ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಾವು ಲಕ್ಷ್ಮೀ ಹೆಬ್ಬಾಳಕರ್ ಸೋಲಿಸುವುದಿಲ್ಲ, ಬಿಜೆಪಿಯನ್ನು ಗೆಲ್ಲಿಸುತ್ತೇವೆ ಎಂದು ಸಂಜಯ ಪಾಟೀಲ ಹೇಳಿದ್ದಾರೆ. ಕಾರ್ಯಕರ್ತರೆಲ್ಲ ಒಂದಾದರೆ ಅದೇನೂ ದೊಡ್ಡದಲ್ಲ. ಸಂಜಯ ಪಾಟೀಲ ಮತ್ತು ಧನಂಜಯ ಪಾಟೀಲ ಗ್ರಾಮೀಣ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡುತ್ತಾರೆ. ನಾನು ಅಥಣಿ, ಕಾಗವಾಡಕ್ಕೆ ಹೆಚ್ಚು ಒತ್ತು ಕೊಡುತ್ತೇನೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಭಾನುವಾರ ಧರ್ಮನಾಥ ಭವನದಲ್ಲಿ ಬೆಳಗಾವಿ ಬಿಜೆಪಿ ಗ್ರಾಮೀಣ ಮತಕ್ಷೇತ್ರದ ಬಿಜೆಪಿ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಂಜಯ ಪಾಟೀಲ ಹಾಗೂ ಧನಂಜಯ ಜಾಧವ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಬಿಜೆಪಿಯ ಪ್ರಬಲ ಆಕಾಂಕ್ಷಿಯಾಗಿದ್ದರು. ಈಗ ಅವರು ಪಕ್ಷ ಟಿಕೆಟ್ ಘೋಷಣೆ ಮಾಡಿದ ನಾಗೇಶ ಮನ್ನೋಳ್ಕರ್ ಗೆಲ್ಲಿಸಲು ಶ್ರಮಿಸುವುದಾಗಿ ಹೇಳಿದ್ದಾರೆ. ಇದು ನಿಜವಾದ ಬಿಜೆಪಿಯ ತತ್ವ ಸಿದ್ಧಾಂತ. ನಾನು ಕಾರ್ಯಕರ್ತರಲ್ಲಿ ಶಕ್ತಿ ತುಂಬಲು ಅಥಣಿಗೆ ಹೆಚ್ಚು ಒತ್ತು ನೀಡುತ್ತೇನೆ ಎಂದು ಹೇಳಿದರು.
ಸೋತ ವ್ಯಕ್ತಿಯನ್ನು ಉಪಮುಖ್ಯಮಂತ್ರಿ ಮಾಡಿದೆವು. ಪಕ್ಷದ ಬಗ್ಗೆ ಬಹಳಷ್ಟು ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಸೋತ ವ್ಯಕ್ತಿಯನ್ನು ಉಪಮುಖ್ಯಮಂತ್ರಿ ಮಾಡಿದರೂ ಆ ವ್ಯಕ್ತಿ ಈಗ ಪಕ್ಷದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾನೆ. ಜಗದೀಶ್ ಶೆಟ್ಟರ್ ಅವರೂ ಸಹ ಎಲ್ಲ ಹುದ್ದೆ ಅನುಭವಿಸಿದವರು. ಅವರು ಸಹ ಪಕ್ಷದ ವಿರುದ್ಧ ತಿರುಗಿ ಬಿದ್ದಿರುವುದು ವಿಪರ್ಯಾಸದ ಸಂಗತಿ ಎಂದರು.
ಹಿರಿಯ ನಾಯಕರಾದ ಎಲ್.ಕೆ.ಅಡ್ವಾನಿ ಅವರು, ಪಕ್ಷಕ್ಕಾಗಿ ದೊಡ್ಡ ತ್ಯಾಗ ಮಾಡಿದವರು. ಇವತ್ತು ನಾಯಕರು ಪಕ್ಷ ಬಿಟ್ಟು ಹೋಗುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಬಿಜೆಪಿ ಕಾರ್ಯಕರ್ತರು ರಾಜ್ಯದಲ್ಲಿ ವಿಶೇಷವಾಗಿ ಬೆಳಗಾವಿಯಲ್ಲಿ ಶಕ್ತಿಯಾಗಿದ್ದಾರೆ. ಲಕ್ಷ್ಮಣ ಸವದಿ ಹಾಗೂ ಜಗದೀಶ್ ಶೆಟ್ಟರ್ ಅಂಥ ನಾಯಕರು ಹೋದರೆ ಹೆದರುವ ಅವಶ್ಯಕತೆ ಇಲ್ಲ. ಕಾರ್ಯಕರ್ತರಿಗೆ ಹೊಸ ಹೊಸ ನಾಯಕರನ್ನು ಹುಟ್ಟು ಹಾಕುವ ಶಕ್ತಿ ಇದೆ. ಇವತ್ತಿನಿಂದ ಎಲ್ಲರೂ ವೈಮನಸ್ಸು ಮರೆತು ಬಿಜೆಪಿ ಗೆಲ್ಲಿಸುವ ಶಪಥ ಮಾಡೋಣ ಎಂದು ಕರೆ ನೀಡಿದರು.
ಕಾಂಗ್ರೆಸ್ ನಲ್ಲಿ ಟಿಕೆಟ್ ವಂಚಿತರು ಬಂಡುಕೋರರಾಗುತ್ತಾರೆ. ಆದರೆ ಬಿಜೆಪಿಯಲ್ಲಿನ ಬದ್ಧತೆಯ ಬಗ್ಗೆ ಕಾರ್ಯಕರ್ತರಲ್ಲಿ ಹೆಮ್ಮೆ ಎನ್ನಿಸುತ್ತದೆ. ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಸಂಜಯ ಪಾಟೀಲ ಎರಡೂ ಬಾರಿ ಶಾಸಕರಾಗಿದ್ದರು. ಸಂಜಯ ಪಾಟೀಲ ಹಾಗೂ ಧನಂಜಯ ಜಾಧವ ಇಬ್ಬರು ಸೇರಿಕೊಂಡು ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವ ಜವಾಬ್ದಾರಿ ನಿಮ್ಮದು. ನಿಮ್ಮ ಸೇವೆಯನ್ನು ಪಕ್ಷ ಗಮನಿಸುತ್ತಿದೆ. ನಿಮ್ಮ ಬಗ್ಗೆ ಬಹಳಷ್ಟು ಗೌರವ ಇದೆ ಎಂದರು.
ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗೇಶ ಮನ್ನೋಳ್ಕರ್, ಸಂಜಯ ಪಾಟೀಲ, ಧನಂಜಯ ಜಾಧವ, ಕಿರಣ್ ಜಾಧವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ