Latest

ಕನಕಪುರ ಬಳಿ 800 ಕೋಟಿ ವೆಚ್ಚದ ಸುಸಜ್ಜಿತ ಅಸ್ಪತ್ರೆಗೆ ಸದ್ಯದಲ್ಲೇ ಗುದ್ದಲಿ ಪೂಜೆ: ಡಿ.ಕೆ.ಶಿವಕುಮಾರ್

ಪ್ರಗತಿವಾಹಿನಿ ಸುದ್ದಿ, ರಾಮನಗರ:

ಕನಕಪುರದ ತುಂಗಣಿ ಬಳಿ ಸದ್ಯದಲ್ಲೇ 800 ಕೋಟಿ ರೂ. ವೆಚ್ಚದ ವೈದ್ಯಕೀಯ ಕಾಲೇಜು ಹಾಗೂ ಸುಸಜ್ಜಿತ ಅಸ್ಪತ್ರೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದು ಜಲಸಂಪನ್ಮೂಲ, ಕನ್ನಡ ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಕೆ ಶಿವಕುಮಾರ್ ಇಂದು ಹೇಳಿದರು.
ಕನಕಪುರ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ, ಸಾರ್ವಜನಿಕರ ಕುಂದುಕೊರತೆ ಆಲಿಸಿ ಅವರು ಮಾತನಾಡಿದರು.
ಕನಕಪುರ ಹೆಬ್ಬಾಗಿಲಾದ ತುಂಗಣಿ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಬೃಹತ್ ಅಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ನಿರ್ಮಾಣವಾಗಲಿದ್ದು, ಸಾವಿರಕ್ಕೂ ಹೆಚ್ಚು ವೈದ್ಯರು ಹಾಗೂ ಇತರ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದರು.
ಮುಂದಿನ ತಿಂಗಳು ಮುಖ್ಯಮಂತ್ರಿಗಳು ಗುದ್ದಲಿಪೂಜೆ ನೆರವೆರಿಸಲಿದ್ದಾರೆ. ಇಡೀ ರಾಜ್ಯದಲ್ಲೇ ತಾಲ್ಲೂಕು ಕೇಂದ್ರವೊಂದರಲ್ಲಿ ಇಂತಹ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗುತ್ತಿರುವುದು ಇದೇ ಪ್ರಥಮ ಎಂದರು.
ಈ ಅಸ್ಪತ್ರೆಯಲ್ಲದೇ ದಯಾನಂದ ಸಾಗರ್ ಅವರು ಸಹ ವೈದ್ಯ ವಿಶ್ವವಿದ್ಯಾಲಯ ಆರಂಭಿಸುತ್ತಿದ್ದು, ಇಲ್ಲಿನ ಜನರಿಗೆ ಉಚಿತ ಸೇವೆ ಒದಗಿಸುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ಕನಕಪುರ ತಾಲ್ಲೂಕಿನ ಎಲ್ಲ ಹಳ್ಳಿಗಳಿಗೆ 230 ಕೋಟಿ ರೂ. ವೆಚ್ಚದಲ್ಲಿ ಸಂಗಮದಿಂದ ಕುಡಿಯುವ ನೀರು ಒದಗಿಸುವ ಯೋಜನೆ ಭರದಿಂದ ಸಾಗಿದೆ ಎಂದರು.
ರೈತರ ಜಮೀನಿನ ಪೋಡಿ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚಿಸಿದ ಅವರು, ಆಧಾರ್ ನೋಂದಣಿಯಲ್ಲಿ ಉಂಟಾಗುತ್ತಿರುವ ವಿಳಂಬವನ್ನು ಸರಿಪಡಿಸುವಂತೆ ಆದೇಶ ನೀಡಿದರು.
ಸಾರ್ವಜನಿಕರು ಕುಳಿತಿದ್ದಲ್ಲಿಗೇ ವೇದಿಕೆಯಿಂದ ಕೆಳಗಿಳಿದು ಅಹವಾಲು ಸ್ವೀಕರಿಸಿದ ಸಚಿವರು, ಕೂಡಲೇ ಪರಿಹಾರಕ್ಕೆ ಸ್ಥಳದಲ್ಲೇ ಆದೇಶ ನೀಡಿದರು.
ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರು ಮಾತನಾಡಿ, ಪಿಎಂ ಕಿಸಾನ್ ಯೋಜನೆ ಸಂಬಂಧಿಸಿದಂತೆ ಎಲ್ಲ ರೈತರು ನೊಂದಾಯಿಸಿಕೊಳ್ಳುವಂತೆ ಕರೆ ನೀಡಿದರು.
ವಿಧಾನಪರಿಷತ್ ಸದಸ್ಯರಾದ ಎಸ್.ರವಿ, ಜಿಲ್ಲಾಪಂಚಾಯತ್ ಅಧ್ಯಕ್ಷರಾದ ನಾಗರಾಜ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ಪಿ. ಮುಲೈ ಮುಹಿಲನ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button