ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇದೇ ತಿಂಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2ನೇ ಹಂತದಲ್ಲಿ 60 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ಖಾನಾಪುರ ತಾಲೂಕಿನ ಜೆಡಿಎಸ್ ಅಭ್ಯರ್ಥಿಯಾಗಲಿದ್ದ ವ್ಯಕ್ತಿ 3 ವರ್ಷಗಳ ಹಿಂದೆಯೇ ಪಕ್ಷ ಬಿಡುವ ಆಲೋಚನೆ ಮಾಡಿದ್ದು ನಾಳೆ ಹೊಸ ಅಭ್ಯರ್ಥಿ ಘೋಷಿಸಲಾಗುವುದು ಎಂದರು.
ನಾಳೆ ಅರಸಿಕೇರೆಗೆ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಲು ತಾವು ತೆರಳುತ್ತಿದ್ದು, ಅಲ್ಲಿ ನಡೆಯಲಿರುವ ಬಹಿರಂಗ ಸಮಾವೇಶದಲ್ಲಿ ಅರಸಿಕೇರೆ ಜೆಡಿಎಸ್ ಅಭ್ಯರ್ಥಿ ಘೋಷಣೆ ಮಾಡುವುದಾಗಿ ಅವರು ತಿಳಿಸಿದರು.
“ಪಂಚರತ್ನ ಯಾತ್ರೆ ಮೂಲಕ ಎಲ್ಲ ಗ್ರಾಮಗಳಿಗೆ ತೆರಳಿ, ನಾನೇ ಜನರ ಬಳಿ ಹೋಗುವ ಪ್ರಯತ್ನ ಮಾಡುತ್ತಿದ್ದೇನೆ. ಕಳೆದ ಎರಡುವರೇ ತಿಂಗಳಿಂದ ದಿನಕ್ಕೆ 18 ಗಂಟೆ ಕೆಲಸ ಮಾಡುತ್ತಿದ್ದೇನೆ. ಪಂಚರತ್ನ ಯಾತ್ರೆ ಯಶಸ್ಸಿನಿಂದ ಬಿಜೆಪಿ, ಕಾಂಗ್ರೆಸ್ ಗೆ ಭಯ ಶುರುವಾಗಿದೆ. ಇಂದಿನಿಂದ ಬೆಳಗಾವಿ ಜಿಲ್ಲೆಯ ಕುಡಚಿ, ರಾಯಬಾಗ, ಖಾನಾಪುರ, ಬೈಲಹೊಂಗಲ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ನಡೆಯಲಿದೆ” ಎಂದರು.
ಕಳಸಾ- ಬಂಡೂರಿ ಯೋಜನೆ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಚ್ಡಿಕೆ, ಬಿಜೆಪಿಯವರು “ಈ ವಿಷಯದಲ್ಲಿ ತಾವೇನೋ ದೊಡ್ಡ ಸಾಧನೆ ಮಾಡಿದವರಂತೆ ಸಿಹಿ ಹಂಚಿ ಸಂಭ್ರಮಿಸಿದರು. ಆದರೆ ಇದಕ್ಕೆ ನಾನು ಮುಖ್ಯಮಂತ್ರಿಯಾಗಿದ್ದಾಗ 100 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದೆ. ಕರ್ನಾಟಕ, ಗೋವಾ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ, ಇದು ಡಬಲ್ ಎಂಜಿನ್ ಅಲ್ಲ, ತಿಬ್ರಲ್ ಎಂಜಿನ್ ಸರ್ಕಾರ. ಆದಾಗ್ಯೂ ಇನ್ನೂ ಕೆಲಸ ಏಕೆ ಆರಂಭವಾಗಿಲ್ಲ?” ಎಂದು ಪ್ರಶ್ನಿಸಿದರು.
“ಜೆಡಿಎಸ್ ಮೂಲಕ ಐದು (ಪಂಚರತ್ನ ) ಕಾರ್ಯಕ್ರಮ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಯೋಜನೆಗೆ 2.5 ಲಕ್ಷ ಕೋಟಿ ವೆಚ್ಚ ತಗಲಲಿದೆ. ಇದಕ್ಕೆ ರಾಜ್ಯದಲ್ಲಿ ಸ್ವತಂತ್ರ ಸರ್ಕಾರ ಅಧಿಕಾರಕ್ಕೆ ಬರಬೇಕು. ಹೀಗಾಗಿ ಒಂದು ಬಾರಿ ಜೆಡಿಎಸ್ ಗೆ ಜನ ಅವಕಾಶ ನೀಡಬೇಕು” ಎಂದು ಕುಮಾರಸ್ವಾಮಿ ಕೋರಿದರು.
ಹಾಸನದಲ್ಲಿ ರೇವಣ್ಣ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಎಲ್ಲರೂ ಕುಳಿತು ಈ ಬಗ್ಗೆ ಸಮನ್ವಯದ ನಿರ್ಣಯ ಕೈಗೊಳ್ಳಲಿರುವುದಾಗಿ ತಿಳಿಸಿದರು.
ಸಿಡಿ ವಿಚಾರ ಮಾತಾಡಿ ಪ್ರಯೋಜನವಿಲ್ಲ:
ಸಿಡಿ ಬಗ್ಗೆ ಚರ್ಚೆ ಮಾಡಿ ಯಾರಿಗೂ ಪ್ರಯೋಜನವಿಲ್ಲ, ಎರಡೂ ಮೂರು ದಿನ ಮನರಂಜನೆ ಸಿಗುತ್ತದೆ. ಅದರ ಬದಲಾಗಿ ಜನರ ಕಷ್ಟಗಳ ಬಗ್ಗೆ ಚರ್ಚೆ ಮಾಡಬೇಕಿದೆ ಎಂದು ಕುಮಾರಸ್ವಾಮಿ ಹೇಳಿದರು.
ಅದ್ಧೂರಿ ಸ್ವಾಗತ:
ಪಂಚರತ್ನ ಯಾತ್ರೆ ಖಾನಾಪುರ ತಾಲೂಕು ಪ್ರವೇಶಿಸುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಲಿಂಗನಮಠ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು.
ಅಲ್ಲಿಂದ ಕಕ್ಕೇರಿಗೆ ಆಗಮಿಸುತ್ತಿದ್ದಂತೆ ಗ್ರಾಮದ ಪ್ರವೇಶ ದ್ವಾರದಲ್ಲೇ ಕುಂಭಹೊತ್ತ ಮಹಿಳೆಯರು ಹಾಗೂ ಡೊಳ್ಳು, ಜಾನಪದ ತಂಡದವರು ಅದ್ಧೂರಿ ಸ್ವಾಗತ ಕೋರಿದರು. ನಂತರ ಗ್ರಾಮದಲ್ಲಿ ಮೆರವಣಿಗೆ ನಡೆಯಿತು.
ಜೆಡಿಎಸ್ ಅಭ್ಯರ್ಥಿ ನಾಸೀರ್ ಬಾಗವಾನ ಸೇರಿದಂತೆ ಹಲವು ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.
ಕರಿಕಟ್ಟಿ ಜಾತ್ರಾಮಹೋತ್ಸವದಲ್ಲಿ ಪಾಲ್ಗೊಂಡ ಶಾಸಕಿ ಲಕ್ಷ್ಮೀ ಹೆಬ್ಬಾಳಕರ
https://pragati.taskdun.com/mla-lakshmi-hebbalakar-participated-in-karikatti-jatramahotsava/
*ಬಜೆಟ್ ಅಧಿವೇಶನ ಆರಂಭ; ರಾಜ್ಯ ಬಿಜೆಪಿ ಸರ್ಕಾರದ ಸಾಧನೆ ವಿವರಿಸಿದ ರಾಜ್ಯಪಾಲರು*
https://pragati.taskdun.com/karnataka-budget-sessiongovernor-thawar-chand-gehlotspeechvidhanasoudha/
*ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ PDO, ಕಂಪ್ಯೂಟರ್ ಆಪರೇಟರ್*
https://pragati.taskdun.com/pdocomputer-operatorlokayuktaarrestedchitradurgajanakal/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ