ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಿಜೆಪಿ ಮುಖಂಡರು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕ ಹಾಗೂ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಹಾಲಾಹಲ ಕದಡಿದ್ದಾರೆ.
ಸಂಸದೆ ಮಂಗಲಾ ಅಂಗಡಿ, ಶಾಸಕ ಅನಿಲ ಬೆನಕೆ ಮತ್ತಿತರ ಮುಖಂಡರ ಉಪಸ್ಥಿತಿಯಲ್ಲಿ ಬಿಜೆಪಿ ವಕ್ತಾರ ಎಂ.ಬಿ. ಜಿರಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮುಗಿಯುತ್ತಿದ್ದಂತೆ ಮಾಧ್ಯಮದವರ ವಿರುದ್ಧ ಅಪಶೃತಿ ಎತ್ತಿದ ಸಂಜಯ ಪಾಟೀಲ “ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕುಕ್ಕರ್ ಹಂಚಿಕೆ, ತೆಂಗಿನಕಾಯಿ ಮುಟ್ಟಿ ಪ್ರಮಾಣದಂಥ ಪ್ರಕರಣಗಳು ನಡೆಯುತ್ತಿದ್ದರೂ ಮಾಧ್ಯಮದವರು ಸುದ್ದಿ ಮಾಡುತ್ತಿಲ್ಲ” ಎಂದು ಶುರುವಿಟ್ಟುಕೊಂಡರು.
“ನಿಮ್ಮ ಹುಟ್ಟು ಹಬ್ಬದ ನೆಪದಲ್ಲಿ ನೀವು ಜನರಿಗೆ ಉಡುಗೊರೆ ಕೊಟ್ಟಿಲ್ಲವೇ? ನಿಮಗೆ ಆ ಬಗ್ಗೆ ಮಾತನಾಡುವ ನೈತಿಕ ಹಕ್ಕಿದೆಯೇ” ಎಂದು ಮಾಧ್ಯಮದವರು ಮರುಸವಾಲು ಹಾಕುತ್ತಿದ್ದಂತೆಯೇ ಒಂದೆಡೆ ಸೂಕ್ತ ಉತ್ತರ ನೀಡಲಾಗದ ಫಜೀತಿ, ಇನ್ನೊಂದೆಡೆ ಅರಗಿಸಿಕೊಳ್ಳಲಾಗದೆ ಆಕ್ರೋಶದ ಮಧ್ಯೆ “ಮಾಧ್ಯಮದವರು ದಾದಾಗಿರಿ ಮಾಡುತ್ತಿದ್ದೀರಿ, ನಿಮ್ಮನ್ನು ನಾವು ಕರೆದಿದ್ದೇವೆ, ನಾವು ಹೇಳಿದ್ದನ್ನು ಕೇಳಿಸಿಕೊಳ್ಳಿ” ಎಂದೆಲ್ಲ ಕೂಗಾಡಲಾರಂಭಿಸಿದರು.
ಮಾತಿಗೆ ಮಾತು ಬೆಳೆಸುತ್ತ “ನನಗೆ ಬೇರೆ ಕಡೆಯ ಮಾಧ್ಯಮದವರೂ ಗೊತ್ತು, ನಾನು ಇಡೀ ದೇಶ ಸುತ್ತುತ್ತೇನೆ, ನನ್ನ ಪ್ರಶ್ನೆಗೆ ಉತ್ತರ ಕೊಡಿ..” ಎಂದೆಲ್ಲ ಕೂಗಾಡಿದ ಸಂಜಯ್ ಪಾಟೀಲ್ ಮಾಧ್ಯಮದವರ ಪ್ರಶ್ನೆಗೆ ಮಾತ್ರ ಉತ್ತರಿಸಲಾಗದೆ ವ್ಯರ್ಥ ವಾಗ್ವಾದ ಮಾತ್ರ ಮುಂದುವರಿಸಿದ್ದರು. (ವಿಡೀಯೋ ನೋಡಿ)
ಈ ಮಧ್ಯೆ ಸುದ್ದಿಗೋಷ್ಠಿಯಲ್ಲಿದ್ದ ಇತರ ಬಿಜೆಪಿ ಮುಖಂಡರು, ಶಾಸಕರು, ಸಂಸದರೆಲ್ಲ ಇರಿಸುಮುರುಸಿಗೆ ಒಳಗಾಗಿ ಸಂಜಯ್ ಪಾಟೀಲರ ಕೋಪಾಗ್ನಿ ತಣಿಸಲು ಕಿವಿಯೂದಿದರೂ, ಮೈದಡವಿದರೂ ಸಂಜಯ ಪಾಟೀಲ್ ಮಾತ್ರ ಇಕ್ಕಟ್ಟಿನ ನಡುವೆ ತಮ್ಮನ್ನು ಸಮರ್ಥಿಸಿಕೊಳ್ಳಲು ಶತ ಪ್ರಯತ್ನ ನಡೆಸಿದ್ದರು.
ಇತ್ತ ಮಾಧ್ಯಮದವರ ನಿರಂತರ ಪ್ರಶ್ನೆಗಳ ಸುರಿಮಳೆಗೆ ಈಡಾದ ಸಂಜಯ ಪಾಟೀಲ್ ಕೊನೆಗೆ ಕ್ಷಮೆ ಯಾಚಿಸುವ ಮೂಲಕ ವಾಗ್ವಾದಕ್ಕೆ ಅಂತ್ಯ ಹಾಡಿದರು.
ವೋಟಿಗಾಗಿ ನೋಟು; ಚುನಾವಣಾ ಆಯೋಗ ಕಳವಳ
https://pragati.taskdun.com/affidavit-submitted-to-the-supreme-court-that-the-commission-has-taken-serious-consideration-of-increasing-influence-of-money-power-in-the-elections/
*ಕೆಎಂಸಿ ಸರ್ಜನ್ ಡಾ.ಬಾಲಾಜಿ ಅರೆಸ್ಟ್*
https://pragati.taskdun.com/drugsganja-casemangalore-kmc-doctordr-balajiarrested/
ವಿಶ್ವದ ಅತಿ ಉದ್ದದ ನದಿ ಕ್ರೂಸ್ ಎಂವಿ ಗಂಗಾ ವಿಲಾಸ್ಗೆ ಚಾಲನೆ ನೀಡಿದ ಪ್ರಧಾನಿ ಮೋದಿ
https://pragati.taskdun.com/prime-minister-modi-launched-worlds-longest-river-cruise-mv-ganga-vilas/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ