Kannada NewsLatest

ಬೆಳಗಾವಿಯಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾಯ್ತಾ? ಯಾವುದಕ್ಕೆಲ್ಲ ನಿರ್ಭಂದ? ಏನಂದ್ರು ಡಿಸಿ?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಧಾನಸಭೆ ಚುನಾವಣೆ ಘೋಷಣೆಗೆ ದಿನಗಣನೆ ಆರಂಭವಾಗಿದೆ. ಬೆನ್ನಿಗೇ ನೀತಿ ಸಂಹಿತೆಯೂ ಜಾರಿಗೆ ಬರಲಿದೆ. ಆದರೆ ಬೆಳಗಾವಿಯಲ್ಲಿ ಸೋಮವಾರ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗಳು ಹಿರಿಯ ಅಧಿಕಾರಿಗಳ ಸಭೆ ನಡೆಸಿ ಅನೇಕ ಸೂಚನೆಗಳನ್ನು ನೀಡಿದ್ದಾರೆ. ಇವೆಲ್ಲವನ್ನೂ ನೋಡಿದ ಅನೇಕರು ಚುನಾವಣೆ ನೀತಿ ಸಂಹಿತೆ ಜಾರಿಯಾಗೋಯ್ತಾ ಎಂದು ಪ್ರಶ್ನಿಸುತ್ತಿದ್ದಾರೆ.

ಚುನಾವಣೆ ಆಯೋಗ ಚಾಪೆಯ ಕೆಳಗೆ ನುಸುಳಿದರೆ ರಾಜಕಾರಣಿಗಳು ರಂಗೋಲಿ ಕೆಳಗೆ ನುಸುಳುವುದನ್ನು ಕಲಿತಿದ್ದಾರೆ. ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ತಮ್ಮ ಕೆಲಸವನ್ನು ಮುಗಿಸಿಕೊಳ್ಳುವ ಜಾಣ್ಮೆ ತೋರುತ್ತಿರುವುದು ಒಂದು ಕಡೆಯಾದರೆ, ನೀತಿಸಂಹಿತೆ ಜಾರಿಯಾದ ನಂತರವೂ ಸಿಕ್ಕಿ ಬೀಳದಂತೆ ಕಾರ್ಯಾಚರಣೆ ನಡೆಸುವುದನ್ನೂ ಕಲಿತಿದ್ದಾರೆ.

ಈ ಎಲ್ಲ ಹಿನ್ನೆಲೆಯಲ್ಲಿ ಚುನಾವಣೆ ನೀತಿ ಸಂಹಿತೆಗೂ ಮುನ್ನವೇ ಕೆಲವು ನಿಯಮಾವಳಿಗಳನ್ನು ಜಾರಿಗೊಳಿಸಲು ಚುನಾವಣೆ ಆಯೋಗ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಚುನಾವಣೆಯ ಮೇಲೆ ಪರಿಣಾಮ ಬೀರುವ ಯಾವುದೇ ಆಸೆ, ಆಮಿಶಗಳಿಗೆ ತಡೆಯೊಡ್ಡುವಂತೆ ಆಗಲೇ ನಿರ್ದೇಶನ ನೀಡಲಾಗಿದೆ. ಹಾಗಾಗಿ ರಾಜ್ಯದ ಎಲ್ಲ ಕಡೆ ಜಿಲ್ಲಾ ಚುನಾವಣಾಧಿಕಾರಿಗಳು ಅಧೀನ ಸಿಬ್ಬಂದಿಗೆ ಕೆಲವು ಸೂಚನೆ ನೀಡಿದ್ದಾರೆ.

ಬೆಳಗಾವಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಈ ಕುರಿತು ಪ್ರಗತಿವಾಹಿನಿಯೊಂದಿಗೆ ಮಾತನಾಡಿ, ಚುನಾವಣೆಯ ಮೇಲೆ ಪರಿಣಾಮ ಬೀರುವಂತದ ಯಾವುದೇ ಕ್ರಮಗಳ ಮೇಲೆ ನಿಗಾ ಇಡುವಂತೆ ಆದೇಶ ಬಂದಿದೆ ಎಂದು ತಿಳಿಸಿದ್ದಾರೆ.

ಸಭೆ, ಸಮಾರಂಭ ನಡೆಸುವುದಕ್ಕೆ ನಿರ್ಬಂಧವಿಲ್ಲ. ಸಮಾರಂಭಕ್ಕೆ ಬರುವವರಿಗೆ ಮಜ್ಜಿಗೆ, ಮೊಸರನ್ನಗಳಂತಹ ತಿಂಡಿ, ಪಾನೀಯ ನೀಡಬಹುದು. ಆದರೆ ಬಾಡೂಟ ಕೊಡುವುದನ್ನು ನಿಷೇಧಿಸಲಾಗಿದೆ. ಗಿಫ್ಟ್ ಅಥವಾ ಕೂಪನ್ ಗಳನ್ನು ಕೊಡುವುದನ್ನು ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಶಾಸಕರೊಬ್ಬರು ಮಕ್ಕಳಿಗೆ ಐಸ್ ಕ್ರೀಂ ಕೊಡುತ್ತಿದ್ದಾರೆ ಎನ್ನುವ ದೂರು ಬಂದಿತ್ತು. ಆ ಬಗ್ಗೆ ಪರಿಶೀಲಿಸಿ ವಿಡೀಯೋ ಮಾಡಲು ಹೇಳಿದ್ದೇನೆ. 18 ವರ್ಷದೊಳಗಿನ ಮಕ್ಕಳಿಗೆ ನೀಡಿದರೆ ಪರವಾಗಿಲ್ಲ, ಆದರೆ ಮತದಾರರಿಗೆ ಯಾವುದೇ ಆಮಿಷ ಒಡ್ಡಬಾರದು. ಮತದಾರರ ಮೇಲೆ ಅದು ಪರಿಣಾಮ ಬೀರುವಂತಿರಬಾರದು ಎಂದು ಸ್ಪಷ್ಟಪಡಿಸಿದರು.

ಒಟ್ಟಾರೆ, ಈ ಬಾರಿ ಚುನಾವಣೆ ಆಯೋಗ ಅತ್ಯಂತ ಕಠಿಣ ನಿರ್ಬಂಧನಗಳನ್ನು ಹೇರಲು ಮುಂದಾಗಿದೆ. ಬ್ಯಾಂಕ್ ವ್ಯವಹಾರಗಳ ಮೇಲೂ ಈಗಾಗಲೆ ನಿಗಾ ಇಡಲಾಗಿದೆ. ಅಬಕಾರಿ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ಚೆಕ್ ಪೋಸ್ಟ್ ಗಳಲ್ಲಿ ಕಠಿಣ ತಪಾಸಣೆ ಶುರುವಾಗಿದೆ.

ಬಾಡೂಟ, ಉಡುಗೊರೆ ಹಂಚಿಕೆ ಕಂಡುಬಂದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಕೆ

https://pragati.taskdun.com/vidhanasabha-electionbelagavigift-politicsdc-nitesh-patil/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button