ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ಕಾಂಗ್ರೆಸ್ ಪಕ್ಷ ವಾರಂಟಿ ಇಲ್ಲದ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ. ಇದಕ್ಕೆ ಯಾವುದೇ ಬೆಲೆಯಿಲ್ಲ. ಯಾವೊಂದು ಯೋಜನೆಗಳು ಜಾರಿಯಾಗದು ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಚಿತ್ರದುರ್ಗದಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ಬರಿ ಸುಳ್ಳು ಯೋಜನೆಗಳನ್ನು ಘೋಷಿಸಿದೆ. ದೇಶದಲ್ಲಿ ಕಾಂಗ್ರೆಸ್ ಆಯಸ್ಸು ಮುಗಿದಿದೆ. 2012ರಲ್ಲಿಯೂ ಕಾಂಗ್ರೆಸ್ ಗುಜರಾತ್ ನಲ್ಲಿ ಮಾದರಿ ನಿರ್ಮಾಣ ಮಾಡುವುದಾಗಿ ಆಶ್ವಾಸನೆ ನೀಡಿತ್ತು. ಆದರೆ ಯಾವೊಂದು ಯೋಜನೆ ಜಾರಿಗೆ ತರಲಿಲ್ಲ. ಕಾಂಗ್ರೆಸ್ ಪಕ್ಷದ ವಾರಂಟಿಯೆ ಮುಗಿದಿದೆ. ಇನ್ನು ಗ್ಯಾರಂಟಿ ಯೋಜನೆಗಳಿಗೆ ಬೆಲೆಯೆಲ್ಲಿ? ಎಂದು ಟೀಕಿಸಿದರು.
ರಾಜ್ಯದಲ್ಲಿ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಸ್ವತ: ಕಾಂಗ್ರೆಸ್ ನವರಿಗೆ ಗೊತ್ತಾಗಿದೆ. ಹೀಗಾಗಿ ಸುಳ್ಳಿನ ಗ್ಯಾರಂಟಿಗಳನ್ನು ನೀಡುತ್ತಿದೆ. ಕಾಂಗ್ರೆಸ್ ಭರವಸೆಗಳಿಗೆ ಮರುಳಾಗಬೇಡಿ ಎಂದು ಹೇಳಿದರು.
ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯ, ದೇಶದಲ್ಲಿ ಅಭಿವೃದ್ಧಿ ವೇಗವಾಗಿ ಸಾಗುತ್ತಿದೆ. ಚಿತ್ರದುರ್ಗದ 7 ಸುತ್ತಿನ ಕೋಟೆ ರೀತಿ 7 ಸುರಕ್ಷಾ ಯೋಜನೆಗಳನ್ನು ನಾವು ಜಾರಿಗೆ ತಂದಿದ್ದೇವೆ. ಪಿಎಂ ಆವಾಸ್ ಯೋಜನೆ, ಪ್ರತಿ ಮನೆಗೂ ರೇಷನ್, ಆಯುಷ್ ಮಾನ್ ಭಾರತ್ ಯೋಜನೆ, ಮುದ್ರಾ ಯೋಜನೆ, ಭೀಮಾ ಯೋಜನೆ, ಮಹಿಳೆಯರ ಸುರಕ್ಷೆ ಹಾಗೂ ಜನಧನ್ ಯೋಜನೆಗಳನ್ನು ಜಾರಿಗೆ ತರಲಾಗಿದೆ. ರಾಜ್ಯದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವನಿಟ್ಟಿನಲ್ಲಿ ಬಿಜೆಪಿಗೆ ಆಶಿರ್ವದಿಸಿ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ