Kannada NewsUncategorized

ಧರ್ಮೇಂದ್ರ ಪ್ರಧಾನ್ ಸಂದಾನ ವಿಫಲ; ಬೆಳಗಾವಿ ಬಂಡಾಯ ಉಲ್ಬಣ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಟಿಕೆಟ್ ಹಂಚಿಕೆ ವಿಷಯದಲ್ಲಿ ಬೆಳಗಾವಿ ಜಿಲ್ಲೆಯ ಭಾರತೀಯ ಜನತಾ ಪಾರ್ಟಿಯಲ್ಲಿ ಉಂಟಾಗಿರುವ ಅಸಮಾಧಾನ ಉಲ್ಬಣವಾಗಿದೆ. ಕರ್ನಾಟಕ ಚುನಾವಣೆ ಉಸ್ತುವಾರಿಯಾಗಿರುವ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಶನಿವಾರ ಬೆಳಗಾವಿಗೆ ಆಗಮಿಸಿ ಸಮಾಧಾನಪಡಿಸುವ ಯತ್ನ ಮಾಡಿದರಾದರೂ ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ.

ಧರ್ಮೇಂದ್ರ ಪ್ರಧಾನ್ ಬೆಳಗಾವಿಯ ಖಾಸಗಿ ಹೊಟೆಲ್ ನಲ್ಲಿ ಅಸಮಾಧಾನಿತರ ಸಭೆ ಕರೆದಿದ್ದರು. ಜಿಲ್ಲೆಯ ಪ್ರಮುಖರೊಂದಿಗೆ ಚರ್ಚಿಸಿದ ನಂತರ ಅಸಮಾಧಾನಿತರನ್ನು ಒಬ್ಬೊಬ್ಬರಾಗಿ ಕರೆಸಿ ಸಮಾಧಾನಪಡಿಸುವ ಯತ್ನ ಮಾಡಿದರು. ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಆಗಮಿಸಿರಲಿಲ್ಲ.

ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಮತ್ತು ರಾಮದುರ್ಗದ ಆಕಾಂಕ್ಷಿಗಳು ಆಗಮಿಸಿ ಚರ್ಚೆ ನಡೆಸಿದರು. ಆದರೆ ಪ್ರಧಾನ್ ಮಾತಿಗೆ ಸಮ್ಮತಿಸದ ಆಕಾಂಕ್ಷಿಗಳು, ಇಷ್ಟು ವರ್ಷ ಪಕ್ಷ ಕಟ್ಟಿದ ನಮ್ಮನ್ನು ಕಡೆಗಣಿಸಿ ಕ್ಷೇತ್ರಕ್ಕೆ ಸಂಬಂಧವೇ ಇಲ್ಲದವರಿಗೆ ಟಿಕೆಟ್ ಕೊಟ್ಟಿದ್ದು ಹೇಗೆ ಎಂದು ಪ್ರಶ್ನಿಸಿದರು. ನಾಳೆಯೊಳಗೆ ಟಿಕೆಟ್ ಬದಲಿಸಿ ಸ್ಥಳೀಯರಿಗೆ ಕೊಡದಿದ್ದಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಹೇಳಿ ಹೊರಟು ಹೋದರು. ಸೋಮವಾರ ತಮ್ಮ ನಾಮಪತ್ರ ಸಲ್ಲಿಸುವುದಾಗಿ ಮಹಾದೇವಪ್ಪ ಯಾದವಾಡ ತಿಳಿಸಿದರು.

ಯಮಕನಮರಡಿಯ ಮಾರುತಿ ಅಷ್ಟಗಿ ಸಹ ಪ್ರಧಾನ್ ಮಾತಿಗೆ ಕಿವಿಗೊಡಲಿಲ್ಲ. ಕಾಂಗ್ರೆಸ್ ಜೊತೆ ಒಳ ಒಪ್ಪಂದದಿಂದಾಗಿ ಬಸವರಾಜ ಹುಂದ್ರಿಗೆ ಟಿಕೆಟ್ ನೀಡಲಾಗಿದೆ. ಇಷ್ಟು ವರ್ಷ ಪಕ್ಷ ಕಟ್ಟಿದ ಮತ್ತು ಕಳೆದ ವರ್ಷ ಅತ್ಯಂತ ಕಡಿಮೆ ಅಂತರದಿಂದ ಪರಾಭವಗೊಂಡಿರುವ ನನಗೆ ಟಿಕೆಟ್ ಕೊಡದಿರುವುದಕ್ಕೆ ಏನು ಕಾರಣ ಎಂದು ಪ್ರಶ್ನಿಸಿದರು. ಮಂಗಳವಾರ ತಾವು ಪಕ್ಷೇತರರಾಗಿ ನಾಮಪತ್ರ ಸಲ್ಲಿಸುವುದಾಗಿ ಅವರು ತಿಳಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷರೂ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಆಕಾಂಕ್ಷಿಯೂ ಆಗಿದ್ದ ಸಂಜಯ ಪಾಟೀಲ ಸಹ ಇಷ್ಟು ವರ್ಷ ಪಕ್ಷದಲ್ಲಿ ದುಡಿದವರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಿರುವುದಕ್ಕೆ ತೀವ್ರ ಅಸಮಾಧಾನ ಹೊರಹಾಕಿದರು. ನಾವು ನಿಷ್ಠಾವಂತ ಕಾರ್ಯಕರ್ತರು. ಬಂಡಾಯ ಮಾಡುವುದಿಲ್ಲ. ಆದರೆ ಅವರ ಪರವಾಗಿ ಕೆಲಸ ಮಾಡಲು ನಮ್ಮ ಆತ್ಮಸಾಕ್ಷಿ ಒಪ್ಪುವುದಿಲ್ಲ ಎಂದು ಅವರು ತಿಳಿಸಿದರು ಎಂದು ಗೊತ್ತಾಗಿದೆ. ಕ್ಷೇತ್ರದ ಹೆಚ್ಚಿನ ಕಾರ್ಯಕರ್ತರು ಚುನಾವಣೆಯಲ್ಲಿ ತಟಸ್ಥರಾಗಿ ಉಳಿಯುವುದಾಗಿ ಹೇಳುತ್ತಿದ್ದಾರೆ. ಅವರಿಗೆ ಒತ್ತಾಯ ಮಾಡಿ ಕೆಲಸ ಮಾಡಿಸುವುದೂ ಅಸಾಧ್ಯ. ಬಿಜೆಪಿ ಸೋತರೆ ನಮ್ಮ ಮೇಲೆ ಗೂಬೆ ಕೂರಿಸಬೇಡಿ ಎಂದು ಹಲವಾರು ಮುಖಂಡರು ತಿಳಿಸಿದರೆಂದು ಗೊತ್ತಾಗಿದೆ.

ಸ್ಥಳೀಯ ಮುಖಂಡರು ಕೂಡ ಟಿಕೆಟ್ ವಂಚಿತರನ್ನು, ಕಾರ್ಯಕರ್ತರನ್ನು ಸಮಾಧಾನಪಡಿಸುವ ಸ್ಥಿತಿಯಲ್ಲಿರಲಿಲ್ಲ. ಯಾರಲ್ಲೂ ಸಮಾಧಾನವಿರಲಿಲ್ಲ. ಹಾಗಾಗಿ ಧರ್ಮೇಂದ್ರ ಪ್ರಧಾನ್ ಬಂದಿದ್ದರಿಂದ ಯಾವುದೇ ಪ್ರಯೋಜನವಾಗಲಿಲ್ಲ.

https://pragati.taskdun.com/belagaviwater-supplyproblem/
https://pragati.taskdun.com/expelled-from-bjp/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button