ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಸ್ಥಳೀಯ ಬಿಜೆಪಿ ಅಭ್ಯರ್ಥಿ ವಿಠ್ಠಲ ಹಲಗೇಕರ ಶುಕ್ರವಾರ ತಮ್ಮ ಬೆಂಬಲಿಗರು,
ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಪಡೆಯೊಂದಿಗೆ ತಾಲ್ಲೂಕಿನ ಅವರೊಳ್ಳಿ, ಕೊಡಚವಾಡ,
ಮುಗಳಿಹಾಳ, ಕಡತನ ಬಾಗೇವಾಡಿ, ಹಿರೇ ಅಂಗ್ರೊಳ್ಳಿ, ಚಿಕ್ಕ ಅಂಗ್ರೊಳ್ಳಿ, ತೋಲಗಿ ಹಾಗೂ
ಅಕ್ಕಪಕ್ಕದ ಗ್ರಾಮಗಳಲ್ಲಿ ಪ್ರಚಾರ ಕೈಗೊಂಡು ಮತಯಾಚಿಸಿದರು.
ಮುಗಳಿಹಾಳ ಮತ್ತು ತೋಲಗಿ ಗ್ರಾಮಗಳಲ್ಲಿ ನಡೆದ ರೋಡ್ ಶೋ ಉದ್ದೇಶಿಸಿ ಮಾತನಾಡಿದ
ವಿಠ್ಠಲ ಹಲಗೇಕರ, “ಈಗಾಗಲೇ 1995ರಲ್ಲಿ ಶ್ರೀ ಮಹಾಲಕ್ಷ್ಮೀ ಸಮೂಹ ಸಂಸ್ಥೆ ಸ್ಥಾಪಿಸಿ
ಸಂಸ್ಥೆಯ ಮೂಲಕ ಸಹಕಾರ, ಶಿಕ್ಷಣ, ಸಕ್ಕರೆ ಉದ್ಯಮ ಮತ್ತಿತರ ಕ್ಷೇತ್ರಗಳಲ್ಲಿ ಯಶಸ್ಸು
ಪಡೆದಿರುವ ನನ್ನನ್ನು ತಾಲ್ಲೂಕಿನ ಜನರು ರಾಜಕಾರಣಿಯಾಗಿಯೂ ನೋಡಬೇಕೆಂದು
ಹಂಬಲಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಪರಾಭವಗೊಂಡ ನನ್ನನ್ನು ಈ
ಸಲದ ಚುನಾವಣೆಯಲ್ಲಿ ಅಧಿಕ ಮತಗಳ ಅಂತರದಿಂದ ಗೆಲ್ಲಿಸುತ್ತೇವೆ ಎಂಬ ಭರವಸೆಯನ್ನು ನನಗೆ
ಮತದಾರರು ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಪಕ್ಷದ ಮುಖಂಡರೂ ಸಹ ನನ್ನನ್ನು ಪಕ್ಷದ
ಅಭ್ಯರ್ಥಿಯನ್ನಾಗಿ ಘೋಷಿಸಿ ಜನಸೇವೆಗೆ ಮುಂದಾಗುವಂತೆ ಸೂಚಿಸಿದ್ದಾರೆ. ಎಲ್ಲರ
ಆಣತಿಯಂತೆ ರಾಜಕಾರಣದಲ್ಲಿ ಯಶಸ್ಸು ಕಾಣಬೇಕೆಂದು ಇಚ್ಛಿಸಿರುವ ನನ್ನನ್ನು ಕ್ಷೇತ್ರದ
ಮತದಾರರು ಗೆಲ್ಲಿಸಿ ವಿಧಾನಸಭೆಗೆ ಆರಿಸಿ ಕಳಿಸಿದರೆ ಕ್ಷೇತ್ರದ ಸರ್ವಾಂಗೀಣ
ಅಭಿವೃದ್ಧಿಗೆ ಶ್ರಮಿಸುತ್ತೇನೆ” ಎಂದು ಭರವಸೆ ನೀಡಿದರು.
ಪ್ರಚಾರ ಸಂದರ್ಭದಲ್ಲಿ ಪ್ರಮೋದ ಕೊಚೇರಿ, ಮಾರುತಿ ಟಕ್ಕೇಕರ, ಪುಂಡಲೀಕ ಉಳ್ಳಾಗಡ್ಡಿ,
ಸಂತೋಷ ಹಡಪದ, ಮಹಾಬಳೇಶ್ವರ ಚವಲಗಿ, ಮಾರುತಿ ಕಮತಗಿ, ಅಶೋಕ ಚಲವಾದಿ, ಸುರೇಶ
ಮ್ಯಾಗೇರಿ, ಮಹೇಶ ಪಾಟೀಲ, ರವಿ ಬನೋಶಿ, ಮಲ್ಲಪ್ಪ ಮಾರಿಹಾಳ ಸೇರಿದಂತೆ ಪಕ್ಷದ
ಮುಖಂಡರು, ಕಾರ್ಯಕರ್ತರು ಇದ್ದರು. ಪ್ರಚಾರ ನಡೆಸಿದ ಎಲ್ಲ ಗ್ರಾಮಗಳಲ್ಲಿ ಬಿಜೆಪಿ
ಮುಖಂಡರು ಗೋಪೂಜೆ ನೆರವೇರಿಸಿ ಭಾರತಮಾತೆಯ ಭಾವಚಿತ್ರಕ್ಕೆ ಗೌರವ ಅರ್ಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ