ಪ್ರಗತಿವಾಹಿನಿ ಸುದ್ದಿ; ನವದೆಹಲಿ: ನಂದಿನಿ ಉತ್ಪನ್ನಗಳ ಬಗ್ಗೆ ವಿಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ಜನರಲ್ಲಿ ತಪ್ಪು ತಿಳುವಳಿಕೆಯನ್ನು ಹಬ್ಬುವಂತೆ ಮಾಡುತ್ತಿವೆ. ಈ ಮೂಲಕ ಜನರು, ರೈತರು ಆತಂಕಕ್ಕೀಡಾಗುವಂತೆ ಮಾಡುತ್ತಿವೆ. ರಾಜಕೀಯ ದುರುದ್ದೇಶಕ್ಕೆ ಈ ಮಟ್ಟಕ್ಕೆ ಇಳಿಯುವುದು ಸರಿಯಲ್ಲ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ನಮ್ಮ ನಂದಿನಿ ಉತ್ಪನ್ನಕ್ಕೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆಯಿದ್ದು, ಎಲ್ಲಾ ರಾಜ್ಯಗಳಲ್ಲಿಯೂ ಸಹ ದೊರೆಯುತ್ತಿದೆ. ಹೊರ ದೇಶಗಳಿಗೂ ರಫ್ತಾಗುತ್ತಿದೆ. 2018ರಲ್ಲಿ ಪ್ರತಿದಿನ 84 ಲಕ್ಷ ಲೀಟರ್ ಹಾಲನ್ನು ಉತ್ಪಾದಿಸಲಾಗುತ್ತಿತ್ತು, ಪ್ರಸ್ತುತ 94 ಲಕ್ಷ ಲೀಟರ್ ಹಾಲನ್ನು ಉತ್ಪಾದಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಉತ್ಪಾದನೆ ಹೆಚ್ಚಾಗುತ್ತಿದೆ. ಹೀಗಿರುವಾಗ ವಿಪಕ್ಷಗಳು ಅನಗತ್ಯವಾಗಿ ಸುಳ್ಳು ಆರೋಪಗಳನ್ನು ಮಾಡಿ, ತಪ್ಪು ಮಾಹಿತಿ ನೀಡುತ್ತಿರುವುದು ಸರಿಯಲ್ಲ ಎಂದು ಗುಡುಗಿದರು.
ವಿಪಕ್ಷಗಳ ಮಾತನನ್ನು ಜನರು ನಂಬಬಾರದು. ಮಾರುಕಟ್ಟೆಗೆ ಅಮೂಲ್ ಮಾತ್ರವಲ್ಲ, ಬೇರೆ ಬೇರೆ ಉತ್ಪನ್ನಗಳೂ ಬರುತ್ತಿವೆ. ಆದರೂ ನಮ್ಮದೇ ಬ್ರ್ಯಾಂಡ್ ಆಗಿರುವ ನಂದಿನಿ ಉತ್ಪನ್ನ ಬೇರೆ ಎಲ್ಲಾ ಉತ್ಪನ್ನಗಳನ್ನೂ ಹಿಮ್ಮೆಟ್ಟಿಸಿ ನಿಂತಿದೆ. ಇನ್ಮುಂದೆಯೂ ನಿಲ್ಲುತ್ತದೆ. ಈ ವಿಚಾರದಲ್ಲಿ ವಿಪಕ್ಷಗಳು ರಾಜಕಾರಣ ಮಾಡುವುದನ್ನು ಬಿಡಬೇಕು ಎಂದರು.
https://pragati.taskdun.com/d-k-sureshpreemeetamulnandinikmf/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ