ಪ್ರಗತಿವಾಹಿನಿ ಸುದ್ದಿ, ಉಳ್ಳಾಗಡ್ಡಿ ಖಾನಾಪುರ/ಯಮಕನಮರಡಿ: ಬಿಜೆಪಿ ಮುಖಂಡ, ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿ ಅಷ್ಟಗಿ ಅವರಿಗೆ ಟಿಕೆಟ್ ತಪ್ಪಿಸಿರುವುದನ್ನು ಖಂಡಿಸಿ ಅವರ ಬೆಂಬಲಿಗರು ಬುಧವಾರ ದಾದಬಾನಟ್ಟಿಯ ರಾಷ್ಟ್ರೀಯ ಹೆದ್ದಾರಿಯಿಂದ ಯಮಕನಮರಡಿಯವರೆಗೆ ಮೆರವಣಿಗೆ ಹೊರಡಿಸಿ ಬಿಜೆಪಿ ಹೈಕಮಾಂಡ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಯಮಕನಮರಡಿ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಸಭೆ ಸೇರಿದ ಅಷ್ಟಗಿ ಬೆಂಬಲಿಗರು, ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಕಣಕ್ಕಿಳಿಯುವಂತೆ ಒತ್ತಾಯಿಸಿದರು.
ರಾಜ್ಯ ಕರಕುಶಲ ನಿಗಮದ ಅಧ್ಯಕ್ಷ ಮಾರುತಿ ಅಷ್ಟಗಿ ಮಾತನಾಡಿ, “ಇಂದು ನಾವು ತಂದೆ-ತಾಯಿ ಕಳೆದುಕೊಂಡ ಪರಿಸ್ಥಿತಿಯಲ್ಲಿದ್ದೇವೆ. ತಾಯಿಗಿಂತ ಹೆಚ್ಚಾಗಿ ಪಕ್ಷವನ್ನು ಪ್ರೀತಿಸಿ ಕ್ಷೇತ್ರದಲ್ಲಿ ಬಿಜೆಪಿ ಸಂಘಟಿಸಿದ್ದೇವೆ. ಆದರೆ ಈ ಚುನಾವಣೆಯಲ್ಲಿ ನನ್ನ ಗೆಲುವು ನಿಶ್ಚಿತ ಎಂದು ತಿಳಿದು ಕೆಲವರು ಕುತಂತ್ರದಿಂದ ಟಿಕೆಟ್ ತಪ್ಪಿಸಿದ್ದಾರೆ. ನನ್ನ ಪಕ್ಷೇತರ ಅಭಿಮಾನಿಗಳೇ ನನಗೆ ನಿಜವಾದ ಹೈ ಕಮಾಂಡ್, 2013-2018 ರಲ್ಲಿ ನಡೆದ ಚುನಾವಣೆಯಲ್ಲಿ ನಮ್ಮೊಂದಿಗಿದ್ದು ಚುನಾವಣೆಯಲ್ಲಿ ಸೋಲಿಸಿದ್ದಾರೆ. ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಒಬ್ಬರಿಗೆ ಮತ್ತು ಟಿಕೆಟ್ ಇನ್ನೊಬ್ಬರಿಗೆ ಕೊಡುವ ಒಪ್ಪಂದ ಆಗಿತ್ತೆಂದು ಕೆಲವರು ಹೇಳಿಕೆ ನೀಡುತ್ತಿರುವುದು ಸತ್ಯಕ್ಕೆ ದೂರವಾಗಿದೆ. ಇನ್ನೆರಡು ದಿನ ಕಾಯ್ದು ಬರುವ ರವಿವಾರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದೇನೆ” ಎಂದರು. ಈ ವೇಳೆ ಪಕ್ಷದ ರ್ಯಕರ್ತರು ಒಕ್ಕೊರಲಿನಿಂದ ಒಪ್ಪಿಗೆ ಸೂಚಿಸಿದರು.
ಜಿಪಂ ಮಾಜಿ ಸದಸ್ಯ ಪಾರೇಶ ಮಲಾಜಿ ಮಾತನಾಡಿ, “ಅಷ್ಟಗಿ ಅವರು ಯಾವುದೇ ಫಲಾಪೇಕ್ಷೆಗಳಿಲ್ಲದೆ ಕ್ಷೇತ್ರದಲ್ಲಿ ಬಿಜೆಪಿ ಸಂಘಟಿಸಿದ್ದು, ಇಂಥ ಪ್ರಾಮಾಣಿಕರಿಗೆ ಟಿಕೆಟ್ ತಪ್ಪಿಸಿದ್ದು ಖಂಡನೀಯ. ನಾವೆಲ್ಲರೂ ಕೂಡಿಕೊಂಡು ಸ್ವಂತ ಖರ್ಚಿನಿಂದ ಮಾರುತಿ ಅಷ್ಟಗಿಯವರನ್ನು ಗೆಲ್ಲಿಸೋಣ” ಎಂದರು.
ಜನಾರ್ದನ ಪಾಟೀಲ, ಲಕ್ಷ್ಮಣ ಅಷ್ಟಗಿ, ರವಿ ಕುರಾಡೆ, ಬಸವರಾಜ ಊದೋಶಿ, ಪ್ರಹ್ಲಾದ ನಾಯಿಕ, ಕಾರ್ಯಕರ್ತರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ