Latest

*ವಿಜಯನಗರ ಸಾಮ್ರಾಜ್ಯದ ವೈಭವ ಬಿಂಬಿಸುವ ಹಂಪಿ ಉತ್ಸವಕ್ಕೆ ಸಂಭ್ರಮದ ಚಾಲನೆ*

*ವಿಜಯನಗರ ಮೌಲ್ಯಗಳನ್ನಿಟ್ಟುಕೊಂಡು ನವಕರ್ನಾಟಕ ನಿರ್ಮಾಣಕ್ಕೆ  ಸರಕಾರ ಬದ್ಧ*: *ಸಿಎಂ ಬಸವರಾಜ ಬೊಮ್ಮಾಯಿ*

ಹಂಪಿ(ವಿಜಯನಗರ ಜಿಲ್ಲೆ) : ಅತ್ಯಂತ ಸುಭಿಕ್ಷ ಸಾಮ್ರಾಜ್ಯವಾಗಿದ್ದ ವಿಜಯನಗರ ಸಾಮ್ರಾಜ್ಯದ ಮೌಲ್ಯಗಳನ್ನಿಟ್ಟುಕೊಂಡು ಈಗಿನ ಅಗತ್ಯಕ್ಕೆ ತಕ್ಕಂತೆ ನವಕರ್ನಾಟಕ ನಿರ್ಮಾಣ ಮಾಡಲು ನಮ್ಮ ಸರಕಾರ ಬದ್ಧವಾಗಿದೆ ಎಂದು‌ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.
ಅವರು ಇಂದು ಹಂಪಿಯ ಗಾಯತ್ರಿಪೀಠದ ವೇದಿಕೆಯಲ್ಲಿ ವೈಭವದ ಹಂಪಿ ಉತ್ಸವಕ್ಕೆ  ವಿದ್ಯುಕ್ತವಾಗಿ ಚಾಲನೆ ನೀಡಿದರು.
 ಹಂಪಿ ಉತ್ಸವವು ಕನ್ನಡ ನಾಡಿನ ಗತವೈಭವ ಬಿಂಬಿಸುವ ಉತ್ಸವ.   ಕನ್ನಡ ನಾಡನ್ನಾಳಿದ ಪ್ರಮುಖ ಸಾಮ್ರಾಜ್ಯಗಳಲ್ಲಿ ಒಂದಾಗಿರುವ ಮತ್ತು ಇಡೀ ಭಾರತದ ಚರಿತ್ರೆಯಲ್ಲಿಯೇ ಪ್ರಮುಖ‌‌ ಬದಲಾವಣೆ ತಂದಿರುವುದು ವಿಜಯನಗರ ಸಾಮ್ರಾಜ್ಯ.
ಗತವೈಭವ ಬಿಂಬಿಸುವ ಸಡಗರ, ಸಂಭ್ರಮದ ಉತ್ಸವ ಹಂಪಿ ಉತ್ಸವವಾಗಿದೆ. ಎಂ.ಪಿ.ಪ್ರಕಾಶ್ ಅವರ ಕಾಲದಲ್ಲಿ ಹಂಪಿ ಉತ್ಸವ ಆರಂಭವಾಯಿತು. ಪ್ರಥಮ ಹಂಪಿ ಉತ್ಸವದಲ್ಲಿ ಪಾಲ್ಗೊಂಡ ನೆನಪನ್ನು ಇದೇ ಸಂದರ್ಭದಲ್ಲಿ ಹಂಚಿಕೊಂಡ ಸಿಎಂ ಬೊಮ್ಮಾಯಿ ಅವರು ವಿಜೃಂಭಣೆಯಿಂದ ವೈಭವದ ಹಂಪಿ ಉತ್ಸವ ಆಚರಣೆಗೆ ಸಚಿವರಾದ ಆನಂದಸಿಂಗ್,ಶ್ರೀರಾಮುಲು ಕಾರಣೀಕರ್ತರು ಎಂದರು.
ವಿಜಯನಗರ ಸಾಮ್ರಾಜ್ಯದ ಪುಣ್ಯಭೂಮಿ ಈ ಪ್ರದೇಶ. ಬಹಳ ವೈಭವಾಯುತವಾಗಿ  ಬಿ.ಎಸ್.ಯಡಿಯೂರಪ್ಪ ಅವರು ಚಾಲನೆ ನೀಡಿದ್ದರು. ಕರ್ನಾಟಕದ ಗತವೈಭವ ಮತ್ತೊಮ್ಮೆ ಬಿಂಬಿಸುವ ಕಾರ್ಯಕ್ರಮ ಅದಾಗಿತ್ತು ಎಂದು ಸ್ಮರಿಸಿದರು.  ನಮ್ಮ ಕಲೆ, ಸಂಸ್ಕೃತಿ, ಇತಿಹಾಸ ಬಿಂಬಿಸುವ ಕೆಲಸ ಈ ಮೂರು ದಿನಗಳು ನಡೆಯಲಿದೆ. ಹೊಸ ಜಿಲ್ಲೆಯದ ನಂತರ ಮೊದಲನೇ ಹಂಪಿ ಉತ್ಸವ ಇದಾಗಿದೆ ಎಂದರು.
 ಇಲ್ಲಿನ ಒಂದೊಂದು ಶಿಲೆಗಳು ಒಂದೊಂದು ರೋಮಾಂಚನಕಾರಿ ಕಥೆಗಳನ್ನು ಹೇಳುತ್ತವೆ;ಈ ಮೂಲಕ ಇತಿಹಾಸ ಗತವೈಭವ ಸಾರುತ್ತಿವೆ .ಕೋವಿಡ್ ನಂತರ ಹಾಗೂ ಜಿಲ್ಲೆ ರಚನೆಯಾದ ನಂತರ ನಡೆಯುತ್ತಿರುವ ಹಂಪಿ ಉತ್ಸವ ಯಶಸ್ವಿಯಾಗಿ ನಡೆಯಲಿ ಮತ್ತು ಕಲೆ,ಸಂಸ್ಕ್ರತಿ, ಪರಂಪರೆ,ಇತಿಹಾಸ ಬಿಂಬಿಸಲಿ ಎಂದರು.
*ಹಂಪಿ ಪ್ರವಾಸಿಗರಿಗೆ ಸಕಲ ಸೌಕರ್ಯಕ್ಕೆ ಕ್ರಮ*: 
ವಿಜಯನಗರ ಸಾಮ್ರಾಜ್ಯದ ಹಂಪಿಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಸಕಲ ಸೌಕರ್ಯಗಳನ್ನು ನಮ್ಮ ಸರಕಾರ ಕಲ್ಪಿಸಲಿದೆ. ಹಂಪಿಯ ಇನ್ನಷ್ಟು ಅಭಿವೃದ್ಧಿಗೆ ಭಾರತೀಯ ಪುರಾತತ್ವ ಇಲಾಖೆಯ ಅನುಮತಿ ಪಡೆದು ಯಾತ್ರಿಕರಿಗೆ ಅನುಕೂಲ ಮಾಡಿಕೊಡಲು ಕ್ರಮ ವಹಿಸಲಾಗುವುದು.
ಪ್ರವಾಸಿಗರ ಅನುಕೂಲಕ್ಕಾಗಿ ಉತ್ತರ ಕರ್ನಾಟಕದಲ್ಲಿ ಹಂಪಿ ಸರ್ಕಿಟ್ ಮತ್ತು ದಕ್ಷಿಣ ಕರ್ನಾಟಕದಲ್ಲಿ ಮೈಸೂರನ್ನು ಸರ್ಕಿಟ್ ಆಗಿ ಶೀಘ್ರ ಮಾಡಲಾಗುವುದು ಎಂದರು.
ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗಾಗಿ 120 ಕೋಟಿ ರೂ.ಗಳನ್ನು ನಮ್ಮ ಸರಕಾರ ನೀಡಿದ್ದು,ಇನ್ನೂ ಎರಡು ವಾರದೊಳಗೆ ಅಡಿಗಲ್ಲು ನೆರವೇರಿಸುವುದರ ಮೂಲಕ ಭಕ್ತರಿಗೆ ರೋಪ್ ವೇ,ರಸ್ತೆ ನಿರ್ಮಾಣ ಸೇರಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.
*ವಿಜಯನಗರ ಜಿಲ್ಲೆ ಮಾದರಿ ಜಿಲ್ಲೆಯಾಗಲಿದೆ*: ವಿಜಯನಗರ ಜಿಲ್ಲೆಯನ್ನು ನೂತನವಾಗಿ ಅಸ್ತಿತ್ವಕ್ಕೆ ತರಲು ಸಚಿವ ಆನಂದಸಿಂಗ್ ಶ್ರಮಿಸಿದ್ದಾರೆ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಈ ಜಿಲ್ಲೆಯ ಅಭಿವೃದ್ಧಿಗೆ ಸಚಿವ ಆನಂದಸಿಂಗ್ ಅವರು ಹಾಕಿಕೊಂಡ ದೂರದೃಷ್ಟಿಯ ಯೋಜನೆಗಳು ಅನುಷ್ಠಾನಗೊಂಡಲ್ಲಿ ಈ ಜಿಲ್ಲೆ ರಾಜ್ಯದಲ್ಲಿಯೇ ಮಾದರಿಯಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
*ಉದ್ಯೋಗ ಸೃಷ್ಟಿಗೆ ಒತ್ತು*
ರಾಜ್ಯದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದ್ದು, 8000 ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ವಿಜ್ಞಾನ-ತಂತ್ರಜ್ಞಾನ,ಕೌಶಲ್ಯಕ್ಕೆ ವಿಶೇಷ ಒತ್ತು ನೀಡಲಾಗುತ್ತಿದೆ. 5ಲಕ್ಷ ಯುವಕ/ಯುವತಿಯರಿಗೆ ಸ್ವಯಂ ಉದ್ಯೋಗಕ್ಕಾಗಿ ಯೋಜನೆಗಳನ್ನು ರೂಪಿಸಲಾಗಿದೆ. 6 ಸಾವಿರ ಕಿ.ಮೀ ರಾಷ್ಟ್ರೀಯ ಹೆದ್ದಾರಿ,3ಸಾವಿರ ಕಿ.ಮೀ ರಾಜ್ಯ ಹೆದ್ದಾರಿ ನಿರ್ಮಿಸಲು ಕ್ರಮವಹಿಸಲಾಗುತ್ತಿದೆ. 8 ಬಂದರುಗಳ ಆಧುನೀಕರಣ, 02 ಬಂದರುಗಳ ವಿಸ್ತರಣೆ,ರೈಲ್ವೆ ಯೋಜನೆಗಳಿಗೆ ಒತ್ತು ನೀಡಲಾಗುತ್ತಿದೆ ಎಂದರು.
8 ಲಕ್ಷ ಕೋಟಿ ರೂ.ಹೂಡಿಕೆ ಈ ವರ್ಷ ಬರುವ ನಿರೀಕ್ಷೆ ಇದ್ದು;ಒಪ್ಪಂದ ಮಾಡಿಕೊಳ್ಳಲಾಗಿದೆ.ಉದ್ಯೋಗಗಳು ಹರಿದುಬರಲಿವೆ ಎಂದರು.
*ಸುಭಿಕ್ಷ ಕರ್ನಾಟಕ ಕಟ್ಟಲು ಚಿಂತಿಸಬೇಕು*
ಭಾರತದಲ್ಲಿ ಅತ್ಯಂತ ಸುಭಿಕ್ಷವಾಗಿದ್ದ ವಿಜಯನಗರ ಸಾಮ್ರಾಜ್ಯ ಇಲ್ಲಿಂದ ತಮಿಳುನಾಡಿನ ಕಾವೇರಿಯವರೆಗೆ ಹರಡಿತ್ತು. ಬಹಮನಿಯರನ್ನು ಹಿಮ್ಮೆಟ್ಟಿಸಿದ ಕೃಷ್ಣದೇವರಾಯನನ್ನು ನಂತರ ಮೋಸದಿಂದ  ಗೆಲ್ಲಲಾಯಿತು. ಕನ್ನಡಿಗರಾಗಿ ನಾವು  ಸುಭಿಕ್ಷ ಕರ್ನಾಟಕ ಕಟ್ಟಲು ಚಿಂತನೆ ಮಾಡಬೇಕು ಆಗ ಮಾತ್ರ ನಮಗೆ ಹಂಪಿಯ ಗತವೈಭವದ ಬಗ್ಗೆ ಮಾತನಾಡಲು ನೈತಿಕ ಹಕ್ಕಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು, ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ‌ಕಲ್ಯಾಣ ಹಾಗೂ ಹಿರಿಯ ನಾಗರಿಕ ಸಬಲೀಕರಣ ಸಚಿವರಾದ ಹಾಲಪ್ಪ ಬಸಪ್ಪ ಆಚಾರ್, ಸಂಸದರಾದ ವೈ.ದೇವೇಂದ್ರಪ್ಪ, ಸಂಗಣ್ಣ ಕರಡಿ, ಶಾಸಕರಾದ ಎನ್.ವೈ.ಗೋಪಾಲಕೃಷ್ಣ, ಪರಣ್ಣ ಮನವಳ್ಳಿ, ಹುಡಾ ಅಧ್ಯಕ್ಷ ಅಶೋಕ್‌ ಜೀರೆ, ಹೊಸಪೇಟೆ ‌ನಗರಸಭೆ ಅಧ್ಯಕ್ಷೆ ಸುಂಕಮ್ಮ, ವಿಜಯನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಲಸಿ‌ ಮದ್ದಿನೇನಿ, ಐಜಿಪಿ ಬಿ.ಎಸ್.ಲೋಕೇಶಕುಮಾರ್, ಕನ್ನಡ ವಿವಿ ಕುಲಪತಿ ರಮೇಶ, ಜಿಪಂ ಸಿಇಒ ಬೋಯರ್ ಹರ್ಷಲ್ ನಾರಾಯಣರಾವ್, ಎಸ್ಪಿ ಶ್ರೀಹರಿಬಾಬು ಮತ್ತಿತರರು ಇದ್ದರು.
https://pragati.taskdun.com/karnataka-budgetkarawalicm-basavaraj-bommai/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button