*ಮುರಳಿ ಆರ್.*
ಭಾರತೀಯ ಜನತಾ ಪಕ್ಷದ ಉನ್ನತ ನಾಯಕ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಮಾರ್ಚ್ 26 ರಂದು ಕರ್ನಾಟಕ ಪ್ರವಾಸದಲ್ಲಿದ್ದರು. ಬೀದರ್‌ನ ಗೋರಟಾ ಗ್ರಾಮದಲ್ಲಿ ಗೋರಟಾ ಹುತಾತ್ಮರ ಸ್ಮಾರಕ ಮತ್ತು ಸರ್ದಾರ್ ಪಟೇಲ್‌ರ ಸ್ಮಾರಕ ಉದ್ಘಾಟನೆ ಮತ್ತು ರಾಯಚೂರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆಯ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ‘ತುಷ್ಟೀಕರಣ ಮತ್ತು ವೋಟ್ ಬ್ಯಾಂಕ್ ರಾಜಕಾರಣ’ಕ್ಕಾಗಿ ಕರ್ನಾಟಕದಲ್ಲಿ ಮುಸ್ಲಿಮರಿಗೆ ಶೇಕಡಾ 4 ರಷ್ಟು ಮೀಸಲಾತಿ ನೀಡಿದ್ದ ಕಾಂಗ್ರಸ್ ಪಕ್ಷವನ್ನು ಖಂಡಿಸುತ್ತಾ, ಧರ್ಮದ ಆಧಾರದ ಮೇಲೆ ಮೀಸಲಾತಿ ಸಾಂವಿಧಾನಿಕವಾಗಿ ಮಾನ್ಯವಾಗಿಲ್ಲ, ಆದ್ದರಿಂದ ಅದನ್ನು ರದ್ದುಗೊಳಿಸುವ ಮಹತ್ವದ ನಿರ್ಧಾರವನ್ನು ಸಚಿವ ಸಂಪುಟ ಕೈಗೊಂಡಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ’ದಕ್ಷಿಣ ಭಾರತದ ಜಲಿಯನ್ ವಾಲಾ ಬಾಗ್’ ಎಂದು ಕರೆಯಲ್ಪಡುವ ಗೋರಟಾದಲ್ಲಿ, ಶಾ 103 ಅಡಿ ಎತ್ತರದ ತ್ರಿವರ್ಣ ಧ್ವಜವನ್ನು ಹಾರಿಸಿದರು. ಭಾರತೀಯ ಜನತಾ ಪಕ್ಷದ ಚಿಂತಕರ ಚಾವಡಿಯ ನೇತಾರನೆಂದೇ ಗುರಿತಿಸಲ್ಪಟ್ಟಿರುವ ಅಮಿತ್ ಶಾ ಅವರು ಒಂದು ವಾರದೊಳಗೆ ಸತತ ಎರಡನೇ ಬಾರಿಗೆ ಕರ್ನಾಟಕಕ್ಕೆ ಭೇಟಿ ನೀಡಿರುವುದು ಭಾಜಪದ ಮೇಲಿನ ಅವರ ಶ್ರದ್ಧೆಯ ಸೂಚನೆಯಾಗಿದೆ.
ಪ್ರಧಾನಿ ಮೋದಿಯವರ ನಾಯಕತ್ವ ಮತ್ತು ಅಮಿತ್ ಶಾ ಅವರ ಸಮರ್ಥ ಮಾರ್ಗದರ್ಶನದಲ್ಲಿ, ಕರ್ನಾಟಕದಲ್ಲಿ ಭಾಜಪ ಸರ್ಕಾರವು ಮಾರ್ಚ್ 24 ರಂದು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳಿಗೆ ಮೀಸಲಾತಿಯನ್ನು ಹೆಚ್ಚಿಸಿತು, ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ರಾಜಕೀಯವಾಗಿ ಮಹತ್ವದ ಹೆಜ್ಜೆ ಇರಿಸಿದ್ದು, ಮುಸ್ಲಿಮರಿಗೆ ನೀಡಲಾಗಿದ್ದ ಮೀಸಲಾತಿಯನ್ನು ರದ್ದುಗೊಳಿಸಿತು.
ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರವು ರಾಜಕೀಯ ಲಾಭಕ್ಕಾಗಿ, ತುಷ್ಟೀಕರಣದ ರಾಜಕಾರಣದ ಮೂಲಕ, ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡಿತು. ಆದರೆ ಸಂವಿಧಾನದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿಗೆ ಅವಕಾಶವಿಲ್ಲ. ಇದೇ ಕಾರಣಕ್ಕಾಗಿಯೇ ಮೋದಿಜಿಯವರ ದೂರದೃಷ್ಟಿಯ ಚಿಂತನೆ ಹಾಗೂ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ನಡೆದ ಸಂಪುಟ ಸಭೆಯಲ್ಲಿ ಕರ್ನಾಟಕದ ಬಿಜೆಪಿ ಸರಕಾರವು ಒಬಿಸಿ ಕೋಟಾದಡಿಯಲ್ಲಿ ಮುಸ್ಲಿಮರಿಗೆ ನೀಡಿದ್ದ 4% ಮೀಸಲಾತಿಯನ್ನು ರದ್ದುಗೊಳಿಸಿ, ಪ್ರಬಲವಾದ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಗೆ ತಲಾ 2% ರಷ್ಟು ಮೀಸಲಾತಿಯನ್ನು ಸಮಾನವಾಗಿ ಹಂಚಿಕೆ ಮಾಡಿತು.
ಈ ನಿರ್ಧಾರದಿಂದ, ಒಕ್ಕಲಿಗರ ಮೀಸಲಾತಿ 4% ರಿಂದ 6% ಕ್ಕೆ ಮತ್ತು ಲಿಂಗಾಯತರ ಮೀಸಲಾತಿ 5% ರಿಂದ 7% ಕ್ಕೆ ಏರಿಕೆಯಾಯಿತು. ಆದಾಗ್ಯೂ, ಒಟ್ಟು ವಾರ್ಷಿಕ ಆದಾಯ 8 ಲಕ್ಷ ರೂ.ಗಿಂತ ಕಡಿಮೆ ಇರುವ ಕುಟುಂಬಗಳು, ಐದು ಎಕರೆಗಿಂತ ಕಡಿಮೆ ಕೃಷಿ ಭೂಮಿ ಮತ್ತು 1,000 ಚದರ ಅಡಿಗಿಂತ ಕಡಿಮೆ ಮನೆ ಹೊಂದಿರುವ ಕುಟುಂಬಗಳು ಮೀಸಲಾತಿಗೆ ಅರ್ಹರಾಗಿರುತ್ತಾರೆ.
ಹೊಸ ಪುನರ್ರಚನೆಯೊಂದಿಗೆ, EWS ವರ್ಗವು ಪ್ರಸ್ತುತ ಬ್ರಾಹ್ಮಣರು, ಜೈನರು, ಆರ್ಯವೈಶ್ಯರು, ನಾಗರತರು ಮತ್ತು ಮೊದಲಿಯರ್‌ಗಳನ್ನು ಒಳಗೊಂಡಿದೆ, ಅವರು ರಾಜ್ಯದ ಜನಸಂಖ್ಯೆಯ ಸುಮಾರು 4% ರಷ್ಟನ್ನು ಹೊಂದಿದೆ. ಈಗ ರಾಜ್ಯದ ಜನಸಂಖ್ಯೆಯಲ್ಲಿ ಶೇ.13 ರಷ್ಟಿರುವ ಮುಸ್ಲಿಂ ಸಮುದಾಯವನ್ನು ಈ ಗುಂಪಿಗೆ ಸೇರಿಸಲಾಗುವುದು. ರಾಜ್ಯದಲ್ಲಿ OBC ಗಳಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಆಧರಿಸಿ ನಾಲ್ಕು ವರ್ಗಗಳಿವೆ – 2A, 2B, 3A ಮತ್ತು 3B. ಈ ಸಮುದಾಯಗಳು ಪ್ರವರ್ಗಗಳ ಆಧಾರದ ಮೇಲೆ ಉದ್ಯೋಗಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಆದ್ಯತೆಯ ಮೀಸಲಾತಿಯನ್ನು ಪಡೆಯುತ್ತವೆ.
ಗಮನಾರ್ಹವಾಗಿ ನೋಡುವುದಾದರೆ, ಲಿಂಗಾಯತ ಸಮುದಾಯವು ರಾಜ್ಯದಲ್ಲಿ ಶೇಕಡಾ 17 ರಷ್ಟು ಪ್ರಾಬಲ್ಯ ಹೊಂದಿದೆ ಮತ್ತು ಒಕ್ಕಲಿಗ ಸಮುದಾಯವು ರಾಜ್ಯದಲ್ಲಿ ಶೇಕಡಾ 15 ರಷ್ಟು ಪ್ರಾಬಲ್ಯ ಹೊಂದಿದೆ. ಎರಡೂ ಪ್ರಬಲ ಸಮುದಾಯಗಳ ಬೆಂಬಲವು ಕರ್ನಾಟಕದ ಚುನಾವಣಾ ಸಮಯದಲ್ಲಿ ಫಲಿತಾಂಶವನ್ನು ಬದಲಾಯಿಸಬಹುದು. ತಮ್ಮ ಚಾಣಕ್ಯ ನೀತಿಗಳಿಂದ ಚುನಾವಣಾ ಗೆಲುವುಗಳಲ್ಲಿ ಹೊಸ ಅಧ್ಯಾಯ ಬರೆದ ಅಮಿತ್ ಶಾರವರ ಮಾರ್ಗದರ್ಶನದಲ್ಲಿ, ವಿಧಾನಸಭೆ ಚುನಾವಣೆಗೆ ಮುನ್ನ ಮುಸ್ಲಿಮರಿಗೆ ಮೀಸಲಾತಿಯನ್ನು ಕೊನೆಗೊಳಿಸುವ ನಿರ್ಧಾರವು,ಬಿಜೆಪಿ ತುಷ್ಟೀಕರಣ ರಾಜಕಾರಣದಲ್ಲಿ ನಂಬಿಕೆ ಹೊಂದಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ