ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ :
ಸ್ಥಳೀಯ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಮಠಾಧ್ಯಕ್ಷ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳಿಗೆ 108 ಕುಂಭಗಳ ಅಭಿಷೇಕ ಮಾಡುವುದರೊಂದಿಗೆ ಶ್ರೀಗಳ ಪಾದಪೂಜೆಯನ್ನು ಮಾಡಲಾಯಿತು.
ಹಿರಣ್ಯಕೇಶಿ ನದಿಯಿಂದ ತಂದಿರುವ ಗಂಗೆಯಲ್ಲಿ 108 ಗಿಡ ಮೂಲಿಕೆಗಳನ್ನು ಹಾಕಿ ಅಭಿಷೇಕ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಭಾರತ ವಿಶ್ವಗುರು, ಭಾರತದಲ್ಲಿರುವ ಸಂತ ಮಹಂತರು ಈ ದೇಶಕ್ಕೆ ಆಧ್ಯಾತ್ಮದ ಬಲವನ್ನು ನೀಡಿದ್ದಾರೆ. ವಿಶ್ವದ ಆತ್ಮವೇ ಭಾರತ ಎಂದರೆ ತಪ್ಪಾಗಲಾರದು. ಗುರುಪೌರ್ಣಮೆಯಲ್ಲಿ ಶಿಷ್ಯನಾದವನು ಗುರುವಿಗೆ ನಮಿಸಿ ಆಶೀರ್ವಾದ ಪಡೆಯುವುದು ನಮ್ಮ ದೇಶಿಯ ಪರಂಪರೆ. ನಾವೆಲ್ಲರೂ ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ ನಮ್ಮ ದೇಶದ ಪರಂಪರೆಯನ್ನು ಎತ್ತಿ ಹಿಡಿಯುವಲ್ಲಿ ಮುಂದಾಗುವ ಅವಶ್ಯಕತೆ ಇದೆ ಎಂದರು.
ಈ ಸಂದರ್ಭದಲ್ಲಿ ಬೆಳಗಾವಿಯ ವಿಜಯ ಶಾಸ್ತ್ರಿಗಳು ಹಾಗೂ ಹುಕ್ಕೇರಿ ಹಿರೇಮಠದ ಮಹಿಳಾ ರುದ್ರ ಬಳಗ, ಹುಕ್ಕೇರಿಯ ತಾಯಿ ಅನ್ನಪೂರ್ಣೇಶ್ವರಿ ಬಳಗ, ಹುಕ್ಕೇರಿ ಹಿರೇಮಠದ ಗುರುಕುಲದ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಗುರುಕುಲದ ಮುಖ್ಯಸ್ಥ ಸಂಪತ್ ಕುಮಾರ ಶಾಸ್ತ್ರಿಗಳು ಕಾರ್ಯಕ್ರಮದ ವೈದಿಕತ್ವವನ್ನು ಮತ್ತು ನಿರೂಪಣೆಯನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಚಂದ್ರಶೇಖರಯ್ಯ ಸೌಡಿ ಸಾಲಿಮಠ, ಶ್ರೀಶೈಲಯ್ಯ ಹಿರೇಮಠ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ