Kannada NewsLatest

ತುಮಕೂರು ಸಿದ್ಧಗಂಗೆ ಮಠದಲ್ಲಿ ಡಾ.ಪ್ರಭಾಕರ ಕೋರೆ ದಂಪತಿಗೆ ಸತ್ಕಾರ

ಡಾ.ಶಿವಕುಮಾರ ಮಹಾಸ್ವಾಮಿಗಳ ೧೧೬ನೇ ಜಯಂತೋತ್ಸವ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅಖಂಡವಾಗಿ ಒಂದು ಪೀಠದ ಅಧಿಪತಿಯಾಗಿ ಒಂದಿನಿತೂ ಚ್ಯುತಿ ಬಾರದ ಹಾಗೆ ನಡೆದು ಜನಸಾಮಾನ್ಯರ ಹೃದಯ ಸಿಂಹಾಸನಗಳಲ್ಲಿ ಶಾಶ್ವತವಾಗಿ ನೆಲೆಸಿದವರು ಪೂಜ್ಯಡಾ.ಶಿವಕುಮಾರ ಮಹಾಸ್ವಾಮಿಗಳು. ಶ್ರೀಗಳು ಬದುಕಿರುವಾಗಲೇ ದಂತಕಥೆಯಾಗಿ ಜನಸೇವೆ ಮಾಡಿದರು ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರು ಹೇಳಿದರು.

ಅವರು ತುಮಕೂರಿನ ಸಿದ್ಧಗಂಗಾ ಮಠದಲ್ಲಿಜರುಗಿದ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ೧೧೬ ನೇ ಜನ್ಮ ದಿನೋತ್ಸವ ಹಾಗು ಗುರುವಂದನಾ ಸಮಾರಂಭದಲ್ಲಿ ಸತ್ಕಾರವನ್ನು ಸ್ವೀಕರಿಸಿ ಮಾತನಾಡಿದರು.

ಪೂಜ್ಯ ಶಿವಕುಮಾರ ಮಹಾಸ್ವಾಮೀಜಿಯವರು ದೀನದಲಿತರ, ಹಳ್ಳಿಗಾಡಿನ ಜನರ ಬದುಕನ್ನು ಸುಧಾರಿಸಿದ್ದಾರೆ. ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನ ನೀಡಿದ್ದಾರೆ. ಸಿದ್ಧಗಂಗೆಯಲ್ಲಿ ಮೌನ ಸಾಮಾಜಿಕಕ್ರಾಂತಿಯೇ ನಡೆದು ಹೋಗಿದೆ.ನೂರೊಂದು ಸ್ವಾಮಿಗಳನ್ನು ಸಂತರನ್ನು, ಪೀಠಾಧಿಪತಿಗಳನ್ನು ಕಂಡಿದ್ದೇನೆ. ಅಥಣಿಯ ಶಿವಯೋಗಿಗಳು, ಧಾರವಾಡದ ಮೃತ್ಯುಂಜಯ ಅಪ್ಪಗಳು, ಮುರಗೋಡದ ಮಹಾಂತ ಅಪ್ಪಗಳು, ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಡಾ.ಶ್ರೀ ಶಿವಬಸವ ಮಹಾಸ್ವಾಮಿಗಳು ಹೀಗೆ ಈ ಪೂಜ್ಯರು ದಾಸೋಹಕ್ಕೆ ಸಾಕ್ಷಿಯಾಗಿದ್ದರು. ಇಂಥ ಸ್ವಾಮಿಗಳ ಕುಲಕ್ಕೆ ಆದರ್ಶಪ್ರಾಯರಾಗಿ ನೂರಕ್ಕೂಅಧಿಕ ವರ್ಷಗಳ ಕಾಲ ಕರ್ನಾಟಕವನ್ನು ಕನ್ನಡಿಗರನ್ನು ಹೆಮ್ಮೆಯಿಂದ ಬೀಗುವಂತೆ, ಗೌರವದಿಂದ ಬಾಗುವಂತೆ ಮಾಡಿದ ಪುಣ್ಯಪುರುಷ ಡಾ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿ.

ಇಂದು ನನ್ನನ್ನು ಶ್ರೀಮಠಕ್ಕೆ ಕರೆದು ಗೌರವ ಸತ್ಕಾರವನ್ನು ನೀಡಿರುವುದು, ಪೂಜ್ಯ ಡಾ.ಶಿವಕುಮಾರ ಮಹಾಸ್ವಾಮೀಜಿಯವರ ದಿವ್ಯ ಸನ್ನಿಧಿಯಲ್ಲಿ ನನ್ನನ್ನು ಆಶೀರ್ವದಿಸಿರುವುದು ಸೌಭಾಗ್ಯವೆಂದುಕೊಂಡಿದ್ದೇನೆ. ಇದೆಲ್ಲವೂ ನನ್ನ ಸುದೀರ್ಘ ೫೦ ವರ್ಷಗಳ ಸೇವೆಯಲ್ಲಿಅಲ್ಪವಾದ ಸಾಮಾಜಿಕ ಹಾಗೂ ಧಾರ್ಮಿಕ ಸೇವೆಯ ಫಲವೆಂದುಕೊಂಡಿದ್ದೇನೆ. ಭಗವಂತನು ಕೆಲವು ಕಾರ್ಯಗಳನ್ನು ನನ್ನಿಂದ ನೆರವೇರಿಸಲು ಆಶೀರ್ವದಿಸಿದ್ದಾನೆ. ಅದರ ಶ್ರೇಯಸ್ಸು ಭಗವಂತನಿಗೆ ಹಾಗೂ ಕೆಎಲ್‌ಇ ಸಂಸ್ಥೆಯ ಸಂಸ್ಥಾಪಕ ಚೇತನಕ್ಕೆ ಸಲ್ಲಬೇಕೆಂಬುದು ನನ್ನ ಬಯಕೆಎಂದು ಹೇಳಿದರು.

ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಸುತ್ತೂರು ಮಠದ ಪರಮ ಪೂಜ್ಯಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಸಿದ್ಧಗಂಗೆಯ ಪೂಜ್ಯ ಸಿದ್ಧಲಿಂಗ ಮಹಾಸ್ವಾಮೀಜಿ, ಪೂಜ್ಯ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ಡಾ.ಪ್ರಭಾಕರ ಕೋರೆಯವರಿಗೆ ಹಾಗೂ ಆಶಾ ಕೋರೆಯವರಿಗೆ ಪೂಜ್ಯರು ಸತ್ಕರಿಸಿ ಆಶೀರ್ವದಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯರಾದ ಮಹಾಂತೇಶ ಕವಟಗಿಮಠ, ಗಡಿಪ್ರಾಧಿಕಾರದ ಅಧ್ಯಕ್ಷರಾದ ಡಾ.ಸಿ.ಸೋಮಶೇಖರ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

https://pragati.taskdun.com/belagavi-police26-lakhsiezd/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button