ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ -ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಸದಾ ಉದ್ಧಟತನದಿಂದ ಮೆರೆಯುತ್ತಿರುವ ಮಹಾರಾಷ್ಟ್ರ ಸರಕಾರ ಕೇಂದ್ರ ಸರಕಾರ ಮತ್ತು ಕರ್ನಾಟಕ ಸರಕಾರಕ್ಕೆ ಮತ್ತೊಮ್ಮೆ ಸೆಡ್ಡು ಹೊಡೆದಿದೆ.
ಮಂಗಳವಾರ, ಕರ್ನಾಟಕದ 865 ಪ್ರದೇಶಗಳಲ್ಲಿರುವ ಜನರಿಗೆ ಮಹಾರಾಷ್ಟ್ರ ಆರೋಗ್ಯ ಯೋಜನೆಯನ್ನು ಜಾರಿಗೊಳಿಸುವ ಅಧಿಕೃತ ಆದೇಶವನ್ನು ಹೊರಡಿಸುವ ಮೂಲಕ ಎರಡೂ ಸರಕಾರಗಳಿಗೆ ಸವಾಲೆಸೆದಿದೆ.
ಯೋಜನೆ ಜಾರಿಗೊಳಿಸುವುದಾಗಿ ಕಳೆದ ತಿಂಗಳು ಮಹಾರಾಷ್ಟ್ರ ಘೋಷಿಸಿದಾಗ, ಅದನ್ನು ತಡೆಯುವುದಾಗಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದರು. ಇದಕ್ಕೂ ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದ ಸಂದರ್ಭದಲ್ಲಿ, ಮತ್ತೊಂದು ರಾಜ್ಯಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡಬೇಡಿ ಎನ್ನುವ ಖಡಕ್ ಸೂಚನೆ ನೀಡಿದ್ದರು.
ಈಗ ಈ ಎರಡೂ ಸರಕಾರಗಳಿಗೆ ಮಖದ ಮೇಲೆ ಹೊಡೆದಂತೆ ಮಹಾರಾಷ್ಟ್ರ ಆದೇಶ ಹೊರಡಿಸಿದೆ. ಏನು ಮಾಡುತ್ತೀರೋ ಮಾಡಿಕೊಳ್ಳಿ ಎನ್ನುವ ರೀತಿಯಲ್ಲಿ ಸವಾಲು ಹಾಕಿದೆ. ಕರ್ನಾಟಕದ 7 ಕೋಟಿ ಕನ್ನಡಿಗರನ್ನು ಕೆಣಕಿದೆ.
ಮಹಾರಾಷ್ಟ್ರ ತನಗೆ ಸೇರಬೇಕೆಂದು ಪ್ರತಿಪಾದಿಸುತ್ತಿರುವ ಕರ್ನಾಟಕದ ಗಡಿ ಪ್ರದೇಶದಲ್ಲಿರುವ 865 ಹಳ್ಳಿಗಳ ಜನರು ಮಹಾರಾಷ್ಟ್ರದ ಆರೋಗ್ಯ ಯೋಜನೆ ಸೇರಲು ಮುಕ್ತ ಅವಕಾಶ ನೀಡಿದೆ. ಇದು ಕೇವಲ ಕನ್ನಡಿಗರನ್ನು ಕೆಣಕಲು, ಗಡಿ ತಂಟೆಯನ್ನು ಜೀವಂತವಾಗಿರಿಸಲು ಮಾಡಿರುವ ಕುತಂತ್ರ ಎಂದೇ ಪರಿಭಾವಿಸಬಹುದು.
ಕರ್ನಾಟಕ ಸರಕಾರ ಮತ್ತು ಕೇಂದ್ರ ಸರಕಾರ ಇದಕ್ಕೆ ಯಾವ ರೀತಿಯ ಪ್ರತ್ಯುತ್ತರ ನೀಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ