Kannada NewsLatest

*ಪಿಎಂ-ಕಿಸಾನ್ ಅಡಿ 8 ಕೋಟಿ ರೈತರ ಖಾತೆಗೆ ಡಿಬಿಟಿ ಮೂಲಕ 16,800 ಕೋಟಿ ರೂ.ವರ್ಗಾವಣೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯಿಂದ ಇಂದು ಇಡೀ ದೇಶದ ಕೋಟ್ಯಂತರ ರೈತರಿಗೆ 13ನೇ ಕಂತಿನ 16 ಸಾವಿರ ಕೋಟಿ ರೂಪಾಯಿ ಜಮೆಯಾಗಿರುತ್ತದೆ. ಇಷ್ಟೊಂದು ದೊಡ್ಡ ಮೊತ್ತ ಒಂದು ಕ್ಷಣದಲ್ಲಿ ನೇರವಾಗಿ ರೈತರ ಖಾತೆಗೆ ಜಮೆಯಾಗುತ್ತಿರುವುದು ಸೋಜಿಗದ ಸಂಗತಿ. ಯಾವುದೇ ಸೋರಿಕೆಯಿಲ್ಲದೇ ಇಷ್ಟೊಂದು ದೊಡ್ಡ ಮೊತ್ತ ಜಮೆಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

ನಗರದ ಮಾಲಿನಿ ಸಿಟಿ ಮೈದಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷದ ಅಂಗವಾಗಿ ನವಧಾನ್ಯಗಳನ್ನು ಮಡಿಕೆಗೆ ತುಂಬುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.ಸುಮಾರು 2,240 ಕೋಟಿ ಮೌಲ್ಯದ ರೇಲ್ವೆ ಹಾಗೂ ಜಲಜೀವನ್ ಮಿಷನ್ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮತ್ತು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 13 ನೇ ಕಂತಿನ ಸುಮಾರು 16 ಸಾವಿರ ಕೋಟಿ ರೂ.ಗಳನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಾಡಿ ಮಾತನಾಡಿದರು.

ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಯಿಂದ ಬೆಳಗಾವಿಯ ಅಭಿವೃದ್ಧಿಗೆ ವೇಗ ದೊರೆಯಲಿದೆ ಎಂದರು. ನಮ್ಮ ಸರಕಾರದ “ಸಬ್ ಕಾ ಸಾಥ್ – ಸಬ್ ಕಾ ವಿಕಾಸ್” ಮಂತ್ರಕ್ಕೆ ಸ್ಫೂರ್ತಿಯಾಗಿರುವ ಬಸವಣ್ಣನವರಿಗೆ ನಮಸ್ಕಾರಗಳು. ಬೆಳಗಾವಿಯ ನನ್ನ ಬಂಧು-ಭಗಿನಿಯರಿಗೆ ನನ್ನ ನಮಸ್ಕಾರಗಳು.. ಎಂದು ಮಾನ್ಯ ಪ್ರಧಾನಮಂತ್ರಿ  ನರೇಂದ್ರ ಮೋದಿಯವರು ಮಾತು ಆರಂಭಿಸಿದರು.

ಬೆಳಗಾವಿಯ ಜನರ ಆಶೀವಾರ್ದವು ನಮಗೆ ಪ್ರೇರಣಾಶಕ್ತಿಯಾಗಿದೆ. ಈ ನೆಲಕ್ಕೆ ಬರುವುದು ಯಾವುದೇ ತೀರ್ಥ ಯಾತ್ರೆಗಿಂತ ಕಡಿಮೆಯಲ್ಲ.
ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನ ಜನ್ಮಭೂಮಿಯಾಗಿದೆ. ಗುಲಾಮಗಿರಿ ವಿರುದ್ಧ ಹೋರಾಟ ಹಾಗೂ ನವಭಾರತ ನಿರ್ಮಾಣದಲ್ಲಿ ಬೆಳಗಾವಿಯ ಪಾತ್ರ ಪ್ರಮುಖವಾಗಿದೆ.

ರಾಜ್ಯದಲ್ಲಿ ಸ್ಟಾರ್ಟ್ ಅಪ್ ಗಳ ಚರ್ಚೆಯಾಗುತ್ತಿದೆ. ಬೆಳಗಾವಿಯಲ್ಲಿ ನೂರು ವರ್ಷಗಳ ಹಿಂದೆಯೇ ಸ್ಟಾರ್ಟ್ ಅಪ್ ಆರಂಭಗೊಂಡಿತ್ತು. ಅಂದು ಬೆಳಗಾವಿಯಲ್ಲಿ ಬಾಬುರಾವ್ ಪುಸಾಳ್ಕರ್ ಸಣ್ಣ ಔದ್ಯೋಗಿಕ ಘಟಕ ಪ್ರಾರಂಭಿಸಿದ್ದರು,ಅದು ಕೈಗಾರಿಕಾ ರಂಗದ ಬೆಳವಣಿಗೆಗೆ ಕಾರಣವಾಗಿದೆ.

ದೇಶದ ರೈತರಿಗೆ ಹೋಳಿ ಹಬ್ಬದ ಶುಭಾಶಯಗಳು. ಬದಲಾಗುತ್ತಿರುವ ಇಂದಿನ ಭಾರತ ಒಂದೊಂದು ಹೆಜ್ಜೆ ಅಭಿವೃದ್ಧಿಯತ್ತ ಧಾಪುಗಾಲು ಇಡುತ್ತಿದೆ.

ಸಣ್ಣ ರೈತರನ್ನು ನಿರ್ಲಕ್ಷಿಸಲಾಗುತ್ತಿತ್ತು. ಆದರೆ ನಮ್ಮ ಸರ್ಕಾರದ ಆದ್ಯತೆ ಸಣ್ಣ ರೈತರಿಗೆ ನೆರವಾಗುವುದಾಗಿದೆ.

ತಲಾ ಎರಡೂವರೆ ಲಕ್ಷ ರೂಪಾಯಿ ಈಗಾಗಲೇ ರೈತರ ಖಾತೆಗೆ ಜಮಾ ಆಗಿದೆ. ಕೃಷಿ ಅಗತ್ಯತೆಗಳಿಗಾಗಿ ಸಾಲಕ್ಕಾಗಿ ರೈತರು ಇತರರ ಬಳಿ ಕೈ ಒಡ್ಡದಂತೆ ಸ್ವಾವಲಂಬಿಯಾಗಿಸಿದೆ.

ಕೃಷಿಯನ್ನು ಆಧುನಿಕತೆಯೊಂದಿಗೆ ಜೋಡಿಸಿ ಭವಿಷ್ಯತ್ತಿನ ಅವಶ್ಯಕತೆ ಪೂರ್ಣಗೊಳಿಸಲಾಗುವುದು. 2014 ರಲ್ಲಿ ಕೃಷಿಗೆ ಮೀಸಲಿಟ್ಟ ಬಜೆಟ್ ಕೇವಲ 25 ಸಾವಿರ ಕೋಟಿ ಇತ್ತು. ಈ ವರ್ಷ ನಮ್ಮ ಸರಕಾರದ ಬಜೆಟ್ ನಲ್ಲಿ 1.25 ಲಕ್ಷ ಕೋಟಿ ಮೀಸಲಿಡಲಾಗಿದೆ. ನಮ್ಮ ಸರಕಾರವು ರೈತರನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಜತೆ ಜೋಡಿಸುವ ಕೆಲಸ ನಿರಂತರವಾಗಿ ನಡೆಸುತ್ತಿದೆ.

ಸಾವಯವ ಕೃಷಿಗೆ ಒತ್ತ ನೀಡಲಾಗುತ್ತಿದೆ. ಇದಲ್ಲದೇ “ಪಿಎಂ- ಪ್ರಣಾಮ್ ಯೋಜನೆ”ಯಡಿ ರಾಸಾಯನಿಕ ಮುಕ್ತ ಕೃಷಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.
ಪಾರಂಪರಿಕ ಕೃಷಿ ಪದ್ಧತಿಯನ್ನು ನಾವು ಇಂದು ಅಳವಡಿಸಿಕೊಳ್ಳಬೇಕಿದೆ. ಸಿರಿಧಾನ್ಯ‌ಬೆಳೆಗಳಿಗೆ ಸಿರಿಅನ್ನ ಯೋಜನೆ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ.
ಕರ್ನಾಟಕವು ಸಿರಿಧಾನ್ಯಗಳ ತವರು ಭೂಮಿಯಾಗಿದೆ. ಯಡಿಯೂರಪ್ಪ ನವರು ಸಿರಿಧಾನ್ಯ ಹಾಗೂ ಸಾವಯವ ಕೃಷಿಗೆ ಪ್ರೋತ್ಸಾಹ ನೀಡಿದ್ದರು.

ಕಬ್ಬು ಬೆಳೆಗಾರರ ಹಿತರಕ್ಷಣೆಗಾಗಿ ಸರಕಾರವು ಈ ಬಜೆಟ್ ನಲ್ಲಿ 2016-17 ಗಿಂತ ಮುಂಚಿನ ಬಾಕಿ ಬಿಲ್ ಗಳ ಮೇಲೆ ತೆರಿಗೆಗಡ ವಿನಾಯಿತಿಯನ್ನು ನೀಡಲಾಗಿದೆ. ಇದರಿಂದ ಕಬ್ಬು ಬೆಳೆಗಾರರ ಸಹಕಾರಿ ಸಂಘಕ್ಕೆ ಸಹಕಾರಿಯಾಗಲಿದೆ.

ಕೃಷಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ ಕ್ಷೇತ್ರದ ಪರಸ್ಪರ ಸಂಪರ್ಕ ದಿಂದ ಅಭಿವೃದ್ಧಿ ಸಾಧ್ಯ. ಆದ್ದರಿಂದ ಕರ್ನಾಟಕ ರಾಜ್ಯದಲ್ಲಿ ಈ ಕ್ಷೇತ್ರಗಳ ಬೆಳವಣಿಗೆಗೆ ಆದ್ಯತೆ ನೀಡಲಾಗುತ್ತಿದೆ.

ಕರ್ನಾಟಕದಲ್ಲಿ ಅನೇಕ ರೈಲ್ವೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ರೈಲುಸಂಪರ್ಕ ಯೋಜನೆಗಳಿಂದ ರಾಜ್ಯದ ಪ್ರಗತಿಗೆ ವೇಗ ದೊರಕಲಿದೆ.
ಲೋಂಡಾ-ಘಟಪ್ರಭಾ ಮಾರ್ಗ ಡಬ್ಲಿಂಗ್ ನಿಂದ ಪ್ರಯಾಣ ಇನ್ನಷ್ಟು ಸುಗಮವಾಗಲಿದೆ. ಉತ್ತಮ ರೈಲು ಸಂಪರ್ಕದಿಂದ ಇತರೆ ಕ್ಷೇತ್ರಗಳ
ಡಬಲ್ ಎಂಜಿನ್ ಸರಕಾರವು ” ವೇಗ”ದ ಪ್ರಗತಿಗೆ ಸಾಕ್ಷಿಯಾಗಿದೆ. ಜಲಜೀವನ ಮಿಷನ್ ಯೋಜನೆಯ ಅನುಷ್ಠಾನ ಇದಕ್ಕೆ ಸಾಕ್ಷಿಯಾಗಿದೆ.
ಗ್ರಾಮೀಣ ಪ್ರದೇಶದ ಶೇ.65 ಕ್ಕೂ ಅಧಿಕ ಪ್ರದೇಶಗಳಲ್ಲಿ ಜಲಜೀವನ್ ಮಿಷನ್ ಯೋಜನೆ ಮೂಲಕ ಮನೆಮನೆಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ.

ವೇಣುಗ್ರಾಮ ಎಂಬ ಖ್ಯಾತಿಯನ್ನು ಬೆಳಗಾವಿ ಹೊಂದಿದೆ. ನಮ್ಮ ಸರಕಾರವು ಬಿದಿರು ಬೆಳೆ ಹಾಗೂ ಕಟಾವಿಗೆ ಅನುಮತಿ ನೀಡಿರುವುದರಿಂದ ಈ ಭಾಗದ ಕರಕುಶಲ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ.

ಬೆಳಗಾವಿಯ ಜನರು ನೀಡಿದ ಪ್ರೀತಿಯನ್ನು ಬಡ್ಡಿ ಸಮೇತ ಹಿಂದಿರುಗಿಸುವೆ. ಕರ್ನಾಟಕ ಹಾಗೂ ಬೆಳಗಾವಿಯ ಅಭಿವೃದ್ದಿಯೊಂದಿಗೆ ನಿಮ್ಮ ಪ್ರೀತಿಯ ಋಣ ತೀರಿಸುವೆ ಎಂದು ಪ್ರಧಾನಮಂತ್ರಿ ಅವರು ಭರವಸೆ ನೀಡಿದರು.

*ಬೆಳಗಾವಿಯ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭ; ಪ್ರಧಾನಿ ಮೋದಿ*

https://pragati.taskdun.com/pm-narendra-modispeechbelagavi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button