Kannada NewsKarnataka News

ಸರಕಾರದ ವಿರುದ್ಧ ಮಠಾಧೀಶರ ಆರೋಪ ಪಟ್ಟಿ; ಬರುವ ಚುನಾವಣೆಯಲ್ಲಿ ಮಠಾಧೀಶರು ಕಣಕ್ಕಿಳಿಯುತ್ತಾರಾ? – ಏನಂದ್ರು ಸಿದ್ದರಾಮ ಸ್ವಾಮೀಜಿ?

ಏನೇ ಇದ್ದರೂ ಹುಬ್ಬಳ್ಳಿ-ಧಾರವಾಡ ಎನ್ನುತ್ತಾರೆ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  ಉತ್ತರ ಕರ್ನಾಟಕ ಭಾಗದ ಜನರಲ್ಲಿ ಪ್ರತ್ಯೇಕತೆಯ ಭಾವನೆ ಬರದಂತೆ ಈಬಾರಿಯ ಬಜೆಟ್ ಮಂಡಿಸಬೇಕು ಎಂದು ಗದಗ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮಿಗಳು ಒತ್ತಾಯಿಸಿದ್ದಾರೆ.

ಬೆಳಗಾವಿಯಲ್ಲಿ ಬುಧವಾರ ವಿವಿಧ ಮಠಾಧೀಶರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಹಲವು ವರ್ಷಗಳಿಂದ ನಾವು ಬೇಡಿಕೆ ಇಡುತ್ತ ಬಂದಿದ್ದೇವೆ. ಆದರೂ ಬೇಡಿಕೆಗಳು ಈಡೇರದೆ ಇರುವುದು ಬೇಸರ ತಂದಿದೆ. 400 ಕೋಟಿ ರೂ. ವೆಚ್ಚ ಮಾಡಿ ನಿರ್ಮಾಣ ಮಾಡಲಾಗಿರುವ ಸುವ್ರಣ ವಿಧಾನಸೌಧ ಏನೇನಬ ಉಪಯೋಗವಿಲ್ಲವಾಗಿದೆ. ಪೂರ್ಣಪ್ರಮಾಣದಲ್ಲಿ ಕಚೇರಿಗಳನ್ನು ಸ್ಥಳಾಂತರಿಸುವ ಮೂಲಕ ಬೆಂಗಳೂರಿಗೆ ಹೋಗುವುದನ್ನು ತಪ್ಪಿಸಬೇಕು. ಪೂರ್ಣಪ್ರಮಾಣದಲ್ಲಿ ಅಧಿವೇಶನ ನಡೆಸಬೇಕು ಎಂದು ಒತ್ತಾಯಿಸಿದರು.

ಸರಕಾರಕ್ಕೆ ಇಚ್ಛಾಶಕ್ತಿ ಇಲ್ಲ. ಸಾರ್ವಜನಿಕರ ಹಣ ಸದುಪಯೋಗವಾಗಬೇಕು. ರಾಜಕೀಯ ಪಕ್ಷಗಳೂ ಸೂಕ್ಷ್ಮತೆಯಿಂದ ಕೆಲಸ ಮಾಡಬೇಕು. ಶಾಸಕರು ಪಕ್ಷಬೇಧ ಮರೆತು ಕೆಲಸ ಮಾಡಬೇಕು. ಪ್ರತ್ಯೇಕತೆಗೆ ನಮ್ಮ ಬಂಬಲವಿಲ್ಲ. ಆದರೆ ಪ್ರತ್ಯೇಕತೆ ಭಾವರೆ ಬಾರದಂತೆ ನೋಡಿಕೊಳ್ಳಬೇಕು ಎಂದರು.

ಏನೇ ಹೇಳಿದರೂ ಹುಬ್ಬಳ್ಳಿ – ಧಾರವಾಡ ಎನ್ನುತ್ತಾರೆ. ಒಂದೊಂದಾಗಿ ಕಚೇರಿಗಳು ಹುಬ್ಬಳ್ಳಿ – ಧಾರವಾಡಕ್ಕೆ ಸ್ಥಳಾಂತರವಾಗುತ್ತಿವೆ. ಬೆಳಗಾವಿ ಗಡಿ ಭಾಗವಾಗಿದ್ದರಿಂದ ಬೆಳಗಾವಿಯಲ್ಲಿ ಕಚೇರಿಗಳು ಸ್ಥಾಪನೆಯಾಗುವುದು ಮುಖ್ಯ. ಗಡಿ ಭಾಗಕ್ಕೆ ಪ್ರಾಶಸ್ತ್ಯ ನೀಡಬೇಕು. ಮಹಾರಾಷ್ಟ್ರದಂತೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಗಡಿ ಭಾಗದವರಿಗೆ ಮೀಸಲಾತಿ ಕಲ್ಪಿಸಬೇಕು.ಗಡಿ ಭಾಗದಲ್ಲಿರುವ ಕನ್ನಡಿಗರಿಗೆ ಸಹಾಯ ಮಾಡಬೇಕು. ಗಡಿ ಭಾಗವನ್ನು ಗಟ್ಟಿಗೊಳಿಸಲು ಹಲವು ಯೋಜನೆಗಳನ್ನು ತರಬೇಕು ಎಂದು ಅವರು ಆಗ್ರಹಿಸಿದರು.

ಕನ್ನಡ ಹೋರಾಟಗಾರರಿಗೆ ಕಿರುಕುಳ ನೀಡಲಾಗುತ್ತಿದೆ. ಅವರನ್ನು ಬಂಧಿಸಲಾಗುತ್ತದೆ. ಸರಕಾರ ಕನ್ನಡಿಗರಿಗೆ, ಕನ್ನಡ ಹೋರಾಟಗಾರರಿಗೆ ರಕ್ಷಣೆ ನೀಡಬೇಕು ಎಂದು ಸ್ವಾಮೀಜಿ ಆಗ್ರಹಿಸಿದರು. ಪ್ರಶಸ್ತಿ ಪುರಸ್ಕಾರಗಳು ಬೆಂಗಳೂರಿಗೆ ಸೀಮಿತವಾಗಬಾರದು ಎಂದರು.

ಗಡಿ ಭಾಗದಲ್ಲಿ ಗುಣಮಟ್ಟದ ಕನ್ನಡ ಶಾಲೆಗಳನ್ನು ತೆರೆಯುವ ಕೆಲಸವಾಗಬೇಕು. ಅವುಗಳಿಗೆ ನೇಮಕಾತಿಗೆ ಅನುದಾನ ನೀಡಬೇಕು. ಅನುದಾನಿತ ಶಾಲೆಗಳಲ್ಲಿ 15-20 ವರ್ಷದಿಂದ ನೇಮಕಾತಿಗೆ ಅನುಮತಿ ನೀಡಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೆಚ್ಚು ಕನ್ನಡ ಭಾಷೆಯ ಶಾಲೆಯನ್ನು ತೆರೆದರೆ ಗಡಿ ಭಾಗದಲ್ಲಿ ಕನ್ನಡ ಉಳಿಸುವ ಕೆಲಸವಾಗುತ್ತದೆ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇಂಗ್ಲಿಷ್ ಶಾಲೆಗೆ ಹೋಗುವ ಪರಿಸ್ಥಿತಿ ಬಂದಿದೆ. ಕನ್ನಡ ಶಾಲೆಗಳ ಗುಣಮಟ್ಟ ಹೆಚ್ಚಿಸುವ ಅಗತ್ಯ ಇದೆ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಆಗಬೇಕಿದೆ. ಆದ್ದರಿಂದ ಸಮಗ್ರ ಕರ್ನಾಟಕದ ಪರಿಕಲ್ಪನೆಯಿಟ್ಟುಕೊಂಡಿರುವ ಈ ಭಾಗದ ಜನರು ಕರ್ನಾಟಕ ಏಕೀಕರಣ ಹೋರಾಟ ಮಾಡಿದ್ದಾರೆ. ಸಮಗ್ರ ಕರ್ನಾಟಕ ಒಂದಾಗಿ ಇರಬೇಕು. ಉತ್ತರ ಕರ್ನಾಟಕದ ಪ್ರತ್ಯೇಕತೆಯ ಕೂಗು ಬಾರದಂತೆ ಸರಕಾರ ಗಮನ ಹರಿಸಬೇಕು ಎಂದ ಸಲಹೆ ನೀಡಿದರು.

 

ಡಾ.ಡಿ.ಎಂ.ನಂಜುಂಡಪ್ಪ ವರದಿ ಈಗ ಅಪ್ರಸ್ತುತವಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. 50 ಸಾವಿರ ಕೋಟಿ ರೂ. ಬಜೆಟ್ ಇರುವಾಗ ನಂಜುಂಡಪ್ಪ ವರದಿ ನೀಡಲಾಗಿದೆ. ಈಗ ಬಜೆಟ್ 3 ಲಕ್ಷ ಕೋಟಿ ರೂ ಗೆ ಏರಿಕೆಯಾಗಿದೆ. ಈಗ ಬೇರೆ ಆಯೋಗ ರಚನೆ ಮಾಡುವ ಮೂಲಕಸಮಗ್ರ ಕಿತ್ತೂರು ಕರ್ನಾಟಕದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮ ಸ್ವಾಮಿಗಳು ಒತ್ತಾಯಿಸಿದರು.

 

ಸಾರಾಯಿ ನಿಷೇಧ ಮಾಡಿ –

ಪ್ರಾಥಮಿಕ ಶಾಲೆಗಳ ಮಕ್ಕಳ ಕಿಸೆಯಲ್ಲಿ ಸಾರಾಯಿ ಪಾಕೆಟ್ ಪತ್ತೆಯಾಗುತ್ತಿದೆ. ಮಕ್ಕಳು ಸಾರಾಯಿ ದಾಸರಾಗುತ್ತಿದ್ದಾರೆ. ಸರಕಾರ ಕೂಡಲೇ ಸರಾಯಿ ನಿಷೇಧ ಮಾಡಬೇಕು. 30 -40 ಸಾವಿರ ಕೋಟಿ ರೂ ಜುಜುಬಿ ಆದಾಯಕ್ಕಾಗಿ ಸಮಾಜದ ಆರೋಗ್ಯ, ಕುಟುಂಬದ ಆರೋಗ್ಯ ಹಾಳು ಮಾಡಬಾರದು. ಬದುಕು ಮುಖ್ಯ, ಕೌಟುಂಬಿಕ ಸಾಮರಸ್ಯ ಮುಖ್ಯ. ಶಾಲೆಗಳ ಪಕ್ಕದಲ್ಲೇ ಮದ್ಯದ ಅಂಗಡಿ ತೆರೆಯಲಾಗುತ್ತಿದೆ. ಮಕ್ಕಳ ಭವಿಷ್ಯದ ಕಡೆಗೆ ಸರಕಾರ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

 ಕಪ್ಪತ ಗುಡ್ಡ ಉಳಿಸಿ –

ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದು ಕರೆಸಿಕೊಳ್ಳುವ ಕಪ್ಪದಗುಡ್ಡವನ್ನು ವನ್ಯಜೀವಿಧಾಮ ಎಂದು ಘೋಷಣೆ ಮಾಡಿದರೂ ಇಲ್ಲಿಯವರೆಗೆ ಅನುದಾನ ಬಂದಿಲ್ಲ. ಈ ಭಾಗದಲ್ಲಿ ಗಣಿಗಾರಿಕೆ   ನಡೆದಿದೆ. ಸರಕಾರ ಕಪ್ಪದಗುಡ್ಡದ ರಕ್ಷಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸುಳ್ಳು ಹೇಳಬೇಡಿ –

ಕಳಸಾ ಬಂಡೂರಿ ಯೋಜನೆಯಲ್ಲಿ ಗೋವಾ ಸರಕಾರದ ಅರ್ಜಿ ತಿರಸ್ಕೃತವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಗೋವಾದ ಮೂಲಗಳ ಪ್ರಕಾರ ವಿವಿಧ ಇಲಾಖೆಗಳಿಂದ ನಿರಾಕ್ಷೇಪಣೆ ಪತ್ರ ಪಡೆಯುವಂತೆ ಕರ್ನಾಟಕಕ್ಕೆ ಸೂಚಿಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ಜನರಿಗೆ ಸುಳ್ಳು ಹೇಳುವ ಕೆಲಸವನ್ನು ಸರಕಾರ ಮಾಡಬಾರದು. ಆದಷ್ಟು ಶೀಘ್ರ ಎಲ್ಲ ಇಲಾಖೆಗಳಿಂದ ನಿರಾಕ್ಷೇಪಣೆ ಪತ್ರ ಪಡೆದು ಕಳಸಾ -ಬಂಡೂರಿ ಯೋಜನೆ ಜಾರಿಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಇರುವ ಅಕಾಡೆಮಿ ಗಟ್ಟಿಗೊಳಿಸಿ- 

ಸರಕಾರ ಕನ್ನಡ ಸಂಘಟನೆಗಳಿಗೆ, ಇರುವ ಅಕಾಡೆಮಿಗಳಿಗೆ ಅನುದಾನ ನೀಡುವ ಮೂಲಕ ಇರುವುದನ್ನು ಗಟ್ಟಿಗೊಳಿಸಬೇಕು. ದಿನಾ ಒಂದೊಂದು ನಿಗಮ, ವಿಶ್ವವಿದ್ಯಾಲಯ ಘೋಷಣೆ ಮಾಡಲಾಗುತ್ತಿದೆ. ಆದರೆ ಇರುವುದಕ್ಕೆ ಅನುದಾವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಿತ್ತೂರ ಮಾರ್ಗದಲ್ಲಿ ರೈಲ್ವೆ ಯೋಜನೆ ಶೀಘ್ರದಲ್ಲೇ ಅನುಷ್ಠಾನಗೊಳಿಸಬೇಕು. ಬೇರೆ ರಾಜ್ಯದಲ್ಲಿರುವ ಕನ್ನಡಿಗರಿಗೆ ರಾಜ್ಯ ಸರಕಾರ ವಿಶೇಷವಾಗಿರುವ ಸೌಲಭ್ಯವನ್ನು ನೀಡಿ ಕನ್ನಡಿಗರನ್ನು ರಕ್ಷಣೆ ಮಾಡಬೇಕು ಎಂದರು.

ಬಸವೇಶ್ವರ ಮೂರ್ತಿ ಸ್ಥಾಪಿಸಿ-

ಹಿಡಕಲ್ ಡ್ಯಾಮ್ ನ ಹಿನ್ನಿರು ಪ್ರದೇಶದಲ್ಲಿ 300 ಅಡಿಯ ಬೃಹತ್ ಬಸವೇಶ್ವರರ ಪ್ರತಿಮೆ ಸ್ಥಾಪನೆ ಮಾಡಬೇಕು. ಮಹಾರಾಷ್ಟ್ರದಿಂದ ಬರುವವರಿಗೆ ಕರ್ನಾಟಕದ ಸಂಸ್ಕೃತಿ ಪರಿಚಯಿಸುವ ಕೆಲಸವಾಗಬೇಕು. ವಚನ ಸಾಹಿತ್ಯದ ಪಿತಾಮಹರನ್ನು ಪರಿಚಯಿಸುವ ಕೆಲಸವಾಗಬೇಕು. ಇದು ಸುಮಾರು 300 -400 ಕೋಟಿ ರೂ. ಯೋಜನೆಯಾಗಿದೆ. ಕೆಂಪೇಗೌಡ ಪ್ರತಿಮೆ ಸ್ಥಾಪಿಸಿ ಪ್ರವಾಸಿ ಸ್ಥಾನವನ್ನಾಗಿ ಮಾಡಲಾಗಿದೆ. ಅದರಂತೆ ಇಲ್ಲಿ ಕೂಡ ಕಾಯಕ ಸಂಸ್ಕೃತಿ ಪ್ರತಿಬಿಂಬಿಸುವ ಬೃಹತ್ ಯೋಜನೆ ಜಾರಿಗೊಳಿಸಬೇಕು. ಘಟಪ್ರಭಾ ಹಿನ್ನೀರಿನಲ್ಲಿ ಸಾಂಸ್ಕೃತಿಕ ಗ್ರಾಮವಾಗಬೇಕು. ಈ ಕುರಿತು ಈ ಹಿಂದೆ ಬೆಳಗಾವಿಗೆ ಆಗಮಿಸಿದ್ದ ಮುಖ್ಯಮಂತ್ರಿ ಬಸರಾಜ ಬೊಮ್ಮಾಯಿ ಅವರಿಗೆ ಹಲವು ಮಠಾಧೀಶರು ಸೇರಿ ಒತ್ತಾಯಿಸಿದ್ದೇವೆ. ಆಗ ಮೌಖಿಕ ಒಪ್ಪಿಗೆ ನೀಡಿದ್ದರು. ಬಜೆಟ್ ನಲ್ಲಿ ಇದಕ್ಕಾಗಿ ಅನುದಾನ ಮೀಸಲಿಡಬೇಕು ಎಂದು ಸಿದ್ದರಾಮ ಸ್ವಾಮಿಗಳು ಒತ್ತಾಯಿಸಿದರು.

ಈಗಿನ ಬಜೆಟ್ ಕೇವಲ ತಾತ್ಕಾಲಿಕ ಬಜೆಟ್ ಆಗಲಿದೆ. ಮುಂಬರುವ ಸರಕಾರಗಳು ನಮ್ಮ ಬೇಡಿಕೆಗಳನ್ನು ಈಡಾರಿಸಬೇಕು. ಚುನಾವಣೆ ಪ್ರಣಾಳಿಕೆಯಲ್ಲಿ ಈ ವಿಷಯಗಳನ್ನು ಸೇರಿಸಬೇಕು. ಯಾವು ಪಕ್ಷ ಪ್ರಣಾಳಿಕೆಯಲ್ಲಿ ಈ ಅಂಶಗಳನ್ನು ಸೇರಿಸುತ್ತದೆಯೋ ಅದಕ್ಕೆ ನಾವೆಲ್ಲ ಬೆಂಬಲಿಸುತ್ತೇವೆ ಎಂದು ಹೇಳಿದರು.

ರಾಯಬಾಗದ ವಿರಕ್ತಮಠದ ಶ್ರೀ ಶಿವಾನಂದ ಸ್ವಾಮೀಜಿ, ಕಾರಂಜಿಮಠದ ಶ್ರೀ ಗುರುಸಿದ್ದ ಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ, ಅಥಣಿ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ, ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮೊದಲಾದವರು ಇದ್ದರು.

 

ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮಾತನಾಡಿ,  ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ಕಚೇರಿಯೊಂದನ್ನು ತೆರೆಯಬೇಕು. ಅವರು ತಿಂಗಳಿಗೊಮ್ಮೆ ಇಲ್ಲಿ ಬಂದು ಕುಳಿತುಕೊಳ್ಳಬೇಕು. ಈಗಾಗಲೆ ಅಲ್ಲಿಗೆ ಸ್ಥಳಾಂತರಿಸಿರುವ 23 ಜಿಲ್ಲಾ ಮಟ್ಟದ ಕಚೇರಿಗಳನ್ನು ಹೊರಗೆ ತಂದು ರಾಜ್ಯಮಟ್ಟದ ಕಚೇರಿಗಳನ್ನು ಸ್ಥಾಪಿಸಬೇಕು. ಜಿಲ್ಲಾಡಳಿತ ಭವನ ಸ್ಥಾಪಿಸಿ ಜಿಲ್ಲಾಮಟ್ಟದ ಕಚೇರಿ ಸ್ಥಾಪಿಸಲಿ ಎಂದು ಒತ್ತಾಯಿಸಿದರು.

 

ಲಿಂಗಾಯತ ಮಹಾ ಅಧಿವೇಶನ

ಬಸವಕಲ್ಯಾಣದಲ್ಲಿ ಮಾರ್ಚ್ 4 ಮತ್ತು 5ರಂದು ಲಿಂಗಾಯತ ಮಹಾ ಅಧಿವೇಶನ ನಡೆಯಲಿದೆ. ರಾಜ್ಯದ ಎಲ್ಲ ಭಾಗಗಳಿಂದ ಲಿಂಗಾಯತ ಮಠಾಧೀಶರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಿದ್ದರಾಮ ಸ್ವಾಮಿಗಳು ಈ ಸಂದರ್ಭದಲ್ಲಿ ತಿಳಿಸಿದರು.

ಪಂಚಮಸಾಲಿ ಮೀಸಲಾತಿ ಕುರಿತು ಪ್ರಶ್ನಿಸಿದಾಗ. ಮೀಸಲಾತಿ ಕೇಳುವುದು ಅವರ ಹಕ್ಕು. ಅದನ್ನು ನಾನು ವಿರೋಧಿಸುವುದಿಲ್ಲ. ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತ ನೀಡಬೇಕು ಎನ್ನುವ ನಮ್ಮ ಒತ್ತಾಯ ಮುಂದುವರಿಸಲಿದೆ. ಆ ದಿಸೆಯಲ್ಲಿ ಹೋರಾಟ ನಡೆಯಲಿದೆ ಎಂದು ಹೇಳಿದರು.

ಈ ಭಾಗದ ಮಠಾಧೀಶರು ಚುನಾವಣೆಗೆ ಸ್ಫರ್ಧಿಸುತ್ತಾರಾ ಎನ್ನುವ ಪ್ರಶ್ನೆಗೆ. ಅದು ಅವರವರ ವಯಕ್ತಿಕ ವಿಚಾರ. ಕೆಲವರು ಈಗಾಗಲೆ ಆ ಬಗ್ಗೆ ಪ್ರಯತ್ನಿಸಿದ್ದಾರೆ. ಆದರೆ ಯಶಸ್ಸು ಸಿಗಲಿಲ್ಲ. ನಮಗಂತೂ ಇದರಲ್ಲಿ ಆಸಕ್ತಿ ಇಲ್ಲ. ಆಸಕ್ತಿ ಇರುವವರು ಸ್ಫರ್ಧಿಸಬಹುದು ಎಂದು ಹೇಳಿದರು.

*ಕಾಂಗ್ರೆಸ್ಸಿಗರು ತಲೆ ತಿರುಕರು ಎಂದ ಬಿಎಸ್ ವೈ; ಯಡಿಯೂರಪ್ಪಗೆ ಅರಳುಮರಳು ಎಂದ ಸಿದ್ದರಾಮಯ್ಯ*

https://pragati.taskdun.com/b-s-yedyurappasiddaramaihtender-golmal/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button