ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ದೊಡ್ಮನೆ ಸೊಸೆ, ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್ ಪತ್ನಿ ಗೀತಾ ಶಿವರಾಜಕುಮಾರ್ ಹಾಗೂ ಮಾಜಿ ಸಚಿವ ಬಿ.ಬಿ. ನಿಂಗಯ್ಯ ಅವರು ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಗೀತಾ ಹಾಗೂ ಬಿ.ಬಿ. ನಿಂಗಯ್ಯ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಪಕ್ಷದ ಧ್ವಜ ಹಸ್ತಾಂತರಿಸುವ ಮೂಲಕ ಬರಮಾಡಿಕೊಂಡರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಶಾಸಕ ಬೈರತಿ ಸುರೇಶ್, ಎಂಎಲ್ ಸಿ ದಿನೇಶ್ ಗೂಳಿಗೌಡ, ಎಐಸಿಸಿ ವಕ್ತಾರ ಗೌರವ್ ವಲ್ಲಭ್, ಡಾ.ಬಿ.ಎಲ್. ಶಂಕರ್, ಮಧು ಬಂಗಾರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಗೀತಾ ಶಿವರಾಜಕುಮಾರ್ ಕಾಂಗ್ರೆಸ್ ಐತಿಹಾಸಿಕ ಪಕ್ಷ. ಈ ಪಕ್ಷಕ್ಕೆ ಸೇರುತ್ತಿರುವುದು ಬಹಳ ಸಂತೋಷವಾಗುತ್ತಿದೆ. ನನ್ನನ್ನು ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡ ಸಹೋದರ ಡಿ.ಕೆ. ಶಿವಕುಮಾರ್ ಅವರಿಗೆ ಧನ್ಯವಾದಗಳು. ನಾವು ಕನಕಪುರಕ್ಕೆ ಶಿಫ್ಟ್ ಆಗುತ್ತಿದ್ದೇವೆ ಎಂದು ಮಾಧ್ಯಮಗಳು ತಿಳಿಸುತ್ತಿದ್ದು, ಅದೂ ಸದ್ಯವೇ ಆಗಲಿದೆ. ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ತಂದೆ ಎಸ್. ಬಂಗಾರಪ್ಪ ಅವರೊಂದಿಗೆ ಜತೆ ಕೆಲಸ ಮಾಡಿದ್ದು, ಅವರಿಗೂ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ತಿಳಿಸುತ್ತೇನೆ. ನನ್ನ ತಮ್ಮ ಮಧು ಕಾಂಗ್ರೆಸ್ ಸೇರಿದಾಗಲೇ ನಾನು ಕಾಂಗ್ರೆಸ್ ಜತೆಗಿದ್ದೆ. ಈ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕರಾದ ಸಿದ್ದರಾಮಯ್ಯ ಅವರಿಗೂ ಧನ್ಯವಾದ ತಿಳಿಸುತ್ತೇನೆ” ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ ” ನಾನು ಬಹಳ ದಿನಗಳಿಂದ ಗಾಳ ಹಾಕುತ್ತಿದ್ದೆ. ಮಧು ಬಂಗಾರಪ್ಪ ಗಾಳಕ್ಕೆ ಸಿಕ್ಕರು. ಆದರೆ ಗೀತಾ ಅವರಿಗಾಗಿ ಗಾಳ ಬೀಸಿದರೂ ಸಿಗಲಿಲ್ಲ. ಆದರೆ ಅವರು ರಾಹುಲ್ ಗಾಂಧಿಯವರು ರಾಜ್ಯದ ಜನತೆಗಾಗಿ ಘೋಷಿಸಿರುವ ಜನಪರ ಕಾರ್ಯಕ್ರಮಗಳ ಬಲೆಗೆ ಬಿದ್ದಿದ್ದಾರೆ” ಎಂದರು.
ಪತ್ನಿ ನಡೆ ಬಗ್ಗೆ ಪ್ರತಿಕ್ರಿಯಿಸಿರುವ ಶಿವರಾಜ್ ಕುಮಾರ್, “ಗೀತಾ ಬದಲಾವಣೆಯ ನಿಟ್ಟಿನಲ್ಲಿ ತಮ್ಮದೇ ಆದ ನಿರ್ಧಾರ ತಳೆದಿದ್ದು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿರುವುದಕ್ಕೆ ಸಂತೋಷವಾಗಿದೆ. ಗೀತಾ ಅವರ ನಿರ್ಧಾರಕ್ಕೆ ನನ್ನ ಬೆಂಬಲ ಸದಾ ಇರುತ್ತದೆ” ಎಂದು ಹೇಳಿರುವುದಲ್ಲದೆ ನಾಳೆಯಿಂದಲೇ ಗೀತಾ ಅವರೊಂದಿಗೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ.
ನಾಳೆ ಸೊರಬ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಪರ ಹಾಗೂ ಶಿರಸಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಪರ ಗೀತಾ ಪ್ರಚಾರ ನಡೆಸಲಿದ್ದು, ಅವರೊಂದಿಗೆ ತಾವೂ ಪ್ರಚಾರ ಕಾರ್ಯದಲ್ಲಿ ತೊಡಗುವುದಾಗಿ ಶಿವರಾಜಕುಮಾರ್ ತಿಳಿಸಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಜೆಡಿಎಸ್ ಪಕ್ಷದಿಂದ ಗೀತಾ ಶಿವರಾಜ್ಕುಮಾರ್ ಸ್ಪರ್ಧಿಸಿದ್ದರು. ನಂತರದಲ್ಲಿ ಅವರು ಜೆಡಿಎಸ್ ನಿಂದ ಹೊರಬಂದು ತಟಸ್ಥವಾಗಿ ಉಳಿದಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ