ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಏಳಿ, ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ…. ಸ್ವಾಮಿ ವಿವೇಕಾನಂದರ ಈ ಸಂದೇಶ ಯುವ ಜನತೆಗೆ ಪ್ರೇರಣಾ ಶಕ್ತಿ. ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ದೇಶವನ್ನು ಮುನ್ನಡೆಸುವುದು ಯುವಕರ ಕರ್ತವ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಯುವಜನತೆಗೆ ಕರೆ ನೀಡಿದ್ದಾರೆ.
ಇಂದಿನಿಂದ 5 ದಿನಗಳ ಕಾಲ ನಡೆಯಲಿರುವ 26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಚಾಲನೆ ನೀಡಿದರು. ಬಳಿಕ ದೇಶದ ಯುವಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಷ್ಟ್ರ ನಿರ್ಮಾಣದಲ್ಲಿ ಸ್ವಾಮಿ ವಿವೇಕಾನಂದರ ಪಾತ್ರ ಮಹತ್ವದ್ದಾಗಿದೆ. ರಾಷ್ಟ್ರೀಯ ಯುವಜನೋತ್ಸವ ತುಂಬಾ ವಿಶೇಷವಾದದ್ದು. ಸ್ವಾಮಿ ವಿವೇಕಾನಂದರು ಯುವಜನತೆಗೆ ದೊಡ್ದ ಶಕ್ತಿ. ಚಿಕ್ಕ ವಯಸ್ಸಿನಲ್ಲಿಯೇ ಸ್ವಾಮಿ ವಿವೇಕಾನಂದರು ಸಾಧನೆ ಮಾಡಿದ್ದರು. ಯುವಜನತೆಯಿದಲೇ ರಾಷ್ಟ್ರ ನಿರ್ಮಾಣವಾಗಲಿದೆ ಎಂದು ಹೇಳಿದ್ದರು. ದೇಶದ ಭವಿಷ್ಯ ಯುವ ಜನತೆಯ ಕೈಯಲ್ಲಿದೆ ಎಂದು ಹೇಳಿದರು.
ಸ್ವಾಮಿ ವಿವೇಕಾನಂದರಿಗೆ ಕರ್ನಾಟಕದೊಂದಿಗೆ ಅದ್ಭುತ ಸಂಬಂಧವಿದೆ. ಮೈಸೂರು ಮಹಾರಾಜರು ವಿವೇಕಾನಂದರ ಷಿಕಾಗೋ ಯಾತ್ರೆಗೆ ಸಹಾಯ ಮಾಡಿದ್ದರು. ಸ್ವಾಮಿ ವಿವೇಕಾನಂದರು ಯುವ ಜನತೆಯೇ ದೆಶದ ಭವಿಷ್ಯ ಎಂದು ಹೇಳಿದ್ದರು. ದೇಶವನ್ನು ಮುನ್ನಡೆಸುವಲ್ಲಿ ಯುವಜನತೆಯ ಪಾತ್ರ ಮಹತ್ವದ್ದಾಗಿದೆ. ಇಡೀ ದೇಶದ ಭವಿಷ್ಯ ಯುವಕರ ಮೇಲೆ ನಿಂತಿದೆ ಎಂದು ಹೇಳಿದರು.
ಯುವಕರಿಗೆ ಇದೊಂದು ಐತಿಹಾಸಿಕ ಕ್ಷಣ. ಸಾಧನೆ ಮಾಡಲು ಯುವ ಸಮುದಾಯಕ್ಕೆ ಇದು ಸಕಾಲ. ಹಲವು ಜಾಗತಿಕ ಉದ್ಯಮಗಳು ಭಾರತದತ್ತ ನೋಡುತ್ತಿವೆ. ರನ್ ವೇ ರೆಡಿ ಇದೆ, ನೀವು ಟೇಕಾಫ್ ಆಗುವುದೊಂದೇ ಬಾಕಿ. ಭಾರತ ಒಂದು ಯುವ ದೇಶ. ಯುವಕರ ದೊಡ್ಡ ಪಡೆ, ಯುವ ಶಕ್ತಿ ನಮ್ಮ ದೇಶದಲ್ಲಿದೆ ದೇಶದ ಬೆಳವಣಿಗೆಗೆ ಯುವ ಶಕ್ತಿ ಅಡಿಪಾಯವಾಗಲಿದೆ. ಕಳೆದ 8 ವರ್ಷಗಳಲ್ಲಿ ಯುವಕರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಯುವಕರ ಭವ್ಯ ಭವಿಷ್ಯವನ್ನು ನಾವು ರೂಪಿಸಿದ್ದೇವೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಭಾರತ ಇಂದು ಯಶಸ್ವಿಯಾಗಿ ಸಾಗುತ್ತಿದೆ. ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಭಾರತದ ಸ್ಟಾರ್ಟ್ ಅಪ್ ಗಳಿಗೆ ಹಣ ಹರಿದು ಬರುತ್ತಿದೆ. ವಿದೇಶಿ ಬಂಡವಾಳ ಹೂಡಿಕೆಯಾಗುತ್ತಿದೆ ಎಂದು ಹೇಳಿದರು.
ಭಾರತದ ಮಹಿಳೆಯರು ಫೈಟರ್ ಜೆಟ್ ಹಾರಿಸುತ್ತಿದ್ದಾರೆ. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೆಣ್ಣುಮಕ್ಕಳು ಸಾಧನೆಗಳನ್ನು ಮಾಡಿದ್ದಾರೆ. 21ನೇಯ ಶತಮಾನವನ್ನು ಭಾರತದ ಶತಮಾನವನ್ನಾಗಿ ಮಾಡಬೇಕು. ವಿಶ್ವದ ಆಧುನಿಕ ದೇಶಗಳಿಗಿಂತ ಭಾರತ ಮುಂದೆ ಸಾಗಬೇಕಿದೆ. ಭಾರತ ಶ್ರೇಷ್ಠ ಭಾರತ ಸಂಕಲ್ಪದೊಂದಿಗೆ ಮುನ್ನಡೆಯಬೇಕಿದೆ ಎಂದು ಕರೆ ನೀಡಿದರು.
ವಿಶ್ವೇಶ್ವರಯ್ಯ ಅವರು ತಮ್ಮ ಪ್ರತಿಭೆಯ ಮೂಲಕ ಯುವ ಸಮುದಾಯವು ಹೇಗೆ ಎಲ್ಲೆಡೆ ಪಸರಿದೆ ಎಂಬುದಕ್ಕೆ ಉದಾಹರಣೆಯಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಗಣಿತದಿಂದ ವಿಜ್ಞಾನದ ಯಾವುದೇ ಸ್ಪರ್ಧೆ ನಡೆದರೂ ಭಾರತೀಯರ ಸಾಧನೆ ಅದ್ವಿತೀಯ. ಇದು ಭಾರತದ ಯುವಶಕ್ತಿಯ ಸಂಕೇತವಾಗಿದೆ. ಯುವಶಕ್ತಿ ದೇಶವನ್ನು ನಡೆಸುವ ಶಕ್ತಿಯಾಗಿದೆ. ಮುಂದಿನ 25 ವರ್ಷಗಳಲ್ಲಿ ಭಾರತಕ್ಕೆ ಯುವಶಕ್ತಿ ದಿಕ್ಸೂಚಿಯಾಗಲಿದೆ ಎಂದರು.
ನಮ್ಮ ಚಿಂತನೆ ಹಾಗೂ ಪ್ರಯತ್ನಗಳು ಸಕಾರಾತ್ಮಕವಾಗಿ ಇರಬೇಕು. ಜಗತ್ತು ಸಮಸ್ಯೆಗಳ ಪರಿಹಾರಕ್ಕಾಗಿ ಭಾರತದ ಕಡೆ ನೋಡುತ್ತಿದೆ. ಇದರ ಹಿಂದೆ ಯುವಶಕ್ತಿಯ ಶ್ರಮವಿದೆ. ಭಾರತವು ಜಗತ್ತಿನ 5 ನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿದೆ. ಇದನ್ನು ಅಗ್ರ ಮೂರನೇ ಸ್ಥಾನಕ್ಕೆ ಕೊಂಡೊಯ್ಯುವ ಗುರಿ ನಮ್ಮದಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದೀಜಿ ಹೇಳಿದರು.
ಕೃಷಿ ಕ್ಷೇತ್ರದಲ್ಲಿ ಭಾರತವು ಜಗತ್ತಿನ ಮುಂಚೂಣಿಯಲ್ಲಿದ್ದು, ಈ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆಯಿಂದ ಯುವ ಜನತೆಗೆ ಇನ್ನಷ್ಟು ಅವಕಾಶಗಳು ಲಭಿಸಲಿವೆ.ಕ್ರೀಡಾ ಕ್ಷೇತ್ರದಲ್ಲಿ ಭಾರತವು ಪ್ರಕಾಶಿಸುತ್ತಿರುವುದಕ್ಕೆ ಯುವ ಸಮುದಾಯದ ಪ್ರಯತ್ನವೇ ಕಾರಣವಾಗಿದೆ. ಯುವಜನತೆ ವರ್ತಮಾನದಲ್ಲಿದ್ದಕೊಂಡು ಭವಿಷ್ಯದ ಕಡೆ ಸಕಾರಾತ್ಮಕವಾಗಿ ಯೋಚಿಸುವ ಮೂಲಕ ಹೊಸ ಹೊಸ ಆವಿಷ್ಕಾರಗಳತ್ತ ಚಿತ್ತವನ್ನು ಹರಿಸಬೇಕು.
ಹತ್ತು ವರ್ಷಗಳ ಇಲ್ಲದ ಎಷ್ಟೋ ವಿಷಯಗಳಿಂದ ನಾವು ಈಗ ಚಕಿತರಾಗಿದ್ದೇವೆ ಈಗ ಸೈಬರ್ ಸೆಕ್ಯುರಿಟಿ, ಡೇಟಾ ಸೈನ್ಸ್, ದೇಶದ ಸುರಕ್ಷತೆ ಸೇರಿ ಎಲ್ಲದರ ಸ್ವರೂಪ ಬದಲಾಗಿದೆ. ಯುವಸಮುದಾಯವು ತಂತ್ರಜ್ಞಾನದ ಈ ಬದಲಾವಣೆಯಿಂದ ಪಾಠ ಕಲಿತು ಹೊಸ ಕೌಶಲಗಳನ್ನು ಬೆಳೆಸಿಕೊಳ್ಳಬೇಕು.
ಪ್ರಸ್ತುತ ದಿನಗಳಲ್ಲಿ ಯುವಶಕ್ತಿಯ ಮುಂದೆ ಹತ್ತಾರು ಅವಕಾಶಗಳಿವೆ. ಆಯ್ಕೆ ಅವರ ಮುಂದಿದೆ. ಕ್ಷಿಪ್ರವಾಗಿ ಬದಲಾಗುತ್ತಿರುವ ಈ ಸಂದರ್ಭದಲ್ಲಿ ಯುವಕರು ವೈಯಕ್ತಿಕ ಸಾಧನೆಯ ಜತೆಗೆ ಸಾಂಸ್ಥಿಕ ಹಾಗೂ ಅನ್ವೇಷಣೆ ಮೂಲಕ ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದರು.
ಸ್ವಚ್ಛ ಭಾರತ, ಡಿಜಿಟಲ್ ಇಂಡಿಯಾ, ಕೋವಿಡ್ ಲಸಿಕೆ ಹೀಗೆ ಪ್ರತಿಯೊಂದು ಮಜಲುಗಳಲ್ಲಿ ಕೆಲವರು ಅಪಹಾಸ್ಯ ಮಾಡಿದ್ದರು. ಆದರೆ ಭಾರತದ ಈ ಸಾಧನೆಯ ಬಗ್ಗೆ ಜಗತ್ತಿನಲ್ಲಿ ಈಗ ಚರ್ಚೆ ನಡೆದಿದೆ. ಯುವಶಕ್ತಿಯನ್ನು ಕಟ್ಟಿಕೊಂಡು ದೇಶದಲ್ಲಿ ವಿಭಿನ್ನ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ದೇಶದ ಬೇರೆ ಬೇರೆ ಭೌಗೋಳಿಕ ಪ್ರದೇಶಗಳ ಯುವಕರ ತಂಡಗಳು ಬಂದಿವೆ. ಇಲ್ಲಿನ ಸ್ಪರ್ಧೆಯಲ್ಲಿ ಯಾರೇ ಗೆದ್ದರೂ ಅಂತಿಮವಾಗಿ ಭಾರತವೇ ಗೆಲ್ಲುತ್ತದೆ. ಆದ್ದರಿಂದ ಯುವಜನೋತ್ಸವದಲ್ಲಿ ಭಾಗವಹಿಸುವ ತಂಡಗಳು ವಿಕಸಿತ ಭಾರತ ಸಮರ್ಥ ಭಾರತವನ್ನು ಗಮನದಲ್ಲಿಟ್ಟುಕೊಂಡು ದೇಶವನ್ನು ಮುನ್ನಡೆಸಬೇಕು ಎಂದು ಕರೆ ನೀಡಿದರು.
ಸಿದ್ದೇಶ್ವರ ಶ್ರೀಗಳನ್ನು ಸ್ಮರಿಸಿದ ಮೋದಿ:
ರಾಷ್ಟ್ರೀಯ ಯುವಜನೋತ್ಸವ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾಷಣದ ಆರಂಭದಲ್ಲ ಮಹಾನ್ ಸಂತ ಸಿದ್ದೇಶ್ವರ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ದೇಶಕ್ಕೆ ಸಿದ್ದೇಶ್ವರ ಶ್ರೀಗಳು ನೀಡಿದ ಸಾಧನೆ ಅಪಾರ. ಕೆಲ ದಿನಗಳ ಹಿಂದೆ ಮಹಾನ್ ಸಂತ ಸಿದ್ದೇಶ್ವರ ಶ್ರೀಗಳು ಕರ್ನಾಟಕದ ನೆಲದಲ್ಲಿ ಲಿಂಗೈಕ್ಯರಾದರು. ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದರು.
ರಾಜ್ಯದ ಹಲವು ಮಠಗಳನ್ನು ನೆನೆದ ಪ್ರಧಾನಿ:
ಮೂರು ಸಾವಿರ ಮಠ, ಸಿದ್ಧಾರೂಢ ಮಠ ಸೇರಿದಂತೆ ಅನೇಕ ಮಠಗಳಿರುವ ಈ ಕ್ಷೇತ್ರಕ್ಕೆ ನನ್ನ ಪ್ರಣಾಮಗಳು ಎಂದು ಪ್ರಧಾನಿ ಮೋದಿ ವಿವಿಧ ಮಠಗಳನ್ನು ನೆನೆದರು.
ರಾಣಿ ಚೆನ್ನಮ್ಮರನ್ನು ಸ್ಮರಿಸಿದ ಪ್ರಧಾನಿ:
ಚೆನ್ನಮ್ಮ ಎಂತಹ ಸಂಕಷ್ಟದ ಕಾಲದಲ್ಲೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಸಂಗೊಳ್ಳಿ ರಾಯಣ್ಣನ ಶೌರ್ಯವು ಬ್ರಿಟಿಷ್ ರ ಎದೆ ನಡುಗಿಸಿತ್ತು ಇಂತಹ ಮಹನೀಯರ ದೇಶಭಕ್ತಿ ನಮಗೆ ಆದರ್ಶವಾಗಬೇಕಿದೆ. ಚೆನ್ನಮ್ಮನ ನಾಡು, ರಾಯಣ್ಙನ ಬೀಡು ಪುಣ್ಯದ ನಾಡಿಗೆ ನನ್ನ ನಮಸ್ಕಾರಗಳು….ಎಂದು ಹೇಳಿದರು.
ಐತಿಹಾಸಿಕ ರೋಡ್ ಶೋ:
ಯುವಜನೋತ್ಸವ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿ ಏರ್ ಪೋರ್ಟ್ ನಿಂದ ರೈಲ್ವೆ ಮೈದಾನದವರೆಗೆ ಸುಮಾರು 8 ಕೀ.ಮೀ ವರೆಗೆ ರೋಡ್ ಶೋ ಮೂಲಕ ಸಾಗಿದರು.
ಸುಮಾರು ಒಂದು ಗಂಟೆ ನಡೆದ ರೋಡ್ ಶೋನಲ್ಲಿ ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಈ ಮೂಲಕ ಪ್ರಧಾನಿ ಮೋದಿ ರೋಡ್ ಶೋ ಇತಿಹಾಸ ಸೃಷ್ಟಿಸಿದೆ. ರೋಡ್ ಶೋ ಉದ್ದಕ್ಕೂ ರಸ್ತೆ ಇಕ್ಕೆಲಗಳಲ್ಲಿ ಕಿಕ್ಕಿರಿದು ನಿಂತಿದ್ದ ಜನರು ಮೋದಿ ಮೋದಿ ಹರ್ಷೋದ್ಘಾರದೊಂದಿಗೆ, ಹೂವಿನ ಮಳೆಗರೆದು ಸ್ವಾಗತಿಸಿದ್ದು ವಿಶೇಷವಾಗಿತ್ತು.
ಯುವಜನೋತ್ಸವದಿಂದ ಭಾವನಾತ್ಮಕ ಬೆಸುಗೆ:
ರಾಷ್ಟ್ರೀಯ ಯುವಜನೋತ್ಸವವು ಇಡೀ ದೇಶವನ್ನು ಭೌಗೋಳಿಕವಾಗಿ ಹಾಗೂ ಭಾವನಾತ್ಮಕವಾಗಿ ಒಂದುಗೂಡಿಸುತ್ತದೆ ಎಂದು ಕೇಂದ್ರ ಯುವ ವ್ಯವಹಾರಗಳು ಹಾಗೂ ಕ್ರೀಡಾ ಸಚಿವರಾದ ಅನುರಾಗ್ ಸಿಂಗ್ ಠಾಕೂರ್ ಅಭಿಪ್ರಾಯಪಟ್ಟರು.
ಸ್ವಸ್ಥ ಶರೀರದಲ್ಲಿ ಸ್ವಸ್ಥ ಮನಸ್ಸು ಇರುತ್ತದೆ. ಆದ್ದರಿಂದ ಗೀತಾ-ರಾಮಾಯಣ ಓದುವ ಮೊದಲು ಫುಟ್ಬಾಲ್ ಆಡುವಂತೆ ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು. ಪ್ರಸ್ತುತ ಪ್ರಧಾನ ಮಂತ್ರಿಗಳು ಕೂಡ ಅದೇ ಮಾರ್ಗದಲ್ಲಿ ದೇಶದ ಯುವ ಜನತೆಯನ್ನು ಕೊಂಡೊಯ್ಯುತ್ಯಿದ್ದಾರೆ.
ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ನಿರ್ಮಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಜೀಯವರ ಕನಸುಗಳ ಸಾಕಾರಕ್ಕೆ ಯುವಸಮುದಾಯ ಕೈಜೋಡಿಸುವ ಅಗತ್ಯವಿದೆ.
ಮೋದಿಜಿಯವರ ನಾಯಕತ್ವದಲ್ಲಿ ಜಿ-20 ಅಧ್ಯಕ್ಷತೆ ಸ್ಥಾನವು ಭಾರತಕ್ಕೆ ಲಭಿಸಿದೆ. ಕ್ರೀಡೆಗಳಲ್ಲಿ ಅತ್ಯುನ್ನತ ಸಾಧನೆಯನ್ನು ದೇಶವು ಸಾಧಿಸಿದೆ.
ಭಾರತವನ್ನು ವಿಕಸಿತಗೊಳಿಸುವ ಆಂದೋಲನವು ಒಬ್ಬ ನರೇಂದ್ರ(ಸ್ವಾಮಿ ವಿವೇಕಾನಂದ) ಅವರಿಂದ ಆರಂಭಗೊಂಡು ಈಗ ಇನ್ನೊಬ್ಬ ನರೇಂದ್ರ(ಪ್ರಧಾನಮಂತ್ರಿ ನರೇಂದ್ರ ಮೋದೀಜಿ) ಅವರ ಮೂಲಕ ಮುಂದುವರಿದಿದೆ.
ಭ್ರಷ್ಟಾಚಾರ ಮುಕ್ತ, ನಶಾಮುಕ್ತವಾಗಿರುವ ಸ್ವಸ್ಥ ಮತ್ತು ಸದೃಢ ಭಾರತ ನಿರ್ಮಾಣಕ್ಕೆ ಯುವಜನತೆ ಕೈಜೋಡಿಸಬೇಕು ಎಂದು ಕೇಂದ್ರ ಸಚಿವ ಅನುರಾಗ ಸಿಂಗ್ ಠಾಕೂರ್ ಅವರು ಕರೆ ನೀಡಿದರು.
ಕೇಂದ್ರ ಸಂಸದೀಯ ವ್ಯವಹಾರಹಗಳು,ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಹ್ಲಾದ್ ಜೋಶಿ ಮಾತನಾಡಿ,ಸ್ವಾಮಿ ವಿವೇಕಾನಂದರ ಜಯಂತಿಯ ಈ ಸಂದರ್ಭದಲ್ಲಿ ಮೊಟ್ಟ ಮೊದಲ ಬಾರಿಗೆ ಉತ್ತರ ಕರ್ನಾಟಕದಲ್ಲಿ ರಾಷ್ಟ್ರೀಯ ಯುವಜನೋತ್ಸವ ಆಯೋಜಿಸಲಾಗಿದೆ.ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಹೊಂದಿರುವ ಭಾರತ ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ.ಪ್ರಧಾನ ಮಂತ್ರಿಯವರ ಆಶೀರ್ವಾದದಿಂದ ಧಾರವಾಡ ಜಿಲ್ಲೆಗೆ ಐಐಟಿ,ಐಐಐಟಿ,ನವದೆಹಲಿಗೆ,ಕಾಶಿಗೆ ನೇರ ವಿಮಾನಯಾನ ಸೌಕರ್ಯ ದೊರೆತಿದೆ.ದೇಶದ ಯುವ ಜನತೆ ಉತ್ಸಾಹದಿಂದ ಉತ್ಸವದಲ್ಲಿ ಭಾಗವಹಿಸುತ್ತಿರುವುದು ಸಂತಸ ತಂದಿದೆ ಎಂದರು.
ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಕೈಮಗ್ಗ ಮತ್ತು ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಇಲಾಖೆಯ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅಧ್ಯಕ್ಷತೆ ವಹಿಸಿದ್ದರು.
ಏಲಕ್ಕಿ ಹಾರ,ವಿವೇಕಾನಂದರ ವಿಗ್ರಹ, ರಾಷ್ಟ್ರಧ್ವಜ ಚೌಕಟ್ಟಿನ ಸ್ಮರಣಿಕೆ:
ಸಾಂಪ್ರದಾಯಿಕ ಶಾಲು ಹೊದಿಸಿ,ಹಾವೇರಿಯ ಏಲಕ್ಕಿ ಹಾರ,ಮುತ್ತಿನಿಂದ ಅಲಂಕರಿಸಿದ ಪೇಟ ತೊಡಿಸಿ,ತೇಗದ ಮರದಲ್ಲಿ ತಯಾರಿಸಿದ ಸ್ವಾಮಿ ವಿವೇಕಾನಂದರ ವಿಗ್ರಹ,ಗರಗ-ಬೆಂಗೇರಿಯಲ್ಲಿ ಸಿದ್ಧವಾಗುವ ರಾಷ್ಟ್ರಧ್ವಜವನ್ನು ಅಳವಡಿಸಿದ ಚೌಕಟ್ಟಿನ ಸ್ಮರಣಿಕೆ ನೀಡಿ ಪ್ರಧಾನಿಯವರನ್ನು ಗೌರವಿಸಲಾಯಿತು.
ಕೇಂದ್ರ ಗೃಹ ವ್ಯವಹಾರಗಳು ಹಾಗೂ ಯುವ ವ್ಯವಹಾರಗಳು ಮತ್ತು ಕ್ರೀಡಾ ಇಲಾಖೆಯ ರಾಜ್ಯ ಸಚಿವರಾದ ನಿಸಿತ್ ಪ್ರಮಾಣಿಕ್,
ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕರ್ನಾಟಕ ಸರ್ಕಾರದ ಯುವ ಸಬಲೀಕರಣ, ಕ್ರೀಡೆ ಹಾಗೂ ರೇಷ್ಮೆ ಇಲಾಖೆಯ ಸಚಿವರಾದ ಡಾ.ಕೆ.ಸಿ.ನಾರಾಯಣಗೌಡ,ಗಣಿ-ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಆಚಾರ್ ಹಾಲಪ್ಪ ಬಸಪ್ಪ, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ,ಮಾಜಿ ಮುಖ್ಯಮಂತ್ರಿ,ಶಾಸಕ ಜಗದೀಶ ಶೆಟ್ಟರ್,ಶಾಸಕರಾದ ಅಮೃತ ದೇಸಾಯಿ,ಅರವಿಂದ ಬೆಲ್ಲದ,ವಿಧಾನಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ,ಪ್ರದೀಪ ಶೆಟ್ಟರ್,ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ,ಜಂಗಲ್ ರೆಸಾರ್ಟ್ಸ ಅಭಿವೃದ್ದಿ ನಿಗಮ ಅಧ್ಯಕ್ಷ ರಾಜು ಕೋಟೆಣ್ಣವರ,ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಮಹಾಪೌರ ಈರೇಶ್ ಅಂಚಟಗೇರಿ ಮತ್ತಿತರರು ವೇದಿಕೆಯಲ್ಲಿದ್ದರು.
ಚಿತ್ತಾಕರ್ಷಕ ಪಥಸಂಚಲನ:
ದೇಶದ ವೈವಿಧ್ಯಮಯ ಕಲೆ,ಪೋಷಾಕು,ಸಂಸ್ಕೃತಿಗಳನ್ನು ಪ್ರತಿಬಿಂಬಿಸುವ ಚಿತ್ತಾಕರ್ಷಕ ಪಥಸಂಚಲನವು ವಿವಿಧ ರಾಜ್ಯಗಳ ತಂಡಗಳಿಂದ ಜರುಗಿತು.ರಾಷ್ಟ್ರೀಯ ಯೋಗಾಸನ ಮತ್ತು ಕ್ರೀಡಾ ಫೆಡರೇಷನ್ನಿನ ವಿದ್ಯಾರ್ಥಿಗಳಿಂದ ಕಲಾತ್ಮಕ ಯೋಗಾಸನ ಮತ್ತು ಮಲ್ಲಕಂಬ ಸಾಹಸಗಳ ಪ್ರದರ್ಶನ ಜರುಗಿತು.
*Breaking News – ಹುಬ್ಬಳ್ಳಿ: ಪ್ರಧಾನಿ ಮೋದಿ ರೋಡ್ ಶೋ ವೇಳೆ ಭದ್ರತಾ ವೈಫಲ್ಯ*
https://pragati.taskdun.com/hublipm-modi-road-showsecurity-failure/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ