ಪ್ರಗತಿವಾಹಿನಿ ಸುದ್ದಿ, ಪಾರಿಜಾತ ಪಿತಾಮಹ ಕುಲಗೋಡ ತಮ್ಮಣ್ಣ ವೇದಿಕೆ ಶಿವಾಪುರ(ಹ)-(ತಾ:ಮೂಡಲಗಿ) : ಕೇಂದ್ರ ಸರ್ಕಾರದ ಅಧೀನದಲ್ಲಿ ನಡೆಯುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳು ಕನ್ನಡದಲ್ಲಿಯೇ ನಡೆಯುವುದರಿಂದ ರಾಜ್ಯದ ಅಭ್ಯರ್ಥಿಗಳಿಗೆ ಉದ್ಯೋಗಗಾವಕಾಶಗಳು ಸೃಷ್ಟಿಯಾಗಲಿವೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಲಹೆ ನೀಡಿದರು.
ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಕನ್ನಡ ಸಾಹಿತ್ಯ ಪರಿಷತ್ತು ಮೂಡಲಗಿ ತಾಲೂಕು ಘಟಕ ಆಯೋಜಿಸಿದ್ದ ಮೂಡಲಗಿ ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರೀಯ ಪರೀಕ್ಷೆಗಳು ಕನ್ನಡದಲ್ಲಿಯೇ ನಡೆಸುವಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿಕೊಳ್ಳುವುದಾಗಿ ಅವರು ಹೇಳಿದ ಅವರು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸಹ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ಸಹ ದೊರೆಯುತ್ತಿದೆ. ಇತ್ತೀಚೆಗೆ ಕೆಎಂಎಫ್ ಸಂಸ್ಥೆಯಿಂದ ನಡೆಸಿರುವ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ. ಹೀಗಾಗಿ ಕೇಂದ್ರೀಯ ಪರೀಕ್ಷೆಗಳನ್ನು ಮಾತೃಭಾಷೆಯಲ್ಲಿ ನಡೆಸಿದರೆ ರಾಜ್ಯದವರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದರು.
ಮೂಡಲಗಿ ಹೊಸ ತಾಲೂಕು ಕೇಂದ್ರವಾಗಿ ಮಾರ್ಪಟ್ಟ ನಂತರ ಇಲ್ಲಿನ ಭೂಮಿಯ ಬೆಲೆ ಗಗನಕ್ಕೇರಿದೆ. ಆದಾಗ್ಯೂ ಸಾಹಿತ್ಯ ಪರಿಷತ್ತಿನ ಮನವಿಯ ಮೇರೆಗೆ ಸಾಹಿತ್ಯಾಸಕ್ತರಿಗೆ ಅನುಕೂಲವಾಗಲು ಮೂಡಲಗಿಯಲ್ಲಿ ಸಾಹಿತ್ಯ ಭವನ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ಭರವಸೆ ನೀಡಿದರು.
ರಾಜ್ಯದಲ್ಲಿ ಕನ್ನಡ ಭಾಷೆ ಗಟ್ಟಿಯಾಗಿ ನಿಲ್ಲಬೇಕು. ಇದಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡಲು ತಾವು ಬದ್ಧ ಎಂದ ಬಾಲಚಂದ್ರ ಜಾರಕಿಹೊಳಿ, ಕನ್ನಡ ನಾಡು-ನುಡಿ, ನೆಲ-ಜಲ ವಿಷಯಗಳು ಬಂದಾಗ ಎಲ್ಲರೂ ಸಂಘಟಿತರಾಗಿ ಹೋರಾಡಬೇಕಿದೆ ಎಂದರು.
ಜಾನಪದ ಕಲೆಗಳು ಆಧುನಿಕ ಭರಾಟೆಯಲ್ಲಿ ನಶಿಸಿ ಹೋಗುತ್ತಿದ್ದು, ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಮೂಡಲಗಿ ಮತ್ತು ಗೋಕಾಕ ತಾಲೂಕಿನಲ್ಲಿ ಹಲವಾರು ಜಾನಪದ ಕಲೆಗಳು, ಕಲಾವಿದರಿದ್ದು, ಕಲೆಗಳನ್ನು ಸಂರಕ್ಷಿಸುವುದು ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
93 ರ ವಯಸ್ಸಿನ ಹಿರಿಯ ಸಾಹಿತಿ ರೇ. ಭಾಸ್ಕರ ಸಣ್ಣಕ್ಕಿ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಿರುವುದು ಸಮ್ಮೇಳನಕ್ಕೆ ಕಳೆ ತಂದಿದೆ. ದಲಿತ ವ್ಯಕ್ತಿಗೆ ದೊಡ್ಡ ಗೌರವ ನೀಡಿರುವ ಕಸಾಪದ ಕ್ರಮ ಅಭಿನಂದನೀಯ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ, ಶಿವಾಪುರ(ಹ) ಗ್ರಾಮದಲ್ಲಿ ನಡೆಯುತ್ತಿರುವ ಸಮ್ಮೇಳನವು ಐತಿಹಾಸಿಕವಾಗಿದೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದಾಗಿ ಗೋಕಾಕ ಮತ್ತು ಮೂಡಲಗಿ ತಾಲೂಕುಗಳಲ್ಲಿ ನಿರಂತರವಾಗಿ ಕನ್ನಡದ ಕೆಲಸಗಳು ಅಚ್ಚುಕಟ್ಟಾಗಿ ನಡೆಯುತ್ತಿರುವುದು ಅಭಿನಂದನೀಯ ಎಂದರು.
ಮೂಡಲಗಿ ಶಿವಬೋಧರಂಗ ಮಠದ ಶ್ರೀಧರಬೋಧ ಸ್ವಾಮಿಗಳು ಮತ್ತು ಸುಣಧೋಳಿ ಶಿವಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ಗ್ರಾಮದ ಗಣ್ಯ ಮಲ್ಲನಗೌಡ ಶಂಕರಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ಕಸಾಪ ಅಧ್ಯಕ್ಷ ಡಾ.ಸಂಜಯ ಶಿಂಧಿಹಟ್ಟಿ ಅವರು ಪರಿಷತ್ತಿನ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ನಿಕಟಪೂರ್ವ ಸರ್ವಾಧ್ಯಕ್ಷ ಪ್ರೋ.ಸಂಗಮೇಶ ಗುಜಗೊಂಡ ಅವರು ಸಮ್ಮೇಳನದ ಸರ್ವಾಧ್ಯಕ್ಷ ಭಾಸ್ಕರ ಸಣ್ಣಕ್ಕಿ ಅವರಿಗೆ ಧ್ವಜ ಹಸ್ತಾಂತರಿಸಿದರು.
ಸಾಹಿತ್ಯ ಸಮ್ಮೇಳನದ ಪರವಾಗಿ ಅವರನ್ನು ಶಾಸಕರು ಸತ್ಕರಿಸಿದರು.
ವೇದಿಕೆಯಲ್ಲಿ ಘಟಪ್ರಭಾ ಜೆಜಿ ಕೋ ಆಸ್ಪತ್ರೆಯ ಅಧ್ಯಕ್ಷ ಬಿ.ಆರ್. ಪಾಟೀಲ (ನಾಗನೂರ), ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ(ಕಲ್ಲೋಳಿ), ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಗ್ರಾಪಂ ಅಧ್ಯಕ್ಷ ಬಸವರಾಜ ಸಾಯನ್ನವರ, ಶಿವನಗೌಡ ಪಾಟೀಲ, ಈಶ್ವರ ಬೆಳಗಲಿ, ಕೆಂಪಣ್ಣಾ ಮುಧೋಳ, ಶಿವಬಸು ಜುಂಜರವಾಡ, ಕಾಡಪ್ಪ ರೊಡ್ಡನ್ನವರ, ಶಿವನಪ್ಪ ರಡರಟ್ಟಿ, ಸತೀಶ ಜುಂಜರವಾಡ, ಈರಯ್ಯಾ ಹಿರೇಮಠ, ಬಸಪ್ಪ ಮುಗಳಖೋಡ, ಬಸವರಾಜ ತೇಲಿ, ಹನಮಂತ ತೇರದಾಳ, ಶಂಕರಗೌಡ ದುಂ. ಪಾಟೀಲ, ಅಜ್ಜಪ್ಪ ಗಿರಡ್ಡಿ, ಆನಂದರಾವ್ ನಾಯ್ಕ, ನಿವೃತ್ತ ಪ್ರಾಧ್ಯಾಪಕ ಪ್ರೊ. ಚಂದ್ರಶೇಖರ ಅಕ್ಕಿ, ಗೋಕಾಕ ತಾಲೂಕಾ ಕಸಾಪ ಅಧ್ಯಕ್ಷೆ ಭಾರತಿ ಮದಬಾವಿ, ಬಾಳಪ್ಪ ಬೆಳಕೂಡ, ಎಂ.ಎಂ. ಪಾಟೀಲ, ಹನಮಂತ ಗುಡ್ಲಮನಿ, ಸಂತೋಷ ಸೋನವಾಲಕರ, ತಹಸಿಲ್ದಾರ ಡಿ.ಜಿ. ಮಹಾತ್, ತಾಪಂ ಇಓ ಎಫ್.ಜಿ. ಚಿನ್ನನ್ನವರ, ಬಿಇಓ ಅಜಿತ್ ಮನ್ನಿಕೇರಿ, ಸಿಪಿಐ ಶ್ರೀಶೈಲ ಬ್ಯಾಕೋಡ, ಸಿಡಿಪಿಓ ವೈ.ಕೆ. ಗದಾಡಿ, ಡಾ.ಭಾರತಿ ಕೋಣಿ, ಬಾಲಶೇಖರ ಬಂದಿ ಮತ್ತಿತರರು ಉಪಸ್ಥಿತರಿದ್ದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ನಾಡದೇವಿ ಶ್ರೀ ಭುವನೇಶ್ವರಿ ಪೂಜೆ ಹಾಗೂ ಅದ್ಧೂರಿ ಮೆರವಣಿಗೆ ನಡೆಯಿತು.
ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಸಮನ್ವಯದ ಕಾರ್ಯವಾಗಲಿ: ಕೆ.ನಾಗಣ್ಣಗೌಡ
https://pragati.taskdun.com/conciliation-should-be-done-to-bring-children-in-legal-conflict-into-the-mainstream-k-naganna-gowda/
*ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ*
https://pragati.taskdun.com/cm-basavaraj-bommaib-k-hariprasadreactionchikkamagaluru-habba/
*ಕಾಂಗ್ರೆಸ್ ಚುನಾವಣೆ ಸಮಿತಿ ಸಭೆ ದಿನಾಂಕ ಪ್ರಕಟ; ಅಭ್ಯರ್ಥಿಗಳ ಆಯ್ಕೆಗೆ ದಿನಗಣನೆ*
https://pragati.taskdun.com/d-k-shivakumarpressmeetbagalakote/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ