ನ ಭೂತೋ ನ ಭವಿಷ್ಯತಿ ಎನ್ನುವಂತೆ ರಾಜದರ್ಭಾರದ ಪಟ್ಟಾಭಿಷೇಕದ ಮಾದರಿಯಲ್ಲಿ ನಡೆದ ಛತ್ರಪತಿ ಶಿವಾಜಿ ಪುತ್ಥಳಿ ಅನಾವರಣ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಛತ್ರಪತಿ ಶಿವಾಜಿ ಮಹಾರಾಜರ ಲಕ್ಷೋಪ ಲಕ್ಷ ಭಕ್ತರ ಸಾಕ್ಷಿಯಾಗಿ ಬೆಳಗಾವಿಯ ಐತಿಹಾಸಿಕ ರಾಜಹಂಸಗಡ ಕೋಟೆಯ ಮೇಲೆ ಭಾನುವಾರ ಬೆಳಗ್ಗೆ ರಾಷ್ಟ್ರದಲ್ಲೇ ಅತ್ಯಂತ ಭವ್ಯವಾದದ್ದೆನ್ನಲಾದ, ಸ್ವರಾಜ್ಯ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯನ್ನು ಅತ್ಯಂತ ಶಾಸ್ತ್ರೋಕ್ತ ವಿಧಿ ವಿಧಾನಗಳ ಮಧ್ಯೆ, ಮಹಾರಾಜರ ಪಟ್ಟಾಭಿಷೇಕದ ಮಾದರಿಯಲ್ಲಿ ಲೋಕಾರ್ಪಣಗೊಳಿಸಲಾಯಿತು.
ಸಾಂಪ್ರದಾಯಿಕ ಪಾಲಕಿ ಉತ್ಸವದೊಂದಿಗೆ ಗಣ್ಯರ ಮೆರವಣಿಗೆಯಲ್ಲಿ ಆಗಮಿಸಿ, ರಾಜಹಂಸಗಡದ ಅಧಿಪತಿ ಸಿದ್ಧೇಶ್ವರ ಮಂದಿರದಲ್ಲಿ ಪೂಜೆ ಸಲ್ಲಿಸಿದ ನಂತರ ಶಿವಾಜಿ ಮಹಾರಾಜರ 13ನೇ ವಂಶಸ್ಥರಾದ ಯುವರಾಜ ಸಂಭಾಜಿರಾಜೇ ಛತ್ರಪತಿ ಮತ್ತು ಗಣ್ಯರು ಪುತ್ಳಳಿಯನ್ನು ಅನಾವರಣಗೊಳಿಸಿದರು. ಕೇಸರಿ ಬಟ್ಟೆ ನಿಧಾನವಾಗಿ ಕೆಳಗೆ ಸರಿಯುತ್ತಿದ್ದಂತೆ ಯುವರಾಜರ ಶಿಷ್ಯರು ಮಂತ್ರಘೋಷ ಮೊಳಗಿಸಿದರು. ಶಿವಾಜಿ ಮೂರ್ತಿ ಅನಾವರಣಗೊಳ್ಳುತ್ತಿದ್ದಂತೆ ಸೇರಿದ್ದ ಲಕ್ಷ ಲಕ್ಷ ಶಿವಾಜಿ ಭಕ್ತರು ಜೈ ಘೋಷ ಮೊಳಗಿಸಿದರು. ಇದೇ ಸಮಯಕ್ಕೆ ಬಣ್ಣದ ಓಕುಳಿಯಾಯಿತು. ಅಲ್ಲಿನ ಇಡೀ ಪರಿಸರವೇ ಶಿವಭಕ್ತಿಯಲ್ಲಿ ಮಿಂದೆದ್ದಿತು. ಇಡೀ ಕಾರ್ಯಕ್ರಮ ಮಹಾರಾಜರ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯುತ್ತಿದೆಯೇನೋ ಎನ್ನುವ ರೀತಿಯಲ್ಲಿ, ರಾಜ ದರ್ಭಾರದಂತೆ ಭಾಸವಾಗುವಂತಿತ್ತು. ಇದೇ ವೇಳೆ ಸಾಂಪ್ರದಾಯಿಕ ಡೋಲ್ ತಾಶಾ ನೃತ್ಯ ಕೂಡ ನಡೆಯಿತು.
ಐತಿಹಾಸಿಕ ಸಿನೇಮಾಗಳಲ್ಲಿ ಕಾಣಬಹುದಾದ ರೀತಿಯಲ್ಲಿ ರಾಜದರ್ಭಾರ, ಪಟ್ಟಾಭಿಷೇಕಗಳ ಮಾದರಿಯಲ್ಲಿ ಇಡೀ ಕಾರ್ಯಕ್ರಮ ನಡೆದು ನ ಭೂತೋ ನ ಭವಿಷ್ಯತಿ ಎನ್ನುವಂತೆ ಭಾಸವಾಯಿತು.
ಇದಕ್ಕೂ ಮೊದಲು ಗಣ್ಯರು 60 ಅಡಿ ಧ್ವಜ ಸ್ಥಂಭದ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿದರು. ಸೇರಿದ್ದವರೆಲ್ಲ ಎದ್ದು ನಿಂತಿ ರಾಷ್ಟ್ರಗೀತೆ ಹಾಡಿದರು. ಬಿರು ಬಿಸಿಲೆನ್ನದೆ ಲಕ್ಷಾಂತರ ಜನರು ಇಡೀ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ರಾಜಹಂಸಗಡ ಕೋಟೆಯ ಮೇಲೆ ಜನರು ಕಿಕ್ಕಿರಿದು ಸೋರಿದ್ದಲ್ಲದೆ, ಸುಮಾರು 3 ಕಿಮೀ ರಸ್ತೆಯ ಇಕ್ಕೆಲಗಳಲ್ಲೂ ಜನಸಾಗರವೇ ತುಂಬಿಹೋಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಯುವರಾಜ ಸಂಭಾಜಿರಾಜೇ ಛತ್ರಪತಿ, ಶಿವಾಜಿ ಯಾವುದೇ ಒಂದು ಭಾಗಕ್ಕೆ ಸೀಮಿತರಾದವರಲ್ಲ. ಅವರ ಆಚಾರ, ವಿಚಾರಗಳು ಇಡೀ ವಿಶ್ವಕ್ಕೇ ಆದರ್ಶ. ಸಂಪೂರ್ಣ ಜಗತ್ತಿನ ಆಸ್ತಿ ಅವರು. ಪ್ರಾಂತ, ಭಾಷೆಗಳನ್ನು ಮೀರಿದವರು. ಸಂಭಾಜಿಯ ಕಾಲಾನಂತರವೂ 9 ವರ್ಷಗಳ ಕಾಲ ತಮಿಳುನಾಡಿನ ಜಿಂಜೂ ಪ್ರಾಂತದಲ್ಲಿ ಶಿವಾಜಿ ಸಾಮ್ರಾಜ್ಯ ಮುಂದುವರಿದಿದ್ದೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.
ನಾನು ಯಾವುದೇ ರಾಜಕೀಯ ಪಕ್ಷದ ಸದಸ್ಯನಲ್ಲ. ಶಿವಾಜಿ ಮಹಾರಾಜರ ವಂಶದಲ್ಲಿ ಹುಟ್ಟಿದ್ದೇ ನನ್ನ ಪುಣ್ಯ.ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಇಲ್ಲಿ ಅತ್ಯಂತ ಪರಿಶ್ರಮಪಟ್ಟು ಈ ಮೂರ್ತಿಯನ್ನು ಸ್ಥಾಪನೆ ಮಾಡಿದ್ದಾರೆ. ನಾನು ಬೇರೆ ಕಾರ್ಯಕ್ರಮಗಳನ್ನು ಬಿಟ್ಟು ಇದರ ಉದ್ಘಾಟನೆಗೆ ಆಗಮಿಸಿದ್ದು ಈ ಮೂರ್ತಿಯನ್ನು, ಇಲ್ಲಿ ಸೇರಿರುವ ನಿಮ್ಮನ್ನೆಲ್ಲ ನೋಡಿದ ಮೇಲೆ ಸಾರ್ಥಕವೆನಿಸಿದೆ. ಇದು ನನ್ನ ಕರ್ತವ್ಯಕೂಡ ಹೌದು. ಶಿವಾಜಿ ಮಹಾರಾಜರು ಕೂಡ ಅತ್ಯಂತ ಅವಮಾನಗಳನ್ನು ಸಹಿಸಿಕೊಂಡು, ಕಷ್ಟವನ್ನು ಸಹಿಸಿಕೊಂಡು ಸ್ವರಾಜ್ಯವನ್ನು ನಿರ್ಮಾಣ ಮಾಡಿದ್ದಾರೆ ಎಂದು ಯುವರಾಜ ಹೇಳಿದರು.
———
ಸಿಎಂ ಕೈಯಲ್ಲಿ ಅಪೂರ್ಣ ಮೂರ್ತಿ ಉದ್ಘಾಟನೆ ಮಾಡಿಸಿ ಶಿವಾಜಿ ಮಹಾರಾಜರಿಗೆ, ಶಿವಾಜಿ ಭಕ್ತರಿಗೆ ಅವಮಾನ ಮಾಡಿದ್ದಾರೆ – ಲಕ್ಷ್ಮೀ ಹೆಬ್ಬಾಳಕರ್
ಬೆಳಗಾವಿ: ಇನ್ನೂ ಪೇಂಟಿಂಗ್ ಕೂಡ ಆಗದ ಮೂರ್ತಿಯನ್ನು, ಬಣ್ಣದ ಡಬ್ಬಿ, ಕಸಬರಿಗೆಗಳನ್ನೂ ಸ್ಥಳದಿಂದ ತೆಗೆಸದೆ, ರಾಜಕೀಯ ಕಾರಣಕ್ಕಾಗಿ ಮುಖ್ಯಮಂತ್ರಿಗಳನ್ನು ಕರೆಸಿ ಉದ್ಘಾಟಿಸುವ ಮೂಲಕ ಶಿವಾಜಿ ಮಹಾರಾಜರಿಗೆ, ಲಕ್ಷಾಂತರ ಶಿವಭಕ್ತರಿಗೆ ಅವಮಾನ ಮಾಡಿದ್ದಾರೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಶಾಸಕ ರಮೇಶ ಜಾರಕಿಹೊಳಿ ಹಾಗೂ ಮಾಜಿ ಶಾಸಕ ಸಂಜಯ ಪಾಟೀಲ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾನುವಾರ ರಾಜಹಂಸಗಡದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭವ್ಯವಾದ ಪುತ್ಥಳಿ ಲೋಕಾರ್ಪಣೆ ಸಮಾರಂಭದಲ್ಲಿ ಅತ್ಯಂತ ಭಾವಕರಾದ ಲಕ್ಷ್ಮೀ ಹೆಬ್ಬಾಳಕರ್, ಶಿವಾಜಿ ಮಹಾರಾಜರ ಪುತ್ಥಳಿ ಸ್ಥಾಪನೆಗೆ ಕೈ ಹಾಕಿದ ತಮಗೆ ವಿರೋಧಿಗಳು ಕೊಟ್ಟ ಕಷ್ಟವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಪುತ್ಥಳಿ ಸ್ಥಾಪನೆಯ ಹಿನ್ನೆಲೆಯಲ್ಲಿ ತಮ್ಮ ಮೇಲೆ 2 ಪ್ರಕರಣ ದಾಖಲಿಸಲಾಗಿದೆ ಎಂದೂ ನೊಂದು ನುಡಿದರು.
ರಾಜಕಾರಣದ ಏಳು ಬೀಳುಗಳ ಮಧ್ಯೆ ನಾನು ಮನೆಯಲ್ಲಿ ಕೂಡ್ರದೆ ಜನರ ಸೇವೆಯಲ್ಲಿ ತೊಡಗಿಕೊಂಡೆ. 2 ಚುನಾವಣೆಯಲ್ಲಿ ಸೋತರೂ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಕ್ಷೇತ್ರದ ಜನರ ಸೇವೆ ಮಾಡುತ್ತೇನೆಂದು ಶಪಥ ಮಾಡಿದ್ದೆ. ಆದರೆ ಗೋಕಾಕ ಶಾಸಕ ಮತ್ತು ಮಾಜಿ ಶಾಸಕ ಸಂಜಯ ಪಾಟೀಲ ಕೊಡಬಾರದ ಕಷ್ಟ ಕೊಡುತ್ತಿದ್ದಾರೆ. ಅದರ ಮಧ್ಯೆಯೂ ಮಹಾರಾಜರ ಮೂರ್ತಿ ಲೋಕಾರ್ಪಣೆಯಾಗಿದ್ದರಿಂದ ನಾನು ಭಾವುಕಳಾಗಿದ್ದೇನೆ ಎಂದು ವಿವರಿಸಿದರು.
ನನಗೆ ಮುಖ್ಯಮಂತ್ರಿ ಬಸವರಾ ಬೊಮ್ಮಾಯಿ ಅವರ ಬಗ್ಗೆ ಸಾಕಷ್ಟು ಗೌರವ ಇದೆ. ಆದರೆ ಅವರ ಮೇಲೆ ರಾಜಕೀಯ ಒತ್ತಡ ಹಾಕಿ, ದಿಕ್ಕು ತಪ್ಪಿಸಿ, ಇನ್ನೂ ಕೇವಲ ಪ್ರೈಮರ್ ಹೊಡೆಯಲಾಗಿದ್ದ ಅಪೂರ್ಣ ಮೂರ್ತಿಯನ್ನು ಉದ್ಘಾಟನೆ ಮಾಡಿಸಿದರು. ಈ ಇಬ್ಬರೂ ಇಲ್ಲಿಗೆ ಬಂದು ಎಷ್ಟು ಕೆಲಸ ಆಗಿದೆ, ಏನೇನು ಬಾಕಿ ಇದೆ ನೋಡಲಿಲ್ಲ. ಕಸಬರಿಗೆ, ಬಣ್ಣದ ಬಕೆಟ್ ಇನ್ನು ಶಿವಾಜಿ ಪುತ್ಥಳಿಯ ಪಕ್ಕದಲ್ಲಿ ಹಾಗೆಯೇ ಇತ್ತು. ಹಾಗೆಯೇ ಉದ್ಘಾಟನೆ ಮಾಡಿಸುವ ಮೂಲಕ ಶಿವಾಜಿ ಮಹಾರಾಜರಿಗೆ, ಲಕ್ಷಾಂತರ ಶಿವಭಕ್ತರಿಗೆ ಘೋರ ಅವಮಾನ, ಅಪರಾಧ ಮಾಡಿದರು ಎಂದು ಹೆಬ್ಬಾಳಕರ್ ಹೇಳಿದರು.
ಶಿವಾಜಿ ಮಹಾರಾಜರು ಮಹಿಳೆಯರಿಗೆ ಅತ್ಯಂತ ಗೌರವ ಕೊಡುತ್ತಿದ್ದರು. ಅವರ ಸಂದೇಶ, ಮಹಿಳೆಯರ ಬಗೆಗಿನ ನೀತಿ ಎಲ್ಲರಿಗೂ ಆದರ್ಶವಾಗಿತ್ತು. ಆದರೆ ಈಗ ಮಹಿಳೆಗೆ ಏನೇನು ಮಾಡುತ್ತಿದ್ದಾರೆ ನೋಡಿ. ಇವರೂ ಶಿವಭಕ್ತರಂತೆ. ಶಿವಾಜಿ ಮಹಾರಾಜರ ಮಾರ್ಗದಲ್ಲಿ ಹೋಗದಿದ್ದ ಇವರೆಲ್ಲ ಡೊಂಗಿ ಶಿವಭಕ್ತರು ಎಂದು ಕಿಚಾಯಿಸಿದರು.
ನಾನು ಇಲ್ಲಿಯ ಕುಲದೇವರು ಸಿದ್ದೇಶ್ವರರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ. ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಅಂತಿನ ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಮಾಡಿ ಅನುದಾನ ಬಿಡುಗಡೆ ಆದೇಶ ಹೊರಡಿಸಿದೆ. ನಂತರ ಬಿಜೆಪಿ ಸರಕಾರ ಬಂದಾಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿ ಹಣ ಬಿಡುಗಡೆ ಮಾಡಿಸಿದೆ. ಆದರೆ ನಂತರ ಪ್ರವಾಹ, ಕೊರೋನಾ ಕಾರಣದಿಂದಾಗಿ ಕೆಲಸ ವಿಳಂಬವಾಯಿತು ಇಲ್ಲವಾದಲ್ಲಿ ಈಗ 2 ವರ್ಷದ ಹಿಂದೆಯೇ ಈ ಪುತ್ಥಳಿ ಉದ್ಘಾಟನೆ ನಡೆಯುತ್ತಿತ್ತು. ನಾನು ದೇವರ ವಿಷಯದಲ್ಲಿ ರಾಜಕಾರಣ ಮಾಡುವುದಿಲ್ಲ. ಜನರೇ ನನ್ನ ಪಾಲಿನ ದೇವರು. ನಿಮ್ಮೆಲ್ಲರ ಸಹಕಾರದಿಂದಾಗಿ ಈ ಮೂರ್ತಿ ಉದ್ಘಾಟನೆ ನನ್ನ ಭಾಗ್ಯ ಎಂದು ಹೇಳಿದರು.
ಮುಂದೆ ಒಳ್ಳೆಯ ದಿನಗಳು ಬಂದೇ ಬರುತ್ತವೆ. ರಾಜ್ಯದಲ್ಲಿ ಅತ್ಯಂತ ಹಿಂದುಳಿದಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ನಂಬರ್ 1 ಮಾಡುವುದೇ ನನ್ನ ಗುರಿ. ಇಲ್ಲಿ ಬಿಸಿಲಿನಲ್ಲಿ ಜನರು ನಿಂತಿದ್ದನ್ನು ನೋಡಿ ನನಗೆ ಹೊಟ್ಟೆ ಉರಿಯುತ್ತದೆ. ನಿಮ್ಮ ತ್ಯಾಗವನ್ನು ಎಂದಿಗೂ ಮರೆಯುವುದಿಲ್ಲ ಎಂದು ಭರವಸೆ ನೀಡಿದರು.
ಲಕ್ಷ್ಮೀ ಹೆಬ್ಬಾಳಕರ್ ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ
ಮಹಾರಾಷ್ಟ್ರದ ಮಾಜಿ ಸಚಿವ ಸತೇಜ್ ಪಾಟೀಲ್ (ಬಂಟಿ ಪಾಟೀಲ), 20 ಕಿಮೀ ದೂರದಿಂದಲೂ ಕಾಣಿಸುವ ಇದೊಂದು ಅತ್ಯಂತ ಭವ್ಯವಾದ, ಸುಂದರವಾದ ಮೂರ್ತಿಯಾಗಿದೆ. ಇಂದು ಸುವರ್ಣ ದಿನ, ಅಭಿಮಾನದ ದಿನ ಎಂದು ಬಣ್ಣಿಸಿದರು.
ರಾಜಕಾರಣಿಗಳು ಚುನಾವಣೆ ಬಂದಾಗ ಜನರಿಗೆ ಬರಸೆ ನೀಡುತ್ತಾರೆ. ಆದರೆ ನಂತರ ಮರೆತುಬಿಡುತ್ತಾರೆ. ಆದರೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ನೀಡಿದ ಭರವಸೆಯನ್ನು ಸಕಾಲದಲ್ಲಿ ಈಡೇರಿಸುವ ಮೂಲಕಪುಣ್ಯದ ಕೆಲಸ ಮಾಡಿದ್ದಾರೆ. ಯುವಕರಿಗೆ ಶಕ್ತಿ ತುಂಬುವ, ಪ್ರೇರಣೆಯಾಗುವ ಕೆಲಸ ಮಾಡಿದ್ದಾರೆ. ರಸ್ತೆ, ನೀರು ಮೊದಲಾದ ಅಭಿವೃದ್ಧಿ ಕೆಲಸಗಳನ್ನು ಮಾಡಿದರೆ ಜನರು ಕೆಲ ಕಾಲ ಅಷ್ಟೆ ನೆನಪಿಟ್ಟುಕೊಳ್ಳುತ್ತಾರೆ. ಆದರೆ ಇಂತಹ ಕೆಲಸ ಮಾಡಿದಾಗ ತಲತಲಾಂತರದವರೆಗೆ ಜನರ ಮನಸ್ಸಿನಲ್ಲಿ ಉಳಿಯುತ್ತಾರೆ. ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಶಿವಾಜಿ ಮಹಾರಾಜ ಹಾಗೂ ದೇವರ ಆಶಿರ್ವಾದ ಇರುತ್ತದೆ ಎಂದು ಅವರು ಹೇಳಿದರು.
ಕೆಲವು ದಿನಗಳ ಹಿಂದೆ ಕರ್ನಾಟಕದ ಮುಖ್ಯಮಂತ್ರಿಗಳನ್ನು ಕರೆಸಿ ಮಾಡಿರುವ ಉದ್ಘಾಟನೆಗೆ ಯಾವುದೇ ಅರ್ಥವಿಲ್ಲ. ಅದು ಕೇವಲ ಸರಕಾರಿ ಕಾರ್ಯಕ್ರಮ. ಜನರೂ ಬಂದಿರಲಿಲ್ಲ. ಜನಸಾಮಾನ್ಯರಿಗೆ ಗೌರವವಿಲ್ಲದ ಕಾರ್ಯಕ್ರಮ. ಆದರೆ ಇಂದು ನಡೆದಿರುವುದು ನಿಜವಾಗಿ ಶಿವಭಕ್ತರ ಕಾರ್ಯಕ್ರಮ. ಇದೊಂದು ಅತ್ಯಂತ ಸುಂದರವಾದ ಕಾರ್ಯಕ್ರಮ ಎಂದು ಬಂಟಿ ಪಾಟೀಲ ಬಣ್ಣಿಸಿದರು.
ಲಾತೂರು ಶಾಸಕ ಧೀರಜ್ ದೇಶಮುಖ ಮಾತನಾಡಿ, ಕರ್ನಾಟಕ ಕಾಂಗ್ರೆಸ್ ನಾಯಕರು ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಟಿಕೆಟ್ ನೀಡುವ ಮೂಲಕ ಮಹಿಳೆಯರಿಗೆ ಅತ್ಯಂತ ಗೌರವ ನೀಡಿದ್ದಾರೆ. ಹೆಬ್ಬಾಳಕರ್ ನಿಜವಾದ ಸ್ತ್ರೀ ಶಕ್ತಿ. ಸರಕಾರ ಬರುತ್ತದೆ ಹೋಗುತ್ತದೆ. ಆದರೆ ಜನರ ಆಶಯದಂತೆ ಕೆಲಸ ಮಾಡುವುದು ಮುಖ್ಯ ಅಂತಹ ಕೆಲಸವನ್ನು ಲಕ್ಷ್ಮೀ ಹೆಬ್ಬಾಳಕರ್ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿ, ಮಾತು ಮುಗಿಸುವಾಗ ಜೈ ಬೆಳಗಾವಿ, ಜೈ ಕರ್ನಾಟಕ ಎಂದು ಹೇಳಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಯುವರಾಜ ಕದಂ ಮಾತನಾಡಿ, ಸಂಪೂರ್ಣ ಮರಾಠಿ ಭಾಷಿಕರು ಲಕ್ಷ್ಮೀ ಹೆಬ್ಬಾಳಕರ್ ಅವರ ಜೊತೆಗಿದ್ದಾರೆ. ಈ ಬಾರಿ 80 ಸಾವಿರ ಮತಗಳ ಅಂತರದಿಂದ ಅವರು ವಿಜಯಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯುವ ಮುಖಂಡ ಮೃಣಾಲ ಹೆಬ್ಬಾಳಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. 2018ರಲ್ಲಿ ಚುನಾವಣೆ ಪೂರ್ವ ಲಕ್ಷ್ಮೀ ಹೆಬ್ಬಾಳಕರ್ ನೀಡಿದ ಭರವಸೆಯಂತೆ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯನ್ನು ಸ್ಥಾಪನೆ ಮಾಡಲಾಗಿದೆ. ಪ್ರವಾಹ, ಕೊರೆನಾಗಳಿಂದಾಗಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುತ್ತೋ ಇಲ್ಲವೋ ಎನ್ನುವ ಆತಂಕ ಎದುರಾಗಿತ್ತು. ಆದರೆ ಜನರ ಸಹಕಾರದಿಂದಾಗಿ ಅದು ಸಾಧ್ಯವಾಗಿದೆ. ವಚನ ಕೊಟ್ಟಂತೆ ಅವರು ನಡೆದುಕೊಂಡಿದ್ದಾರೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಸಿ.ಸಿ.ಪಾಟೀಲ, ನಾಗೇಶ ದೇಸಾಯಿ, ಗಂಗಣ್ಣ ಕಲ್ಲೂರು, ಶಂಕರಗೌಡ ಪಾಟೀಲ ಮೊದಲಾದವರು ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಸತ್ಕರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ