ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಬೆಳೆಸುವಲ್ಲಿ ತಾಯಂದಿರ ಪಾತ್ರ ಮಹತ್ವದ್ದು: ವಿಜಯೇಂದ್ರ
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು
ಬೆಳೆಸುವಲ್ಲಿ ತಾಯಂದಿರ ಪಾತ್ರ ಮಹತ್ವದ್ದಾಗಿದೆ. ನಮ್ಮ ತಾಯಂದಿರಲ್ಲಿರುವ ಈ ವಿಶೇಷ
ಗುಣದಿಂದಲೇ ನಮ್ಮ ಭಾರತೀಯ ಸಂಸ್ಕೃತಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ ರಾಜ್ಯ ಬಿಜೆಪಿ
ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಪ್ರಾಯ ಪಟ್ಟರು.
ತಾಲ್ಲೂಕಿನ ಅವರೊಳ್ಳಿ-ಬಿಳಕಿ ಅವಳಿ ಗ್ರಾಮಗಳ ಹೊರವಲಯದ ರುದ್ರಸ್ವಾಮಿ ಮಠದಲ್ಲಿ
ಗುರುವಾರ ರಾತ್ರಿ ಮಠದ ಪೀಠಾಧ್ಯಕ್ಷ ಲಿಂಗೈಕ್ಯ ಶಾಂಡಿಲ್ಯ ಶ್ರೀಗಳ ಪುಣ್ಯಾರಾಧನೆ
ಅಂಗವಾಗಿ ಆಯೋಜಿಸಿದ್ದ ಸನಾತನ ಸಂಸ್ಕೃತಿ ಸಮಾವೇಶವನ್ನು ಅವರು ಉದ್ಘಾಟಿಸಿ
ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಇಂದಿಗೂ ಸನಾತನ ಸಂಸ್ಕೃತಿಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ
ಕಾರ್ಯಕ್ರಮಗಳು ನಡೆಯುತ್ತಿವೆ. ಇಲ್ಲಿ ಶಿಕ್ಷಣದ ಜೊತೆ ಸಂಸ್ಕಾರ ಕಲಿಸಲಾಗುತ್ತಿದೆ.
ಬಹಳ ವರ್ಷಗಳಿಂದಲೂ ಈ ಕಾರ್ಯ ಮಠಗಳಿಂದ ನಡೆದಿದೆ. ಮಠಗಳು ಸರ್ಕಾರಕ್ಕಿಂತ ಹೆಚ್ಚು
ಕೆಲಸ ಮಾಡಿ ನಮ್ಮ ಸನಾತನ ಧರ್ಮ, ಸಂಸ್ಕೃತಿಯನ್ನು ಪೋಷಿಸುತ್ತಿವೆ. ಈ ಕಾರಣಕ್ಕಾಗಿಯೇ
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಠ-ಮಾನ್ಯಗಳಿಗೆ ಹೆಚ್ಚಿನ
ಅನುದಾನ ಒದಗಿಸಿದ್ದರು ಎಂದು ಅವರು ಪ್ರತಿಪಾದಿಸಿದರು.
ನಾವು ಕನ್ನಡಿಗರು ಪುಣ್ಯವಂತರು, ಏಕೆಂದರೆ ನಮ್ಮ ನಾಡಿಗೆ ಅನ್ನ ದಾಸೋಹ, ಜ್ಞಾನ ದಾಸೋಹ
ಮತ್ತು ಅಕ್ಷರ ದಾಸೋಹದ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಜ್ಞಾನ ಒದಗಿಸುವಲ್ಲಿ ಮಠ
ಮಾನ್ಯಗಳ ಕೊಡುಗೆ ಅಪಾರವಾಗಿದೆ. ಮಠಗಳಲ್ಲಿದ್ದು ವಿದ್ಯೆ ಕಲಿತ ಎಷ್ಟೋ ಪ್ರತಿಭೆಗಳು
ಇಂದು ದೇಶ-ವಿದೇಶಗಳಲ್ಲಿ ಅತ್ಯುನ್ನತ ಹುದ್ದೆಗಳಲ್ಲಿದ್ದಾರೆ ಎಂದು ಅವರು
ವಿವರಿಸಿದರು.
ಮಠದ ಆವರಣದಲ್ಲಿ ನಿಮರ್ಿಸಲು ಉದ್ದೇಶಿಸಿರುವ ಗೋ ಶಾಲೆಯ ಕಟ್ಟಡದ ಶಿಲಾನ್ಯಾಸವನ್ನು
ನೆರವೇರಿಸಿ ಮಾತನಾಡಿದ ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಮಠಗಳು
ತ್ರಿವಿಧ ದಾಸೋಹಗಳನ್ನು ಒದಗಿಸಿ ಶಿಕ್ಷಣ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ
ಕ್ರಾಂತಿ ಮಾಡಿವೆ ಎಂದರು. ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ
ಮಾತನಾಡಿ, ನಾವೆಲ್ಲರೂ ಜಾತಿ, ಧರ್ಮ, ಭಾಷೆಯ ಹೆಸರಲ್ಲಿ ನಮ್ಮ ನಮ್ಮಲ್ಲೇ
ಬಡಿದಾಡಿಕೊಳ್ಳುವ ಬದಲು ಮನುಷ್ಯತ್ವ ತತ್ವದಿಂದ ಸಹಬಾಳ್ವೆ ನಡೆಸೋಣ ಎಂದು ಕರೆ
ನೀಡಿದರು. ತೋಪಿನಕಟ್ಟಿ ಶ್ರೀ ಮಹಾಲಕ್ಷ್ಮೀ ಗ್ರುಪ್ ಅಧ್ಯಕ್ಷ ವಿಠ್ಠಲ ಹಲಗೇಕರ
ಮಾತನಾಡಿ, ಮಠದ ವತಿಯಿಂದ ನಿರ್ಮಾಣವಾಗುತ್ತಿರುವ ಗೋಶಾಲೆಗೆ ತಮ್ಮ ಮಹಾಲಕ್ಷ್ಮೀ
ಸಂಸ್ಥೆಯ ವತಿಯಿಂದ ಎರಡು ಎಕರೆ ಜಾಗ ನೀಡುವುದಾಗಿ ಘೋಷಿಸಿದರು. ಬೆಂಗಳೂರು
ಬಿ.ಎಂ.ಆರ್.ಡಿ.ಎ ಆಯುಕ್ತ ಗೀರಿಶ ಹೊಸೂರ ಮಾತನಾಡಿ, ರಾಜ್ಯದಲ್ಲಿ ವಿಶಿಷ್ಟ
ಪ್ರಾಕೃತಿಕ ಪರಿಸರ ಮತ್ತು ಜಲಮೂಲಗಳ ಲಭ್ಯತೆ ಇದ್ದರೂ ಇಲ್ಲಿ ರಾಜಕೀಯ ಇಚ್ಛಾಶಕ್ತಿಯ
ಕೊರತೆಯಿಂದಾಗಿ ನಿರೀಕ್ಷಿತ ಅಭಿವೃದ್ದಿ ಸಾಧ್ಯವಾಗಿಲ್ಲ ಎಂದು ಕಳವಳ
ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಕ್ತಿಮಠದ ಶ್ರೀಗಳು, ತೆಲಂಗಾಣದ ನಿರಡಲಗುಂಬ ವಿರಕ್ತಮಠದ
ಶ್ರೀಗಳು, ಹಿರೇಮುನವಳ್ಳಿಯ ಶಾಂಡಿಲ್ಯೇಶ್ವರ ಮಠದ ಶ್ರೀಗಳು, ಬಿ.ಆರ್.ಡಿ.ಎ ಆಯುಕ್ತ
ಗಿರೀಶ ಹೊಸೂರ, ಮಾಜಿ ಶಾಸಕ ಅರವಿಂದ ಪಾಟೀಲ, ಬಿಜೆಪಿ ಮುಖಂಡರಾದ ವಿಠ್ಠಲ ಹಲಗೇಕರ,
ಸುಭಾಷ ಗುಳಶೆಟ್ಟಿ, ಸಂಜಯ ಕುಬಲ, ಡಾ.ರವಿ ಪಾಟೀಲ, ಸುಂದರ ಕುಲಕರ್ಣಿ, ಜ್ಯೋತಿಬಾ
ರೇಮಾಣಿ, ದಶರಥ ಬನೋಶಿ, ಕೆ.ಪಿ ಪಾಟೀಲ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಮಠದ ಭಕ್ತರು,
ಅನುಯಾಯಿಗಳು ಉಪಸ್ಥಿತರಿದ್ದರು.
ಶಿಕ್ಷಕ ವಿವೇಕ ಕುರಗುಂದ ನಿರೂಪಿಸಿದರು. ರುದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ
ಚೆನ್ನಬಸವ ದೇವರು ಸ್ವಾಗತಿಸಿದರು. ಬಿಷ್ಠಪ್ಪ ಬನೋಶಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ