
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳನ್ನು ಗುರುತಿಸಿ ಮುಖ್ಯವಾಹಿನಿಗೆ ತರುವಲ್ಲಿ ಎಲ್ಲ ಅಧಿಕಾರಿಗಳು ಸಮನ್ವಯತೆ ಸಾಧಿಸಿ ಕಾರ್ಯಪ್ರವೃತ್ತರಾಗಲು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು ನಡೆದ ಬಾಲನ್ಯಾಯಾಲಯ ಕಾಯ್ದೆ, ಆರ್.ಟಿ.ಇ., ಲೈಂಗಿಕ ದೌರ್ಜನ್ಯದಿಂದ ಮಕ್ಕಳ ಸಂರಕ್ಷಣಾ ಕಾಯ್ದೆ(ಪೋಕ್ಸೊ) ಅನುಷ್ಠಾನ ಕುರಿತು ಜಿಲ್ಲೆಯ ಎಲ್ಲ ಭಾಗೀದಾರರೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲೈಂಗಿಕ ದೌರ್ಜನ್ಯ, ಅಪೌಷ್ಟಿಕತೆ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಭಿಕ್ಷಾಟನೆ ಸೇರಿದಂತೆ ವಿವಿಧ ಬಗೆಯಲ್ಲಿ ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳನ್ನು ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಗಂಭೀರವಾಗಿ ನಡೆಯಬೇಕಿದೆ ಎಂದು ಅವರು ತಿಳಿಸದರು.
ಕೆಲವು ಶಾಲೆಗಳಲ್ಲಿ ಕೆಲ ಶಿಕ್ಷಕರು ತಮ್ಮ ಮಕ್ಕಳ ವಯಸ್ಸಿನ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿರುವುದು ಖೇದಕರ. ಇಂಥವುಗಳಿಗೆ ಕಡಿವಾಣ ಹಾಕಬೇಕಿದೆ ಎಂದು ಅವರು ತಿಳಿಸಿದರು.
ಶಾಲೆಗಳಲ್ಲಿ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣವೇ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು. ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಿಕ್ಷಣದ ಮುಖ್ಯ ವಾಹಿನಿಗೆ ಕರೆತರಬೇಕು ಎಂದು ಅವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಶಾಲಾ ಮಕ್ಕಳಲ್ಲಿ ಪೌಷ್ಟಿಕ ಆಹಾರದ ಮಹತ್ವ ಕುರಿತು ಅರಿವು ಮೂಡಿಸಬೇಕು. ಬಿಸಿಯೂಟ ತಯಾರಿಸುವ ವೇಳೆ ಸ್ವಚ್ಛತೆ, ಗುಣಮಟ್ಟ ಹಾಗೂ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಈ ಕುರಿತು ಆಗಾಗ ಸಭೆಗಳನ್ನು ನಡೆಸಬೇಕು ಎಂದು ಅವರು ಸೂಚಿಸಿದರು.
ವಾರಸುದಾರರಿಲ್ಲದ ನವಜಾತ ಶಿಶುಗಳು ಪತ್ತೆಯಾದಾಗ ಕೂಡಲೇ ನಿಯಮಾವಳಿ ಪ್ರಕಾರ ದತ್ತುಕೇಂದ್ರಗಳಿಗೆ ಮಾಹಿತಿ ನೀಡಲು ಅವರು ಆದೇಶಿಸಿದರು.
ಸಹಾಯವಾಣಿಗೆ ಮಾಹಿತಿ ನೀಡಲು ಸೂಚನೆ:
ಬಾಲ್ಯವಿವಾಹ, ಲೈಂಗಿಕ ದೌರ್ಜನ್ಯ ಸೇರಿದಂತೆ ಮಕ್ಕಳಿಗೆ ಯಾವುದೇ ರೀತಿಯ ಸಮಸ್ಯೆಯಾದಾಗ 1098 ಅಥವಾ 112 ಗೆ ತಕ್ಷಣ ಮಾಹಿತಿ ನೀಡಬೇಕು. ವಲಸೆ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯ ಒದಗಿಸಬೇಕು.
ಬಾಲಕಾರ್ಮಿಕರು, ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ಸಮಾಜ ಕಲ್ಯಾಣ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಗುರುತಿಸಿ ಅವರಿಗೆ ಕೌನ್ಸಿಲಿಂಗ್ ಮೂಲಕ ಮನ ಪರಿವರ್ತಿಸಿ ಸರಕಾರಿ ಸೌಲಭ್ಯಗಳನ್ನು ಒದಗಿಸಬೇಕು ಎಂದರು.
ಬಾಲಕಿಯರ ವಸತಿಶಾಲೆಗಳಲ್ಲಿ ಯಾವುದೇ ಕಾರಣಕ್ಕೂ ಪುರುಷ ವಾರ್ಡನ್ ಇರಕೂಡದು. ಒಂದು ವೇಳೆ ಇದ್ದರೆ ಬದಲಾಯಿಸಬೇಕು ಎಂದರು.
ವಸತಿ ನಿಲಯದ ಮಕ್ಕಳಿಗೆ ಗುಣಮಟ್ಟದ ಆಹಾರ ಒದಗಿಸುವುದರ ಜತೆಗೆ ಓದಿಗೆ ಪೂರಕವಾದ ವಾತಾವರಣ ಕಲ್ಪಿಸಬೇಕು ಎಂದರು.
ಬಾಲ್ಯವಿವಾಹ ತಡೆಗೆ ಖಡಕ್ ಆದೇಶ:
ಬಾಲ್ಯವಿವಾಹ ತಡೆಗೆ ರಚಿಸಲಾಗಿರುವ ಸಮಿತಿಗಳ ಸದಸ್ಯರು ತಮ್ಮ ಜವಾಬ್ದಾರಿ ಅರಿತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಇದರಲ್ಲಿ ವಿಫಲವಾದಲ್ಲಿ ಅಂಥ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಕೆ.ನಾಗಣ್ಣಗೌಡ ಎಚ್ಚರಿಕೆ ನೀಡಿದರು.
ಕೌಟುಂಬಿಕ ದೌರ್ಜನ್ಯ ಸಂದರ್ಭದಲ್ಲಿ ವ್ಯತಿರಿಕ್ತವಾಗಿ ಪರಿಣಾಮ ಎದುರಿಸುವ ಮಕ್ಕಳ ಹಿತರಕ್ಷಣೆಗೆ ಆದ್ಯತೆ ನೀಡಬೇಕು. ಮಕ್ಕಳ ಹಕ್ಕುಗಳ ರಕ್ಷಣೆ ಸಮುದಾಯದಲ್ಲಿ ಸಮುದಾಯವೂ ಜವಾಬ್ದಾರಿ ಹೊರಬೇಕು. ಸಮುದಾಯ ಕೂಡ ಸರಕಾರಿ ಇಲಾಖೆಗಳೊಂದಿಗೆ ಕೈಜೋಡಿಸಬೇಕು ಎಂದರು.
ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರತರುವ ನಿಟ್ಟಿನಲ್ಲಿ ಆಟಪಾಠಗಳನ್ನು ಜಾರಿಗೊಳಿಸಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದರು.
ಮಕ್ಕಳ ಕಳ್ಳ ಸಾಗಾಣಿಕೆ, ಕಾಣೆಯಾದ ಪ್ರಕರಣಗಳು, ಪೋಕ್ಸೋ ಮತ್ತಿತರ ಪ್ರಕರಣಗಳ ಬಗ್ಗೆ ನಿಗಾ ವಹಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಅವರು ತಿಳಿಸಿದರು.
ಲಿಖಿತ ಮಾಹಿತಿಗೆ ಡಿಸಿ ಸೂಚನೆ:
ಬಾಲ್ಯವಿವಾಹ ಹಾಗೂ ಅಪ್ರಾಪ್ತ ಗರ್ಭಿಣಿಯರು ಕಂಡುಬಂದಾಗ ವಯಸ್ಸನ್ನು ದೃಢೀಕರಿಸುವಾಗ ಆರೋಗ್ಯ ಇಲಾಖೆಯ ಅಧಿಕಾರಿಗಳು ಕಟ್ಟುನಿಟ್ಟಾಗಿ ದಾಖಲೆಗಳನ್ನು ಪರಿಶೀಲಿಸಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚಿಸಿದರು.
ಬೆಳಗಾವಿ ಹಾಗೂ ಖಾನಾಪುರದ ಬಾಲಕರ ಅನುಪಾಲನಾ ಗೃಹ ಹಾಗೂ ಸವದತ್ತಿಯಲ್ಲಿರುವ ಬಾಲಕಿಯರ ಅನುಪಾಲನಾ ಗೃಹದಲ್ಲಿ ಸಾಕಷ್ಟು ಅವಕಾಶವಿದೆ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಹೊಂದಬೇಕು ಎಂದರಲ್ಲದೆ, ಭಿಕ್ಷಾಟನೆಯಿಂದ ರಕ್ಷಿಸಲ್ಪಟ್ಟವರ ಪುನರ್ವಸತಿ ಕೇಂದ್ರ ಸ್ಥಾಪನೆಗೆ ಪ್ರಸ್ತಾವ ಸಲ್ಲಿಸುವಂತೆ ತಿಳಿಸಿದರು.
ಶಾಲಾ ಮಕ್ಕಳಿಗೆ ಉತ್ತಮ ಬಸ್ ಸೌಕರ್ಯ ಒದಗಿಸಲು ಅನುಕೂಲವಾಗುವಂತೆ ಶಾಲಾ ಅವಧಿಯಲ್ಲಿ ಸ್ವಲ್ಪಮಟ್ಟಿಗೆ ಬದಲಾವಣೆ ತರುವ ಕುರಿತು ಹೊಸದೊಂದು ಪ್ರಯೋಗ ಮಾಡುವ ಅಗತ್ಯವಿದೆ.
ಈ ಕುರಿತು ಶಿಕ್ಷಣ ಹಾಗೂ ಸಾರಿಗೆ ಇಲಾಖೆ ಸೂಕ್ತ ನಿರ್ಧಾರ ಕೈಗೊಂಡರೆ ಉತ್ತಮ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಅವರು ಮಾತನಾಡಿ, ವಸತಿಶಾಲೆಗಳಿಗೆ ಕೆಲವು ಮೂಲಸೌಕರ್ಯವನ್ನು ನರೇಗಾ ಯೋಜನೆಯಡಿ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಕೆಗೆ ಸಂಬಂಧಿಸಿದಂತೆ ಗುಣಮಟ್ಟ ಹಾಗೂ ಸ್ವಚ್ಛತೆ ಕಾಪಾಡಲು ನಿಯಮಿತವಾಗಿ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಸಭೆಯಲ್ಲಿ ತಿಳಿಸಿದರು.
ಶಾಲೆಬಿಟ್ಟ ಮಕ್ಕಳ ಟ್ರ್ಯಾಕಿಂಗ್ ಪದ್ಧತಿಯ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ಮಕ್ಕಳ ಶಿಕ್ಷಣದ ಮೇಲೆ ನಿಗಾ ವಹಿಸಲಾಗುತ್ತಿದೆ. ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಬಿಸಿಯೂಟ ನೀಡಲಾಗುತ್ತಿದೆ ಎಂದು ಸಿಇಓ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಸವರಾಜ ಅವರು, ಬಾಲ್ಯವಿವಾಹ ತಡೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು.
ಬಾಲ್ಯವಿವಾಹ ತಡೆಯುವ ವೇಳೆ ಯಾರಾದರೂ ಜನಪ್ರತಿನಿಧಿಗಳು ಅಥವಾ ಸ್ಥಳೀಯ ಮುಖಂಡರು ಒತ್ತಡ ಹೇರಿದರೆ ತಮ್ಮ ಗಮನಕ್ಕೆ ತರುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಹೇಳಿದರು.
ನ್ಯಾಯಾಲಯ ಪ್ರಕರಣಗಳನ್ನು ಸಮರ್ಪಕವಾಗಿ ನಿಭಾಯಿಸಲು ಅನುಕೂಲವಾಗುವಂತೆ ಪ್ರಕರಣಗಳ ನಿಗಾ ಘಟಕವನ್ನು ಜನವರಿಯಿಂದ ಆರಂಭಿಸಲಾಗಿದೆ. ಸಾಕ್ಷಿದಾರರಿಗೆ ಪ್ರಕರಣದ ಬಗ್ಗೆ ಅರಿವು ನೀಡಲಾಗುತ್ತಿದೆ. ಕಾಣೆಯಾದ ಮಕ್ಕಳನ್ನು 24 ಗಂಟೆಗಳಲ್ಲಿ ಪತ್ತೆ ಮಾಡಲು ನಿರ್ದೇಶನ ನೀಡಲಾಗಿದೆ. ಠಾಣೆಮಟ್ಟದ ಅಧಿಕಾರಿಗಳಿಗೆ ಕೂಡ ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಸಂಜೀವ ಪಾಟೀಲ ತಿಳಿಸಿದರು.
ಶಾಲಾ ಮಕ್ಕಳಿಗೆ ಉತ್ತಮ ಬಸ್ ಸೌಕರ್ಯ ಒದಗಿಸಲು ಅನುಕೂಲವಾಗುವಂತೆ ಶಾಲಾ ಅವಧಿಯಲ್ಲಿ ಸ್ವಲ್ಪಮಟ್ಟಿಗೆ ಬದಲಾವಣೆ ತರುವ ಕುರಿತು ಹೊಸದೊಂದು ಪ್ರಯೋಗ ಮಾಡಬೇಕಿದೆ ಎಂದು ಸಂಜೀವ ಪಾಟೀಲ ಸಲಹೆಯಿತ್ತರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮುರಳಿ ಮನೋಹರ ರೆಡ್ಡಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಬಸವರಾಜ ನಾಲತವಾಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ, ಆರೋಗ್ಯ, ಸಮಾಜಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳು, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು, ಮಕ್ಕಳ ರಕ್ಷಣಾ ಘಟಕದ ಸದಸ್ಯರು, ಪೊಲೀಸ್ ಇಲಾಖೆಯ ಅಧಿಕಾರಿಗಳು, ಬಾಲನ್ಯಾಯಾಲಯ ಕಾಯ್ದೆ, ಆರ್.ಟಿ.ಇ. ಕಾಯ್ದೆ, ಲೈಂಗಿಕ ದೌರ್ಜನ್ಯದಿಂದ ಮಕ್ಕಳ ಸಂರಕ್ಷಣಾ ಕಾಯ್ದೆ(ಪೋಕ್ಸೊ) ಅನುಷ್ಠಾನ ಕುರಿತು ಜಿಲ್ಲೆಯ ಎಲ್ಲ ಭಾಗೀದಾರರು ಸಭೆಯಲ್ಲಿ ಪಾಲ್ಗೊಂಡಿದ್ದರು.
*ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ*
https://pragati.taskdun.com/cm-basavaraj-bommaib-k-hariprasadreactionchikkamagaluru-habba/
*ಬೆಳಗಾವಿ ಮೂಲದ ಆರೋಗ್ಯಾಧಿಕಾರಿ ಆತ್ಮಹತ್ಯೆ; ಕಾರಣವೇನು?*
https://pragati.taskdun.com/health-officersuicideabalaganahallikolara/
*ನೀರಾವರಿ ಸೌಲಭ್ಯಕ್ಕೆ 2 ಲಕ್ಷ ಕೋಟಿ ಮೀಸಲು; ವಚನ ನೀಡಿದ ಡಿ.ಕೆ.ಶಿವಕುಮಾರ್*
https://pragati.taskdun.com/d-k-shivakumarprajadhwanibagalakote/