Latest

ಹಿಂದೂ ಧರ್ಮ ಯಾರ ಮನೆ ಸ್ವತ್ತಲ್ಲ – ಡಿ.ಕೆ.ಶಿವಕುಮಾರ

ಪ್ರಗತಿವಾಹಿನಿ ಸುದ್ದಿ; ಬೈಂದೂರು: . ಹಿಂದೂ ಧರ್ಮ ಯಾರ ಮನೆ ಸ್ವತ್ತಲ್ಲ. ನನ್ನ ಹೆಸರು ಶಿವಕುಮಾರ, ನಾನು, ಸಿದ್ದರಾಮಯ್ಯ ಅವರು ಹಿಂದೂಗಳಲ್ಲವೇ? ನಾನು ನಿನ್ನೆ ಧರ್ಮಸ್ಥಳ, ಶೃಂಗೇರಿಗೆ ಹೋಗಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ.

ಬೈಂದೂರಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ನೂರಾರು ಜನರನ್ನು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸಿ ಅವರು ಮಾತನಾಡಿದರು.

ಗುಣಗಳಲ್ಲಿ ಅತ್ಯಂತ ಶ್ರೇಷ್ಠವಾದ ಗುಣ ಎಂದರೆ ನಂಬಿಕೆ. ಅದೇ ರೀತಿ ಇಂದು ಕಾಂಗ್ರೆಸ್ ಪಕ್ಷವನ್ನು ನಂಬಿ ನೂರಾರು ಜನ ದೇಶದ ತ್ರಿವರ್ಣ ಧ್ವಜ ಹಾಕಿಕೊಂಡು ಕಾಂಗ್ರೆಸ್ ಪಕ್ಷ ಸೇರಲು ಬಂದಿದ್ದಾರೆ. ಎಲ್ಲರಿಗೂ ಅಭಿನಂದನೆಗಳು. ಇಲ್ಲಿ ನಮ್ಮ ಅಭ್ಯರ್ಥಿಯನ್ನು 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಬೇಕು. ಈಗ ಪಕ್ಷಕ್ಕೆ ಬಂದಿರುವವರು ತಾವು ಹೊಸಬರು ಎಂದು ಹಿಂಜರಿಯಬೇಡಿ. ಇಲ್ಲಿ ಹೊಸಬರು, ಹಳಬರು ಎಂಬ ಬೇಧವಿಲ್ಲ. ಚುನಾವಣೆಯ ಕಷ್ಟಕಾಲದಲ್ಲಿ ಯಾರು ನಮ್ಮ ಜತೆ ನಿಲ್ಲುತ್ತಾರೋ ಅವರೆಲ್ಲರೂ ನಮ್ಮವರೆ ಎಂದರು.

ಬಿಜೆಪಿಯ ಆಣೆಕಟ್ಟು ಒಡೆದಿದೆ ಎಂದು ನಾನು ಹೇಳಿರುವುದಕ್ಕೆ, ಬೊಮ್ಮಾಯಿ ಅವರು ಕಾಂಗ್ರೆಸ್ ಬಾವಿಯಲ್ಲಿ ನೀರೇ ಇಲ್ಲ ಎಂದಿದ್ದಾರೆ. ಜಗದೀಶ್ ಶೆಟ್ಟರ್ ಅವರು ಪಕ್ಷದ ಅಧ್ಯಕ್ಷರು, ಸ್ಪೀಕರ್ ಹಾಗೂ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದರು. ಅವರನ್ನು ಕಡೆಗಣಿಸಿದ ಪರಿಣಾಮ ಅವರು, ಲಕ್ಷ್ಮಣ ಸವದಿ, ಪುಟ್ಟಣ್ಮ, ಬಾಬುರಾವ್ ಚಿಂಚನಸೂರು ಸೇರಿದಂತೆ ಅನೇಕ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಇವರೆಲ್ಲರೂ ದಡ್ಡರೇ? ಇವರು ಪ್ರಜ್ಞಾವಂತರಲ್ಲವೇ? ರಾಜ್ಯದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರ ಮಾಡಿದ್ದು, ಪಕ್ಷದಲ್ಲಿ ದುಡಿದವರಿಗೆ ಬೆಲೆ ಇಲ್ಲ ಎಂದು ಅರಿತು ಕಾಂಗ್ರೆಸ್ ಸೇರುತ್ತಿದ್ದಾರೆ. ನಾವು ಅವರನ್ನು ಹೃದಯ ಶ್ರೀಮಂತಿಕೆಯಿಂದ ಸ್ವಾಗತಿಸಬೇಕು.

ಮನೆಯಲ್ಲಿ ಹಿರಿಯರಿಗೆ ವಯಸ್ಸಾಗಿದೆ ಎಂದು ಅವರನ್ನು ಮನೆಯಿಂದ ಹೊರಹಾಕಲು ಸಾಧ್ಯವಿಲ್ಲ. ಯಾರಿಗೆ ಎಷ್ಟು ಗೌರವ ನೀಡಬೇಕೋ ಅಷ್ಟು ಗೌರವ ನೀಡಲೇಬೇಕು. ಪಕ್ಷಕ್ಕೆ ದುಡಿದವರನ್ನು ಪ್ರೀತಿಸಿ ಗೌರವಿಸಬೇಕು. ನಾವು ಆ ಕೆಲಸ ಮಾಡೋಣ.

ಗೋಪಾಲ ಪೂಜಾರಿ ಅವರು ಇಲ್ಲಿ ಅಭ್ಯರ್ಥಿಯಾಗಿದ್ದಾರೆ. ಅನೇಕರಿಗೆ ಅರ್ಜಿ ಹಾಕಲು ಇಚ್ಛೆ ಇತ್ತು. ಬಹಳ ಸಜ್ಜನಿಕೆ ನಾಯಕ, ಸಣ್ಣ ಕಪ್ಪು ಚುಕ್ಕೆ ನಮ್ಮ ಪೂಜಾರಿ ಅವರ ಮೇಲೆ ಇಲ್ಲ. ಅವರೇ ಈ ಬಾರಿ ಪಕ್ಷದಿಂದ ಸ್ಪರ್ಧಿಸಬೇಕು ಎಂದು ನಾಯಕರು ತಿಳಿಸಿದರು. ಅಧಿಕಾರ ನಶ್ವರ, ಸಾಧನೆ ಅಜರಾಮರ, ಮತದಾರನೇ ಈಶ್ವರ. ಅದೇ ರೀತಿ ಗೋಪಾಲ ಪೂಜಾರಿ ಅವರು ಅಧಿಕಾರ ಇರಲಿ, ಇಲ್ಲದಿರಲಿ ಜನರಿಗಾಗಿ ದುಡಿಯುತ್ತಿದ್ದಾರೆ.

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಉದ್ದೇಶದಿಂದ ನಾವು ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಿ ಜೆಡಿಎಸ್ ಜತೆ ಸರ್ಕಾರ ಮಾಡಿದೆವು. ಆದರೆ ಅವರು ಅದನ್ನು ಉಳಿಸಿಕೊಳ್ಳಲಿಲ್ಲ. ನಂತರ ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಬಂದಿತು. ಈ ಸರ್ಕಾರ ಯಾರಿಗಾದರೂ ಒಂದು ಅನುಕೂಲವಾಯಿತಾ? ಯುವಕರು, ರೈತರು, ಕಾರ್ಮಿಕರು, ಮಹಿಳೆಯರು ಸೇರಿದಂತೆ ಯಾವುದಾದರೂ ಒಂದು ವರ್ಗದ ಜನರ ಬದುಕಿನಲ್ಲಿ ಬದಲಾವಣೆ ತಂದಿದ್ದಾರಾ? ಇವರಿಂದ ಸಮಾಧಾನಕರ ಆಡಳಿತ ಬಂದಿದೆ ಎಂದು ಬಿಜೆಪಿ ಕಾರ್ಯಕರ್ತರು ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಸರ್ಕಾರ ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರು, ನಿಮ್ಮ ಖಾತೆಗೆ 15 ಲಕ್ಷ ಹಾಕುವುದಾಗಿ ಹೇಳಿದರು, ಅಚ್ಛೇದಿನ ನೀಡುವುದಾಗಿ ಹೇಳಿದರು. ಇವರು ಹೇಳಿದ್ದು ಯಾವುದಾದರೂ ಬಂದಿತಾ? ಇಲ್ಲ.

ಇಲ್ಲಿ ಬಿಜೆಪಿಯ ಮೂವರು ನಾಯಕರು ತಮ್ಮ ವಿರುದ್ಧ ಯಾವುದೇ ಸಿಡಿ ಬರಬಾರದು ಎಂದು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ ಎಂಬ ವಿಚಾರ ನಮ್ಮ ಜಿಲ್ಲಾಧ್ಯಕ್ಷರು ತಿಳಿಸಿದರು. ಇಂತಹ ಪರಿಸ್ಥಿತಿ ಬಂದಿರುವುದೇಕೆ? ಬಿಜೆಪಿ ಇತಿಹಾಸ ಚರಿತ್ರೆ ದೊಡ್ಡದಿದೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಯ ಮೂವರು ತಡೆಯಾಜ್ಞೆ ತಂದಿದ್ದಾರೆ. ಹಿಂದೆ ಬಾಂಬೆ ಬಾಯ್ಸ್ 6-7 ಮಂದಿ ತಡೆಯಾಜ್ಞೆ ತಂದಿದ್ದು ಕೇಳಿದ್ದೆ. ಪರಿಶುದ್ಧರು ಎಂದು ಹೇಳಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ನಾಯಕರು ಇಂದು ಕೋರ್ಟ್ ಮೊರೆ ಹೋಗಿದ್ದರೆ, ಬಿಜೆಪಿಯಲ್ಲಿ ಎಂತಹ ಹುಳುಕಿದೆ ಎಂದು ನೀವೆಲ್ಲರೂ ಆಲೋಚಿಸಬೇಕು.

ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗಗಳು ಅಧಿಕಾರಕ್ಕೆ ಬಂದಂತೆ. ಕೃಷ್ಣ ಅವರ ಕಾಲದಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟ ಕಾರ್ಯಕ್ರಮ, ಮಹಿಳೆಯರಿಗೆ ಸ್ತ್ರೀ ಶಕ್ತಿ ಕಾರ್ಯಕ್ರಮ, ಆಹಾರ ಭದ್ರತಾ ಕಾಯ್ದೆ, ಶಿಕ್,ಣ ಹಕ್ಕು, ಉದ್ಯೋಗ ಖಾತ್ರಿ ಯೋಜನೆ ಜಾರಿ ತಂದಿತು. ಬಿಜೆಪಿ ಸರ್ಕಾರ ಈ ಜನರ ರಕ್ಷಣೆಗೆ ಯಾವುದಾದರೂ ಒಂದು ಕಾನೂನು ತಂದರಾ? ಇಂದಿರಾ ಗಾಂಧಿ ಅವರ ಕಾಲದಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣ, ಭೂಸುಧಾರಣಾ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಪಿಂಚಣಿ ವ್ಯವಸ್ಥೆ, ಆಶಾಕಾರ್ಯಕರ್ತೆಯರ ವ್ಯವಸ್ಥೆ ತರಲಾಯಿತು.

ಬಿಜೆಪಿ ಸರ್ಕಾರ ಜನ್ ಧನ್ ಎಂದು ಖಾತೆ ತೆರೆಸಿದರು. ಉಜ್ವಲ ಯೋಜನೆ ಹೆಸರಲ್ಲಿ ಪೆಟ್ರೋಲ್ ಬಂಕ್ ಗಳಲ್ಲಿ ಮೋದಿ ಅವರು ಮಹಿಳೆಯ ಫೋಟೋ ಜತೆ ತಮ್ಮ ಫೋಟೋ ಹಾಕಿಕೊಂಡು ಪ್ರಧಾನಿ ಪ್ರಚಾರ ಪಡೆದರು. 2014ರ ಲೋಕಸಭೆ ಚುನಾವಣೆ ಸಮಯದಲ್ಲಿ ಮೋದಿ ಅವರು ಅಡುಗೆ ಅನಿಲ ಬೆಲೆ ಏರಿಕೆಯಾಗುತ್ತಿದೆ ನೀವು ಮತದಾನ ಮಾಡುವ ಮುನ್ನ ಅಡುಗೆ ಅನಿಲದ ಸಿಲಿಂಡರ್ ಗೆ ನಮಸ್ಕರಿಸಿ ಹೋಗಿ ಮತ ಹಾಕಿ ಎಂದು ಹೇಳಿದ್ದರು. 410 ರೂ. ಇದ್ದ ಸಿಲಿಂಡರ್ ಬೆಲೆ 1100 ರೂ. ಮಾಡಿದ್ದಾರೆ. ಆಮೂಲಕ ದಿನ ನಿತ್ಯ ಪಿಕ್ ಪಾಕೆಟ್ ಆಗುತ್ತಿದೆ. ಹೀಗಾಗಿ ಅದೇ ರೀತಿ ನೀವುಗಳು ಬೂತ್ ಗಳ ಮುಂದೆ ಅಡುಗೆ ಸಿಲಿಂಡರ್ ಇಟ್ಟು ಹೂವಿನ ಹಾರ ಹಾಕಿ ಜನರಿಗೆ ಹೋಗಿ ಮತ ಹಾಕಲು ಹೇಳಿ.

ಬಿಜೆಪಿ ಆಡಳಿತದಲ್ಲಿ ಗೃಹಬಳಕೆ ವಸ್ತುಗಳಿಂದ, ಇಂಧನ ಬೆಲೆಗಳು ಗಗನಕ್ಕೇರಿದೆ. ಈ ಬೆಲೆ ಏರಿಕೆಯಿಂದ ಜನರು ಕಂಗೆಟ್ಟಿದ್ದಾರೆ. ಇನ್ನು ಸರ್ಕಾರದ ಭ್ರಷ್ಟಾಚಾರಕ್ಕೆ ಬಿಜೆಪಿ ಕಾರ್ಯಕರ್ತ ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿಗೆ ಕಾರಣವಾಯಿತು. ಈ ಸರ್ಕಾರ ಕರ್ನಾಟಕವನ್ನು ದೇಶದ ಭ್ರಷ್ಟಾಚಾರದ ರಾಜಧಾನಿಯನ್ನಾಗಿ ಮಾಡಿದರು. ಬೊಮ್ಮಾಯಿ ಅವರು ನಮಗೆ ಸಾಕ್ಷಿ ಕೊಡಿ ಎಂದು ಕೇಳಿದರು. ಅವರಿಗೆ ಯತ್ನಾಳ್, ಗೂಳಿಹಟ್ಟಿ ಶೇಖರ್, ವಿಶ್ವನಾಥ್, ಮಾಡಾಳ್ ವಿರೂಪಾಕ್ಷಪ್ಪ ಅವರ ಮೇನೆ ಮೇಲೆ ದಾಳಿ ಮಾಡಿ ಲೋಕಾಯುಕ್ತ ಸರ್ಕಾರಕ್ಕೆ ಸಾಕ್ಷಿ ನೀಡಿದೆ.

ಇದರ ಪರಿಣಾಮವಾಗಿ ಮೊದಲು ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ಮಾಡುತ್ತೇವೆ ಎಂದಿದ್ದ ಅಮಿತ್ ಶಾ ಅವರು, ಇವರ ಭ್ರಷ್ಟಾಚಾರಕ್ಕೆ ಜನ ಮತ ಹಾಕುವುದಿಲ್ಲ ಎಂದು ಅರಿತು ಮೋದಿ ಮುಖ ನೋಡಿ ಮತ ಹಾಕಿ ಎಂದರು.

ಬಿಜೆಪಿ ಸರ್ಕಾರ ಕೇವಲ ಭಾವನೆ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ. ಬದುಕಿನ ಬಗ್ಗೆ ಚಿಂತನೆ ಮಾಡುತ್ತಿಲ್ಲ. ನಾವು ನಿಮ್ಮ ಬದುಕಿನ ಬಗ್ಗೆ ಚಿಂತನೆ ಮಾಡುತ್ತಿದೆ. ಸಮಾಜದಲ್ಲಿ ಎಲ್ಲರೂ ಸಾಮರಸ್ಯದ ಜೀವನ ನಡೆಸಬೇಕು. ಧರ್ಮ ಯಾವುದಾದರೂ ತತ್ವವೊಂದೋ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ, ಕರ್ಮ ಹಲವಾದರೂ ನಿಷ್ಠೆ ಒಂದೇ, ದೇವನೊಬ್ಬ ನಾಮ ಹಲವು. ಇದರಲ್ಲಿ ನಂಬಿಕೆ ಇಟ್ಟುಕೊಂಡು ನಾವು ಬದುಕುತ್ತಿದ್ದೇವೆ. ಕಾಂಗ್ರೆಸ್ ಪಕ್ಷ ಎಲ್ಲ ವರ್ಗದವರೂ ಒಂದೇ ಎಂಬ ಭಾವನೆಯಲ್ಲಿ ಬದುಕುತ್ತಿದೆ.

ಈ ಭಾಗದಲ್ಲಿನ ಮೀನುಗಾರರು ಸಾಕಷ್ಟು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಒಬ್ಬ ಮೀನುಗಾರ 10 ಮಂದಿಗೆ ಉದ್ಯೋಗ ನೀಡುವ ಸಾಮರ್ಥ್ಯ ಹೊಂದಿದ್ದಾನೆ. ನಮ್ಮ ಪಕ್ಷದಿಂದ ಪ್ರಮೋದ್ ಮದ್ವರಾಜ್ ಅವರು ಬಿಜೆಪಿ ಸೇರಿದರು. ನಾನು ಯಾಕೆ ಎಂದು ಕೇಳಿದೆ. ಬಿಜೆಪಿ ಸರ್ಕಾರ ಮೀನುಗಾರರನ್ನು ಎಸ್ಟಿ ಜನಾಂಗಕ್ಕೆ ಸೇರಿಸುತ್ತಾರೆ ಎಂದು ಭರವಸೆ ನೀಡಿದ್ದಾರೆ ಎಂದ. ಆದರೆ ಈಗ ಏನಾಯ್ತು, ಬೇರೆಯವರೆಲ್ಲ ವೇದಿಕೆ ಮೇಲೆ ಕೂರುತ್ತಾರೆ, ಪ್ರಮೋದ್ ಮದ್ವರಾಜ್ ವೇದಿಕೆಯ ಕೆಳಗೆ ಕೂರುತ್ತಾರೆ. ಈಗ ಅವರು ಗಾಳ ಹಾಕಿ ಮೀನು ಹಿಡಿಯಬೇಕಾಗಿದೆ. ಆತನ ಜತೆ ಯಾವೊಬ್ಬ ಕಾರ್ಯಕರ್ತ ಕೂಡ ಬಿಜೆಪಿಗೆ ಹೋಗಲಿಲ್ಲ. ಅವರಿಗೆ ನಾನು ಅಭಿನಂದಿಸುತ್ತೇನೆ.

ನಾವು ಕರಾವಳಿ ಭಾಗಕ್ಕೆ ಪ್ರತ್ಯೇಕ ನಿಗಮ ಹಾಗೂ ಪ್ರತ್ಯೇಕ ಪ್ರಣಾಳಿಕೆ ನೀಡುವುದಾಗಿ ಹೇಳಿದ್ದೆ. ಈ ಭಾಗದ ಜನ ಉದ್ಯೋಗ ಹರಸಿಕೊಂಡು ಹೊರ ರಾಜ್ಯ ಹಾಗೂ ರಾಷ್ಟ್ರಗಳಿಗೆ ವಲಸೆ ಹೋಗುತ್ತಿದ್ದಾರೆ. ಅವರು ಬಹಳ ವಿದ್ಯಾವಂತರು ಹಾಗೂ ಬುದ್ದಿವಂತರು. ಅವರು ವಲಸೆ ಹೋಗುವುದನ್ನು ತಡೆಯಬೇಕು. ಇಲ್ಲಿ ಸಮುದ್ರ ತೀರದಲ್ಲಿನ ಸಂಪನ್ಮೂಲ ಬಳಸಿಕೊಂಡು ಹೆಚ್ಚು ಉದ್ಯೋಗ ಸೃಷ್ಟಿಸಬಹುದು. ಮುಂದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಉದ್ಯೋಗ ಸೃಷ್ಟಿಗೆ ಪ್ರತ್ಯೇಕ ನೀತಿ ಮಾಡಲಾಗುವುದು.

ಕೋವಿಡ್ ಸಮಯದಲ್ಲಿ ಜನ ಸಾಕಷ್ಟು ತೊಂದರೆ ಅನುಭವಿಸಿದರು. ಬಿಜೆಪಿ ಕೇಂದ್ರ ಸಚಿವ ಸುರೇಶ್ ಅಂಗಡಿ ಸತ್ತಾಗ ಆತನನ್ನು ಅವರ ಊರಿನಲ್ಲಿ ಅಂತ್ಯ ಸಂಸ್ಕಾರ ಮಾಡಲು ಈ ಸರ್ಕಾರಗಳಿಂದ ಸಾಧ್ಯವಾಗಲಿಲ್ಲ. ಆಕ್ಸಿಜನ್ ಇಲ್ಲದೆ 36 ಜನ ಸತ್ತಾಗ ಕೇವಲ 3 ಜನ ಸತ್ತರು ಎಂದರು. ಅವರಿಗೂ ಪರಿಹಾರ ನೀಡಲ್ಲಿಲ್ಲ. ಆಟೋ ಚಾಲಕರು, ರೈತರು, ಕಾರ್ಮಿಕರು, ವ್ಯಾಪರಸ್ಥರು ಸೇರಿದಂತೆ ಯಾವುದೇ ವರ್ಗದವರಿಗೂ ಸರ್ಕಾರ ನೆರವು ನೀಡಲಿಲ್ಲ. ಮತ್ತೆ ಯಾವ ಕಾರಣಕ್ಕೆ ಈ ಸರ್ಕಾರ ಇರಬೇಕು?

ಬೆಲೆ ಏರಿಕೆ, ನಿರುದ್ಯೋಗದ ಸಮಸ್ಯೆಗಳಿಗೆ ಪರಿಹಾರ ನೀಡಲು ಕಾಂಗ್ರೆಸ್ ಪಕ್ಷ ನಾಲ್ಕು ಗ್ಯಾರಂಟಿ ಯೋಜನೆ ಘೋಷಿಸಿದೆ. ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ನೀಡಲಾಗುವುದು. ಆಮೂಲಕ ಪ್ರತಿ ಮನೆಗೆ ಸುಮಾರು 1500 ರೂ. ಉಳಿತಾಯವಾಗಲಿದೆ. ನಾನು ಇಂಧನ ಸಚಿವನಾಗಿದ್ದೆ. ಈ ಭಾಗದಲ್ಲಿ 200 ಕುಟುಂಬ ಹೊರತಾಗಿ ಉಳಿದವರು ಯಾರೂ ಕರೆಂಟ್ ಬಿಲ್ ಕಟ್ಟುವಂತಿಲ್ಲ. ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ. ಇನ್ನು ಅನ್ನಭಾಗ್ಯ ಯೋಜನೆ ಮೂಲಕ ಬಡ ಕುಟುಂಬಗಳ ಪ್ರತಿ ಸದಸ್ಯನಿಗೆ ತಿಂಗಳಿಗೆ ತಲಾ 10 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುವುದು. ಇನ್ನು ನಿರುದ್ಯೋಗ ಯುವಕರಿಗಾಗಿ ಪದವೀಧರರಿಗೆ ಪ್ರತಿ ತಿಂಗಳು 3000 ಹಾಗೂ ಡಿಪ್ಲೋಮಾ ಪದವೀಧರರಿಗೆ 1500 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು. ಈ ಎಲ್ಲಾ ಘೋಷಣೆಗಳ ಗ್ಯಾರಂಟಿ ಕಾರ್ಡ್ ಗಳನ್ನು ನೀವು ಪ್ರತಿ ಮನೆ ಮನೆಗೆ ತಲುಪಿಸಿ. ಮೇ 13ರಂದು ಫಲಿತಾಂಶ ಬಂದ ಮೇಲೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗಳನ್ನು ಜಾರಿ ಮಾಡಲಾಗುವುದು. ನಾವು ಈ ಯೋಜನೆ ಜಾರಿ ಮಾಡಿದ್ದರೆ ಮತ್ತೆ ನಿಮ್ಮ ಮುಂದೆ ಬಂದು ಮತ ಕೇಳುವುದಿಲ್ಲ. ಇದು ನಮ್ಮ ಶಪಥ.

ಬಿಜೆಪಿ ಸರ್ಕಾರ ಎಲ್ಲಾ ನೇಮಕಾತಿಯಲ್ಲಿ ಲಂಚ ಪಡೆದು ಯುವಕರ ಭವಿಷ್ಯ ನಾಶ ಮಾಡಿದೆ. ನಾನು ಸಚಿವನಾಗಿದ್ದಾಗ 25 ಸಾವಿರಕ್ಕಬ ಹೆಚ್ಚು ಜನರಿಗೆ ಕೆಲಸ ಕೊಟ್ಟಿದ್ದೇನೆ. ಯಾರಾದರೂ ಒಬ್ಬರು ನನಗೆ ಲಂಚ ನೀಡಿರುವ ಬಗ್ಗೆ ಹೇಳುತ್ತಾರಾ? ಖಾಸಗಿಯವರು ಉದ್ಯೋಗಸ್ಥರನ್ನು ತೆಗೆದುಕೊಳ್ಳುವಾಗ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು. ಖಾಸಗಿಯಲ್ಲಿ ಉದ್ಯೋಗ ವಿನಿಮಯ ವ್ಯವಸ್ಥೆ ಬರಬೇಕು ಎಂಬ ಸಲಹೆಯನ್ನು ಯುವಕನೊಬ್ಬ ನೀಡಿದ್ದು, ಈ ಕುರಿತ ಭರವಸೆಯನ್ನು ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ತಿಳಿಸಲಿದೆ. ಯುವಕರ ಬಗ್ಗೆ ಚಿಂತನೆ, ಹಸಿವು ಮುಕ್ತ ಕರ್ನಾಟಕ ನಿರ್ಮಾಣ, ರೈತರ ವಿಚಾರವಾಗಿ ಕಾಂಗ್ರೆಸ್ ಚಿಂತನೆ ನಡೆಸುತ್ತಿದೆ.

ರಾಜ್ಯದಲ್ಲಿ ಮೇ 10ರಂದು ಕೇವಲ ಮತದಾನ ದಿನ ಮಾತ್ರವಲ್ಲ, ನಿಮ್ಮ ಭವಿಷ್ಯ ನೀವೇ ಬರೆದುಕೊಳ್ಲುವ ದಿನ, ಭ್ರಷ್ಟಾಚಾರ ಬಡಿದೋಡಿಸುವ ದಿನ. ನಿಮ್ಮ ಭವಿಷ್ಯ ನೀವೇ ಬರೆದುಕೊಳ್ಳುವ ದಿನ, ರಾಜ್ಯದಲ್ಲಿ ಬದಲಾವಣೆ ತರುವ ದಿನ, ಕರ್ನಾಟಕದಲ್ಲಿ ಉತ್ತಮ ಆಡಳಿತ ನೀಡುವ ದಿನವಾಗಿದೆ. ಆ ದಿನ ನೀವು ಬಹಳ ಯೋಚನೆ ಮಾಡಿ ನಿಮ್ಮ ಮತ ಚಲಾಯಿಸಿ. ರಾಜ್ಯದಲ್ಲಿ ಮತ್ತೆ ಬಿಜೆಪಿ ಉಸಿರೆತ್ತ ಬಾರದು, ಆ ರೀತಿ ಪ್ರವಾಹದಂತೆ ನೀವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕು. ಕರಾವಳಿ ಭಾಗಕ್ಕೆ ಹೊಸ ಶಕ್ತಿ ಕೊಡಿಸುವ ಕೆಲಸವ್ನನು ಕಾಂಗ್ರೆಸ್ ಪಕ್ಷ ಮಾಡಲಿದೆ. ಧರ್ಮಸ್ಥಳದ ಮಂಜುನಾಥ, ಕಟೀಲು ದುರ್ಗಾ ಪರಮೇಶ್ವರಿ, ಕೊಲ್ಲೂರು ಮುಖಾಂಬಿಕೆ ಎಲ್ಲರ ಆಶೀರ್ವಾದಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 140ರಿಂದ 150 ಕ್ಷೇತ್ರಗಳನ್ನು ಗೆಲ್ಲಿಸುವ ಕೆಲಸ ಮಾಡಬೇಕು ಎಂದು ಡಿ.ಕೆ.ಶಿವಕುಮಾರ ಹೇಳಿದರು.

https://pragati.taskdun.com/bjps-hindutva-strategy-wont-work-this-time-dk-shivakumar/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button