*ಜಗದೀಶ್ ಶೆಟ್ಟರ್ ತಪ್ಪಿಗೆ ಕ್ಷಮೆ ಇಲ್ಲ; ಸವದಿಯವರಿಗೂ ನಾವ್ ಏನು ಕಡಿಮೆ ಮಾಡಿದ್ವಿ?; ಮಾಜಿ ಸಿಎಂ ಯಡಿಯೂರಪ್ಪ ಆಕ್ರೋಶ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿಗೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಪಕ್ಷದ ವಿರುದ್ಧ ಬಂಡಾಯ ಸಾರಿರುವ ನಾಯಕರ ವಿರುದ್ಧ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಗುಡುಗಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಜನಸಂಘದ ಕಾಲದಿಂದ ಇದ್ದವರು. ಅವರನ್ನು ರಾಜ್ಯದ ಅಧ್ಯಕ್ಷರನ್ನಾಗಿ ಮಾಡಿದ್ದೆವು, ಶಾಸಕ, ಸಚಿವ, ಸಿಎಂ ಆಗಿ ಮಾಡಿದ್ದೆವು. ಪಕ್ಷದಲ್ಲಿ ಎಲ್ಲಾ ಹುದ್ದೆಗಳನ್ನು ಎಲ್ಲಾ ಸ್ಥಾನಮಾನಗಳನ್ನು ಅನುಭವಿಸಿ ಈಗ ರಾಜೀನಾಮೆ ನೀಡಿರುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷದ ಜೊತೆ ಕೈಜೋಡಿಸಲು ಹೊರಟಿರುವುದು ಅಕ್ಷಮ್ಯ ಅಪರಾಧ. ಜಗದೀಶ್ ಶೆಟ್ಟರ್ ಮಾಡಿರುವ ತಪ್ಪಿಗೆ ಕ್ಷಮೆಯೇ ಇಲ್ಲ . ರಾಜ್ಯದ ಜನರೂ ಕ್ಷಮಿಸಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಗದೀಶ್ ಶೆಟ್ಟರ್ ರಾಜೀನಾಮೆ ನೀಡಿರುವುದು ಪಕ್ಷಕ್ಕೆ ಮಾಡಿದ ದ್ರೋಹ. ಶೆಟ್ಟರ್ ರಾಜೀನಾಮೆ ಕೊಟ್ಟದ್ದು ತಪ್ಪು. ಶೆಟ್ಟರ್ ಅವರಿಗೆ ನಾನು, ಅನಂತ್ ಕುಮಾರ್ ಕಾವಲಾಗಿ ಇದ್ದೆವು. ಅವರಿಗೆ ನನ್ನ ಜೊತೆ ಹೆಜ್ಜೆ ಹಾಕುವ ಜವಾಬ್ದಾರಿ ಇತ್ತು. ಪ್ರಧಾನಿ ಮೋದಿಯವರ ಬಗ್ಗೆ ಜಗತ್ತಿನಾದ್ಯಂತ ಗೌರವ ಇದೆ. ಈ ಸಂದರ್ಭದಲ್ಲಿ ಶೆಟ್ಟರ್ ಹೇಳಿಕೆ ನಿರ್ಧಾರ ಅವರು ನಂಬಿದ ವಿಚರಕ್ಕೆ ತದ್ವಿರುದ್ಧ ಇದೆ. ಸ್ಥಾನಮಾನ ಸಿಗಲಿ, ಸಿಗದಿರಲಿ ದೇಶಕ್ಕಾಗಿ ಕೆಲಸ ಮಾಡಬೇಕಿರುವುದು ನಾವು ನಡೆದುಬಂದ ದಾರಿ. ಪಕ್ಷದ ಸಹಕಾರ ಇಲ್ಲದೇ ಕಾರ್ಯಕರ್ತ ಬೆಳೆಯಲಾರ ಎಂದರು.
ಜಗದೀಶ್ ಶೆಟ್ಟರ್ ಅವರಿಗಾಗಲಿ, ಲಕ್ಷ್ಮಣ ಸವದಿಯವರಿಗಾಗಲಿ ಪಕ್ಷ ಏನು ಕಡಿಮೆ ಮಾಡಿತ್ತು? 2018ರ ಚುನಾವಣೆಯಲ್ಲಿ ಸವದಿ ಸೋತರು ಆದರೂ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ವಿ. ಅವರಿಗೆ ಎಲ್ಲಾ ಸ್ಥಾನಮಾನ ಕೊಟ್ಟಿದ್ದೆವು. ಆದರೂ ಅವರು ದುಡುಕಿ ರಾಜೀನಾಮೆ ನೀಡಿದ್ದಾರೆ. ನಾಯಕರ ರಾಜೀನಾಮೆಯಿಂದ ಯಾರೂ ವಿಚಲಿತರಾಗುವ ಅಗತ್ಯವಿಲ್ಲ, ನಾನು ರಾಜ್ಯಾದ್ಯಂತ ಪ್ರವಾಸ ಮಾಡಿ, ಇವರ ಬಂಡವಾಳವನ್ನು ಹೊರ ತರುತ್ತೇನೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ