Kannada NewsKarnataka News

ಹಣ್ಣು ಬೇಕೆಂದರೆ ಮರ ಹತ್ತಬೇಕು…

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಪತ್ರಿಕೆಗಳು ಓದುಗರ ಅಭಿರುಚಿ ಅರಿತಿಕೊಂಡು ಬರೆಯುವುದೊಂದು ಕಲೆ. ಇಂದು ಬಿಡುಗಡೆಗೊಳ್ಳುತ್ತಿರುವ ಏಳು ಕೃತಿಗಳ ಲೇಖಕಿ ಜಯಶ್ರೀ ಅಬ್ಬಿಗೇರಿ ಅವರಿಗೆ ಅದು ಸಿದ್ದಿಸಿದೆ ಎಂದು ಹಿರಿಯ ಸಂಶೋಧಕ ಡಾ. ಗುರುಪಾದ ಮರಿಗುದ್ದಿ ಇಂದಿಲ್ಲಿ ಹೇಳಿದರು.
ಬೆಳಗಾವಿ ಲೇಖಕಿಯರ ಸಂಘ ಹಾಗೂ ಸಂಕೇಶ್ವರದ ಲೋಕವಿದ್ಯಾ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ಜಯಶ್ರಿ ಅಬ್ಬಿಗೇರಿ ಅವರ ಹಣ್ಣು ಬೇಕೆಂದರೆ ಮರ ಹತ್ತಬೇಕು(ಚಿಂತನ ಲೇಖನಗಳು), ಸಮಸ್ಯೆಗಳು ಮಗ್ಗಲು ಮುಳ್ಳುಗಳಲ್ಲ(ವ್ಯಕ್ತಿತ್ವ ವಿಕಸನದ ಲೇಖನಗಳು), ಜೇನಿನಗೂಡು ನಾವೆಲ್ಲ(ಅಂಕಣ ಬರಹಗಳು), ಸಂತಸ ಅರಳುವ ಸಮಯ(ಭಾವನಾತ್ಮಕ ಲೇಖನಗಳು), ಸಂಕಲ್ಪಗಳಿಗೆ ಈ ವೇಳೆಯೇ ಶುಭವೇಳೆ(ಪ್ರಸ್ತುತ ವಿದ್ಯಮಾನದ ಲೇಖನಗಳು), ಎದೆಯ ಗೂಡಿನಲ್ಲಿ ಕದ್ದು ಮುಚ್ಚಿ(ಒಲವಿನೋಲೆಗಳು), ನೀವು ನಿಮ್ಮ ಗುಳಿಗಿ ತಗೊಂಡ್ರಿಲ್ಲೊ?(ಹಾಸ್ಯ ಬರಹಗಳು) -ಏಳು ಕೃತಿಗಳ ಬಿಡುಗಡೆ ಸಮಾರಂಭವನ್ನು ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕೃತಿ ಬಿಡುಗಡೆ ಮಾಡಿದ ಡಾ. ಗುರುಪಾದ ಮರಿಗುದ್ದಿ ಮೇಲಿನಂತೆ ಅಭಿಪ್ರಾಯ ಪಟ್ಟರು.
ಜಯಶ್ರೀ ಅವರ ಕೃತಿಗಳಲ್ಲಿ ಪ್ರಸ್ತುತ ವಿಷಯಗಳ ಕುರಿತಂತೆ ಚುರುಕಾಗಿ ಬರೆಯುವ ಒಂದು ಕೌಶಲ್ಯವಿದೆ. ಎಲ್ಲ ತಾಂತ್ರಿಕೆ ಸೌಲಭ್ಯಗಳನ್ನು ಬಳಸಿಕೊಂಡು ತುಂಬ ಅಚ್ಚುಕಟ್ಟಾಗಿ, ಸುಂದರ ಮುದ್ರಣದೊಂದಿಗೆ ಕೃತಿಗಳನ್ನು ಹೊರತಂದಿದ್ದಾರೆ. ನುರಿತ ಲೇಖಕರ ಮುನ್ನುಡಿ, ಬೆನ್ನುಡಿಗಳಿವೆ. ಪುಸ್ತಕ ಪ್ರಕಟಗೊಳಿಸುವುದು ತುಂಬ ಶ್ರಮದ ಕೆಲಸವೆಂದು ಅವರು ಹೇಳಿದರು.
ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಜ್ಯೋತಿ ಬದಾಮಿ ಅವರು ಮಾತನಾಡುತ್ತ ಏಳನೇ ತಿಂಗಳು ಏಳನೇ ತಾರಿಕಿನಂದು ಏಳು ಕೃತಿಗಳು ಬಿಡುಗಡೆಗೊಳ್ಳುತ್ತಿರುವುದು  ಸಂತಸ ತಂದಿದೆ. ಬೆಳಗಾವಿ ಒಟ್ಟಾರೆ ಕನ್ನಡ ಕಾರ‍್ಯಕ್ರಮಗಳನ್ನು ಗಮನಿಸಿದಾಗ, ಸಾಂಸ್ಕೃತಿಕ ಕಾರ‍್ಯಕ್ರಮದಲ್ಲಿ ಬೆಳಗಾವಿಯು ಧಾರವಾಡಕ್ಕಿಂತಲೂ ಒಂದು ಹೆಜ್ಜೆ ಮುಂದಕ್ಕೆ ಹೊರಟಿರುವುದು  ಸಂತಸವನ್ನುಂಟು ಮಾಡಿದೆ ಎಂದರು.
ಅರ್ಜುನ ಗೋಳಸಂಗಿ, ಎ.ಎಸ್. ಮಕಾನದಾರ ಹಾಗೂ  ಸುನಂದಾ ಎಮ್ಮಿ ಕೃತಿಗಳನ್ನು ಪರಿಚಯಿಸುತ್ತ  ಜಯಶ್ರೀ ಅಬ್ಬಿಗೇರಿ ಅವರ ಕೃತಿಗಳಲ್ಲಿ ವ್ಯಕ್ತಿತ್ವ ವಿಕಸನದ ಲೇಖನಗಳಿದ್ದು ಅವರು ಬದುಕನ್ನು ಕಟ್ಟಿಕೊಡುವ ಕಾರ‍್ಯವನ್ನು ಮಾಡಿವೆ. ಇವು ವರ್ತಮಾನಕ್ಕೆ ಹಿಡಿದ ಕೈಗನ್ನಡಿಯಾಗಿವೆ. ಮಕ್ಕಳಿಗಾಗಿ ಕಿವಿಮಾತುಗಳಿವೆ, ಪಾಲಕರಿಗೆ ಸಲಹೆ ಸೂಚನೆಗಳಿವೆ. ಜೀವನದ ಪ್ರತಿಯೊಂದು ಕ್ಷಣಗಳನ್ನು ಸಂಭ್ರಮಿಸಬೇಕೆಂಬ ಸಾರವಿದೆ. ಎಲ್ಲ ವಯೋಮಾನದವರೂ ಓದುವಂತಹ ಕೃತಿಗಳು ಇವಾಗಿವೆ ಎಂದು ಹೇಳಿ ಲೇಖಕಿ ಜಯಶ್ರೀಯವರು ಜಯದ ಸಿರಿ ಎಂದು ಬಣ್ಣಿಸಿದರು.
ಲೇಖಕಿ ಜಯಶ್ರೀ ಮಾತನಾಡಿ ಅಕ್ಷರವೆಂದೂ ತನ್ನ ಬೆಲೆಯನ್ನು ಕಳೆದುಕೊಳ್ಳಲಾರದು. ಅಕ್ಷರದಲ್ಲಿರುವ ಶಕ್ತಿಯನ್ನು ನಾನಿಂದು ಕಂಡುಕೊಂಡಿದ್ದೇನೆ. ಇಷ್ಟೊಂದು ಬರೆಹಗಳನ್ನು ಬರೆಯಲು ನಿಮಗೆ ಹೇಗೆ ಸಾಧ್ಯವಾಗುತ್ತದೆ ಎಂದು ಹಲವಾರು ಜನರು ನನ್ನನ್ನು ಪ್ರಶ್ನಿಸುತ್ತಾರೆ. ಕೆಲಸದಲ್ಲಿ ಶ್ರದ್ಧೆ ಹಾಗೂ ಯೋಜನಾ ಬದ್ಧವಾದ ಕೆಲಸವಿದ್ದರೆ ಏನನ್ನಾದರೂ ಸಾಧಿಸಬಹುದು ಎಂದು ಹೇಳಿ ತಮ್ಮ ಬರವಣಿಗೆಗೆ ಸಹಕರಿಸಿದ ಎಲ್ಲರನ್ನೂ ನೆನೆದರು.
ಅಕ್ಷಯಕುಮಾರ ಹಿರೇಮಠ ಹಾಗೂ ಎ. ಎ. ಸನದಿ ಭಾವಗೀತೆಗಳನ್ನು ಪ್ರಸ್ತುತ ಪಡಿಸಿದರು.  ಸಂಕೇಶ್ವರದ ಲೋಕವಿದ್ಯಾ ಪ್ರಕಾಶನದ ಎಲ್. ವಿ. ಪಾಟೀಲ ಅವರು ಸ್ವಗತಿಸಿದರು. ಜಯಪ್ರಕಾಶ ಅಬ್ಬಿಗೇರಿ ವಂದಿಸಿದರು.  ಸುಮಾ ಕಿತ್ತೂರ ನಿರೂಪಿಸಿದರು.
 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button