ಒದಗಿಸಲಿದೆ.
ಸಮ್ಮೇಳನದ ನೆನಪಿಗೆ ಹಾವೇರಿಯಲ್ಲಿ 3 ಕೋಟಿ ರೂ.ವೆಚ್ಚದಲ್ಲಿ ಕಸಾಪ ಭವನ ನಿರ್ಮಿಸಿ, ಕರ್ನಾಟಕ ಜಾನಪದ ವಿವಿ ಸಹಯೋಗದಲ್ಲಿ ಗುಣಮಟ್ಟದ ಸಂಶೋಧನಾ ಕೇಂದ್ರವನ್ನು ಅಭಿವೃದ್ಧಿ ಪಡಿಸಲಾಗುವುದು.
-ಇವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿನ ಘೋಷಣೆಗಳು.
ಗಡಿನಾಡಿನ ಶಿಕ್ಷಣ,ಆರೋಗ್ಯ ಮತ್ತು ಸೌಕರ್ಯಗಳ ಅಭಿವೃದ್ಧಿಗೆ 100 ಕೋಟಿ ರೂ.ಒದಗಿಸಲಾಗುವುದು. ಕನ್ನಡಕ್ಕಾಗಿ ಹೋರಾಡಿದ ಹೋರಾಟಗಾರರ ಮೇಲಿರುವ ಕಾಗ್ನಿಜಬಲ್ ಹೊರತುಪಡಿಸಿದ ಉಳಿದ ಎಲ್ಲಾ ಪ್ರಕರಣಗಳನ್ನು ಹಿಂದೆ ಪಡೆಯಲು ಸರ್ಕಾರ ಬದ್ಧವಾಗಿದೆ.
2008 ರಿಂದ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದಿದೆ.ಇಲ್ಲಿಯವರೆಗೆ ಕೇಂದ್ರ ಸರ್ಕಾರದಿಂದ 13.30 ಕೋಟಿ ರೂ.ನೆರವು ದೊರೆತಿದೆ. ಮೈಸೂರು ವಿವಿಯ ದೊಡ್ಡ ಕಟ್ಟಡವೊಂದನ್ನು ಈಗಾಗಲೇ ಅಧ್ಯಯನ ಕೇಂದ್ರಕ್ಕೆ ನೀಡಲಾಗಿದೆ. ಶಾಸ್ತ್ರೀಯ ಭಾಷೆ ಕುರಿತ ಸಂಶೋಧನೆ, ಗ್ರಂಥಾಲಯ,ಚರ್ಚೆಗಳಿಗೆ ಮಾರ್ಗದರ್ಶನ ಮಾಡಲು ಸಮ್ಮೇಳನಾಧ್ಯಕ್ಷರ ಮಾರ್ಗದರ್ಶನದಲ್ಲಿ ನಾಡಿನ ಹಿರಿಯ ಸಾಹಿತಿಗಳ ಸಮಿತಿ ರಚಿಸಲಾಗುವುದು. ಸಮಿತಿ ಸೂಚಿಸುವ ಕಾರ್ಯಗಳಿಗೆ ಎಷ್ಟು ಅನುದಾನ ಬೇಕಾದರೂ ಸರ್ಕಾರ ಒದಗಿಸಲಿದೆ. ಹಾವೇರಿ ಜಿಲ್ಲಾ ಕಸಾಪ ಭವನ ನಿರ್ಮಾಣಕ್ಕೆ 3 ಕೋಟಿ ರೂ.ಒದಗಿಸಲಾಗುವುದು. ಕರ್ನಾಟಕ ಜಾನಪದ ವಿವಿ ಸಹಯೋಗದಲ್ಲಿ ಅಲ್ಲೊಂದು ಗುಣಮಟ್ಟದ ಸಂಶೋಧನಾ ಕೇಂದ್ರವನ್ನು ಕಸಾಪ ರೂಪಿಸಬೇಕು ಎಂದರು.
ತಾಯಿ ಕನ್ನಡ ಭುವನೇಶ್ವರಿಯ ಒಡಲು ಶ್ರೀಮಂತವಾದುದು. ಇಲ್ಲಿನ ಜ್ಞಾನ,ಸಾಹಿತ್ಯ, ತಂತ್ರಜ್ಞಾನ ಎಲ್ಲವೂ ಸಿರಿವಂತವಾಗಿದೆ. ಕನ್ನಡ ಭಾಷೆಯಲ್ಲಿ ಸ್ಪಷ್ಟತೆ, ನಿಖರತೆ, ಪ್ರಖರತೆಗಳಿವೆ. ಕನ್ನಡದ ಮನಸ್ಸುಗಳು ಸ್ವಚ್ಛ ಹಾಗೂ ಪಾರದರ್ಶಕವಾಗಿವೆ. ಬಹುತೇಕ ಸಾಹಿತ್ಯ ಹೃದಯದಿಂದ ಬಂದಿರುವ ಕಾರಣಕ್ಕಾಗಿ ಕನ್ನಡ ಸಾಹಿತ್ಯ ಸತ್ಯದ ದರ್ಶನವಾಗಿದೆ. ಈ ಭಾಷೆಗೆ ಉಜ್ವಲ ಭವಿಷ್ಯವಿದೆ. ಕಾಲ ಕಾಲಕ್ಕೆ ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ಮುಂದೆ ಸಾಗುತ್ತಿದೆ. ಪಶ್ಚಿಮ ಘಟ್ಟದ ನದಿ ಸಂಪತ್ತಿನ ಸಂಪೂರ್ಣ ಪ್ರಯೋಜನ ಪಡೆದರೆ ನಾಡು ಇನ್ನಷ್ಟು ಶ್ರೀಮಂತವಾಗಲಿದೆ. ಕಾನೂನು ತೊಡಕು ನಿವಾರಿಸಿಕೊಂಡು ಮಹಾದಾಯಿ ಯೋಜನೆ, ಕಳಸಾ ಬಂಡೂರಿ ಯೋಜನೆಯಾಗಿ ಅನುಷ್ಠಾನವಾಗಲಿದೆ.
ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀಟರಿಗೆ ಹೆಚ್ಚಿಸಲು ಶೀಘ್ರ ನ್ಯಾಯಮಂಡಳಿಯ ಅನುಮೋದನೆ ಸಿಗುವ ಭರವಸೆ ಇದೆ. ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಮಧ್ಯ ಕರ್ನಾಟಕದ ಲಕ್ಷಾಂತರ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಮೇಕೆದಾಟು ಯೋಜನೆ ಕೂಡ ಜಾರಿಯಾಗಲಿದೆ. ಎಲ್ಲಾ ಮಾತೃ ಭಾಷೆಗಳಿಗೆ ಸಂವಿಧಾನದ ರಕ್ಷಣೆಯ ಅಗತ್ಯವಿದೆ. ಪ್ರಾಥಮಿಕ ಹಂತದ ಶಾಲಾ ಶಿಕ್ಷಣ ಮಾತೃಭಾಷೆಯಲ್ಲಿಯೇ ಆಗಬೇಕು ಎಂಬುದು ನ್ಯಾಯಾಲಯದಲ್ಲಿ ವಿಫಲವಾಗುತ್ತಿದೆ.
ಬರುವ ದಿನಗಳಲ್ಲಿ ಸಂವಿಧಾನ ರಕ್ಷಣೆ ಪಡೆಯಲು ಶ್ರಮಿಸಲಾಗುವುದು. ಕರ್ನಾಟಕಕ್ಕೆ ಹೊರ ರಾಜ್ಯದ ಜನ ದೊಡ್ಡ ಪ್ರಮಾಣದಲ್ಲಿ ಬರುತ್ತಿದ್ದಾರೆ. ಆದರೆ ಕನ್ನಡ ಕಲಿಯುತ್ತಿಲ್ಲ,ಈ ನಾಡಿನಲ್ಲಿ ನೆಲೆಸಲು ಇಚ್ಛಿಸುವವರು ಕಡ್ಡಾಯವಾಗಿ ಕನ್ನಡ ಕಲಿಯಲೇಬೇಕೆಂಬ ನೀತಿ ಜಾರಿಗೊಳಿಸಲು ಚಿಂತನೆ ನಡೆದಿದೆ. ಕನ್ನಡಕ್ಕಾಗಿ ಗಡಿಯಾಚೆ ಹೋರಾಡಿದ ಕನ್ನಡಿಗರಿಗೆ ಪಿಂಚಣಿ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.
ಸಮ್ಮೇಳನಾಧ್ಯಕ್ಷ ಡಾ.ದೊಡ್ಡರಂಗೇಗೌಡ, ಕಸಾಪ ಅಧ್ಯಕ್ಷ ಮಹೇಶ್ ಜೋಶಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕೃಷಿ ಸಚಿವ ಬಿ.ಸಿ.ಪಾಟೀಲ,ಪ್ರಾಥಮಿಕ,ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ,ಸಂಸದ ಶಿವಕುಮಾರ ಉದಾಸಿ,ಮಾಜಿ ಸಂಸದರಾದ ಪ್ರೊ.ಐ.ಜಿ.ಸನದಿ,ಮಂಜುನಾಥ ಕುನ್ನೂರ,ಶಾಸಕರಾದ ನೆಹರು ಓಲೇಕಾರ,ಅರುಣಕುಮಾರ ಪೂಜಾರ,ವಿರೂಪಾಕ್ಷಪ್ಪ ಬಳ್ಳಾರಿ, ವಿಧಾನಪರಿಷತ್ ಸದಸ್ಯ ಆರ್.ಶಂಕರ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.
https://pragati.taskdun.com/86th-kannada-sahitya-sammelanacm-basavaraj-bommaihaveri/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ