ಪ್ರಗತಿವಾಹಿನಿ ಸುದ್ದಿ; ಮಂಡ್ಯ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಮುನ್ನೆಲೆಗೆ ಬಂದಿದ್ದ ಉರಿಗೌಡ, ನಂಜೇಗೌಡ ವಿಚಾರ ಸಿನಿಮಾ ಹಂತಕ್ಕೂ ಬಂದು ನಿಂತಿತ್ತು. ಮೇ 18ರಂದು ಉರಿಗೌಡ, ನಂಜೇಗೌಡ ಸಿನಿಮಾಗೆ ಮುಹೂರ್ಟ್ ಕೂಡ ನಿಗದಿಯಾಗಿರುವುದಾಗಿ ತೋಟಗಾರಿಕಾ ಸಚಿವ ಮುನಿರತ್ನ ಜಾಹಿರಾತು ಪ್ರಕಟಿಸಿದ್ದರು. ಆದರೀಗ ಸ್ವತ; ಮುನಿರತ್ನ ಅವರೇ ಸಿನಿಮಾ ನಿರ್ಮಾಣ ವಿಚಾರ ಕೈಬಿಟ್ಟಿದ್ದಾರೆ.
ಉರಿಗೌಡ, ನಂಜೇಗೌಡ ಸಿನಿಮಾ ಮಾಡಲು ಸಚಿವರು ಸಿದ್ಧತೆ ನಡೆಸುತ್ತಿದ್ದಂತೆ ವಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಮುಗಿಬಿದ್ದು ವಾಗ್ದಾಳಿ ನಡೆಸಿದ್ದರು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಆದಿಚುಂಚನಗಿರಿ ನಿರ್ಮಲಾನಂದನಾಥ ಶ್ರೀಗಳು ಸಚಿವ ಮುನಿರತ್ನ ಅವರನ್ನು ಕರೆದು ಮಾತುಕತೆ ನಡೆಸಿದ್ದು, ಶ್ರೀಗಳ ಜೊತೆ ಚರ್ಚೆಯ ಬಳಿಕ ಸಚಿವ ಮುನಿರತ್ನ ಯೂಟರ್ನ್ ಹೊಡೆದಿದ್ದಾರೆ.
ಉರಿಗೌಡ, ನಂಜೇಗೌಡ ಸಿನಿಮಾ ನಿರ್ಮಾಣ ಮಾಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಉರಿಗೌಡ, ನಂಜೇಗೌಡ ಸಿನಿಮಾ ಮಾಡುವ ವಿಚಾರ ನನಗೆ ಇರಲಿಲ್ಲ. ಟಿಪ್ಪು ವಿಚಾರ ಚರ್ಚೆಗೆ ಬಂದಾಗ ಅಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಒಂದು ಮಾತು ಹೇಳಿದ್ದರು. ಸಚಿವ ಮುನಿರತ್ನಗೆ ಉರಿಗೌಡ, ನಂಜೇಗೌಡ ಸಿನಿಮಾ ಮಾಡಲು ಯಾರೋ ಹೇಳಿರಬೇಕು, ಅಶ್ವತ್ಥನಾರಾಯಣ ಈ ಬಗ್ಗೆ ಸೂಚಿಸಿರಬೇಕು ಎಂದಿದ್ದರು. ಆಗಲೇ ನನಗೆ ಹೊಳೆಯಿತು. ಯಾಕೇ ನಾನೊಬ್ಬ ನಿರ್ಮಾಪಕನಾಗಿ ಇದನ್ನು ಸಿನಿಮಾ ಮಾಡಬಾರದು. ಐತಿಹಾಸಿಕ ರೀತ ದೊಡ್ಡಮಟ್ಟದಲ್ಲಿ ಸಿನಿಮಾ ಮಾಡಬೇಕು ಎಂದು ತೀರ್ಮಾನಿಸಿದೆ. ಆದರೆ ಈಗ ಈ ವಿಚಾರ ಕೈಬಿಟ್ಟಿರುವುದಾಗಿ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ